ಬಳ್ಳಾರಿ: ಪರ್ಮಿಟ್ ಇರುವಂತಹ ಆಟೋಗಳು ಮಾತ್ರ ನಗರದಲ್ಲಿ ಸಂಚರಿಸಬೇಕು. ಪರ್ಮಿಟ್ ಇಲ್ಲವಾದಲ್ಲಿ ಆಟೋಗಳನ್ನು ಜಪ್ತಿಪಡಿಸಿಕೊಂಡು ಕಾನೂನು ಕ್ರಮವನ್ನು ತೆಗೆದುಕೋಳ್ಳಲಾಗುವುದು ಎಂದು ಸಂಚಾರಿ ಪೋಲಿಸ್ ಇನ್ಸಪೆಕ್ಟರ್ ನಾಗರಾಜ ಎಂ ಮಾಡಳ್ಳಿ ಅವರು ಹೇಳಿದರು.
ನಗರದ ಸಂಚಾರಿ ಪೋಲಿಸ್ ಠಾಣೆಯ ಆವರಣದಲ್ಲಿ ಬುಧುವಾರ ಆಯೋಜಿಸಿದ್ದ ಆಟೋ ಚಾಲಕ ಸಭೆಯಲ್ಲಿ ಅವರು ಮಾತನಾಡಿ, ಆಟೋ ಚಾಲಕರು ಚಾಲನ ಪರವಾನಿಗೆ, ನೋಂದಣಿ ಪತ್ರ, ವಾಹನ ಇನ್ಸುರೆನ್ಸ್, ಪಿಟ್‍ನೆಸ್ ಸರ್ಟಿಪಿಕೇಟ್, ಪೊಲಿಷನ್ ಸರ್ಟಿಪಿಕೇಟ್ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಿರಬೇಕು. ಅನುಮತಿ ಇಲ್ಲದ ಆಟೋಗಳ ಸಂಚರಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಎ.ಆರ್.ಟಿ.ಓ ಶ್ರೀನಿವಾಸ ಅವರು ಮಾತನಾಡಿ, ಆಟೋ ಚಾಲಕರು ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಆರ್.ಟಿ.ಓ ಕಚೇರಿಯಲ್ಲಿ ಚಾಲನ ಪರವಾನಿಗೆ, ಪರ್ಮಿಟ್ ಹಾಗೂ ವಾಹನ ನೋಂದಣಿ ಮಾಡಿಸಿರಬೇಕು. ಪಿಟ್‍ನೆಸ್ ಹಾಗೂ ಪರ್ಮಿಟ್ ಇರುವಂತಹ ಆಟೋಗಳು ಮಾತ್ರ ಬಳ್ಳಾರಿ ನಗರದಲ್ಲಿ ಚಲಿಸಬೇಕು ಮತ್ತು ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಇಲ್ಲವಾದಲ್ಲಿ ಆಟೋಗಳನ್ನು ಜಪ್ತಿ ಮಾಡಿ, ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಆಟೋ ಸಂಘದ ನಾಯಕರಾದ ತಾಯಪ್ಪ, ರಾಜೇಶ್ ಹುಂಡೇಕರ್, ಬಿ.ಖಾಜಾ, ಆಟೋ ಚಾಲಕರು ಹಾಗೂ ಇತರರು ಇದ್ದರು.