ಅನುದಿನ ಕವನ-07

ಕ್ಷಮಿಸದಿರಿ ಬಂಧುಗಳೇ…

ಎಷ್ಟೋ ದಿನದ ಸಿಟ್ಟು
ದವಡೆ, ರಟ್ಟೆಗಷ್ಟೇ ಸೀಮಿತವಾಗಿ
ಗೊತ್ತಿದ್ದು ಗೊತ್ತಿಲ್ಲದಂತೆ
ನಟಿಸಿ ನಗು ಉಕ್ಕಿಸುವ
ನನ್ನ ಹೇತ್ಲಾಂಡಿತನಕ್ಕೆ
ನನಗೇ ನಾಚಿಕೆಯಾಗುತ್ತಿದೆ

ಅವರು ಉಗುಳುವ ಉಗುಳನ್ನೇ
ವೇದವಾಕ್ಯವೆಂದು ಹಣೆಗಚ್ಚಿ
ತಲೆಮಣಿಸುವ ಶಂಡತನಕ್ಕೆ
ಮೈಯೆಲ್ಲಾ ನಿಗಿ ನಿಗಿ

ದನಿ ಸತ್ತವರ ದುಃಖವನ್ನೂ
ನೇವರಿಸಲಾಗದ ಹತಾಶ ನಾನು
ಗುಳ್ಳೆನರಿಗಳ ತೆವಲಿಗೆ ಬಲಿಯಾದ
ಅದೆಷ್ಟೋ ಬದುಕುಗಳಿಗೆ
ಸಾಕ್ಷಿಯಾಗಬೇಕಾದ ದುರ್ದೈವ

ಅವರು ನಡೆಯುವ ದಾರಿಯಲ್ಲಿ
ಮೈ ಹಾಸಿ ನಿಲ್ಲುವ ಅನಿವಾರ್ಯತೆ
ಎಸೆದ ರೊಟ್ಟಿಯ ತುಣುಕನ್ನೇ
ಕಣ್ಣಿಗೊತ್ತಿ ಕೃತಾರ್ಥನಾಗುವ ಸಂಕಟ

ಯಾರನ್ನು ಕರೆಯಲಿ…?
ಎಲ್ಲರೂ ನನ್ನ ಸರದಿಯಲ್ಲೇ
ಹತಾಶರಂತೆ ಮಂಡಿಯೂರಿ ಕುಳಿತಿರುವಾಗ
ದಯವಿಟ್ಟು ಕ್ಷಮಿಸಬೇಡಿ…
ಬೆಂಕಿ ಉಂಡು ಬಹುಪರಾಕ್ ಹೇಳುವ
ನನ್ನ ಹೇಡಿತನವನ್ನ!

-ನಾಗೇಶ್ ಜೆ. ನಾಯಕ. ಶಿಕ್ಷಕರು,
ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ,
ಉಡಿಕೇರಿ-೫೯೧೧೦೪
ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ.
ಮೊಬೈಲ್-೯೯೦೦೮೧೭೭೧೬