ಬಳ್ಳಾರಿ: ಸಮಾಜದ ಕಟ್ಟಕಡೆಯ ಸಮುದಾಯವಾಗಿರುವ ಸಫಾಯಿ ಕರ್ಮಚಾರಿಗಳನ್ನು ಮುಖ್ಯ ವಾಹಿನಿಗೆ ತರುವ ಮೂಲಕ ಅವರನ್ನು ಇತರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು, ರಾಜ್ಯದಲ್ಲಿರುವ ಸಫಾಯಿ ಕರ್ಮಚಾರಿಗಳ ನಿಖರ ಅಂಕಿ-ಸಂಖ್ಯೆ ಗುರುತಿಸುವ ನಿಟ್ಟಿನಲ್ಲಿ ಸಫಾಯಿ ಕರ್ಮಚಾರಿಗಳ ಪುನರ್‍ಸಮೀಕ್ಷೆ ಶೀಘ್ರದಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಹೆಚ್. ಹನುಮಂತಪ್ಪ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆರಂಭಿಕವಾಗಿ ಬಳ್ಳಾರಿ ಮತ್ತು ಮೈಸೂರಿನಲ್ಲಿ ಈ ಪುನರ್ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು,ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಹೇಳಿದರು.
ಈ ಹಿಂದೆ ನಡೆಸಿದ ಸಮೀಕ್ಷೆ ಅನುಸಾರ ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳ ಸಂಖ್ಯೆಯು 1,42,291 ಹಾಗೂ ಅವಲಂಬಿತರು ಸೇರಿ 18ಲಕ್ಷ ದಷ್ಟಾಗಲಿದೆ. ಆದರೆ ಈ ಸಂಖ್ಯೆಯು ತುಂಬಾ ಹಳೆಯದಾಗಿದೆ. ಈ ಸಮೀಕ್ಷೆಯಲ್ಲಿ ಕೇವಲ ನಗರಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ಮಾತ್ರ ಪರಿಗಣಿಸಲಾಗಿದೆ. ಆದರೆ ಖಾಸಗಿ/ಸರ್ಕಾರಿ, ಅರೆ ಸರ್ಕಾರಿ, ಆಸ್ಪತ್ರೆ, ಮಲ್ಟಿಸೋರ್ಸ್ ಮುಂತಾದ ಕಚೇರಿಗಳಲ್ಲಿ ಕೆಲಸ ಮಾಡುವವರನ್ನು ಪರಿಗಣಿಸಿಲ್ಲ ಎಂದರು.
ಶೀಘ್ರ ನಡೆಸುವ ಹೊಸ ಸಮೀಕ್ಷೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ಸೇರಿದಂತೆ ಇವರನ್ನು ಪರಿಗಣಿಸಲು ಉದ್ದೇಶಿಸಲಾಗಿದ್ದು, ಅಂದಾಜು 3ಲಕ್ಷ ಸಫಾಯಿ ಕರ್ಮಚಾರಿಗಳು ಮಾಹಿತಿ ಸಿಗುವ ನಿರೀಕ್ಷೆ ಇದೆ. ಸಮೀಕ್ಷಾ ಕಾರ್ಯವನ್ನು ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ನಡೆಸಲಿದ್ದು, ಸಫಾಯಿ ಕರ್ಮಚಾರಿಗಳು ಹಾಗೂ ಅವಲಂಬಿತರ ನಿಖರ ಮಾಹಿತಿ ಸಿಗಲಿದೆ. ಈ ಮಾಹಿತಿಯಂತೆ ಮುಂದಿನ ಅರ್ಥಿಕ ವರ್ಷಕ್ಕೆ ಅವರ ಸಮಗ್ರ ಅಭಿವೃದ್ಧಿಗೆ ನಿಗಮ ಕ್ರಿಯಾಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್, ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ ಹೆಚ್ ಲಕ್ಷ್ಮಣ್, ಸಫಾಯಿ ಕರ್ಮಚಾರಿ ಇಲಾಖೆಯ ಅಧಿಕಾರಿಗಳು ಇದ್ದರು.
*****