ಬಳ್ಳಾರಿ: ಬಡವರು, ರೈತರು, ಶೋಷಿತರು, ನೊಂದ ಮಹಿಳೆಯರ ಸಂಕಷ್ಟಗಳ ಬಗ್ಗೆ ಬರೆಯದೇ ಹೋದರೆ ಪತ್ರಿಕೆಗಳು ವಿಶ್ವಾಸರ್ಹತೆ ಗಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ ಅವರು ತಿಳಿಸಿದರು.
ನಗರದ ಎಸ್.ಜಿ.ಟಿ ಕಾಲೇಜಿನಲ್ಲಿ ಅನ್ನಪೂರ್ಣ ಪ್ರಕಾಶನ ಆಯೋಜಿಸಿದ್ದ ‘ಸಂಪಾದಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಓದುಗರಿಗೆ ಇಷ್ಟವಾಗುವುದನ್ನೇ ಪತ್ರಿಕೆಗಳು ನೀಡಬೇಕು. ವಿದ್ಯಾರ್ಥಿ, ಯುವ ಜನರು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಮೊಬೈಲ್ ನಲ್ಲಿಯೇ ಪತ್ರಿಕೆಗಳು ಸಿಗುತ್ತವೆ ಎಂದರು.
ನಿರುದ್ಯೋಗ ವೈಯಕ್ತಿಕ ಸಮಸ್ಯೆಯಾಗದೇ ಸಾಮೂಹಿಕ ಸಮಸ್ಯೆಯಾಗದ ಹೊರತು ಪರಿಹಾರವಿಲ್ಲ. ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಹೋರಾಟ ಮಾಡಬೇಕು. ಸಮಸ್ಯೆಗೆ ಹೋರಾಟವೇ ಪರಿಹಾರ. ನಮ್ಮೊಳಿಗಿಂದ ಗಾಂಧಿ ಹುಟ್ಟಬೇಕು. ಗಾಂಧಿ ಬರುತ್ತಾರೆ ಎಂದು ಕಾಯುವುದು ಬೇಡ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಮೊದಲ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದದ್ದು ಬೆಂಗಳೂರಿನ ಪ್ರಜಾವಾಣಿ ಕಚೇರಿಯಲ್ಲಿ ನಡೆಯಿತು. ಬಳಿಕ ಸರಕಾರ, ಸಂಘ ಸಂಸ್ಥೆಗಳು ಆರಂಭಿಸಿದವು. ಪತ್ರಿಕೆ ಕನ್ನಡದ ಬೆಳವಣಿಗೆಗೆ ತನ್ನದೇ ಕಾಣಿಕೆ ನೀಡಿದೆ ಎಂದರು.
ಕಾಡಿನಲ್ಲಿ ಅರಳಿದ ಹೂವಿನ ಸುವಾಸನೆ ಊರಿಗೆ ಗೊತ್ತಾಗುವುದು ಗಾಳಿಯಿಂದ. ಸುವಾಸನೆ ಪಸರಿಸುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.
ವಿದ್ಯುನ್ಮಾನ, ಡಿಜಿಟಲ್ ಮಾದ್ಯಮಗಳ ಭರಾಟೆಯಲ್ಲೂ ಪತ್ರಿಕೆಗಳ ಮೇಲೆ ಬಗ್ಗೆ ಓದುಗರು ಹಾಗೂ ಸಾರ್ವಜನಿಕರ ವಿಶ್ವಾಸ ಕಡಿಮೆಯಾಗಿಲ್ಲ ಎಂದು ಸಂಪಾದಕರು ಹೇಳಿದರು.
ಪೇಪರ್ ಗಳಿಂದ ಕೊರೋನಾ ಬರುತ್ರದೆ ಎಂಬುದು ಸುಳ್ಳು, ಮೂಢ ನಂಬಿಕೆ ಎಂದ ಅವರು ನೋಟು ಕೊಟ್ಟರೆ ತೆಗೆದುಕೊಳ್ಳುತ್ತಾರೆ ಹಾಗಾದರೆ ಎಲ್ಲಾ ಕಡೆ ಚಲಾವಣೆಯಾಗುವ ನೋಟು ಮುಟ್ಟಿದರೆ ಕೊರೋನಾ
ಬರುವುದಿಲ್ಲವೇ ಎಂದು ಛೇಡಿಸಿದರು.
ಕೆಲವು ಮಾಧ್ಯಮಗಳು ಬಳಸುವ ಶಬ್ದಗಳ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದ ರವೀಂದ್ರ ಭಟ್ ಅವರು ಬ್ರಿಟನ್ ಬ್ರಹ್ಮರಾಕ್ಷಸ, ಕೊರೋನಾ ರಣಕೇಕೆ ಎಂಬ ಶಬ್ದ ಬಳಸಿದ್ದು ಸರಿಯಲ್ಲ. ಭಾಷೆಯನ್ನು ಬಳಸುವಾಗ ಎಚ್ಚರಿಕೆ ಅಗತ್ಯ ಎಂದರು.
ಮಾಧ್ಯಮಗಳು ಸುದ್ದಿ ನೀಡುವ ಬದಲು ತೀರ್ಪು ನೀಡುತ್ತಿರುವದರಿಂದ ವಿಶ್ವಾಸರ್ಹತೆ ಕಡಿಮೆಯಾಗುತ್ತಿದೆ ಎಂದು ವಿಷಾಧಿಸಿದರು.
ಕನ್ನಡದ ಪತ್ರಕರ್ತರಾಗಬೇಕಾದರೆ ನಾಡಿನ ಇತಿಹಾಸ, ಸಾಹಿತ್ಯ, ಕನ್ನಡದ ಹೋರಾಟ ಗೊತ್ತಿರಬೇಕು.
ಗೊತ್ತಿಲ್ಲದಿದ್ದರೆ ಸುದ್ದಿ ಎಂಬುದು ಗೊತ್ತಾಗುವುದಿಲ್ಲ.
ರಾಜಕೀಯ ಗೊತ್ತಿದ್ದರೆ ಒಳ್ಳೆಯ ವರದಿ ಮಾಡಬಹುದು ಎಂದು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಮಾಜವಾದಿ, ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಅವರು ಮಾತನಾಡಿ, ಭಾಷೆ ಬಳಸಿದರೆ ಮಾತ್ರ ಬದುಕುತ್ತದೆ ಎಂದರು.
ಅವಶ್ಯಕತೆಗಿಂತ ಹೆಚ್ಚು ಬಳಕೆ ಸಲ್ಲದು. ಅನಗತ್ಯ ಸಂಪನ್ಮೂಲ ಹಾಳು ಮಾಡುವುದು ಬೇಡ ಎಂದು ಹೇಳಿದರು.
ಪ್ರಜಾವಾಣಿ ಕಳೆದ ಏಳು ದಶಕಗಳಿಂದ ಕನ್ನಡಿಗರ ಜತೆ ಅವಿನಾಭಾವ ಸಂಬಂಧ ಹೊಂದಿದೆ. ಎಂಟು ಹತ್ತು ಪೈಸೆಗೆ ಸಿಗುತ್ತಿದ್ದ ಕಾಲದಿಂದಲೂ ತಾವು ಪ್ರಜಾವಾಣಿ ಓದುಗರು ಎಂದು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ. ಮಂಜುನಾಥ್, ಎಸ್ ಎಸ್ ಎ ಸರಕಾರಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು, ಎಸ್.ಜಿ.ಟಿ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಪಾದಕರ ಜತೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರುದ್ರಪ್ಪ, ಕಾರ್ಯದರ್ಶಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಅನ್ನಪೂರ್ಣ ಪ್ರಕಾಶನದ ಯರಿಸ್ವಾಮಿ ಸಿರಿಗೇರಿ ಸ್ವಾಗತಿಸಿದರು.