ಬಳ್ಳಾರಿ: ಜಿಲ್ಲೆಯ ಸಂಡೂರು ನಿವಾಸಿ, ಹಾಲಿ ಕರ್ನಾಟಕ ಲೋಕಾಯುಕ್ತದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಕೆ.ರಾಮರಾವ್ ಅವರಿಗೆ 2019ನೇ ಸಾಲಿನ ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಸೇವಾ ಪದಕ ಸಂದಿದೆ.
ಬೆಂಗಳೂರಿನ ರಾಜಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಸೇವಾ ಪದಕ ಪ್ರದಾನ ಮಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ ಮತ್ತಿತರರು ಇದ್ದರು.
ರಾಮರಾವ್ ಅವರ ಪರಿಚಯ:
ಸಂಡೂರಿನ ದಿ.ಕೆ.ನಾರಾಯಣರಾವ್ ಮತ್ತು ಕೆ.ಲಕ್ಷ್ಮೀಬಾಯಿ ಅವರ ಪುತ್ರರಾಗಿರುವ ಕೆ.ರಾಮರಾವ್ ಅವರು ಬಿಎಸ್‍ಸಿ ಪದವೀಧರರು. ಧರ್ಮಪತ್ನಿ ಪ್ರಿಯದರ್ಶಿನಿ ಮತ್ತು ಅವರಿಗೆ ಮೂರು ಜನ ಮಕ್ಕಳು ಸದಾ ಬೆಂಬಲ,ಸಹಕಾರ ಮತ್ತು ನಿರಂತರ ಪ್ರೋತ್ಸಾಹದಿಂದ ರಾಮರಾವ್ ಅವರು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುವಲ್ಲಿ ಸಹಕಾರಿಯಾಗಿದೆ.
ರಾಮರಾವ್ 1984ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಕ್ರೀಡಾ ಚಾಂಪಿಯನ್‍ಶಿಫ್ ಗಿಟ್ಟಿಸಿಕೊಂಡಿದ್ದರು.
1985ರಲ್ಲಿ 10ನೇ ರ್ಯಾಂಕ್ ಪಡೆದುಕೊಂಡು ಸಿಆರ್‍ಪಿಎಫ್(ಕೇಂದ್ರೀಯ ಸಶಸ್ತ್ರಪಡೆ)ನಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಆಗಿ ಸೇವೆಗೆ ಸೇರಿದ್ದರು.1986ರಿಂದ 92ರವರೆಗೆ ಎನ್‍ಎಸ್‍ಜಿ(ನ್ಯಾಶನಲ್ ಸೆಕ್ಯೂರಿಟಿ ಗಾರ್ಡ್)ಯ ಎಲೈಟ್ ಫೋರ್ಸ್ ದೆಹಲಿಯಲ್ಲಿ ಹಾಗೂ ಕೇಂದ್ರೀಯ ಪೊಲೀಸ್ ಪಡೆಯಾದ ರ್ಯಾಪಿಡ್ ಆ್ಯಕ್ಷನ್ ಫೋರ್ಸ್‍ನಲ್ಲಿ 4 ವರ್ಷ ಸೇವೆ ಸಲ್ಲಿಸಿದ್ದರು. 1996ರಲ್ಲಿ ಸಬ್‍ಇನ್‍ಸ್ಪೆಕ್ಟರ್ ಆಗುವುದರ ಮೂಲಕ ಕರ್ನಾಟಕ ಪೊಲೀಸ್ ಸೇವೆಗೆ ಸೇರಿದರು. ಮಂಗಳೂರು,ಭಟ್ಕಳ್,ಕಾರವಾರ,ಕುಂದಾಪುರಗಳಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಆಗಿ, ಬಳ್ಳಾರಿ ಗ್ರಾಮಾಂತರ, ಹೆಸ್ಕಾಂ ವಿಜಿಲೆನ್ಸ್, ಮಂಗಳೂರು ಟ್ರಾಫಿಕ್,ಭದ್ರಾವತಿ ಗ್ರಾಮಾಂತರ, ಬೆಂಗಳೂರು ಕೇಂದ್ರ ಅಪರಾಧ ವಿಭಾಗ,ರಾಜ್ಯ ಗುಪ್ತವಾರ್ತೆಯಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ.
2015ರಲ್ಲಿ ಡಿವೈಎಸ್ಪಿಯಾಗಿ ಪದನ್ನೋತಿ ಹೊಂದಿದ ಕೆ.ರಾಮರಾವ್ ಅವರು ಮಂಗಳೂರಿನಲ್ಲಿ ರಾಜ್ಯ ಗುಪ್ತವಾರ್ತೆ,ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ,ಬಳ್ಳಾರಿ ನಗರದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿ ಹಾಲಿ ಕರ್ನಾಟಕ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅನೇಕ ಪ್ರಕರಣಗಳು ಬೇಧಿಸುವಲ್ಲಿ ಯಶಸ್ವಿ:
ಕೆ.ರಾಮರಾವ್ ಅವರು ತಮ್ಮ ಕಾರ್ಯನಿರ್ವಹಣೆ ಸಂದರ್ಭದಲ್ಲಿ ಸಾಕಷ್ಟು ಪ್ರಕರಣಗಳನ್ನು ಬೇಧಿಸುವಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ರಾಜ್ಯದ ಅತ್ಯಂತ ಸೂಕ್ಷ್ಮಸ್ಥಳಗಳಾದ ಮಂಗಳೂರು,ಭಟ್ಕಳ್ ಗಳಲ್ಲಿ ಅತ್ಯಂತ ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದು.
ಬಳ್ಳಾರಿಯ ನಕ್ಸಲೈಟ್ಸ್ ರಂಗಾರೆಡ್ಡಿ ಪ್ರಕರಣದಲ್ಲಿ ಗುಂಡುಮದ್ದುಗಳು,ಸ್ಪೋಟಕ ವಸ್ತುಗಳ ಪತ್ತೆಹಚ್ಚಿ ಕ್ರಮಕೈಗೊಳ್ಳುವಿಕೆ, ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯ ಟ್ಯಾಂಪರಿಂಗ್ ಅನ್ಸರ್ ಶೀಟ್ ಪ್ರಕರಣ ಬೇಧಿಸುವುದರ ಮೂಲಕ ಗಮನಸೆಳೆದಿದ್ದನ್ನು ಸ್ಮರಿಸಬಹುದು.
ಈ ಸಾಧನೆಗಳನ್ನು ಗಮನಿಸಿ ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಸೇವಾ ಪದಕ ರಾಮರಾವ್ ಅವರಿಗೆ ಸಂದಿದೆ.
—