ದೇಶದ ನೈಜ ಇತಿಹಾಸವನ್ನು ಸರಿಯಾಗಿ ಅರಿತುಕೊಳ್ಳಲು ನಿರಂತರ ಓದು ಚರ್ಚೆ ಅವಶ್ಯಕ : ರಂಜಾನ್ ದರ್ಗಾ

ಧಾರವಾಡ : ಇಂದಿನ ತಲೆಮಾರಿನವರು ದೇಶದ ನೈಜ ಇತಿಹಾಸವನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ. ಅದಕ್ಕಾಗಿ ನಿರಂತರ ಓದು, ಚರ್ಚೆ ಅವಶ್ಯಕವಾಗಿದೆ. ಇತಿಹಾಸದಲ್ಲಿನ ಎಷ್ಟೋ ಸತ್ಯ ಸಂಗತಿಗಳು ಇಂದಿನ ತಲೆಮಾರಿಗೆ ಗೊತ್ತೇ ಇಲ್ಲ ಎಂದು ಹಿರಿಯ ಪತ್ರಕರ್ತ, ಚಿಂತಕ ರಂಜಾನ್ ದರ್ಗಾ ಖೇದ ವ್ಯಕ್ತಪಡಿಸಿದರು.

ಅವರು ಧಾರವಾಡದ ಗಣಕರಂಗ ಸಂಸ್ಥೆಯು ಇತ್ತೀಚೆಗೆ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ೨೦೩ನೇ ಭೀಮಾ ಕೋರೆಗಾಂವ ವಿಜಯೋತ್ಸವ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ೧೯೦ನೇಯ ಜಯಂತಿ ಹಾಗೂ ಗಣಕರಂಗ ಪ್ರಕಾಶನದ ಎರಡು ಹೊಸ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ಭೀಮಾ ಕೋರೆಗಾಂವ ಕದನದಲ್ಲಿ ಒಗ್ಗಟ್ಟಿನಿಂದ ಹೋರಾಡಿದ ಶೋಷಿತರ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಿದೆ. ಅಂತೆಯೇ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಅಕ್ಷರ ಚಳುವಳಿಗೆ ಕೈಜೋಡಿಸಿದ ಫಾತೀಮಾ ಶೇಖ, ಉಸ್ಮಾನಶೇಖರಂಥಹ ವ್ಯಕ್ತಿತ್ವಗಳ ಕುರಿತು ಸಹ ತಿಳಿದುಕೊಳ್ಳುವುದು ಅವಶ್ಯಕವಿದೆ ಎಂದು ಹೇಳಿದರು.
ಕೃತಿ ಬಿಡುಗಡೆ: ಗಣಕರಂಗ ಪ್ರಕಾಶನದ ಹಿಪ್ಪರಗಿ ಸಿದ್ಧರಾಮ ಸಂಪಾದನೆಯ ‘ನೆನಪುಗಳು’ ಕಥಾಸಂಕಲನ ಮತ್ತು ಗಣಪತಿ ಚಲವಾದಿ ಸಂಪಾದನೆಯ ‘ಕರುನಾಡ ಹಿರಿಮೆ ಹಾಗೂ ಪರಂಪರೆ’ ಲೇಖನಗಳ ಸಂಕಲನ ಎಂಬ ಎರಡು ಗ್ರಂಥಗಳನ್ನು ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ‌ಮಾತನಾಡಿದ ವಾಡಪ್ಪಿ ಅವರು, ಗಣಕರಂಗ ಪ್ರಕಾಶನದಿಂದ ಹೊಸ ಪ್ರತಿಭೆಗಳ ಬರಹಗಳ ಸಂಕಲನಗಳನ್ನ ಪ್ರಕಟಿಸುತ್ತಿರುವುದು ಅಭಿನಂದನೀಯ ಕಾರ್ಯ ಎಂದು ಹರ್ಷ ವ್ಯಕ್ತಪಡಿಸಿದರು.
ಕೃತಿ ಪರಿಚಯಿಸಿದ ಬೆಳಗಾವಿಯ ಸಾಹಿತಿ ಡಾ.ಎಚ್.ಬಿ.ಕೋಲಕಾರ ಕೃತಿಗಳ ಪರಿಚಯ ಮಾಡಿಕೊಡುತ್ತಾ, ಓದಿನ ಹರವು, ವಿಷಯದ ಆಳ ಅರಿತುಕೊಂಡು ಕೃತಿಗಳು ರಚನೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಹಿರಿಯ ಕಲಾವಿದ ಬಿ.ಮಾರುತಿ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಕೇರಿ, ಸಂಶೋಧಕ ಡಾ.ಎಸ್.ಎಸ್.ದೊಡಮನಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಲೋಕಾರ್ಪಣೆಯಾದ ಪುಸ್ತಕಗಳಿಗೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ ಗಣಪತಿ ಗೋ. ಚಲವಾದಿ, ಮೈಲಾರಣ್ಣ ಬೂದಿಹಾಳ, ಶ್ರೀಮತಿ ಸರಸ್ವತಿ ಭೋಸಲೆ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಹಾಗೂ ಎರಡೂ ಪುಸ್ತಕಗಳಿಗೆ ಕಥೆ-ಲೇಖನ ಬರೆದ ಕಥೆಗಾರರು ಮತ್ತು ಲೇಖಕರಿಗೆ ಪುಸ್ತಕಗೌರವ, ಶಾಲು, ಮುತ್ತಿನ ಹಾರವನ್ನು ಹೊದಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ರಂಗಕರ್ಮಿ ಹಿಪ್ಪರಗಿ ಸಿದ್ಧರಾಮ ಉಪಸ್ಥಿತರಿದ್ದರು. ಲಕ್ಷ್ಮಣ ಬಕ್ಕಾಯಿ ಪ್ರಾರ್ಥಿಸಿ, ಸ್ವಾಗತಿಸಿದರು. ಯೋಗೇಶ ಪಾಟೀಲ ನಿರೂಪಿಸಿ, ವಂದಿಸಿದರು.
ಸಂತೋಷ ಕುರುಬರ, ಭೀಮನಗೌಡ ಕಠಾವಿ ಸಹಕರಿಸಿದರು. ಬಳಿಕ ಬಸವರಾಜ್ ಭೂತಾಳಿ ನಿರ್ಮಾಣದ, ವಿಶಾಲರಾಜ್ ನಿರ್ದೇಶನದ ‘ಸಾವಿತ್ರಿಬಾಯಿ ಫುಲೆ’ ಕನ್ನಡ ಚಲನಚಿತ್ರ ಪ್ರದರ್ಶನಗೊಂಡಿತು.

????????????????????????????????????