ಸ್ವಾಮಿ ವಿವೇಕಾನಂದರ ಶಿಕ್ಷಣ ಮತ್ತು ವ್ಯವಸ್ಥೆ ಚಿಂತನೆ
-ಡಾ.ಗುರುಪ್ರಸಾದ ಎಚ್ ಎಸ್
ಭಾರತೀಯ ವೇದ- ಉಪನಿಷತ್‌ಗಳಿಂದ ತೊಡಗಿ ಇಂದಿನ ಶಿಕ್ಷಣ ಆಯೋಗಗಳವರೆಗೂ ಶಿಕ್ಷಣದ ಉದ್ದೇಶದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಬಂದಿವೆ. ಬ್ರಿಟಿಷರು ಬಂದು ಆಧುನಿಕ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸುವವರೆಗೆ ಭಾರತೀಯರು ಅಜ್ಞಾನಿಗಳಾಗಿಯೇ ಇದ್ದರು ಎನ್ನುವ ಪಶ್ಚಿಮದ ನಿರೂಪಣೆ ಬಹುಕಾಲ ಚಾಲ್ತಿಯಲ್ಲಿತ್ತು. ಬ್ರಿಟಿಷರು ಭಾರತಕ್ಕೆ ಬರುವ ಪೂರ್ವದಲ್ಲೂ ಭಾರತದಲ್ಲಿ ಸುಂದರವಾದ ಮತ್ತು ಅರ್ಥಪೂರ್ಣವಾದ ಶಿಕ್ಷಣ ಕ್ರಮವೊಂದಿತ್ತು ಎನ್ನುವುದನ್ನು ದಾಖಲೆಗಳ ಸಹಿತ ದಶಕಗಳ ಹಿಂದೆಯೇ ಧರ್ಮಪಾಲ್ ಶೋಧಿಸಿ ‘ದಿ ಬ್ಯೂಟಿಫುಲ್ ಟ್ರೀ’ ಎಂಬ ಕೃತಿಯನ್ನು ಪ್ರಕಟಿಸಿದ್ದರು. ಭಾರತೀಯ ಶಿಕ್ಷಣ ಪದ್ಧತಿ, ಭಾರತೀಯರ ಶಿಕ್ಷಣದ ಕುರಿತ ಆಲೋಚನೆಗಳ ಸಾಫಲ್ಯವನ್ನು ಈ ಶೋಧನೆ ನಿರೂಪಿಸಿತು.
ಆಧುನಿಕ ಕಾಲಘಟ್ಟದ ಭಾರತದಲ್ಲಿ ಶಿಕ್ಷಣದ ಕುರಿತು ಬಹಳ ಗಂಭೀರವಾಗಿ ಚಿಂತನೆ ನಡೆಸಿ ಅದನ್ನು ನಿರೂಪಿಸಿದವರಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖರು. ವಿವೇಕಾನಂದರು ಶಿಕ್ಷಣದ ಉದ್ದೇಶ, ಅದರ ಪ್ರಕ್ರಿಯೆ, ಅದು ಉಂಟುಮಾಡಬೇಕಾದ ಪರಿಣಾಮದ ಬಗ್ಗೆ ನಡೆಸಿದ ಚಿಂತನೆಗಳು ಆ ಕಾಲಕ್ಕೆ ಮಾತ್ರವಲ್ಲ, ಇಂದಿಗೂ ನಮ್ಮ ನಡುವಿನ ಬಹುಮುಖ್ಯ ಶಿಕ್ಷಣ ತಜ್ಞರು ನಡೆಸುವ ಚಿಂತನೆಗಳಿಗೆ ಬೀಜರೂಪದಂತಿದೆ.
ಭವ್ಯ ಭಾರತದ ಕನಸನ್ನು ಕಂಡಿದ್ದ ಸ್ವಾಮಿ ವಿವೇಕಾನಂದರು ಶಿಕ್ಷಣ ಮಾತು ಯುವಕರ ಬಗ್ಗೆ ತಮ್ಮದೇ ಆದ ವಿಶಿಷ್ಟ ನಿಲುವನ್ನು ಹೊಂದಿದ್ದರು. ಸದಾ ಸಕಾರಾತ್ಮಕ ಚಿಂತನೆಗಳಿಂದ ಯುವಕರನ್ನು ಪ್ರೇರೇಪಿಸುತ್ತಿದ್ದ ಸ್ವಾಮೀಜಿ ತಾವು ಹೋದಲೆಲ್ಲಾ ಶಿಕ್ಷಣದ ಬಗ್ಗೆ ಹೇಳುತ್ತಿದ್ದರು. ದೈಹಿಕ ಶಿಕ್ಷಣ, ಮಾನಸಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ, ಮಹಿಳಾ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಅವರು ಮಾತನಾಡುತ್ತಿದ್ದರು.
ಸ್ವಾಮಿ ವಿವೇಕಾನಂದರೇ ಹೇಳುವಂತೆ ಶಿಕ್ಷಣವೆಂದರೆ ‘ಮಾನವೀಯತೆಯ ವಿಕಾಸ, ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ. ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ ಎಂದು ಹೇಳುತ್ತಿದ್ದ ವಿವೇಕಾನಂದರು ‘ಭಾರತದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ಒಂದೇ ಪರಿಹಾರ’ ಎಂದು ನಂಬಿದ್ದರು.
ಮಾನವ ಸಮಾಜದಲ್ಲಿ ಮನೆಮಾಡಿರುವ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ ಎಂಬುದು ವಿವೇಕಾನಂದರ ಅಭಿಮತ. ‘ಶಿಕ್ಷಣವು ಮಾನವನನ್ನು ಸೀಮಿತ ಸ್ತರದಿಂದ ಅಸೀಮ ಹಂತಕ್ಕೆ ಒಯ್ಯುವಂಥದ್ದು’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು.
‘ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದ ಮೂಲಕ ಚಾರಿತ್ರ್ಯ ನಿರ್ಮಾಣ; ಚಾರಿತ್ರ್ಯ ನಿರ್ಮಾಣದಿಂದ ಮಾತ್ರವೇ ರಾಷ್ಟ್ರನಿರ್ಮಾಣ’ ಎಂಬ ಸ್ವಾಮಿ ವಿವೇಕಾನಂದರ ಅಭಿಪ್ರಾಯವು ಶಿಕ್ಷಣವು ಪ್ರಥಮತಃ ವ್ವಕ್ತಿಯ ಅಭ್ಯುದಯ ತದನಂತರ ಸಮಾಜ, ರಾಷ್ಟ್ರ ಹಾಗೂ ಅಂತಿಮವಾಗಿ ವಿಶ್ವದ ಶ್ರೇಯಸ್ಸಿಗೆ ಪ್ರೇರಕವಾಗುತ್ತದೆ ಎಂಬ ಸತ್ಯವನ್ನು ಸೂಚಿಸುತ್ತದೆ.
ಹೊಸಹೊಸ ಭಾವನೆಗಳನ್ನು ಸ್ವಭಾವ ಸಹಜವಾಗಿಸಿಕೊಳ್ಳುವುದನ್ನು ಶಿಕ್ಷಣ ಎಂದು ಮನಗಂಡಿದ್ದ ಅವರು ಪ್ರತಿಯೊಬ್ಬ ವ್ಯಕ್ತಿಯೂ ಚಾರಿತ್ರ್ಯ್ಷಮತೆಯನ್ನು ನೀಡುವ ಶಿಕ್ಷಣ ಮತ್ತು ಧರ್ಮಕ್ಕೆ ಮೊರೆಹೋಗಬೇಕೆಂಬ ಅಭಿಪ್ರಾಯ ನೀಡುತ್ತಾರೆ. ‘ಉನ್ನತ ವಿಚಾರಗಳನ್ನು ವ್ಯಕ್ತಿಯೊಬ್ಬನಿಗೆ ನೀಡಿ ಆತನನ್ನು ಹುಲಿಯಾಗಿಸದಿದ್ದರೆ ಅವನು ಖಂಡಿತ ನರಿಯಾಗುತ್ತಾನೆ’ ಎಂದು ಸ್ವಾಮೀಜಿ ಎಚ್ಚರಿಸುತ್ತಾರೆ. ಧರ್ಮ-ಸಂಸ್ಕೃತಿಗಳ ಅಧ್ಯಯನದ ಜೊತೆಗೆ ಪಾಶ್ಚಾತ್ಯ ವಿಜ್ಞಾನದ ಅಧ್ಯಯನಕ್ಕೆ ಸ್ವಾಮೀಜಿಯವರು ಒತ್ತು ನೀಡಲು ಕಾರಣ, ವಿಜ್ಞಾನ ವನ್ನು ಅಧ್ಯಯನಗೈಯ್ದು ಅಳವಡಿಸಿಕೊಳ್ಳುವುದರಿಂದ ಲೌಕಿಕ ಸಂಪತ್ತು ವೃದ್ಧಿಯಾಗುತ್ತದೆ ಎಂದು. ”ವಿದ್ಯಾಭ್ಯಾಸವೆಂದರೆ ತಲೆಯಲ್ಲಿ ತುಂಬಿಕೊಂಡ ವಿಷಯಗಳ ಮೊತ್ತವಲ್ಲ. ಅದು ಅಲ್ಲಿ ಒಂದಿನಿತೂ ಜೀರ್ಣವಾಗದೇ ದಿಕ್ಕುಗೆಟ್ಟು ಓಡುತ್ತಿರುವುದು. ಜೀವನವನ್ನು ಕಟ್ಟುವಂತಹ, ಪುರುಷಸಿಂಹರನ್ನು ಸೃಷ್ಟಿಸುವಂತಹ, ಶೀಲ ಸಂಪತ್ತನ್ನು ನಿರ್ಮಾಣ ಮಾಡುವಂತಹ ವಿಚಾರಗಳನ್ನು ಗ್ರಹಿಸುವಂತಹ ವಿದ್ಯಾಭ್ಯಾಸ ನಮಗೆ ಬೇಕು,” ಎನ್ನುತ್ತಾರೆ. ಆದರೆ ಕೇವಲ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಮೆದುಳಿಗೆ ತುಂಬುವುದು ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಿದೆ. ಹೀಗೆ ತುಂಬಿಕೊಂಡ ಮಾಹಿತಿಗಳು ಜೀರ್ಣವಾಗದೆ ಹೋಗುವುದರಿಂದ ವ್ಯಕ್ತಿಯಲ್ಲಿ ಕಲಿಕೆಯ ಪ್ರಕ್ರಿಯೆ ಉತ್ಸಾಹದಾಯಕವಾದ ಸಂಗತಿಯಾಗಿಲ್ಲ. ಯಾವ ಶಿಕ್ಷಣವನ್ನು ಪಡೆಯುವುದರಿಂದ ವ್ಯಕ್ತಿ ತನ್ನ ಜೀವನವನ್ನು ತಾನೇ ಕಟ್ಟಿಕೊಳ್ಳಬಹುದೋ, ಸಾಧನೆಯ ಪಥದಲ್ಲಿ ಸಿಂಹ ಸಾಹಸಿಕರನ್ನಾಗಿಸಬಹುದೊ, ವ್ಯಕ್ತಿಯನ್ನು ಶೀಲಸಂಪನ್ನನೂ, ಚಾರಿತ್ರ್ಯವಂತರನ್ನಾಗಿಯೂ ಮಾಡಬಹುದೊ ಅದು ನಿಜವಾದ ಶಿಕ್ಷಣ ಎಂಬ ವಿವೇಕಾನಂದರ ಉಕ್ತಿ ನಮ್ಮ ಮುಂದಿದ್ದರೂ ನಾವು ಮಾತ್ರ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಕೇವಲ ಪ್ರಮಾಣ ಪತ್ರಗಳನ್ನು ಮಾತ್ರ ಹೊಂದಿರುವ ನಿರುಪಯುಕ್ತ ಪದವೀಧರರನ್ನು ತಯಾರಿಸುತ್ತಲೇ ಇದ್ದೇವೆ.
ಭಾರತದಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸಿ ದೇಶದ ಸ್ಥಿತಿಗತಿಗಳನ್ನು ಅಧ್ಯಯನ ಮಾಡುವಲ್ಲಿ ವಿವೇಕಾನಂದರು ಯಶಸ್ವಿಯಾದರು. ಪಾಶ್ಚಾತ್ಯ ಆಡಳಿತವೂ ಭಾರತದ ಆರ್ಥಿಕ ದುಃಸ್ಥಿತಿಗೆ ಕಾರಣವಾಗಿದ್ದಿತು. ಬಡವರು ಎಷ್ಟೇ ಶ್ರಮಜೀವಿಗಳಾದರೂ ಆರ್ಥಿಕವಾಗಿ ಮೇಲೇರದಂತೆ ಮಾಡುತ್ತಿದ್ದ ದಲ್ಲಾಳಿಗಳ ಕುಟಿಲ ತಂತ್ರಗಳನ್ನು ಅವರು ಗುರುತಿಸಿದ್ದರು.
ಕೃಷಿಕರಲ್ಲಿ, ಕಾರ್ವಿುಕ ವರ್ಗದಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಸರ್ವಪ್ರಯತ್ನಗೈದರು. ”ಜನಸಾಮಾನ್ಯರ ಬೆವರು, ಪರಿಶ್ರಮದಿಂದ ಬದುಕಿನಲ್ಲಿ ಮೇಲೇರಿ ಬಂದ ನಂತರ ಅವರನ್ನು ನಿರ್ಲಕ್ಷಿಸುವ ವಿದ್ಯಾವಂತರು ಎನಿಸಿಕೊಂಡವರನ್ನು ನಾನು ದೇಶದ್ರೋಹಿಗಳೆಂದೇ ಪರಿಗಣಿಸುತ್ತೇನೆ” ಎಂದು ಸಮಾಜದ ವಿದ್ಯಾವಂತರನ್ನು ಛೇಡಿಸುತ್ತಾರೆ. ವಿದ್ಯಾವಂತರ ಮತ್ತು ಶ್ರೀಮಂತರ ಅವಿವೇಕವನ್ನು ಕಂಡು, “Give light to the poor, more light to the rich. Give light to uneducated and more light to educated” ಎನ್ನುತ್ತಾರೆ.
ಭಾರತೀಯರಿಗೆ ವ್ಯವಸಾಯವನ್ನು ಒಂದು ಉದ್ಯೋಗವಾಗಿ ರೂಪಿಸಿಕೊಳ್ಳಬೇಕೆಂದು ಸ್ವಾಮೀಜಿ ಕರೆ ಇತ್ತಿದ್ದಾರೆ. ಅವರು ನೀಡುವ ಭರವಸೆ ಅದ್ಭುತವಾಗಿದೆ- ”ಭಾರತೀಯ ಪ್ರಾಚೀನ ಋಷಿಗಳು ಕೃಷಿಕರಾಗಿದ್ದರು. ಆಧುನಿಕ ಜಗತ್ತಿನಲ್ಲಿ ಅಮೆರಿಕ ವ್ಯವಸಾಯವನ್ನು ಪ್ರಗತಿಪಥದಲ್ಲಿ ಒಯ್ದಿರುವುದು ಗಮನೀಯ ಅಂಶ. ಆಧುನಿಕ ಭಾರತವು ಕೃಷಿ ವಿಜ್ಞಾನವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ ವ್ಯವಸಾಯದಲ್ಲಿ ಅಳವಡಿಸಬೇಕು. ಅವೈಜ್ಞಾನಿಕ ಪದ್ಧತಿಗಳಿಂದ ಕೃಷಿ ಉತ್ಪಾದನೆ ಕ್ಷೀಣಿಸುತ್ತಿದೆ. ಗ್ರಾಮೀಣ ಜನತೆ ಹಳ್ಳಿಗಾಡಿನ ಉತ್ತಮ ಪರಿಸರದಲ್ಲಿ ವ್ಯವಸಾಯವನ್ನು ಕೈಗೊಂಡು ಆರೋಗ್ಯದಿಂದ ನೆಮ್ಮದಿಯಿಂದ ಬದುಕಲು ಸಾಧ್ಯ” ಎಂದಿದ್ದಾರೆ.
ವ್ಯವಸಾಯ ಕ್ಷೇತ್ರವನ್ನು ನಿರ್ಲಕ್ಷಿಸದಂತೆ ಜನಸಾಮಾನ್ಯರನ್ನು ಕೋರಿದ ಸ್ವಾಮೀಜಿ, ವಿಜ್ಞಾನದ ಅಧ್ಯಯನದಿಂದ ರಾಷ್ಟ್ರದ ಔದ್ಯೋಗಿಕ ಕ್ಷೇತ್ರವನ್ನು ಬೆಳೆಸಿ ಲೌಕಿಕ ಸಂಪತ್ತನ್ನು ಗಳಿಸಬಹುದೆಂದು ತಿಳಿವಳಿಕೆ ನೀಡಿದರು. ಅಮೆರಿಕ ಪ್ರವಾಸ ಸಂದರ್ಭದಲ್ಲಿ ಹಡಗಿನಲ್ಲಿ ಭೇಟಿಯಾದ ಶ್ರೀಮಂತರಾದ ಜೆಮ್ ಶೇಠ್ಜೀ ಟಾಟಾರವರಿಗೆ ಭಾರತದಲ್ಲಿ ಕೈಗಾರಿಕೆ ಉದ್ದಿಮೆಯನ್ನು ಮತ್ತು ವಿಜ್ಞಾನ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಮನವಿ ಮಾಡಿದರು.
-ಡಾ.ಗುರುಪ್ರಸಾದ ಎಚ್ ಎಸ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com