ಸಾಹಿತಿ,ಅಧ್ಯಾಪಕ, ಕಲಾವಿದ ಹೀಗೆ ಬಹುಮುಖಿ ವ್ಯಕ್ತಿತ್ವದ ಧಾರವಾಡದ ಡಾ. ಸಿದ್ರಾಮ ಕಾರಣಿಕ ಅವರು ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಮಿಸೆಸ್ ಅಂಬೇಡ್ಕರ್ ರಂಗ ಕೃತಿಯನ್ನು ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಪ್ರಕಟಿಸಿದೆ…
ಇವರ ಮಿಸೆಸ್ ಅಂಬೇಡ್ಕರ್ ನಾಟಕ (ರಂಗ ನಿರ್ದೇಶನ: ಶ್ರೀ ಸಿದ್ದರಾಮ ಹಿಪ್ಪರಗಿ) ಹಲವು ಯಶಸ್ವಿ ಪ್ರದರ್ಶನ ಕಂಡಿತು. ಮಾತ್ರವಲ್ಲ ಮುಂದೆ ಚಲನ ಚಿತ್ರವೂ ಆಯಿತು.
ಬಳ್ಳಾರಿಯಲ್ಲಿ 2015ರಲ್ಲಿ ನಡೆದ ನಡೆದ ರಂಗಕೃತಿಯ ಬಿಡುಗಡೆ ಹಾಗೂ ನಾಟಕ ಪ್ರದರ್ಶನವನ್ನು ಉದ್ಘಾಟಿಸಿದ್ದ ಹಿರಿಯ ರಂಗ ಅಭಿನೇತ್ರಿ ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಅವರು ಡಾ. ಕಾರಣಿಕ ಅವರ ಡಾ.ಅಂಬೇಡ್ಕರ್ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಕ್ಕೆ ಮುಕ್ತಕಂಠದಿಂದ ಪ್ರಶಂಸಿಸಿದ್ದರು.
******
ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಡಾ. ಸಿದ್ರಾಮ ಕಾರಣಿಕ ಅವರ ಕವಿತೆಗಳು ಪಾತ್ರವಾಗಿವೆ…
*****
ಡಾ. ಸಿದ್ದರಾಮ ಕಾರಣಿಕ ಕವಿತೆಗಳು…
ತಂಗಾಳಿಗೆ ಮೈಯೊಡ್ಡಿ ಮೈ ಮರೆತರೆ
ಬಿರುಗಾಳಿಯಾಗಿ ಒದ್ದೀತು ಜೋಕೆ !
ಬೆಟ್ಟವೆಂದು ಭಾವಿಸಿ ಆಸರ ಪಡೆದರೆ
ಭೂಕಂಪನದಿಂದ ಸಮಾಧಿ ಮಾಡೀತು ಜೋಕೆ !
ಸಮ್ಮಾನದ ಸುಖ ಹೆಸರಿಗಷ್ಟೇ ಹೊರತು
ಖಮ್ಮಾನ ಬದುಕಿಗಲ್ಲ ಕಾರಣಿಕ ಸಿದ್ಧರಾಮ
ರಾಜಿಗೆ ಪೀಠದ ಆಸೆ ಬೇಡ !
ಪಾರಿವಾಳದ ಕಾಲಿಗೆ ಸಂಕೋಲೆಯ ಬಿಗಿದು
ಪಂಜರದೊಳಗೆ ದೂಡಿ ಕದವ ಬಡಿದು
ಖುಷಿ ಪಡೋರ ಪತಂಗ ಹರಿಯಲಿ
ದಾರಿ ತಪ್ಪುವ ಹಾದಿಯ ತೋರಿ
ದೂರ ನಿಂತು ನಗುತಿರುವ ನೆರೆಯವರ
ನೆನಪಳಿದು ಹೋಗಲಿ
ಹಾರುವ ಹಕ್ಕಿಯ ಪಕ್ಕ
ಮತ್ತೇ ಬೆಳೆದು ಜೀವ ತುಂಬಲಿ
ಬಸವಿಳಿದ ಮೇಲೆ ಎದ್ದು ನಿಲ್ಲುವುದೇ
ಕಣ್ಣ ಕತ್ತಲೆಯ ಪರಸಂಗ !
ನಾಕ ನೋಡಲೂ ನೋವು !
ಸಾಕಾಗಿ ಹೋಯಿತು ಈ ಕರ್ಮ
ಅನ್ನೋದು ಗಳಿಗೆ ಮಾತ್ರ ;
ಮುಂದಿನದಕ್ಕೆ ಮತ್ತೇ ಹುಮ್ಮಸ್ಸು
ತುಂಬಿಕೊಳ್ಳುತ್ತದೆ ! ಬಲು ವಿಚಿತ್ರ
ಆದರೂ ಇದು ಖರೇ ಚಿತ್ರ !
ಕಾರಣ ಹೇಳಿದರೂ ಕೇಳದೇ
ಕಳೆದು ಹೋದ ಕಣ್ಣುಗಳ ಮಿಂಚೆ !
ಕಾನನದ ನಡುವೆ ಕಳೆದುಕೊಂಡ
ಕುರುಡನ ನೆನಪಿನ ಸಂಚೆ !
ಕರುಣೆ ಬಾರದೆ ? ಶರಣ ಹೋಗುವೆ !
ಧನ್ಯವಾದಗಳು ಸರ್