ಅನುದಿನ ಕವನ-೧೭

ವೃತ್ತಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ಸ್ವರೂಪಾನಂದ ಎಂ ಕೊಟ್ಟೂರು ಅವರು ಪ್ರವೃತ್ತಿಯಲ್ಲಿ ಲೇಖಕರು-ಹವ್ಯಾಸಿ ಪತ್ರಕರ್ತರು.
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ರೈತ ಕುಟುಂಬದ ಸ್ವರೂಪಾನಂದ ಅವರು ತಮ್ಮ ಊರಿನಲ್ಲಿ ಪ್ರಾಥಮಿಕ, ಪ್ರೌಢಶಾಲಾ, ಪದವಿ ಶಿಕ್ಷಣ ಪಡೆದರು. ಪೊಲೀಸ್ ಕಾನ್ ಸ್ಟೇಬಲ್ ಆದ ಬಳಿಕ ಉನ್ನತ ಶಿಕ್ಷಣ( ಎಂ.ಎ ಪತ್ರಿಕೋದ್ಯಮ)ವನ್ನು ಹಂಪಿ ಕನ್ನಡ ವಿವಿಯಲ್ಲಿ ಪಡೆದುಕೊಂಡಿರುವುದು ವಿಶೇಷ.
ಇವರ ನೂರಾರು ಲೇಖನ, ನುಡಿಚಿತ್ರಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿವೆ. ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುವ ಹಲವರನ್ನು ಬೆಳಕಿಗೆ ತಂದ ಕೀರ್ತಿ ಸ್ವರೂಪ ಕೊಟ್ಟೂರು ಅವರಿಗೆ ಸಲ್ಲಬೇಕು.
ತಮ್ಮದೇ ಆದ ರೀತಿಯಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಕೊವೀದ್ ನಿಂದ ಬಳಲುತ್ತಿದ್ದವರಿಗೆ ಪ್ರತಿದಿನವೂ ಕಾಷಾಯ ಹಂಚಿ ಗಮನ ಸೆಳೆದವರು. ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕಾನೂನು, ಆರೋಗ್ಯ, ಶಿಕ್ಷಣದ ಬಗ್ಗೆ ಜನ ಜಾಗೃತಿ ಮೂಡಿಸುವುದು ಇವರ ನೆಚ್ಚಿನ ಹವ್ಯಾಸಗಳಲ್ಲಿ ಒಂದು.
ಇವರ ಜನಮುಖಿ ಕಾರ್ಯವನ್ನು ಮೆಚ್ಚಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.
ಇಂದಿನ “ಅನುದಿನ ಕವನ” ದ ಗೌರವಕ್ಕೆ ಸ್ವರೂಪ ಕೊಟ್ಟೂರು ಅವರ ಹನಿಗವನಗಳು ಪಾತ್ರವಾಗಿವೆ.
(ಸಂಪಾದಕ: ಕರ್ನಾಟಕ ಕಹಳೆ ಡಾಟ್ ಕಾಮ್)

*****

*ಸ್ವರೂಪಾನಂದ ಕೊಟ್ಟೂರು ಹನಿಗವನಗಳು*

ನಿನ್ನ ನೆನಪುಗಳ ಸುತ್ತ
ನಿತ್ಯ ಪರಿಭ್ರಮಣವು.
ಅದುವೇ ಎನಗೆ
ಸಂಕ್ರಮಣವು..!

ನಿನ್ನ ಹುಸಿ ಮುನಿಸು
ಸದಾ ಕಾಡುತಿಹುದು
ಅದು ನಿನ್ನ ಒಲವು
ಚೆಲವು ಇಮ್ಮಡಿಯ
ಕನ್ನಡಿ ಕೇಳೇ ಗೆಳತಿ..!

ನಿನ್ನದೇ ಗುಂಗಿನಲಿ
ಒಣಗಿರುವೆ ಗೆಳತಿ
ಹೃದಯ ಬಡಿತ
ಬೆನ್ನ ಹಿಂದೆ ಕೇಳುವಷ್ಟು..

ನನ್ನೊಳಗಿನ ಬೆಳಕಿಗೆ
ಕಂಗಳ ಕಾಂತಿಯೇ
ಕಾರಣ ರಾಧೆ..

ಬಳಿ ಬಂದ ಮೇಲೆ
ಮುನಿಸು ಕರಗಿತು
ತಬ್ಬಿದ ಇಬ್ಬನಿ
ಎಳೆ ಬಿಸಿಲಿನಂತೆ

ಅವಳ ಎಲ್ಲ ಪ್ರಶ್ನೆಗಳು
ಕಣ್ಣ ಬಿಂದುಗಳಲಿ
ಕೊಚ್ಚಿ ಹೋದವು..!

ನೀನು ನಡೆದ ಹಾದಿ
ನಿಟ್ಟುಸಿರು ಬಿಡುತಿದೆ
ನನ್ನಂತೆ
ನಿನ್ನ ನಿರೀಕ್ಷೆಯಲ್ಲಿ…..

-ಸ್ವರೂಪಾನಂದ ಕೊಟ್ಟೂರು
ಕೂಡ್ಲಿಗಿ ಪೊಲೀಸ್ ಠಾಣೆ