ರಾಣೇಬೆನ್ನೂರು: ಕಲೆ,ಸಾಹಿತ್ಯ,ಸಂಸ್ಕೃತಿ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಗರದ ಕಾಗದ ಸಾಂಗತ್ಯ ವೇದಿಕೆ ಸೃಜನಶೀಲ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಪುಸ್ತಕದ ಒಳಪುಟಗಳಿಗೆ ಉತ್ತಮ ಚಿತ್ರ / ರೇಖಾಚಿತ್ರ ರಚಿಸಿದ ರಾಜ್ಯದ ಕಲಾವಿದರಿಂದ 2018 ಮತ್ತು 2019 ನೇ ಸಾಲಿನ ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಸಹಾಯಕ ಅಧ್ಯಾಪಕ ಡಾ.ಬಸವರಾಜ ಎಸ್. ಕಲೆಗಾರ ಇವರು ‘ಚಿತ್ರಕಾರನ ಬಹುಮುಖಿ ಚಿಂತನೆ’ ಎಂಬ ಪುಸ್ತಕಕ್ಕೆ ರಚಿಸಿದ ಚಿತ್ರಗಳಿಗೆ 2018 ಸಾಲಿನ ಪುರಸ್ಕಾರ ಹಾಗೂ ಬಾಗಲಕೋಟೆಯ ವಿಶ್ವವಿನೂತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಶಿವಾನಂದ ಹಿರೇಮಠ ರವರು ‘ಮಕ್ಕಳಿಗಾಗಿ ನೂರಾರು ಕವಿತೆಗಳು’ ಎಂಬ ಪುಸ್ತಕಕ್ಕೆ ರಚಿಸಿದ ಚಿತ್ರಗಳಿಗೆ 2018 ಸಾಲಿನ ಕಾಗದ ಸಾಂಗತ್ಯ ಕಲಾ ಪುರಸ್ಕಾರ ಪಡೆದುಕೊಂಡಿದ್ದಾರೆ.
ಪ್ರಶಸ್ತಿಯು ನಗದು ಪ್ರಶಸ್ತಿ , ಪುರಸ್ಕಾರ ಫಲಕ ಹಾಗೂ ಪುಸ್ತಕಗಳನ್ನು ಒಳಗೊಂಡಿರುತ್ತದೆ. ಪುರಸ್ಕಾರ ಸಮಾರಂಭ ಜ.31 ಭಾನುವಾರದಂದು ನಡೆಯಲಿದೆ ಎಂದು ಕಾಗದ ಸಾಂಗತ್ಯದ ಅಧ್ಯಕ್ಷರೂ ಆದ ಕಲಾವಿದ ನಾಮದೇವ ಕಾಗದಗಾರ ತಿಳಿಸಿದ್ದಾರೆ.