ಕವಯತ್ರಿ ಬಿ.ಸಿ.ಶೈಲಾನಾಗರಾಜ್ ಕಿರುಪರಿಚಯ:
ತುಮಕೂರಿನ ಬಿ.ಸಿ. ಶೈಲಾ ನಾಗರಾಜ್ ಅವರು ಲೇಖಕಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಹಾಗೂ ,ಹೋರಾಟಗಾರ್ತಿ ಗುರುತಿಸಿಕೊಂಡಿದ್ದಾರೆ.
ಸುಮಾರು ಮುವತ್ತು ವರ್ಷಗಳಿಂದ
ಅನೇಕ,ಸಾಹಿತ್ಯ,ಹಾಗು ಕನ್ನಡಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.
ಸುಮಾರು ಇಪ್ಪತ್ತೊಂದು ಪುಸ್ತಕಗಳನ್ನು
ಬರೆದಿದ್ದಾರೆ. ಹತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದಿರುವ ಇವರು ವಿದ್ಯಾರ್ಥಿ ದೆಸೆಯಿಂದಲೂ
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರಸ್ತುತ
ತುಮಕೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ
ಗುರುತರ ಕೆಲಸಗಳನ್ನು ನಿರ್ವಹಿಸಿದ್ದಾರೆ
ಜಿಲ್ಲಾ ಲೇಖಕಿಯರ ಸಂಘದ
ಅಧ್ಯಕ್ಷರಾಗಿ ಸುಮಾರು ಹತ್ತು ವರ್ಷಗಳು ಗಣನೀಯ ಕೆಲಸ ಮಾಡಿದ್ದಾರೆ. ಪ್ರಸ್ತುತ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಸಂಪಾದಕತ್ವದ ಕೈಬರಹದ ಶೈನಾ ಪತ್ರಿಕೆಯು ನಾಡಿನ ಸಾಹಿತ್ಯಾಸಕ್ತರ ಗಮನ ಸೆಳೆದಿದೆ.
ಜ.24 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ. ಈ ಹಿನ್ನಲೆಯಲ್ಲಿ ಶೈಲಾ ನಾಗರಾಜ್ ಅವರ “ಬಾ ಮಗಳೇ”
ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ.
*****👇
ಬಾ…ಮಗಳೆ!
************
ಕಾಸು ಕೊಸರಿನ, ಭಾರ ಹೈರಾಣದ
ದಿವಕೆ ಅಗ್ನಿದಿವ್ಯವಾಗಿ
ಕೊಡು ಕೊಳುಗಳ
ತಂತು ನೀನಾಗಿ
ಹಸಿರಾಗಿ ಬಸಿರ ಭಾಗಿನವಾಗಿ
“ಬಯಕೆ ಭಾವಗಳ ಕಾವ್ಯವಾಗಿ”
ಬಾ..ಮಗಳೆ!
ನಿತ್ಯ ಸತ್ಯದ ಮಾಯೆ
ಮಾಯೆಯ ಜೀರುವ ಕುಣಿಕೆ
ಕುಟ್ಟಾಣಿ ಒನಕೆ ಕಡಿ ಬಂಧನ
ಮಡಿಲ ತೂಗುವ ತೊಟ್ಟಿಲು ಜೀಕುವ
‘ಹೂ ನಗು’
ಸ್ವಾರ್ಥ ಮರೆಸಿದ ಹಾದಿ
ಭ್ರಮೆಯ ನೀಗಿದ ನೆಮ್ಮದಿ
ಬಾಳ ತೇಯುವ
ಗಂಧದ ಸುಗಂಧ
ಮುಟ್ಟು ಮಾಸಿನ ಕಟ್ಟು ಸಡಿಲಿನ
“ಎದೆಯ ಹಾಡಾಗಿ”
ಬಾ..ಮಗಳೆ!
ಮೈ ಮನಗಳ ಕನಸು ಹದವಾಗಿ
ಬೆಸೆದು ಕಾಲ ಪಕ್ವವಾಗಿದೆ
ಶಬ್ದದೊಳಗಿನ ಬೇಧ ಕರೆಸಿ
“ನಿಶ್ಯಬ್ದ ಬೇರಾಗಿ”
ಬಾ..ಮಗಳೆ!
ಕಾಲದ ತಟವಟ ಮುಗಿದು
ಚಿಂತೆ ಗೆರೆ ಕಳೆದು
ಶುಭ್ರವಾಗಿದೆ ಸ್ಪಂದನ
“ಮಾತಿನ ಕೊಳೆ ಹರಿದು
ಮೌನದ ಬೆಳಕಾಗಿ”
ಬಾ..ಮಗಳೆ!
ನೆಲದ ಋಣ ಜಲದ ಋಣ
ಮತದ ಋಣ ಕುಲಗಟ್ಟೆಯ ಋಣ
ಕಳ್ಳು ಬಳ್ಳಿಗೆ ಎರಕದ ಋಣ
“ಋಣಕೆ ಋಣವಾಗಿ
ಋಣದ ತಾಯಾಗಿ..”
ಬಾ..ಮಗಳೆ!
-ಬಿ.ಸಿ.ಶೈಲಾನಾಗರಾಜ್, ತುಮಕೂರು