ಮೂಲತಃ ರಾಯಚೂರಿನ ಶ್ರೀ ಸಿದ್ಧರಾಮ ಹಿರೇಮಠ ಅವರು ಸೂಕ್ಷ್ಮ ಸಂವೇದನೆಯ ಕವಿ, ಛಾಯಾಚಿತ್ರಕಾರರು, ಪ್ರಕೃತಿಪ್ರಿಯರು.
ಎರಡು ದಶಕಗಳಿಂದ ಕೂಡ್ಲಿಗಿಯ ಅನುದಾನಿತ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ತಮ್ಮ ದಕ್ಷ ಅಧ್ಯಾಪನೆ, ಆಡಳಿತದಿಂದ ಪ್ರಾಶುಂಪಾಲರಾಗಿ ಮುಂಭಡ್ತಿ ಪಡೆದಿದ್ದಾರೆ.
ಉತ್ತಮ ಲೇಖಕರು. ಹವ್ಯಾಸಿ ಪತ್ರಕರ್ತರು. ಪ್ರಜಾವಾಣಿ ಪತ್ರಿಕೆಯ ಕೂಡ್ಲಿಗಿ ತಾಲೂಕು ವರದಿಗಾಗಿಯೂ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ತಮ್ಮ ವಿಶಿಷ್ಟ ಕಾವ್ಯ,ಗಜಲ್ ಮೂಲಕ ನಾಡಿನಲ್ಲಿ ಈಗಾಗಲೇ ಜನಪ್ರಿಯರಾಗಿರುವ ಸಿದ್ದರಾಮ ಹಿರೇಮಠ ಅವರ ಗಜಲ್ ಇಂದಿನ “ಅನುದಿನ ಕವನ” ದ ಗೌರವಕ್ಕೆ ಪಾತ್ರವಾಗಿದೆ.
*****
ಗಜಲ್
–
ಮಾತುಗಳನ್ನೇ ಹಾಸಿ ಹೊದೆವವರಿಂದಲೇ ಮೌನ ಕನಸಿನಂತಾಯಿತಲ್ಲ ಸಾಕಿ
ಹಣವನ್ನೇ ಉಂಡು ತೇಗುವವರಿಂದಲೇ ಅನ್ನ ಮಾಯೆಯಂತಾಯಿತಲ್ಲ ಸಾಕಿ
–
ನೆಲದ ಬಾಯಿಗೆ ಮಣ್ಣು ಹಾಕಿ ತುಳಿವ ಪಾದಗಳೇ ಮೆರೆಯುತಿವೆ ಎಲ್ಲೆಡೆಯೂ
ಹಸಿದ ಹೊಟ್ಟೆಗಳ ಕೀಳುವವರಿಂದಲೇ ನೀಡುವ ಕೈ ಚೂರಿಯಂತಾಯಿತಲ್ಲ ಸಾಕಿ
–
ಕುಡಿಯದೆಯೇ ಆಗಸದೆತ್ತರದಿ ತೇಲಾಡುತಿವೆ ಕೀರ್ತಿವೆತ್ತ ಮದಮತ್ತ ತಲೆಗಳು
ನೆಲದ ಬೇರುಗಳ ನೋಡದವರಿಂದಲೇ ಹೂವೆಲ್ಲ ಮುಳ್ಳಿನಂತಾಯಿತಲ್ಲ ಸಾಕಿ
–
ಎಷ್ಟು ಜನರ ನೆತ್ತರನು ಕುಡಿದು ಕೆಂಪಾಗಿ ಜಡವಾಗಿದೆಯೋ ಈ ನೆಲದ ಒಡಲು
ನಿಜದ ನಾಲಗೆಯ ಕತ್ತರಿಸುವವರಿಂದಲೇ ಅಕ್ಕರವೆಲ್ಲ ಬಿಕ್ಕುವಂತಾಯಿತಲ್ಲ ಸಾಕಿ
–
ಸಿದ್ಧ ಬದುಕಿನುದ್ದಕ್ಕೂ ನೊಂದ ಮನಸಿನ ಭಾವಗಳ ಗೆರೆಗಳನೇ ನೋಡುತ ಬಂದ
ಅನ್ಯರ ನೋವಿಗೆ ನಲಿಯುವವರಿಂದಲೇ ಬಿರಿದ ಗಾಯ ನಗುವಿನಂತಾಯಿತಲ್ಲ ಸಾಕಿ
–
ಸಿದ್ಧರಾಮ ಕೂಡ್ಲಿಗಿ