ಅನುದಿನ ಕವನ-೨೭ (ಕವಿ: ಎ.ಎನ್. ರಮೇಶ್ ಗುಬ್ಬಿ, ಕಾರವಾರ)

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದ ಎ ಎನ್ ರಮೇಶ್ ಅವರು ಕಾರವಾರದ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ಇವರದು ಪಳಗಿದ ಕೈ. ಜೊತೆಗೆ ನಟನೆ, ನಿರೂಪಣೆ, ನಿರ್ದೇಶನಕ್ಕೂ ಎತ್ತಿದ ಕೈ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನಗಳ ಸಂಕಲನ, ‘ಭಾವದಂಬಾರಿ’ ಎಂಬ ಕಥಾಸಂಕಲನ. “ಶಕ್ತಿ ಮತ್ತು ಅಂತ” ಎಂಬ ಅವಳಿ ನಾಟಕ ಸಂಕಲನ, “ಕಿಸ್ ಮಾತ್ರೆ” ಎನ್ನುವ ಹಾಸ್ಯಗವನ ಸಂಕಲನ, “ಹೂವಾಡಿಗ” “ಕಾಡುವ ಕವಿತೆಗಳು” ಎಂಬ ಕವನ ಸಂಕಲನಗಳು ಪ್ರಕಟವಾಗಿದೆ. ಈಗ “ಸಂಸಾರವೆಂಬ ಹಾರ(ರ್)ಮೋನಿಯಮ್” ಹಾಸ್ಯಗವನ ಸಂಕಲನ ಲೋಕಾರ್ಪಣೆಯಾಗುತ್ತಿದ್ದು, “ಮಾತು-ಮೌನಗಳ ನಡುವೆ..” ಕವನ ಸಂಕಲನ ಅಚ್ಚಿನ ಮನೆಯಲ್ಲಿದ್ದು, ಬಿಡುಗಡೆಗೆ ಸಿದ್ದವಾಗುತ್ತಿದೆ. ಅವಳಿ ನಾಟಕಗಳ ಸಂಕಲನ ತಯಾರಿ ಹಂತದಲ್ಲಿದೆ.
ಇವರ ಸಾಹಿತ್ಯ ಸೇವೆ, ಸಂಘಟನೆಗೆ ಜಿಲ್ಲಾ, ರಾಜ್ಯಮಟ್ಟದ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
*****
ಇಂದಿನ ‘ಅನುದಿನ ಕವನ’ದ ಗೌರವಕ್ಕೆ ರಮೇಶ್ ಗುಬ್ಬಿ ಅವರ ‘ಕವಿತಾ’ ಪದ್ಯ ಪಾತ್ರವಾಗಿದೆ.👇

ನನ್ನ ಒಲವಿನ ಕವಿತಾಳ ಮೇಲೊಂದು ಕವಿತೆ. ಅವಳ ಮೇಲಿನ ಅಂತರಾಳದ ಅನಂತ ಭಾವಗಳ ಅಕ್ಷರ ಪ್ರಣತೆ. ಒಡಲ ಸಹಸ್ರ ಸ್ವರಗಳ ಮಧುರ ಭಾವಗೀತೆ. ಪೂರ್ತಿ ಓದಿ ನೋಡಿ.. ನಿಮಗರಿವಿಲ್ಲದೆ ನನ್ನ ಕವಿತಾಳನ್ನು ನೀವು ಪ್ರೀತಿಸುತ್ತೀರಾ.. ಏಕೆಂದರೆ ಅವಳ ಒಲವು, ಚೆಲುವು, ನಿಲುವುಗಳೇ ಅಂತಹುದು. ಏನಂತೀರಾ.?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

*****

ಲವ್ಯೂ ಕವಿತಾ!

ಐ ಲವ್ ಯೂ ಕಣೇ ಕವಿತಾ..
ಎದೆಯ ಭಾವಗಳ ಅಕ್ಷರವಾಗಿಸಿದ್ದಕ್ಕೆ
ಮನದ ಮಾತುಗಳ ಪದವಾಗಿಸಿದ್ದಕ್ಕೆ

ಯಾವುದೋ ಹುಡುಗ ಹುಡುಗಿಯರ
ಒಲವ ಉಸಿರಿಗೆ ಅಭಿವ್ಯಕ್ತಿಯಾಗಿದ್ದಕ್ಕೆ
ಯಾವುದೋ ಹೃದಯ ರಿಂಗಣಗಳಿಗೆ
ಜೊತೆಯಾಗಿ ಹಿತವಾಗಿ ದನಿಯಾಗಿದ್ದಕ್ಕೆ

ಯಾರದೋ ಒಡಲ ನೋವು ತಲ್ಲಣ
ಸಂತೈಸಿ ತಿಳಿಯಾಗಿಸಿ ತಂಪಾಗಿಸಿದ್ದಕ್ಕೆ
ಯಾರದೋ ನರಳಿಕೆ ಕಣ್ಣೀರಧಾರೆಗಳ
ಒರೆಸಿ ಮರೆಸಿ ಭಾವ ನಿರಾಳವಾಗಿಸಿದ್ದಕ್ಕೆ

ಯಾರದೋ ಜೀವಕ್ಕೆ ರೆಕ್ಕೆಗರಿಯಾಗಿ
ನವ ಚೈತನ್ಯ ತುಂಬಿ ಹಕ್ಕಿಯಾಗಿಸಿದ್ದಕ್ಕೆ
ಯಾರದೋ ಹೆಜ್ಜೆಗೆ ಬೆಳ್ಳಿಗೆಜ್ಜೆಯಾಗಿ
ಬಾನಿನೆತ್ತರಕ್ಕೆ ಬೆಳೆಸಿ ಚುಕ್ಕಿಯಾಗಿಸಿದ್ದಕ್ಕೆ

ಪ್ರೀತಿ ಪ್ರೇಮ ತ್ಯಾಗಗಳ ಪ್ರಣತಿಯಾಗಿ
ಅಂಧಕಾರ ತೊಳೆವ ಜ್ಯೋತಿಯಾಗಿದ್ದಕ್ಕೆ
ಶಾಂತಿ ನೀತಿ ತತ್ವಗಳ ನಿಯತಿಯಾಗಿ
ಬದುಕು ಬದಲಿಸುವ ದೀಪ್ತಿಯಾಗಿದ್ದಕ್ಕೆ

ಐ ಲವ್ ಯೂ ಕಣೇ ಕವಿತಾ..
ಜನಕೆ ಅನಾಮಿಕನಾಗಿದ್ದ ನನಗೊಂದು
ಹೆಸರು ಗುರುತುಸುವಿಕೆಗಳ ನೀಡಿದ್ದಕ್ಕೆ
ಜಗಕ್ಕೆ ಅಗೋಚರನಾಗಿದ್ದ ನನಗೊಂದು
ವಿಳಾಸ ವಿನ್ಯಾಸಗಳ ಕೊಡಮಾಡಿದ್ದಕ್ಕೆ.!

ಐ ಲವ್ ಯೂ ಕಣೇ ಕವಿತಾ..
ನೀನೆಂದರೆ ಹೃದಯಸ್ವರಗಳ ರಾಗಮಾಲಿಕೆ
ಸಾವಿರ ಕನಸು ಕಲ್ಪನೆಗಳ ಕಾವ್ಯಕನ್ನಿಕೆ..!

-ಎ.ಎನ್.ರಮೇಶ್. ಗುಬ್ಬಿ
*****

One thought on “ಅನುದಿನ ಕವನ-೨೭ (ಕವಿ: ಎ.ಎನ್. ರಮೇಶ್ ಗುಬ್ಬಿ, ಕಾರವಾರ)

Comments are closed.