ಹೈದ್ರಾಬಾದ್ ಕರ್ನಾಟಕ’ ಪ್ರಾದೇಶಿಕ ಪತ್ರಿಕೆಯ ಕ್ಯಾಲೆಂಡರ್ ಬಿಡುಗಡೆ: ಜನರ ನೋವು-ನಲಿವುಗಳಿಗೆ ಪತ್ರಿಕೆ ಸ್ಪಂದಿಸಲಿ -ಐಜಿಪಿ ಎಂ.ನಂಜುಂಡಸ್ವಾಮಿ

ಬಳ್ಳಾರಿ, ಜ.30: ಕಲ್ಯಾಣ ಕರ್ನಾಟಕ ಭಾಗದ ಜನರ ನೋವು ನಲಿವುಗಳಿಗೆ ಹೈದ್ರಾಬಾದ ಕರ್ನಾಟಕ ದಿನಪತ್ರಿಕೆ ಸ್ಪಂದಿಸಲಿ ಎಂದು ಬಳ್ಳಾರಿ ವಲಯದ ಐಜಿಪಿ, ಹಿರಿಯ ಸಂಶೋಧಕ ಹಾಗೂ ಸಾಹಿತಿ ಎಂ.ನಂಜುಂಡಸ್ವಾಮಿ ಅವರು ಹೇಳಿದರು.
ಶನಿವಾರ ನಗರದ ತಮ್ಮ ನಿವಾಸದ ಅಂಗಳದಲ್ಲಿ ಪತ್ರಿಕಾ ಬಳಗ ಸಿದ್ಧಪಡಿಸಿದ 2021ರ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ವಿಜಯನಗರ, ಗುಲ್ಬರ್ಗಾ, ಬೀದರ್ ವ್ಯಾಪ್ತಿಯಲ್ಲಿ ಅಧಿಕ ಪ್ರಸಾರ ಹೊಂದಿರುವ ಹೈದ್ರಾಬಾದ್ ಕರ್ನಾಟಕ ಕನ್ನಡ ಪ್ರಾದೇಶಿಕ ಪತ್ರಿಕೆ ಈ ಭಾಗದ ಜನರದನಿಯಾಗಿ ಕಾರ್ಯನಿರ್ವಹಿಸಲಿ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಸರಕಾರಕ್ಕೆ ಸಲಹೆಗಳನ್ನು ನೀಡಲಿ. ಸಂಘ ಸಂಸ್ಥೆಗಳ ಪಾತ್ರಗಳ ಬಗ್ಗೆ ಮನವರಿಕೆ ಮಾಡಲಿ ಎಂದು ಹೇಳಿದರು.
ಜನಪ್ರತಿನಿಧಿಗಳು, ಅಧಿಕಾರಿಗಳ ಉತ್ತಮಕೆಲಸ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಲಿ, ಪ್ರಶಂಸಿಸಲಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕೆಗೆ ಶುಭ ಹಾರೈಸಿದ ಮನಂ ಅವರು, ಪತ್ರಿಕೆ ಇನ್ನೂ ಎತ್ತರಕ್ಕೆ ಬೆಳೆಯಲಿ ರಾಜ್ಯಮಟ್ಟದ ಪತ್ರಿಕೆಯಾಗಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನ ಸಂಪಾದಕ ಪಿ.ಚನ್ನಬಸವ ಬಾಗಲವಾಡ ಅವರು ಮನಂ ಅವರನ್ನು ಸತ್ಕರಿಸಿ ಗೌರವಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ. ರಾಮಲಿಂಗಪ್ಪ, ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ರಾಯಚೂರು ವಿಭಾಗೀಯ ರಿಜಿನಲ್ ಮ್ಯಾನೇಜರ್ ಜಿ.ಲಕ್ಷ್ಮೀನಾಯಕ, ನಿವೃತ್ತ ವಿಭಾಗೀಯ ರಿಜಿನಲ್ ಮ್ಯಾನೇಜರ್ ಮತ್ತು ಹಿರಿಯ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ, ಈಶಾನ್ಯ ಟೈಮ್ಸ್ ಜಿಲ್ಲಾ ವರದಿಗಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ.ಮಂಜುನಾಥ ಉಪಸ್ಥಿತರಿದ್ದರು.