ಬಳ್ಳಾರಿ: ಆಡಳಿತ ವ್ಯವಸ್ಥೆಯ ಬಗ್ಗೆ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಲವಾರು ವಿಷಯಗಳು ಇಂದಿನ ಕಾರ್ಯಕ್ರಮದ ಮೂಲಕ ನಮ್ಮ ಗಮನಕ್ಕೆ ಬಂದಿವೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ಹೇಳಿದರು.
ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ನಿಮಿತ್ತ ಬಳ್ಳಾರಿ ಜಿಪಂ ವತಿಯಿಂದ ಜಿಪಂ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೊಂದು ವಿಶೇಷ ಪ್ರಯತ್ನ, ಜಿಲ್ಲೆಯ ಎಲ್ಲಾ ಅಧಿಕಾರಿಗಳು ಇದಕ್ಕೆ ಸಹಕಾರ ನೀಡಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ವಿದ್ಯಾರ್ಥಿನಿಯರು ಬಂದಿದ್ದಾರೆ. ಇಂದು ಹೆಣ್ಣುಮಕ್ಕಳು ಮಾಡಿದ ಕಾರ್ಯಗಳು ನಮಗೆ ಪ್ರೇರಣೆ ನೀಡಿವೆ ಎಂದರು.
ಬಾಲ್ಯ ವಿವಾಹ , ಬಾಲ ಕಾರ್ಮಿಕ ಪದ್ದತಿಯನ್ನು ತಡೆಯುವ ಕೆಲಸ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಪಂ ನಡೆ ಮಹಿಳಾ ಮತ್ತು ಮಕ್ಕಳ ಕಡೆ ಕಾರ್ಯಕ್ರಮ ಮತ್ತು ಓದುವ ಬೆಳಕು ಕಾರ್ಯಕ್ರಮದ ಮೂಲಕ ಬಾಲ್ಯ ವಿವಾಹ, ಬಾಲಕಾರ್ಮಿಕ ಮತ್ತು ವರದಕ್ಷಿಣೆಯಂತಹ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರೋಬೆಷನರಿ ಐಎಎಸ್ ಅಧಿಕಾರಿ, ಯಾದಗಿರಿ ನಗರಸಭೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಬಳ್ಳಾರಿಯವರೇ ಆದ ಅಶ್ವೀಜಾ ಬಿ.ವಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಇದೊಂದು ಚರಿತ್ರಾರ್ಹ ದಿನ. ಇಂತಹ ಒಂದು ಕಾರ್ಯಕ್ರಮ ಎಂದೂ ನಡೆದಿಲ್ಲ. ಈ ಹಿಂದೆ ಇಂತಹ ಕಾರ್ಯಕ್ರಮ ನಡೆದಿದ್ದರೆ ಇನ್ನೂ ಹೆಚ್ಚಿನ ಐಎಎಸ್ ಅಧಿಕಾರಿಗಳನ್ನ ನಮ್ಮ ಜಿಲ್ಲೆ ಕಾಣಬಹುದಾಗಿತ್ತು ಎಂದರು.
ನಿಮಗೆ ಇಷ್ಟವಾದ ಗುರಿಯೊಂದಿಗೆ ಮುಂದೆ ಸಾಗಿ. ನಿಮ್ಮದೇ ಆದ ಹಾದಿಯಲ್ಲಿ ನಡೆಯರಿ,ಸಮಾಜಕ್ಕೆ ಮಾದರಿಯಾಗುವಂತಹ ರೀತಿಯಲ್ಲಿ ಕಾರ್ಯನಿರ್ವಹಿಸಿ ನೆರೆದಿದ್ದ ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದರು.
ಮಕ್ಕಳಲ್ಲಿ ವಿಶೇಷವಾದ ಕಲೆ ಮತ್ತು ಪ್ರತಿಭೆಗಳು ಇರುತ್ತವೆ;ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು, ಮುಂದೆ ಅಧಿಕಾರಿಗಳು ಮಕ್ಕಳ ಕಲಿಕೆಗೆ ಉತ್ತೇಜಿಸಿ, ಅವರ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಎಂದರು.
ಕಾರ್ಯಕ್ರಮದಲ್ಲಿ ಒಂದು ದಿನದ ಜಿಪಂ ಯೋಜನಾ ನಿರ್ದೇಶಕರರಾದ ಆದರ್ಶ ವಿದ್ಯಾಲಯದ ರುಕ್ಸಾನಾ ಅವರು ಮಾತನಾಡಿ
ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ಬ್ರಿಟೀಷರು ನಮ್ಮನ್ನು ಆಳುತ್ತಿದ್ದರು, ಮುಂದುವರೆದಂತೆ ರಾಜಕೀಯ ನಾಯಕರು ಆಳ್ವಿಕೆ ಮಾಡಿದ್ರು, ಈಗ ನಮ್ಮ ಆಲೋಚನೆಗಳೇ ನಮ್ಮನ್ನು ಆಳುತ್ತಿದ್ದು,ಒಳ್ಳೆಯ ಆಲೋಚನೆಯನ್ನು ಮಾಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಿ ಎಂದರು.
ನಮ್ಮ ಆಲೋಚನೆಗಳು ನಮ್ಮನ್ನು ಆಳುತ್ತಿವೆ;ಒಳ್ಳೆ ಒಳ್ಳೆಯ ಉತ್ತಮ ಆಲೋಚನೆಗಳ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಿ. ಸಂವಿಧಾನ ಮತ್ತು ಸ್ವಾತಂತ್ರ್ಯವನ್ನು ಎಲ್ಲರೂ ಸರಿಯಾಗಿ ಉಪಯೋಗಿಸಿಕೊಂಡು ರಾಷ್ಟ್ರದ ಅಭಿವೃದ್ದಿಗೆ ಕೆಲಸ ಮಾಡಿ, ಅದನ್ನು ದುರುಪಯೋಗ ಪಡೆದುಕೊಳ್ಳಬೇಡಿ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಬಾಲ್ಯ ವಿವಾಹ ಇಂದಿಗೂ ಕಡಿಮೆಯಾಗಿಲ್ಲ. ಇದು ಕಡಿಮೆ ಆದರೆ ಹೆಣ್ಣು ಮಕ್ಕಳ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.
ಒಂದು ದಿನದ ಜಿಪಂ ಸಿಇಒ ಪುಷ್ಪಲತಾ ಎಂ. ಅವರು ಮಾತನಾಡಿ,ಸಂವಾದದಲ್ಲಿ ವ್ಯಕ್ತವಾದ ಸಲಹೆ ಮತ್ತು ಸಮಸ್ಯೆಗಳನ್ನು ಈಗಾಗಲೇ ಜಿಪಂ ಸಿಇಒ ಕೆ.ಆರ್.ನಂದಿನಿ ಅವರ ಗಮನಕ್ಕೆ ತರಲಾಗಿದೆ;ನಮ್ಮಿಂದಾಗುವ ಕೆಲಸಗಳನ್ನು ನಾವು ಮಾಡಿದ್ದೇವೆ,ಉಳಿದ ಸಂಪೂರ್ಣ ಕೆಲಸಗಳನ್ನು ಜಿಪಂ ಸಿಇಒ ನಂದಿನಿ ಅವರು ಮಾಡುತ್ತಾರೆ ಎನ್ನುವ ನಂಬಿಕೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಒಂದು ದಿನದ ಜಿಲ್ಲಾಧಿಕಾರಿ ಡಿ.ಕೃಷ್ಣವೇಣಿ, ಅಪರ ಜಿಲ್ಲಾಧಿಕಾರಿ ಕೆ.ಕವನ, ಜಿಪಂ ಮುಖ್ಯ ಯೋಜನಾಧಿಕಾರಿ ಚೇತನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮೀಜಾ, ಕೃಷಿ ಜಂಟಿ ನಿರ್ದೇಶಕಿ ಮಾಣಿಕ್ಯ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಿದ್ದಲಿಂಗೇಶ್ ರಂಗಣ್ಣನವರು, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ನಂತರ ವಿದ್ಯಾರ್ಥಿನಿಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಮನಸೂರೆಗೊಂಡಿತು.
ಬಳ್ಳಾರಿ,ಹಡಗಲಿ,ಕೂಡ್ಲಿಗಿ,ಹಗರಿಬೊಮ್ಮನಹಳ್ಳಿ,ಹೊಸಪೇಟೆ,ಹರಪನಳ್ಳಿ,ಸಂಡೂರು,ಸಿರಗುಪ್ಪ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿನಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.