ಅನುದಿನ ಕವನ-೩೧ (ಹಿರಿಯ ಕವಿ ಕುಮಾರ ಚಲವಾದಿ)

ಹಾಸನದ ಹಿರಿಯ ಕವಿ ಕುಮಾರ ಚಲವಾದಿ ಅವರು
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು.
ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದ ಇವರು ಹಾಸನ ಜಿಲ್ಲೆಯ ಎಲ್ಲ ಅಂಚೆ ಕಛೇರಿಗಳಲ್ಲಿ ಸೇವೆ ಸಲ್ಲಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಹವ್ಯಾಸಗಳು:- ಕತೆ,ಕವನ,ಚುಟುಕು,ಹನಿಗವನ,ಟಂಕಾ, ಗಜಲ್, ರುಬಾಯಿ ಮುಂತಾದ ಪ್ರಕಾರಗಳಲ್ಲಿ ಬರೆಯುವ ಆಸಕ್ತಿ ಜತೆ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವುಳ್ಳವರು.
ಸುಮಾರು ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ!
ಆಕಾಶವಾಣಿ ನಾಟಕಗಳಲ್ಲಿ ಅಭಿನಯ ಮತ್ತು ಅಲ್ಲಿ “ಬಿ” ಗ್ರೇಡ್ ಕಲಾವಿದ!
ಏಕಪಾತ್ರಾಭಿನಯಗಳೆಂದರೆ ತುಂಬಾ ಇಷ್ಟ. ಪ್ರಜಾವಾಣಿ, ಮಂಗಳ, ಸುಧಾ,ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಹಾಸ್ಯ ಲೇಖನ, ಕವನ, ಮಕ್ಕಳ ಕತೆ, ಮಕ್ಕಳ ಕವನ ಪ್ರಕಟವಾಗಿವೆ!
ಪುಸ್ತಕ ಪ್ರಕಟನೆ:
“ನಿಲುವುಗನ್ನಡಿ” ಹನಿಗವನ ಸಂಕಲನ
“ಏಕಾಂಗಿಯ ಎದೆಯ ಹಾಡು” ಕವನ ಸಂಕಲನ ಪ್ರಕಟವಾಗಿವೆ.
ಶೀಘ್ರದಲ್ಲಿ ಚುಟುಕು, ಕವನ, ವಚನ,ರುಬಾಯಿ ಸಂಕಲನಗಳು ಪ್ರಕಟವಾಗಲಿವೆ.

ಇಂದಿನ “ಅನುದಿನ ಕವನ”ದ ಗೌರವಕ್ಕೆ ಕುಮಾರ ಚಲವಾದಿ ಅವರ ‘ಅಮ್ಮ-ನನ್ನಮ್ಮ” ಶಿಶುಗೀತೆ ಪಾತ್ರವಾಗಿವೆ…👇

🌿 *ಅಮ್ಮ – ನನ್ನಮ್ಮ*🌿
( ಶಿಶುಗೀತೆ )

ಅಜ್ಜ-ಅಜ್ಜಿಯರನು ತೋರಿಸಿ ನಮಗೆ
ಪ್ರೀತಿಯ ತೋರಿದಳಮ್ಮ!
ತಾಯಿ-ತಂದೆಯರ ಮಮತೆಯ ತಿಳಿಸಿ
ಒಲುಮೆಯ ನೀಡಿದಳಮ್ಮ!!

ಸೂರ್ಯ-ಚಂದ್ರರನು ದಿನವೂ ತೋರಿಸಿ
ಸಂಬಂಧ ಬೆಸೆದಳು ಅಮ್ಮ!
ಗಾಳಿ-ಬೆಳಕಲಿ ನಮ್ಮನು ಆಡಿಸಿ
ಜಗವನು ತೋರಿದಳಮ್ಮ!!

ದೇವ-ಮಾನವರ ಕತೆಯನು ಹೇಳುತ
ತುತ್ತನು ಉಣಿಸಿದಳಮ್ಮ!
ಗೆಳೆಯರ ಜೊತೆಯಲಿ ಪ್ರೀತಿ ತೋರಿಸಿ
ಬೆಳೆವುದ ತಿಳಿಸಿದಳಮ್ಮ!!

ವಿಧ-ವಿಧ ತಿಂಡಿಯ ಮಾಡಿ ತಿನಿಸುತ
ಮುದ್ದನು ಮಾಡಿದಳಮ್ಮ!
ಮನೆಯವರೊಡನೆ ಆಡಿ ನಲಿಯುವ
ಸಂತಸ ನೀಡಿದಳಮ್ಮ!!

ಗುರು-ಹಿರಿಯರಿಗೆ ಗೌರವ ತೋರಿಸೋ
ಪಾಠ ಕಲಿಸಿದಳು ನನ್ನಮ್ಮ!
ಅಕ್ಷರ ಕಲಿಸಿ ಶಾಲೆಗೆ ಹೋಗುವ

ಗುಣವನು ಕಲಿಸಿದಳಮ್ಮ!!

-ಕುಮಾರ ಚಲವಾದಿ ಹಾಸನ

🌿***********🌷*************🌿