ಅನುದಿನ ಕವನ-೩೨ ಕವಿ: ಗೀತೇಶ್ (ವಿ ಆರ್ ಮುರಲೀಧರ್)

ಗೀತೇಶ್ ಕಾವ್ಯನಾಮದಲ್ಲಿ ಕವಿತೆ ರಚಿಸುತ್ತಿರುವ ವಿ. ಆರ್. ಮುರಲೀಧರ್ ಅವರು ಭಾರತೀಯ ಜೀವ ವಿಮಾ ನಿಗಮದ ಹಿರಿಯ ಅಧಿಕಾರಿ. ಪ್ರಸ್ತುತ ಧಾರವಾಡದ ವಿಭಾಗೀಯ ಕಾರ್ಯಾಲಯದಲ್ಲಿ
ಮಾರುಕಟ್ಟೆ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಜನನ‌ : ೦೧/೦೭/೧೯೬೨, ಬಳ್ಳಾರಿ
ವಿದ್ಯಾರ್ಹತೆ : ಬಿ.ಕಾಂ, ಎಲ್.ಎಲ್.ಬಿ ( ಸ್ಪೆಷಲ್ )
1985 ಯಲ್ಲಿ ಎಲ್.ಐ.ಸಿಯಲ್ಲಿ ನೇಮಕಾತಿ ಹೊಂದಿದ ಮುರಲೀಧರ್ ಅವರು 36 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ
ಹವ್ಯಾಸ : ಓದು ಬರಹ, ಕವನ & ಸಾಹಿತ್ಯ ಲೇಖನಗಳು, ಮನದಾಳದ ಮಾತು ಆಡಿಯೋ ರೆಕಾರ್ಡಿಂಗ್, ರಂಗಾಸಕ್ತಿಯ ಹಿನ್ನೆಲೆಯಲ್ಲಿ ಸಮುದಾಯ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ,
ನಟನೆ, ಸ್ಟೇಜ್ ಪ್ಲೇ ಹಾಗೂ ನಿರ್ದೇಶನ.
ತಂದೆ ತಾಯಿ: ವಿ. ರಾಮಚಂದ್ರ ರಾವ್, ವಿ. ಪ್ರಮೀಳಾ ಬಾಯಿ
ಕುಟುಂಬ:
ಪತ್ನಿ ಶ್ರೀಮತಿ ಚಂದ್ರಿಕಾ ವಿ. ಎಮ್.
ಪುತ್ರಿಯರು: ಕಾವ್ಯ ವಿ.ಎಮ್
ಕವನ ವಿ.ಎಮ್.
ಹರೀಶ್ ದೇಸಾಯಿ ‌- ಅಳಿಯ(ಕಾವ್ಯ ವಿ. ಎಮ್ ಅವರ ಪತಿ)
*****
ಪ್ರಸಿದ್ಧ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ. ರಾ. ಬೇಂದ್ರೆ ಅವರ 125 ಜನ್ಮದಿನದ ಅಂಗವಾಗಿ ಬರೆದ ಕವಿತೆ ಇಂದಿನ ‘ ಅನುದಿನ ಕವನ’ದ ಗೌರವಕ್ಕೆ ಪಾತ್ರವಾಗಿದೆ.👇

🌹ದ.ರಾ. ಬೇಂದ್ರೆ – ರಸಾನುಭವ🌹

ಸಾಧನಕೇರಿಯ ಸೊಬಗಿನ ಸಿರಿಯನು ಕಂಡೆ
ಬೇಂದ್ರೆ ಸ್ಮಾರಕ ಭವನದ ಸವಿಯನೂ ಉಂಡೆ.

ಬೇಂದ್ರೆಯವರೆಂದೂ ಬಾಡದ ಮಲ್ಲಿಗೆಯ ದಂಡೆ
ಅವರೆಂದೆಂದೂ ಸ್ವಾದಿಷ್ಟಾನುಭವದ ರಸದುಂಡೆ‌.

ವರಕವಿಯ ವಾಸದ ಮನೆಯನು ಕಂಡೆ
ಶಾರದೆಯೆ ತಾನಲ್ಲಿ ನೆಲೆಸಿಹುದನೂ ಕಂಡೆ,
ಸಾಹಿತ್ಯ ಲೋಕದ ಸಂಭ್ರಮವನೂ ಕಂಡೆ
ಅಕ್ಷರ ಜಾತ್ರೆಯ ಮಹೋತ್ಸವವನೂ ಕಂಡೆ.

ಹಲವು ಆಯಾಮಗಳ ಮುಖವನು ಕಂಡೆ
ಹೃದಯ ಮಿಡಿತಗಳ ಕ್ಷಣವನೂ ಕಂಡೆ,
ಭಾವ ತರಂಗಗಳ ನಾಟ್ಯವನು ಕಂಡೆ,
ಭಾಷಾ ಸೌಂದರ್ಯದ ಲಾಸ್ಯವನೂ ಕಂಡೆ.

ತಾಯಿ ಭುವನೇಶ್ವರಿಯ ವೈಭವವನು ಕಂಡೆ
ಕನ್ನಡದ ತೇರೆಳೆವ ಕಟ್ಟಾಳುಗಳನೂ ಕಂಡೆ,
ಕನ್ನಡದ ಉನ್ನತಿಗೆ ಶ್ರಮಿಸಿದವರನು ಕಂಡೆ
ಕನ್ನಡಕೆ ಎಂದಿಗೂ ಅಳಿವಿಲ್ಲವೆಂಬುದನೂ ಕಂಡೆ.

ಚಿತ್ರಪಟಗಳಲವರ ಬದುಕನು ಕಂಡೆ
ತುಂಬು ಕುಟುಂಬದ ಸದಸ್ಯರನೂ ಕಂಡೆ,
ಬಾಲ್ಯ ಯೌವನ ವೃದ್ಧ್ಯಾಪ್ಯಗಳನು ಕಂಡೆ
ಜೀವನ ದರ್ಶನದ ಕಟು ಸತ್ಯವನೂ ಕಂಡೆ.

-ಗೀತೇಶ್✍️
(ವಿ. ಆರ್. ಮುರಲೀಧರ್, ಧಾರವಾಡ)