ಕವಯತ್ರಿ ವಿನುತಾ ಎಸ್
ಅವರನ್ನು ಪರಿಚಯಿಸಿದ್ದಾರೆ ಮತ್ತೊಬ್ಬ ಕವಯತ್ರಿ ರಂಗಮ್ಮ ಹೊದೇಕಲ್ ಅವರು👇
#ಮೌನವನ್ನು ಬದುಕುವ ಜೀವದ ಭಾವಗುಚ್ಛವಿದು…!!
**************”********************
ವಿನುತಾ ಎಸ್
ಸಾಮಾಜಿಕ ಜಾಲತಾಣಗಳಲ್ಲಿ ‘ವಿನುತಾ ಎಸ್’ ಈ ಹೆಸರಿನ ಪ್ರೊಫೈಲ್ ಹುಡುಕಿ ಓದುವವರಿದ್ದಾರೆ! ಇವರ ಸಾಲುಗಳನ್ನು ಕುರಿತು ಮಾತನಾಡುವವರೂ…! ಇಡೀ ಪ್ರೊಫೈಲ್ ಜಾಲಾಡಿದರೂ ಸಿಗದ’ ಭಾವಚಿತ್ರ’ ಕ್ಕಾಗಿ ಅಪಾರ ಕುತೂಹಲದವರೂ……..
ತಣ್ಣಗೆ,ತನ್ನ ಪಾಡಿಗೆ , ತನ್ನದೇ ಭಾವಲೋಕದಲ್ಲಿದ್ದುಕೊಂಡು ಪ್ರಪಂಚವನ್ನು ನಿರುಕಿಸುತ್ತ ವಾಸ್ತವಕ್ಕೂ ಸ್ಪಂದಿಸುವುದು ಎಲ್ಲರಿಗೂ ಆಗಲಿಕ್ಕಿಲ್ಲ! ಸಂತೆಯೊಳಗಿದ್ದೂ ನಿಶಬ್ದವನ್ನು ಧೇನಿಸುವುದು ಕೆಲವರಿಗಷ್ಟೇ ಒಲಿದಾತು!
ಸಮೂಹದಲ್ಲಿದ್ದು ಏಕಾಂತ ಸೃಷ್ಟಿಸಿಕೊಳ್ಳಬಲ್ಲ, ಏಕಾಂತದಲ್ಲಿದ್ದುಕೊಂಡು ಲೋಕಾಂತ ಕಾಣಬಲ್ಲ ವಿನುತಾ ಮೌನಿಯಷ್ಟೇ ಚಂದದ ಮಾತಾಡಬಲ್ಲರೆಂಬುದು ಹತ್ತಿರದವರಿಗಷ್ಟೇ ವೇದ್ಯ!ಸಹನೆಯಷ್ಟೇ ತೀವ್ರವಾಗಿ ಸಿಡಿಯುತ್ತಾರೆಂದು ಗೊತ್ತಿರುವುದು ಕೆಲವರಿಗಷ್ಟೇ!
ಇಂತಿಪ್ಪ ವಿನುತಾ ಮೊನ್ನೆ ನನ್ನದೂ ಒಂದು ಪುಸ್ತಕ ಆಯ್ತಪ ಅಂದಾಗ ನಂಗೆ ಅಚ್ಚರಿಯೂ, ಖುಷಿಯೂ ಒಟ್ಟಿಗೇ ಆಯ್ತು! ತಂತ್ರಜ್ಞಾನದ ಅರಿವನ್ನು ಇಂತದ್ದೊಂದು ಸೃಜನಶೀಲತೆಗೆ ಬಳಸಿಕೊಂಡಿರುವ ವಿನುತಾ Yourquote ನಲ್ಲಿ ಬರೆದುಕೊಂಡಿದ್ದ ತನ್ನ ಆರ್ದ್ರ ಸಾಲುಗಳನ್ನು ‘ಪ್ರೀತಿ ಪ್ರಾಣವಾಯು’ ..ಅನ್ನುವ ಹೆಸರಿನಲ್ಲಿ ಪುಸ್ತಕವಾಗಿಸಿದ್ದಾರೆ.
‘ಪುಸ್ತಕ ಮಾಡಲಾಗದ ಆದರೆ ಒಂದು ಪುಸ್ತಕ ಇರಲಿ ಅನ್ನುವವರು ಹೀಗೂ ಮಾಡಬಹುದಪ’ ಅಂತ ಆಕೆ ನಗುತ್ತಾರೆ! ಈ ಪುಸ್ತಕದ ಒಂದಿಷ್ಟು ಪುಟಗಳ ಸಾಲುಗಳನ್ನು ಕರ್ನಾಟಕ ಕಹಳೆ ಡಾಟ್ ಕಾಮ್ “ಅನುದಿನ ಕವನ” ದ ಕಾಲಂನಲ್ಕಿ ಪ್ರಕಟಿಸಿದೆ.
ವಿಮರ್ಶೆಯೋ…ಹಾರೈಕೆಯೋ…ನಿಮ್ಮ ಭಾವದ್ದು!
ನಾನಂತೂ ಅತ್ಯಂತ ಪ್ರೀತಿಯಿಂದ ಅವರ ಪ್ರತಿಭಾವಂತಿಕೆಯನ್ನು ಮೆಚ್ಚುತ್ತೇನೆ!
-ರಂಹೋ,
ವಿನುತಾ ಎಸ್ ಅವರ ಆರ್ದ್ರ ಸಾಲುಗಳು….
👇
ಪ್ರೀತಿ ಅಕಾರಣವೆಂದರು,
ಪ್ರೀತಿಸಲು ಕಾರಣಗಳ ಹುಡುಕುವರು.
ಪ್ರೀತಿಗೆ ಸಾವಿಲ್ಲ ಎಂದರು,
ಪ್ರೀತಿಸಿದ್ದಕ್ಕೆ ಕೊಂದರು.
***************
ಬದುಕಿಗೆ ನೆಪ ಬೇಕಿತ್ತು,
ಉಸಿರಾಡುತ್ತಿರುವೆ…
ಉಸಿರಾಡಲು ಕಾರಣ ಬೇಕಿತ್ತು,
ಪ್ರೀತಿಸಿದೆ…!!!
***************
ಪ್ರೀತಿಯೂ ಧ್ಯಾನವಿದ್ದಂತೆ..!
ನಾವು ಮಾಡಬಹುದಾದ ಕನಿಷ್ಟ ಕಾರ್ಯ
ಸದಾ ಧ್ಯಾನಸ್ಥ
ಸ್ಥಿತಿಯಲ್ಲಿರುವುದಷ್ಟೇ..!!!
***************
ಪ್ರೀತಿಯೆಂದರೆ
ಮತ್ತೇನು,
ಎದೆಯ ಕತ್ತಲೆಗೆ
ಹಿಡಿದ ಪುಟ್ಟ ಹಣತೆ..!!
***************
ಪ್ರೀತಿ,
ತೋರುವವರ ಔದಾರ್ಯವೇ ಹೊರತು
ಪಡೆಯುವವರ ಯೋಗ್ಯತೆಯಲ್ಲ…!!!
***************
ಕಣ್ಣಿಗೆ,
ಪ್ರೀತಿ ಅಂಟಿದಾಗ
ಸಾಮಾನ್ಯರೂ
ವಿಶೇಷವಾಗಿ ಕಾಣುತ್ತಾರೆ..!!
***************
ಪ್ರೀತಿ ಪ್ರಾಣವಾಯುವಿನ ಹಾಗೆ…
ನಾವು ಮಾಡಬಹುದಾದ ಕನಿಷ್ಟ ಕಾರ್ಯ
ಉಸಿರಾಡುತ್ತಿರಬೇಕಷ್ಟೇ…
***************
ನಾನು ಸೂರ್ಯನನ್ನು ನಂಬುತ್ತೇನೆ,
ಬೆಳಗದೇ ಇದ್ದಾಗಲೂ…
ನಾನು ಪ್ರೀತಿಯನ್ನು ನಂಬುತ್ತೇನೆ,
ಪ್ರೀತಿ ನನ್ನ ತಲುಪದೇ ಇದ್ದಾಗಲೂ…
ನಾನು ದೇವರನ್ನೂ ನಂಬುತ್ತೇನೆ,
ನನ್ನ ಪ್ರಾರ್ಥನೆಗೆ ಉತ್ತರ ಮೌನವೇ ಆಗಿದ್ದರೂ…
***************
ಅಮ್ಮನ ಹೃದಯ
ಸದಾ ಹೊರಗೆ
ಅಲೆದಾಡುತ್ತದೆ;
ಕಂದನ ರೂಪದಲ್ಲಿ..!!
***************
ಸರಿ – ತಪ್ಪುಗಳಾಚೆಗೂ
ಪ್ರೀತಿಸಬಲ್ಲ ಒಂದು ಜೀವವಿದೆ,
ಅಮ್ಮ ಎಂದರೆ
ಅನಂತ ಪ್ರೀತಿಯ
ಖಾಯಂ ವಿಳಾಸ..!!
***************
ನನ್ನ ಆಕಾಶದಲ್ಲಿ ತಾರೆಗಳಿಲ್ಲವೆಂದು ನಾನೆಂದೂ ಕೊರಗುವುದಿಲ್ಲ,
ಅವ್ವ ನನ್ನ ಆಕಾಶ, ಚುಕ್ಕಿ ಮತ್ತು ನಿತ್ಯ ಬೆಳದಿಂಗಳು..!!
***************
ಬೆಳಕಿಗೂ ಸಂಭ್ರಮ,
ಬೆಳಕೇ ಬೆಳಕ ಬೆಳಗುವಾಗೆಲ್ಲ!!
ನಿತ್ಯ ದೀಪಾವಳಿಯೇ,
ಅಮ್ಮ ಹಣತೆ ಹಚ್ಚುವಾಗೆಲ್ಲ!!
***************
ಬದುಕು ಅಮ್ಮನಂತಿರಬೇಕಿತ್ತು,
ಕೇಳಿದ್ದೆಲ್ಲ ಕೊಡುವಂತೆ,
ಕೇಳದೆಯೂ ಕರುಣಿಸುವಂತೆ…!!
***************
ಸಾವಿನ ನಡುವೆಯೂ
ಬದುಕುತ್ತಿದ್ದೇವೆ ನೋಡಿಲ್ಲಿ,
ಬೆಳಕು ಬಂದೇ ತೀರುತ್ತದೆಂಬ
ಭರವಸೆಯೇ ಬದುಕು…!!
***************
ಮುಷ್ಟಿ ಗಾತ್ರದ ಹೃದಯ
ಎಷ್ಟೊಂದು ಭಾರ ಭಾರ…
ಗಂಟಲುಬ್ಬಿ ಬರುವಾಗ..!!!
***************
ಕೆಟ್ಟ ಕರ್ಮಗಳಿಗಷ್ಟೇ ಅಲ್ಲ,
ಅಳತೆ ಮೀರಿದ ಒಳಿತಿಗೂ
ಎಷ್ಟೋ ಸಲ ಶಿಕ್ಷೆಯಾಗುತ್ತದೆ…!!
***************
ನಾನು ಸಮಯದ ಮುಂದೆ ಸೋತು
ತಲೆ ಬಾಗಿ ನಿಂತಿದ್ದೆ,
ಎದುರು ನಿಂತವರು
ತಾವೇ ಗೆದ್ದೆವೆಂಬ ಭ್ರಮೆಯಲ್ಲಿ
ಸಂಭ್ರಮ ಪಡುತ್ತಿದ್ದರು…!!
***************
ಆರಿಸಿಕೊಂಡದ್ದು ಏಕಾಂತವೇ
ಆಗಿರುವಾಗ,
ಬಿಕ್ಕುಗಳಿಗೆ ಹೆಗಲಿಲ್ಲವೆಂಬ
ಕೊರಗು ಸಲ್ಲದು ಮನವೇ!!!
***************
ಎಲ್ಲ ಮೌನವೂ
ಸಮ್ಮತಿಯೇ ಆಗಬೇಕೆಂದೇನಿಲ್ಲ
ತೀವ್ರ ತಿರಸ್ಕಾರವೂ ಆಗಿರಬಹುದು,
ನಿರ್ಲಿಪ್ತತೆಯೂ ಆಗಿರಬಹುದು..!!
***************
ಜಗತ್ತು ಉಪ್ಪಿನ ಮಾರುಕಟ್ಟೆ,
ಗಾಯ ತೋರುವುದು ಮೂರ್ಖತನ!!
***************
~ ವಿನುತಾ ಎಸ್.