ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು -ಹೆಚ್ಚುವರಿ ಎಸ್ಪಿ ಲಾವಣ್ಯ

ಹೊಸಪೇಟೆ: ಆಟೋ ಚಾಲಕರು ತಮಗೆ ನಿಗದಿಪಡಿಸಲಾದ ಸ್ಥಳದಲ್ಲಿಯೇ ತಮ್ಮ ಆಟೋಗಳನ್ನು ನಿಲ್ಲಿಸಬೇಕು ಮತ್ತು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಅವರು ಹೇಳಿದರು.
ರಸ್ತೆ ಸುರಕ್ಷತಾ ಮಾಸಾಚರಣೆ ಹಿನ್ನೆಲೆಯಲ್ಲಿ ಹೊಸಪೇಟೆ ಪಟ್ಟಣ ಠಾಣೆ ಆವರಣದಲ್ಲಿ ಮಂಗಳವಾರ(ಫೆ.2)ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಟೋ ಚಾಲಕರು, ಗೂಡ್ಸ್ ಆಟೋ ಚಾಲಕರು ಇತರೆ ಮೂರು ಚಕ್ರ ವಾಹನಗಳ ಚಾಲಕರು ಸಂಘದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಾ ಆಟೋ ಚಾಲಕರು ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು ಮತ್ತು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಆಟೋಗಳ ಚಾಲನಾ ಸಂದರ್ಭದಲ್ಲಿ ಮೊಬೈಲ್‍ಗಳನ್ನು ಬಳಸಕೂಡದಂತೆ ಅವರು ಸೂಚಿಸಿದರು.
ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಮತ್ತು ಶಾಲಾ ಮಕ್ಕಳನ್ನು ಸಾಗಿಸದಂತೆ ಸೂಚನೆ ನೀಡಿದ ಎಎಸ್ಪಿ ಲಾವಣ್ಯ ಅವರು, ಉಲ್ಲಂಘಿಸಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೊಸಪೇಟೆ ಡಿವೈಎಸ್ಪಿ ರಘುಕುಮಾರ್ ಅವರು ಸಂಚಾರಿ ನಿಯಮಗಳ ಪಾಲನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.