ಅನುದಿನ ಕವನ-೩೪ (ಕವಿ: ಧನಪಾಲ ನಾಗರಾಜಪ್ಪ)

ಕವಿ ಧನಪಾಲ ನಾಗರಾಜಪ್ಪ ಅವರು ಹುಟ್ಟಿದ್ದು 20-06-1987 ರಂದು ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ. ತಂದೆ ನಾಗರಾಜಪ್ಪ, ತಾಯಿ : ಶ್ರೀಮತಿ ರಾಮಚಂದ್ರಮ್ಮ.
ಭಾರತೀಯ ವಾಯು ಸೈನ್ಯದಲ್ಲಿ PBOR ಶ್ರೇಣಿಯಲ್ಲಿ ಕಳೆದ 14 ವರ್ಷಗಳಿಂದ ಏರ್ ಮೆನ್ ಆಗಿ (ವೈದ್ಯಕೀಯ ಸಹಾಯಕ) ಕರ್ತವ್ಯನಿರ್ವಹಿಸುತ್ತಿದ್ದಾರೆ.
ಕರ್ತವ್ಯದ ಜತೆ ಜತೆಯಾಗಿ ಸಾಹಿತ್ಯಿಕ ಕೃಷಿಯಲ್ಲಿ ನಿರತರಾಗಿದ್ದು ಸ್ವ ರಚನೆ, ಸಂಪಾದನೆ, ಪ್ರಕಾಶನ ಮತ್ತು ಅನುವಾದದ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸಾಹಿತ್ಯ ಕೃಷಿ: ನಿವೇದನೆ* (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ, ಕಾಡುವ ಕಥೆಗಳು (ಅನುವಾದಿತ ಕತೆಗಳ ಸಂಕಲನ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರು)
ತಣ್ಣೀರ ಬಟ್ಟೆಯ ಬಿಸಿ (ಆಯ್ದ ತೆಲುಗು ಕತೆಗಳ ಅನುವಾದಿತ ಸಂಕಲನ), ಜೀವನ್ಮೃತರು* (ಅನುವಾದಿತ ಕಾದಂಬರಿ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ಮೇಧ-೦೧೭ (ಅನುವಾದಿತ ಮಕ್ಕಳ ಕಾದಂಬರಿ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ಅಪರಾಜಿತ(ಅನುವಾದಿತ ಮಕ್ಕಳ ಕಾದಂಬರಿ, ತೆಲುಗು ಮೂಲ: ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ಊರಪ್ಪ-ಊರಮ್ಮ* (ಜೀವನ ಕಥನ), ಕಾಡುವ ಕತೆಗಳು-೨* (ಅನುವಾದಿತ ಕಥೆಗಳ ಸಂಕಲನ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಗುಹೆಯಲ್ಲಿ ಒಂದು ದಿನ(ಪುಟ್ಟ ಮಕ್ಕಳಿಗೊಂದು ಪುಟ್ಟ ಸಚಿತ್ರ ಕತೆ, ತೆಲುಗು ಮೂಲ : ಸಲೀಂ), ಅಮ್ಮು ಮತ್ತು ಗುಬ್ಬಿಗಳು (ಅನುವಾದಿತ ಮಕ್ಕಳ ಸಚಿತ್ರ ಕತೆ ಪುಸ್ತಕ, ಆಂಗ್ಲ ಮೂಲ : ವಿನೀತಾ. ಆರ್)
= * = * =
ದೇಶ ಸೇವೆ, ಸಾಹಿತ್ಯ ಕೃಷಿಗೆ ಕುಟುಂಬದ ಸದಸ್ಯರು ವಿಶೇಷವಾಗಿ ಪತ್ನಿ ಶ್ರೀಮತಿ ಅಶ್ವಿನಿ ರಾಜಕುಮಾರ್ ಅವರು ಧನಪಾಲ ನಾಗರಾಜಪ್ಪ ಅವರಿಗೆ ಬೆಂಬಲಿಸುತ್ತಿದ್ದಾರೆ.
ಖಾಯಂ ವಿಳಾಸ:
ನೆಲವಾಗಿಲು ಗ್ರಾಮ ಮತ್ತು ಅಂಚೆ,
ನಂದಗುಡಿ ಹೋಬಳಿ,
ಹೊಸಕೋಟೆ ತಾಲ್ಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಪಿನ್:562122.
*****
ಇಂದಿನ “ಅನುದಿನ ಕವನ”ದ ಗೌರವಕ್ಕೆ ಧನಪಾಲ ನಾಗರಾಜಪ್ಪ ಅವರ ಕವಿತೆಗಳು ಪಾತ್ರವಾಗಿವೆ.👇

ದುಡ್ಡಿಂದ ದುಡ್ಡಿಗಾಗಿ
ದುಡ್ಡಿರುವವರೇ ನಡೆಸುತ್ತಿರುವ
ದುರಾಡಳಿತವೇ ಅಪ್ರಜಾಪ್ರಭುತ್ವ
ಧನು
ಸಾಮಾನ್ಯನ ಬದುಕು ಸುಡುಗಾಡು.

*****
ಯಾರನ್ನಾದರೂ ನೀನು ಪ್ರೀತಿಸಬಹುದು
ಆ ಸ್ವಾತಂತ್ರ್ಯ ಎಲ್ಲರಿಗೂ ಇದೆ
ಅವರೂ ತಿರುಗಿ ಪ್ರೀತಿಸಬೇಕೆನ್ನಬಾರದು
ಆ ಹಕ್ಕು ಯಾರಿಗೂ ಇಲ್ಲ ಧನು
ಪ್ರೀತಿ ಷರತ್ತು ರಹಿತವಾದುದು.

****
ದಿನೇ ದಿನೇ ಹೆಚ್ಚಾಗುತ್ತಿದೆ
ಮನೆ ಮುರುಕರ ಗುಲ್ಲು
ಬರೀ ಸುಳ್ಳು ಸೊಲ್ಲು
ಧನು
ಕೊಂಚ ಕಾಲ ಕಿವುಡನಾಗು.

****
ದ್ವೇಷಿಸುವವರು ದ್ವೇಷಿಸಲಿ
ದುಷ್ಟರ ಗೊಡವೆ ನಮಗೇಕೆ?
ಪ್ರೀತಿಸುವುದನ್ನು ನೀನೆಂದೂ ನಿಲ್ಲಿಸಬೇಡ
ಧನು
ಪ್ರೀತಿಯೊಂದೇ ಜೀವಂತ ಧರ್ಮ.

****
ಗಳಿಸಲು
ಉಳಿಸಲು
ಯಾಕಷ್ಟು ಧಾವಂತ?
ಧನು
ವ್ಯಯಿಸಲೂ ಬಲ್ಲವನೇ ಶ್ರೀಮಂತ.

****
ಪುಕ್ಕಟೆ ಸಲಹೆ ಕೊಡುವುದು ತಪ್ಪು
ಹಾಲು ಉಣಿಸಿದವರಿಗೆ ವಿಷ ಉಣಿಸುತ್ತಾರೆ
ಉಪಕಾರ ಮಾಡಿದವರಿಗೆ ಅಪಕಾರ ಮಾಡತ್ತಾರೆ
ಧನು
ಬಿಸಿಲಿನ ತಾಪ ತಟ್ಟಿದಾಗಲೇ ನೆರಳಿಗೆ ಬೆಲೆ.

****
ಪರರ ಮನೆಗೆ
ಬೆಂಕಿ ಹಚ್ಚುವ ಯೋಚನೆ ಇನ್ನಾದರೂ ಬಿಡು
ಕೈಯಲ್ಲಿನ ಕಿಚ್ಚು
ಮೊದಲು ನಿನಗೇ ತಟ್ಟುತ್ತದೆ
ಬೇಧ ಬೆಂಕಿ ಅರಿಯದು ಧನು.

****
ಯಾರೂ ತಪ್ಪಿಸಿಕೊಳ್ಳಲಾಗದ
ಬಂಧೀಖಾನೆ ಬದುಕು
ಎಲ್ಲರೂ ಇಲ್ಲಿ ಬಂಧಿಗಳು
ಆಶಾಪಾಶಗಳೇ ಸಂಕೋಲೆಗಳು
ನಂಟುಗಳೇ ಗಂಟುಗಳು ಧನು!

✏️ ಧನಪಾಲ ನಾಗರಾಜಪ್ಪ

One thought on “ಅನುದಿನ ಕವನ-೩೪ (ಕವಿ: ಧನಪಾಲ ನಾಗರಾಜಪ್ಪ)

Comments are closed.