ಅನುದಿನ ಕವನ-೩೭ (ಕವಿ: ಸೈ)

ಸೈ….
ಸೈ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಿರುವ ಹೂವಿನ ಹಡಗಲಿಯ ಸಯ್ಯದ್ ಹುಸೇನ್ ಅವರು ಬಹುಮುಖಿ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಾರೆ.
ಹೊಸಪೇಟೆ ತಾಲೂಕಿನ ಕಾರಿಗನೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿರುವ ಸೈ ಶಾಲೆ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಎರಡು ದಶಕಗಳ ಕಾಲ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿಯೂ ವಿಶಿಷ್ಟ ಸೇವೆ ಸಲ್ಲಿಸಿದ್ದರಿಂದ ಸರಕಾರ, ಸಂಘ ಸಂಸ್ಥೆಗಳ ಗಮನ ಸೆಳೆದು ಜಿಲ್ಲಾ, ರಾಜ್ಯಮಟ್ಟದ ಉತ್ತಮ‌ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.‌
ಬಳ್ಳಾರಿಯ ಡಾ.‌ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಪ್ರತಿವರ್ಷ ಬಹುಮುಖಿ ವ್ಯಕ್ತಿತ್ವದ ಅಧ್ಯಾಪಕರಿಗೆ ನೀಡುವ ರಾಜ್ಯಮಟ್ಟದ ಡಾ.‌ಎಚ್ ಎನ್ ಪ್ರಶಸ್ತಿಯೂ ಸೈಯದ್ ಹುಸೇನ್ ಅವರಿಗೆ ಲಭಿಸಿದೆ.
ಸೈ ಅವರ ರೊಟ್ಟಿಗೆ ರಟ್ಟಿ ಗಟ್ಟಿ ಕವಿತೆ ಇಂದಿನ “ಅನುದಿನ ಕವನ”ದ ಗೌರವಕ್ಕೆ ಪಾತ್ರವಾಗಿದೆ.👇

ರೊಟ್ಟಿಗೆ ರಟ್ಟಿ ಗಟ್ಟಿ
————————
ಅವ್ವ ತಟ್ಟಿದ ಮಸಾರಿ ಹೊಲದ ಜೋಳದ ರೊಟ್ಟಿ
ಒಲೆಯಲಿ ಕಟ್ಟಿಗೆಯ ಬೆಂಕಿಯಲಿ ಸುಟ್ಟಳು ತಟ್ಟಿ
ಬಿಸಿ ರೊಟ್ಟಿಗೆ ರುಚಿ ಬದನೆಯಕಾಯಿ ಚಟ್ನಿ.

ತಿನ್ನಲು ಕುಂತರೆ ಸಾಲುತ್ತಿರಲಿಲ್ಲ ಬುಟ್ಟಿ ರೊಟ್ಟಿ
ಕೆಂಪು ಮಿರ್ಚಿ ಚಟ್ನಿಯಲಿ ಮೊಸರನು ಸವರಿ ತಿನ್ನಲು ಎಷ್ಟು ರುಚಿ ಬಿಸಿ ಬಿಸಿ ಕಟಕ ರೊಟ್ಟಿ.

ಅವ್ವ ಬಳೆಯಿರುವ ಕೈಗೆ ಬಟ್ಟೆ ಕಟ್ಟಿ ತಟ್ಟಿದ ರೊಟ್ಟಿ
ತಿಂದ ನಮಗೆ ದಿನದ ಕೆಲಸ ಮಾಡಲು ರಟ್ಟಿ ಗಟ್ಟಿ.

ಈಗಿನ ಹೆಂಗಸರರ ಕೈಯಲಿ ಬಳೆಗಳೆ ಇಲ್ಲ ರೊಟ್ಟಿ ತಟ್ಟುವುದಂತೂ ದೂರ ಉಳಿಯಿತಲ್ಲ.
ತಟ್ಟದೆ ತೀಡುವ ರೊಟ್ಟಿಯೀಗ ಬಂದಿವೆಯಲ್ಲ
ತಟ್ಟಿದರೆ ಈಗಿನವರ ಮೆತ್ತನ ರಟ್ಟಿ ನೋಯಿತಾವಲ್ಲ.

ಸಿಗುತಾವೀಗ ಅಂಗಡಿ ಮುಗ್ಗಟ್ಟಿನ್ಯಾಗ ಮಶಿನ್ ರೊಟ್ಟಿ
ಅಂಗಡಿ ಅಂಗಡಿ ತಿರುಗಿ ತರಬೇಕ ದುಡ್ಡು ಕಟ್ಟಿ.
ಈಗ ರೊಟ್ಟಿ ತಿನ್ನಲಿರಬೇಕಿವರಿಗೆ ವಸಡಿ ಗಟ್ಟಿ.

ಈಗಿನ ಯುವ ದಂಪತಿಗಳ ಜೋಶಿರುವುದು ಫಾಸ್ಟ್ ಫುಡ್ಡಿಗೆ ಫಿಜ್ಜಾ ಬರ್ಗರ್ಗೆ
ತುರುಕಿಕೊಳ್ಳುವರಿವರು ಡೊಳ್ಳು ಹೊಟ್ಟೆಗೆ.

ದೇಹ ದಣಿಸದೆ ಬೆವರು ಹರಿಸದೆ ಇವರು
ಫಿಟ್ ಅ್ಯಂಡ್ ಸ್ಲಿಮ್ ಅಂಗಡಿಗೆ ಮುಗಿಬಿದ್ದಿಹರಲ್ಲ
ಇವರ ದೇಹದಲಿ ಗಟ್ಟಿ ಏನೇನೂ ಉಳಿದೇ ಇಲ್ಲ.

ಈ ಜಗತ್ತಿನ್ಯಾಗ ರುಚಿ ಅಂತಾ ಇರೋದು ಒಂದಾ
ಉತ್ತರ ಕರ್ನಾಟಕದ ಜೋಳದ ರೊಟ್ಟಿ.
ಏಕ್ ದಮ್ ಫಿಟ್ ಜೀವನಕ್ಕೆ ನೀನಾಗುವೆ ಗಟ್ಟಿ.

✍ಸೈ @ಸೈಯದ್ ಹುಸೇನ್, ಹೊಸಪೇಟೆ