ಅನುದಿನ ಕವನ-೩೯ (ಕವಿ: ಮಹೇಂದ್ರ ಕುರ್ಡಿ, ಹಟ್ಟಿ)

*ಕವಿ ಪರಿಚಯ:
ಕವಿ, ಚಿಂತಕ ಶ್ರೀ ಮಹೇಂದ್ರ ಕುರ್ಡಿ

ಸಾಹಿತಿಗಳು ಹಾಗೂ ಚಿಂತಕರು ಸಹೃದಯಿಗಳು ಆಗಿರುವ ಮಹೇಂದ್ರ ಕುರ್ಡಿ ಅವರು ಮೂಲತ: ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯವರು.
ತಮ್ಮ ವೈಚಾರಿಕ ಚಿಂತನೆ ಹಾಗೂ ವಾಸ್ತವ ಸತ್ಯದ ಹಿನ್ನೆಲೆಯಲ್ಲಿ ಸಮಾಜದ ನೈಜ ಅನುಭವಗಳನ್ನು ನುಡಿಗಟ್ಟುಗಳ ರೂಪದಲ್ಲಿ ರಚಿಸುತ್ತಾ ಸಾವಿರಾರು ಹೊನ್ನುಡಿಗಳ ಮತ್ತು ಕವನ ಲೇಖನಗಳ ಮೂಲಕ ಈಗಾಗಲೇ ನಾಡಿನಾಧ್ಯಂತ ಹೆಸರು ಮಾಡಿರುವ ಇವರು ಚಿನ್ನದ ನಾಡಿನಲ್ಲೆ ಹುಟ್ಟಿದ್ದು ಮತ್ತು ಬೆಳೆದಿದ್ದು. ವಿಶಾಲ ವಿಷಯವನ್ನ ಕೆಲವೇ ಕೆಲವು ಸಾಲುಗಳಲ್ಲಿ ಪರಿವರ್ತಿಸಿ ಚಿನ್ನದಂತಹ ಬಹು ಅರ್ಥಪೂರ್ಣ ಸಾಲುಗಳನ್ನು ಓದುಗರಿಗೆ ನೀಡುತ್ತಿರುವುದು ಒಂದು ವಿಶೇಷವೇ ಸರಿ.

• ವಿದ್ಯಾಭ್ಯಾಸ:
೧೯೭೭ ರಿಂದ ೧೯೮೪ರ ವರಗೆ ಹಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ನಂತರ ೧೯೮೪ ರಿಂದ ೧೯೮೮ರ ವರೆಗೆ ಹಟ್ಟಿ ಸರಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇಯ ತರಗತಿಯ ವರೆಗೆ ವ್ಯಾಸಾಂಗ ಮಾಡಿ ೧೯೮೮ ರಿಂದ ೧೯೯೦ರ ವರೆಗೆ ಇಲ್ಲಿಯೇ ಪದವಿ ಪೂರ್ವ ಶಿಕ್ಷಣವನ್ನ ಮುಗಿಸಿರುತ್ತಾರೆ.
ಬಿ.ಎ. ಪದವಿ ವ್ಯಾಸಂಗಕ್ಕಾಗಿ ೧೯೯೧ ರಿಂದ ೧೯೯೩ ರವರೆಗೆ ಲಿಂಗಸೂಗುರಿನ ಶ್ರೀ ವಳಬಳ್ಳಾರಿ ಚನ್ನಬಸವೇಶ್ವರ ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣ, ೧೯೯೪ ರಿಂದ ೧೯೯೭ ರ ವರೆಗೆ ರಾಯಚೂರಿನ ಎಸ್.ಸಿ.ಎ.ಬಿ ಕಾನೂನು ಮಹಾವಿದ್ಯಾಲಯದಲ್ಲಿ ತಮ್ಮ ಕಾನೂನು ಪದವಿಯನ್ನು ಮುಗಿಸಿರುತ್ತಾರೆ.

• ಕೌಟುಂಬಿಕ ಹಿನ್ನೆಲೆ:-
ಮಹೇಂದ್ರ ಕುರ್ಡಿ ಅವರ ತಂದೆ ದಿ.ಶ್ರೀ ಮಲ್ಲಪ್ಪ ಕುರ್ಡಿ ತಾಯಿ: ಭೀಮಬಾಯಿ. ೦೧/೦೬/೧೯೭೨ ರಂದು ಜನನ. ಐವರು ಸಹೋದರರ ಪೈಕಿ ಎರಡನೇಯವರಾಗಿ ಹಟ್ಟಿ ಗ್ರಾಮದಲ್ಲಿ ಜನಿಸಿದರು,
ಇವರು ೨೩/೦೬/೧೯೯೯ ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಶ್ರೀಮತಿ ನಿರ್ಮಲಾ ಎನ್ನುವರನ್ನು ವಿವಾಹವದರು ದಂಪತಿಗಳಿಗೆ ಕು.ಶಿವಪ್ರಸಾದ್ ಮತ್ತು ಕು.ಪವನಕುಮಾರ್ ಎನ್ನುವ ಇಬ್ಬರು ಗಂಡು ಮಕ್ಕಳಿದ್ದಾರೆ,

• ವೃತ್ತಿ:-
ಇವರು ೦೯/೦೯/೧೯೯೬ ರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕಾರ್ಮಿಕರಾಗಿ ನೇಮಕ ಹೊಂದಿ ಕಾರ್ಯನಿರ್ವಹಿಸುತ್ತಿದ್ದು ಸದ್ಯ ಗಣಿ ತಾಂತ್ರಿಕ ವಿಭಾಗದಲ್ಲಿ ಅಪರೇಟರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

• ಸಾಮಾಜಿಕ ಸೇವೆ:-
ತಮ್ಮ ಆಪ್ತ ಸ್ನೇಹಿತರ ಜೊತೆ ಸೇರಿ ಸಮಾಜಕ್ಕೆ ಒಂದು ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ೨೦೦೦ ಇಸ್ವಿಯಲ್ಲಿ ಹಟ್ಟಿ ಚಿನ್ನದ ಗಣಿಯಲ್ಲಿ ಶ್ರೀ ವಿನಾಯಕ ವಿದ್ಯಾ ಸಂಸ್ಥೆ(ರಿ)ಎನ್ನುವ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಸಂಸ್ಥಾಪಕ ಖಜಾಂಚಿಯಾಗಿ ಸೇವೆಸಲ್ಲಿಸುತ್ತಿರುತ್ತಾರೆ, ಈ ಸಂಸ್ಥೆಯು ಇಂದು ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಪೂರ್ವ ಪ್ರಾಥಮಿಕ ಶಾಲೆಯಿಂದ ಪದವಿ ಶಿಕ್ಷಣದವರೆಗೂ ಇಲ್ಲಿ ಮಕ್ಕಳು ಶಿಕ್ಷಣ ಕಲಿಯಬಹುದಾಗಿದೆ. ಮತ್ತು ಇವರು ಹಲವಾರು ಸಂಘಟನೆಗಳಲ್ಲಿ ಸಕ್ರಿಯವಾಗಿ ಪಲ್ಗೊಂಡಿದ್ದು ಪ್ರಸ್ತುತ ಲಿಂಗಸುಗೂರು ತಾಲ್ಲೂಕಿನ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಗೈಯ್ಯುತ್ತಿದ್ದಾರೆ.

*ಹವ್ಯಾಸ:*
ಸಮಾಜ ಸೇವೆಯ ಜೊತೆಗೆ ಕವನ ಲೇಖನ ಮತ್ತು ಹಿತ ಚಿಂತನೆಗಳನ್ನು ಓದುವುದು ಮತ್ತು ಬರೆಯುದು ಮತ್ತು ನಿತ್ಯವೂ ಒಂದು ಉತ್ತಮ ಹೊನ್ನುಡಿಯನ್ನು ಬರೆದು ಸಮಾಜಕ್ಕೆ ಸಂದೇಶ ಕೊಡುತ್ತಿದ್ದಾರೆ, ಇವರ ಹಲವಾರು ಕವನ ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಕೆಲವು ಕವನಗಳು ರಾಗ ಸಂಯೋಜನೆಗೊಂಡು ಜನಮನ ತಲುಪಿವೆ,

• ವೇದಿಕೆ:-
ಇವರು ತಾಲ್ಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ, ಮತ್ತು ಅಂತರಾಷ್ಟ್ರೀಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುತ್ತಾರೆ, ಹಾಗೆಯೇ ಹಲವಾರು ಕವಿಗೋಷ್ಠಿಗಳಲ್ಲಿ ಮತ್ತು ಚರ್ಚಾಗೋಷ್ಠಿಗಳಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದಾರೆ. ಹಲವು ಲೇಖಕರ ಪುಸ್ತಕಗಳಿಗೆ ಮುನ್ನುಡಿ ಮತ್ತು ಆಶಯದ ನುಡಿಗಳನ್ನು ಬರೆದಿರುತ್ತಾರೆ.

*ಕೃತಿಗಳು:
೧) ಹೊನ್ನಸಿರಿ ಕವನಸಂಕಲನ ೨೦೧೭ರಲ್ಲಿ
೨) ಮನಮಂಥನ ಸಿರಿ ಭಾಗ-೧ ಹೊನ್ನುಡಿಗಳ ಹೂರಣ ೨೦೨೦ರಲ್ಲಿ
೩) ಮನಮಂಥನ ಸಿರಿ ಭಾಗ-೨ ಧಾರ್ಮಿಕ ಹಿತ ಚಿಂತನೆಗಳು ೨೦೨೦ರಲ್ಲಿ. ಇನ್ನೂ ಅನೇಕ ಪುಸ್ತಕ ಪ್ರಕಟಣೆ ಹಂತದಲ್ಲಿವೆ.

• ಪ್ರಶಸ್ತಿಗಳು:
೧) ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ೧೧/೦೩/೨೦೧೮
೨) ಕರ್ನಾಟಕ ಪಾಂಡಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ ೩೧/೧೨/೨೦೧೮
೩) ಕನ್ನಡ ಸೇವಾರತ್ನ ಪ್ರಶಸ್ತಿ ೧೪/೦೪/೨೦೧೯
೪) ರಾಷ್ಟ್ರೀಯ ಸಾಹಿತ್ಯ ಚೇತನ ಪ್ರಶಸ್ತಿ ೦೭/೦೯/೨೦೧೯
೫) ಜ್ಞಾನ ವಿಭೂಷಣ ಅಂತರಾಷ್ಟಿçÃಯ ಪ್ರಶಸ್ತಿ ೨೨/೦೯/೨೦೧೯
೬) ಕನ್ನಡ ರಾಜ್ಯೋತ್ಸವ ಪ್ರಶಸ್ತಿ ೨೪/೧೧/೨೦೧೯
೭) ಪ್ರಜಾರತ್ನ ರಾಜ್ಯ ಪ್ರಶಸ್ತಿ ೨೩/೦೨/೨೦೨೦
೮) ರಾಜ ವೀರಮದಕರಿ ನಾಯಕ ಪ್ರಶಸ್ತಿ ೦೮/೧೧/೨೦೨೦
೯) ರಾಜ್ಯ ಬೆಳಕು ಪುಸ್ತಕ ಪ್ರಶಸ್ತಿ (ಮನಮಂಥನ ಸಿರಿ) ೨೮/೧೧/೨೦೨೦
ಮತ್ತು ಅನೇಕ ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.

ಇಂದಿನ “ಅನುದಿನ ಕವನ” ದ ಗೌರವಕ್ಕೆ ಇವರ ‘ಪ್ರೀತಿ ತೆನೆ’ ಕವಿತೆ ಪಾತ್ರವಾಗಿದೆ…👇

*ಪ್ರೀತಿ ತೆನೆ*

ಬಿಳಿ ಜೋಳದ ಹೊಲದಾಗ
ಜೋಡಿ ಹಕ್ಕಿಯ ಹಾಂಗ
ಪ್ರೀತಿ ಸವಿ ಜೇನು ಹೀರೋಣು
ಮುಕ್ಕುತ ಹಾಲ್ತೆನೆ ಕಾಳ
ಮುತ್ತಿನ ತೆನೆಯ ಹೊತ್ತು ಬಾರೆ.

ಆಳೆತ್ತರ ಬೆಳೆಯಾಗ ನಿಂತ
ಅಟ್ಟದ ಮ್ಯಾಲೆ ಕುಂತ
ಅಲ್ಲೇ ನಮ್ಮ ಮನದ ಮಾತ
ಬೆಳದಿಂಗಳ ಬೆಳಕಲ್ಲಿ ಆಡೋಣು ಆಟ
ಬೆಚ್ಚನೆ ಕಂಬಳಿ ಹೊದ್ದು ಬಾರೆ.

ಜ್ವಾಳದ ರೊಟ್ಟಿ ತಿಂದ
ಗಟ್ಟಿ ಜನುಮವು ನಂದು
ಜೀವ ಇರೋ ತನಕ
ಜ್ವಾಕೀಲೆ ಮಾಡುವೆ ಜತನ
ನನ್ನಲ್ಲೊಮ್ಮೆ ನೀ ಬಂದು ಸೇರೆ.

ಮುದ್ದು ಮೋರೆ ಚೆಲುವೆ
ಮತ್ತೆಲ್ಲಿಗೆ ನೀ ಓಡುವೆ
ನೀ ಮರೆಯದ ಹಾಗೊಂದು
ಸಿಹಿ ಮುತ್ತ ನೀಡುವೆ
ಮಧು ತುಂಬಿದ ತುಟಿಯ ತಾರೆ.

ಜೀವದ ಜೀವ ನೀ ಗೆಳತಿ
ಜನುಮದ ಜೋಡಿಯ ಒಡತಿ
ಭೂಮಿ ತಾಗದ ಹಾಂಗೆ
ಹೆಗಲ ಮ್ಯಾಲೆ ಹೊತ್ತು ತಿರುಗುವೆ
ಜೀಕೋಣು ಜೀವನ ಉಯ್ಯಾಲೆ.

✍🏻 ಮಹೇಂದ್ರ ಕುರ್ಡಿ
ಶ್ರೀ ವಿನಾಯಕ ವಿದ್ಯಾ ಸಂಸ್ಥೆ(ರಿ)
ಹಟ್ಟಿ ಚಿನ್ನದ ಗಣಿ.
ಹಟ್ಟಿ: ೫೮೪ ೧೧೫
ತಾ: ಲಿಂಗಸಗೂರು , ಜಿ:ರಾಯಚೂರು

One thought on “ಅನುದಿನ ಕವನ-೩೯ (ಕವಿ: ಮಹೇಂದ್ರ ಕುರ್ಡಿ, ಹಟ್ಟಿ)

  1. ತಮ್ಮ ಕವನ ಅದ್ಬುತ ಇದಿಯಪ್ಪ

    ಹೀಗೆ ಬರಿಯಪ್ಪ ತಮಗೆ ಶುಭವಾಗಲಿ

Comments are closed.