ಪುಟಾಣಿ ಹಣತೆ…..!! -ರಂಗಮ್ಮ ಹೋದೆಕಲ್ (ರಂಹೋ)

ಬಾಲ್ಯದಲ್ಲಿ ಮನೆಯ ತುಂಬಾ ಬಡತನವಿತ್ತು.ಆದಾಗ್ಯು ಎದುರು ಮನೆಯ ತೊಣಚವ್ವ,ಮೂಲೆಮನೆಯ ಸಣ್ಣೀರಮ್ಮಜ್ಜಿ,ಪಕ್ಕದ ಮನೆಯಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದ ರಾಜಮ್ನೋರು ಕರೆದು,ಮಿಠಾಯಿ,ಪುರಿ,ಉಳಿದ ಅನ್ನ,ಸೀಕು ಕೈಗಿಡುತ್ತಿದ್ದರು.ಹಾಗೆ ಕೊಡುವಾಗ ಅವರ ಕಣ್ಣಲ್ಲೊಂದು ಅಂತಃಕರಣವಿರುತ್ತಿತ್ತು.
ಬೆಳಗು,ಬೈಗುಗಳಲ್ಲಿ ಮನೆತನಕ ಬರುತ್ತಿದ್ದ ಕದರಮ್ಮಜ್ಜಿ,ಹನುಮಂತಮ್ಮಜ್ಜಿ,ನರಸಕ್ಕಜ್ಜಿ ಯವರ ಮಾತುಗಳಲ್ಲಿ ಅವರ ಬದುಕಿನ ಪಾಡುಗಳಿದ್ದವು..ಹಾಡುಗಳಿದ್ದವು!ಅವರಿವರ ಬಗೆಗೆ ಅನಾದರ,ಅಸೂಯೆ ಗಳ ಮಾತುಗಳ ಬದಲಾಗಿ ತಂತಮ್ಮ ಸಂಕಟಗಳನ್ನೇ ಹಂಚಿಕೊಂಡು ಹಗುರಾಗುತ್ತಿದ್ದರು.ಇಲ್ಲದ್ದನ್ನು ತಮ್ಮ ಮನೆಗಳಿಂದ ತಂದು ಕೊಟ್ಟು ಉಪಕರಿಸುತ್ತಿದ್ದರು.
ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಹನುಮಂತರಾಯಪ್ಪ ಬಿಳಿ ಹಾಳೆಗಳನ್ನು,ಪೆನ್ನುಗಳನ್ನು ಕೊಟ್ಟು ಹೋಗುತ್ತಿದ್ದರು.ಕೇರಿಯ ಒಂದು ಮನೆಯ ಸಂಕಟ ಇಡೀ ಬೀದಿಯ ಬೇಸರವಾಗುತ್ತಿತ್ತು.ಉಳುಮೆ,ನಾಟಿ,ಕಳೆತೆಗೆಯುವಿಕೆ,ಸುಗ್ಗಿ,ಹಬ್ಬ,ಪರಿಷೆ ಗಳೆಲ್ಲ ಪರಸ್ಪರರನ್ನು ಹತ್ತಿರವೇ ತರುತ್ತಿದ್ದವು.ಸಾವು,ನೋವು ಊರಿನ ಸೂತಕವಾಗಿ ‘ನಾನು’ ಇಲ್ಲದ ‘ನಾವು’ ಗಳಿಂದ ನೆಮ್ಮದಿ ಯಿತ್ತು.
ಎತ್ತಿನ ಗಾಡಿಗಳು…ಕುರಿ ಮೇಕೆಗಳು..ಹಸುವಿನ ಕರುವಿನ ಕೊರಳ ಗೆಜ್ಜೆಗಳು..ನಾಯಿ..ಬೆಕ್ಕುಗಳು..ಅಣ್ಣೆ ಸೊಪ್ಪು,ತುಂಬೆ ಹೂವು,ಜಾಲಾರಿಯ ಘಮಲು..ಗೇರುಹಣ್ಣು,ಕಾರೆಹಣ್ಣು,ಉಚ್ಚಳ್ಳು ಹೂವುಗಳೂ ಬದುಕಿಗೆ ಎಷ್ಟೊಂದು ಬೆರೆತುಕೊಂಡಿದ್ದವು.ಮುಗ್ಧತೆಯ ಅಕ್ಕರೆ ಬದುಕಿನ ಒತ್ತಡಗಳಿಗೆ ಮುಲಾಮಾಗಿ ಸಲೀಸಾಗಿ ಸಿಗುವ ಕಾಲದಲ್ಲಿ ತಾಯಂದಿರು ತಮ್ಮ ಮಕ್ಕಳ ಜೊತೆಗೆ ಪಕ್ಕದ ಮನೆಯ ಮಗುವಿಗೂ ಅನ್ನ ಉಣ್ಣಿಸಿ ಅವ್ವಂದಿರಾಗುವ ಬೆರಗಿತ್ತು!

ಈಗ ಎತ್ತುಗಳಿಲ್ಲ..ಗಾಡಿಗಳಿಲ್ಲ..ಯಂತ್ರಗಳಿಲ್ಲದೇ ಕೆಲಸಗಳೂ ನಡೆಯುವುದಿಲ್ಲ!ಅಜ್ಜಿಯರೆಲ್ಲ ಇನ್ನಿಲ್ಲವಾಗಿ ನಾವುಗಳೆಲ್ಲ ‘ ನಾನು’ ಆಗಿ ಊರಿನ ಮಾತಿರಲಿ,ಬೀದಿಯ ಜನಗಳೂ ಮುಖಾಮುಖಿಯಾಗುತ್ತಿಲ್ಲ!ಕಿಟಕಿ ಬಾಗಿಲುಗಳು ಸದಾ ಭದ್ರ.ಪಕ್ಕದ ಮನೆಯಲ್ಲಿನ ಹಸಿವಿನ ಸಮಸ್ಯೆಗಿಂತ ನಮ್ಮ ಮನೆಗಳಲ್ಲಿನ ಕಾಫಿ ಕುರಿತೇ ಜಗಳಾಡುತ್ತಿರುತ್ತೇವೆ.ಹಬ್ಬಗಳೂ ನಮ್ಮ ಗೋಡೆಗಳೊಳಗೆ.ಸಾವಿಗೆ ಸ್ಪಂದಿಸುವುದೂ ಮಿತಿಗಳೊಳಗೆ! ಸಣ್ಣ ಮಾತಿಗೆ,ನಲ್ಲಿ ನೀರಿಗೆ ಪೊಲೀಸ್ ಸ್ಟೇಷನ್ಗೆ ಹೋಗುವುದು ತುಂಬಾ ಸಲೀಸು.ಅಕಾರಣವಾಗಿ ಅವಮಾನಿಸುವುದು ಪ್ರಿಯವಾದ ಕೆಲಸ!ಮನೆಗಳಲ್ಲಿ ಎಲ್ಲವೂ ಇದ್ದು ಇಷ್ಟು ಶಾಂತಿ,ನೆಮ್ಮದಿಯನ್ನು ಹುಡುಕುವುದು ತ್ರಾಸದ ಕೆಲಸ!

~ರಂಹೊ