ಅನುದಿನ ಕವನ-೪೪ (ಕವಿ:ಯಲ್ಲಪ್ಪ ಹಂದ್ರಾಳ)

ಯಲ್ಲಪ್ಪ ಹಂದ್ರಾಳ

*****

ಬಹುಮುಖ ಪ್ರತಿಭೆಯ ಅಧ್ಯಾಪಕ ಯಲ್ಲಪ್ಪ ಹಂದ್ರಾಳ ಅವರು  ಹುಟ್ಟಿದ್ದು ಜನವರಿ 1, 1979 ರಂದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ರೈತ ದಂಪತಿ ಕನಕಪ್ಪ ಹಂದ್ರಾಳ ಹಾಗೂ ದ್ಯಾಮವ್ವ ಹಂದ್ರಾಳ ಅವರ ಮುದ್ದಿನ ಕುವರ ಯಲ್ಲಪ್ಪ ಅವರು ಪ್ರಸ್ತುತ ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಎಂಟನೇ ತರಗತಿಯಲ್ಲಿದ್ದಾಗಲೇ ‘ಅರಸಿ’ ಎಂಬ ಕವನವನ್ನು ರಚಿಸಿ ಗುರುಗಳ ಮುಂದೆ ವಾಚಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.
ಕಥೆ, ಕಾದಂಬರಿ,ಕವನ ಹಾಗೂ ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಆಸಕ್ತಿ ಹೊಂದಿದ್ದು ಶಾಲಾ ಮಕ್ಕಳಿಗೆ ಐದು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ.
‘ಕೋಣೆ ಕೂಸು ಕೊಳಿತು,ಓಣಿ ಕೂಸು ಬೆಳೀತು’, ‘ಸೊಳ್ಳೆ ಮತ್ತು ಶಿಕ್ಷಕ’, ‘ಮನೆಯೇ ಕಾರಣ’ ‘ಸಕಾಲ-ಸುಕಾಲ’ ಮತ್ತು ‘ಯಮಲೋಕದಲ್ಲಿ ತಲ್ಲಣ’ ಎಂಬ ನಾಟಕಗಳು ಪ್ರದರ್ಶನಗೊಂಡಿವೆ.
ಮಕ್ಕಳ ನಡುವೆ ಸಾಹಿತ್ಯ ಸಮಯ ಸೃಷ್ಟಿಸುತ್ತಾ ಕಳೆದುಹೋಗುವ ಇವರು ‘ಹೊಯ್ದಾಟ’ ಎಂಬ ಕವನ ಸಂಕಲನವನ್ನೂ, ‘ವನಪ್ರಿಯ’ ಎಂಬ ಅಂಕಿತದಿಂದ ನೂರಾರು ವಚನಗಳನ್ನು ಬರೆದಿದ್ದು ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗಿದೆ.
‘ಬಯಲಬೆಳಗು’ ವೈಯಕ್ತಿಕ ಬ್ಲಾಗ್ ಲ್ಲಿ ಬರೆಯುವ ಇವರು ‘ಪ್ರಕಾಶನ’ ಎಂಬ ವೆಬ್ಸೈಟ್ನಲ್ಲಿ ಆಗಾಗ ಲೇಖನಗಳನ್ನು ಬರುತ್ತಾರೆ.
ಇತ್ತೀಚಿಗೆ ‘ಅಮರೊ’ ಎಂಬ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಆ ಕೃತಿಗೆ 2020ರ ‘ಶ್ರೀ ಜಿ.ಬಿ ಹೊಂಬಳ ರಾಜ್ಯ ಪುರಸ್ಕಾರ’ ಲಭಿಸಿದೆ. ಮಕ್ಕಳೊಂದಿಗೆ ಬೆರೆಯುವುದು, ಟ್ರೆಕ್ಕಿಂಗ್ ,ಪ್ರವಾಸ, ಭಾಷಣ, ಕಾರ್ಯಕ್ರಮ ಸಂಘಟನೆ ಇವರ ಪ್ರಮುಖ ಹವ್ಯಾಸಗಳು….
ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿರುವ ಕವಿ ಯಲ್ಲಪ್ಪ ಹಂದ್ರಾಳ್ ಅವರ “ಚಳಿಗಾವ್ಯ” ಕವಿತೆ ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಪಾತ್ರವಾಗಿದೆ….👇

 

*ಚಳಿಗಾವ್ಯ*
“””””””””””””””
ಇಳೆಯ ಬೆಳಗಿದ ರವಿಯು ಕಾರಿ
-ರುಳ ನೀಡಿ ಕಡು
-ಚಳಿಯ ಹೊಡೆತವ ತಿನ್ನಿರೆಂದು
ಹೇಳಿ ಮರೆಗೆ ಸರಿದನು

ಮಳೆಯಾಗಬೇಕಿದ್ದ ನಭದ ನೀರು
ಕಳೆಯೇರಿ ರಸವಾಗದ ನೆಲದ ತೇವ
ಮೇಳೈಸಿ ಗಾಳಿಯ ಬೆನ್ನೇರಿ ಮಲಗಿದ
ಕುಳಗಳನರಸುತ ಬೀದಿ ಸಾರಿದವು

ಪಳಪಳಹೊಳೆವ ಚೆಲುಚಿತ್ತಾರ ಚಿನ್ನ
-ದೆಳೆಯಿಂದ ಹೆಣೆದಂತೆ ಸೋಭಿಸುವ ಅ
-ವಳು ತಂದ ಚಾದರವನು ಹೊದ್ದು
ಮುಳುಮುಳು ನಡುಗತ ಮಲಗಿದ

ಚಳಿಯ ಸೆಳೆತಕೆ ಇವ
-ನಳಿವನೆಂದರಿತ ಅವಳು
ಇಳೆಯ ರೂಪವ ಧರಿಸಿ
ಬಳಿಸೆಳೆದಳಾನಂದದಿ

ಇಳಿದಿಳಿದೇರಿ ಸಾಗುವ ರೋಮ
-ಪಳಿಗಳಿಂ ಸಾಲಂಕೃತ ನವಿರುಳ್ಳಿಗಿರಿ
-ಗಳ ಕಡುನಡುವಿನಲಿ
ಸುಳಿದಾಡುತ ಇವ ಮೈಮರೆತನು

ತಳತಳಿಸುವ ನವಗಿರಿಯ
ಬಳಸುತ ಏದುಸಿರಿನ ಕಾವಿನಿಂದೆದ್ದ ಬೆವರು
ದಳದಳನೆ ಧರೆಯ ಕಡೆ ಧಾವಿಸುವುದನ್ನು ಕಂಡು
ಚಳಿ ಕೌದಿಯ ಸಂದಿಯಿಂದ ಕಾಲ್ಕಿತ್ತಿತು
– ಯಲ್ಲಪ್ಪ ಹಂದ್ರಾಳ (ವನಪ್ರಿಯ)