ಕ್ರಿಯಾಶೀಲ ಅಧ್ಯಾಪಕ ಎಸ್. ಕಲಾಧರ್ ಅವರು
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮದವರು.
ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ಶಿಡ್ಲಘಟ್ಟ ಸಮೀಪದ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಒಲವು ಮೂಡಲು ಗೋಡೆ ಪತ್ರಿಕೆ, ನವಿಲು ಮಾಸಪತ್ರಿಕೆ, ನೂರು ಪುಟಗಳ ಶಾಮಂತಿ ಕಿರುಹೊತ್ತಿಗೆ ಪ್ರಕಟಿಸಿ ಗಮನಸೆಳೆದವರು ಕಲಾಧರ್ ಅವರು.
ಪ್ರತಿವರ್ಷ ಮಕ್ಕಳ ನಾಟಕೋತ್ಸವ ಆಯೋಜಿಸುವ ಮೂಲಕ ರಂಗ ಕಲೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುತ್ತಿರುವ ಕಲಾಧರ್ ಅವರು ಹಲವು ಸಶಕ್ತ ಕವನಗಳನ್ನು ರಚಿಸಿದ್ದಾರೆ.
ಇಂದಿನ “ಅನುದಿನ ಕವನ”ದ ಗೌರವಕ್ಕೆ ಎಸ್.ಕಲಾಧರ್ ಅವರ ಚಹಾ ಮತ್ತು ಮಳೆ ಬಿದ್ದ ಮರುದಿನ ಕವಿತೆಗಳು ಪಾತ್ರವಾಗಿವೆ….👇
ಚಹಾ
ಚಹಾ ಕಪ್ಪು ನಿಮ್ಮ ಕೈಗೆ ಬರುವ ಮೊದಲೇ
ಅದರ ಕಂಪು ಮೂಗಿಗೆ ಅಡರಿ
ಮೆದುಳು ಮುಟ್ಟುತ್ತದೆ…
ಪ್ರೇಯಸಿಯನ್ನು ನೋಡಲು ಹೊರಟ
ಪ್ರೇಮಿಯ ಕಣ್ಣುಗಳ ಕಾತುರದಂತೆ…
ಹಬೆಯಾಡುವ ಚಹಾದ ಗುಟುಕು
ಇಳಿಯುವುದು ಹೊಟ್ಟೆಯೊಳಗೆ
ಎಂದು ನೀವು ಅಂದುಕೊಳ್ಳಬಹುದು
ಆದರೆ ಅದು ಹೃದಯದ ಹಾದಿ
ಹಾದು ಎಂದು ಮರೆಯುತ್ತೇವೆ
ಅಲೌಕಿಕ ನಶೆಗೆ ಆಧ್ಯಾತ್ಮವನ್ನು
ಹುಡುಕುವ ಜನರೇ
ಒಮ್ಮೆ ಪ್ರೇಮದೊಂದಿಗೆ ಚಹಾ ಗುಟುಕಿಸಿ
ದೈವವೇ ನಿಮ್ಮ ಪಿಂಗಾಣಿಕಪ್ಪಿನಲಿ
ಪ್ರತಿಫಲಿಸದಿದ್ದರೆ ಕೇಳಿ!
*****
ಮಳೆ ಬಿದ್ದ ಮರುದಿನ
ಎಂಥಹ ನಾಚಿಕೆಯ ಹೊಳಪು
ಮಣ್ಣಿನ ಮುಖದಲ್ಲಿ
ರಾತ್ರಿ ಬಿದ್ದ ಮಳೆಗೆ
ನಿಂತ ನೀರಲಿ ತೇಲಿದೆ ಹೂವು
ಆಸೆಯಿಂದ ಕಾಯುತಿದೆ ಭೂಮಿ
ಮತ್ತೆ ಬೀಳುವಂತಿರುವ ಮಳೆಗೆ
ಗಾಳಿಯು ಹೊತ್ತು ತರುತಿದೆ
ಮಣ್ಣಿಗೆ ಮಳೆಯ ಗುಪ್ತ ಸಂದೇಶ
ಘಮ್ಮೆನುವ ಮಣ್ಣು ಮಿದುವಾದ ಮಣ್ಣು
ಮೊದಲ ರಾತ್ರಿಯ ಮರುದಿನದ ಹೆಣ್ಣು
ಮಣ್ಣಿನ ಪ್ರೇಮ ಪಸೆ ಆರದಂತೆ
ಮೋಡ ಕಟ್ಟಿದೆ ಸೂರ್ಯನಿಗೆ ಪರದೆ
ನಿತ್ಯ ಚೆಲುವು ಮಳೆಗಾಲದ ಒಲವು
ಹಸಿರು ರಾಗದ ಹಾಡು ಎಲ್ಲೆಡೆಗೆ
ಹೂಗುಡುತ್ತಿವೆ ಗಿಡಮರಗಳೂ
ಮೇಘ ಪೃಥವೀ ಪ್ರೇಮಕಥೆಗೆ
-ಎಸ್.ಕಲಾಧರ್, ಶಿಡ್ಲಘಟ್ಟ