ವಿಶ್ವವ್ಯಾಪಿ ಸಾಮಾಜಿಕ ಮಾಧ್ಯಮಗಳು
*****
ಜಗತ್ತಿನಾದ್ಯಂತ ಇಂದು ಜನ ಸಾಮಾಜಿಕ ಮಾಧ್ಯಮಗಳ ದಾಸರಾಗಿ ಹೋಗಿಬಿಟ್ಟಿದ್ದಾರೆ. ತಿಂಡಿ ತಿನ್ನುವುದರಿಂದಿಡಿದು ನಿದ್ದೆ ಮಾಡುವವರೆಗೂ ಮೊಬೈಲ್ ಪೋನ್‌ಗಳನ್ನು ಕೈಯಲ್ಲೆ ಹಿಡಿದುಕೊಂಡು ಓಡಾಡುವುದು ಸಾಮಾನ್ಯವಾಗಿಬಿಟ್ಟಿದೆ. ಫೇಸ್‌ಬುಕ್, ವಾಟ್ಸ್‌ಆಪ್, ಲಿಂಕ್ಡೆನ್, ಇನ್ಸ್ಟಾಗ್ರಾಂ, ಗೂಗಲ್+,ಟ್ವಿಟರ್ ಹೀಗೆ ಒಂದಲ್ಲ ಒಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅದರಲ್ಲಿ ಬರುವ ಹೊಸ ಪೋಸ್ಟ್‌ಗಳಿಗಾಗಿ ಜಾತಕ ಪಕ್ಷಿಗಳಂತೆ ಕಾಯುವುದು ಸಾಮಾನ್ಯವಾಗಿಬಿಟ್ಟಿದೆ.
ಅಂತರ್‌ಜಾಲದ ಬೆಳವಣಿಗೆಯಿಂದ ಸಂವಹನ ಕ್ಷೇತ್ರದ ಮೇಲಾದ ತಂತ್ರಜ್ಙಾನ ಮತ್ತು ಸಂಪರ್ಕದ ಬೆಳವಣಿಗೆಯಿಂದಾಗಿ ಉಂಟಾದ ಕ್ರಾಂತಿಯ ಪರಿಣಾಮವಾಗಿ ಜನ್ಮ ತಾಳಿದ ಸಾಮಾಜಿಕ ಮಾಧ್ಯಮಗಳು ವಿಶ್ವದ ಎಲ್ಲಾ ಮೂಲೆಗೆಳ ಜನರನ್ನು ಬೆಸೆಯುವ ಮೂಲಕ ವಿಶ್ವ ಸಮುದಾಯ ಎಂಬ ಹೊಸ ಪ್ರಜ್ಞೆಗೆ ಸಾಕ್ಷಿಯಾಗಿವೆ. ಇವು ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದು ವಿವಿದ ರಾಷ್ಟ್ರಗಳ ಮಿಲಿಯನ್ ಜನರನ್ನು ಬೆರಳೆಣಿಕೆಯ ಸಮಯದಲ್ಲಿ ಒಂದೆಡೆ ಸೇರಿಸುವ, ಅನುಭವಗಳನ್ನು, ಅನಿಸಿಕೆಗಳನ್ನು ವಿನಿಮಯ ಮಾಡಿಕೊಳ್ಳುವ ಅಗಾದ ಶಕ್ತಿಯನ್ನು ಹೊಂದಿವೆ.
ವಿಶ್ವದಾದ್ಯಂತ ಮಿಲಿಯನ್‌ಗಟ್ಟಲೆ ಸದಸ್ಯರುಗಳನ್ನು ಒಳಗೊಂಡಿರುವ ಈ ಸಾಮಾಜಿಕ ಮಾಧ್ಯಮಗಳು, ಗೆಳೆಯರ ಒಂದು ಜಾಲವನ್ನೆ ನಿರ್ಮಿಸಿಬಿಟ್ಟಿವೆ. ನಿಮಗೆ ಏನೆಲ್ಲಾ ಬೇಕೋ ಅವೆಲ್ಲಾ ಕ್ಷಣಾರ್ದದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿ ಬಿಡುತ್ತವೆ. ಸಾಮಾಜಿಕ ಗುಂಪುಗಳು ಸಾವಿರ ಸಂಖ್ಯೆಯಲ್ಲಿ ರಚನೆಯಾಗಿಬಿಟ್ಟಿವೆ. ಇವುಗಳಲ್ಲಿ ಕುಟುಂಬ ಗುಂಪುಗಳು, ಸ್ನೇಹಿತರ ಗುಂಪುಗಳು, ಸರ್ಕಾರಿ ಮತ್ತು ಖಾಸಗಿ ಎರಡು ರಂಗಗಳ ಕಾರ್ಮಿಕರ ಮತ್ತು ಕಾರ್ಮಿಕ ಸಂಘಗಳ ಗುಂಪುಗಳು ಅದೇ ರೀತಿ ಸರ್ಕಾರದ ವಿವಿದ ಇಲಾಖೆಗಳು ತನ್ನ ಸಿಬ್ಬಂದಿಗಳನ್ನೊಳಗೊಂಡ ಗಂಪುಗಳು, ಸಮಾನ ಮನಸ್ಕರ ಗುಂಪುಗಳು, ವಿದ್ಯಾರ್ಥಿ ಗುಂಪುಗಳು ಹೀಗೆ ಒಂದೆರಡಲ್ಲ ಸಾಮಾಜಿಕ ಗುಂಪುಗಳು ಇಲ್ಲದ ಕ್ಷೇತ್ರವೇ ಇಲ್ಲವೇನೋ ಎಂಬ ವಾತಾವರಣ ಈಗ ನಿರ್ಮಾಣವಾಗಿದೆ. ಈ ಗುಂಪುಗಳ ಮೂಲಕ ಅನೇಕ ವಿಷಯಗಳನ್ನು ಶೇರ್ ಮಾಡಿಕೊಳ್ಳಲಾಗುತ್ತಿದೆ.
`ಚುನಾವಣೆಗಳಿಂದಿಡಿದು ಪ್ರಕೃತಿ ವಿಕೋಪದವರೆಗೂ, ಜನನದಿಂದ ಮರಣದವರೆಗಿನೆ ಎಲ್ಲಾ ಸುದ್ದಿಗಳು ಈ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗುತ್ತವೆ. ವಿದ್ಯಾರ್ಥಿಗಳು ಮತ್ತು ಯುವ ಜನ ಹೆಚ್ಚಾಗಿ ಈ ಸಾಮಾಜಿಕ ಮಾಧ್ಯಮಗಳ ಚಟ ಅಥವಾ ಗೀಳಿಗೆ ಒಳಗಾಗಿದ್ದಾರೆ. ಮನಶಾಸ್ತ್ರಜ್ಞರು ಈ ಕುರಿತು ಅನೇಕ ಸಂಶೋಧನೆಗಳನ್ನು ನಡೆಸಿದ್ದಾರೆ. ಸಂಶೋಧನೆಗಳಿಂದ ಬಂದ ಪಲಿತಾಂಶಗಳು ಎಲ್ಲರನ್ನು ಬೆಚ್ಚಿಬೀಳಿಸುವಂತಿವೆ.
ಮಕ್ಕಳ ಮತ್ತು ಯುವಕರ ಮಿದುಳಿನ ಶಕ್ತಿಯನ್ನೇ ಹುದುಗಿಸಿಬಿಡುವ ಶಕ್ತಿ ಇವುಗಳಿಗಿದೆ ಎಂಬ ವರದಿಗಳು ಒಂದೆಡೆಯಾದರೆ ಅತಿಯಾದ ಸಾಮಾಜಿಕ ಮಾಧ್ಯಮಗಳ ಅವಲಂಬನೆ ಯುವಕರಲ್ಲಿ ದೈಹಿಕ ಚಟುವಟಿಕೆಗಳನ್ನು ಕ್ಷೀಣಿಸಿ ಬೊಜ್ಬು ಬೆಳೆಯುವಂತೆ ಮಾಡುವುದರ ಜೊತೆಗೆ ಅವರ ಮಾನಸಿಕ ಸ್ಥಿಮಿತತೆಯನ್ನೆ ಹಾಳುಮಾಡಿಬಿಡುತ್ತವೆ, ಇದಲ್ಲದೆ ನಿದ್ರಾಹೀನತೆ, ಒತ್ತಡಕ್ಕೊಳಗಾಗುವುದು, ಕೋಪ, ಸುಳ್ಳು ಹೇಳುವ ಚಟ, ಹಾಗೂ ಖಿನ್ನತೆಯಂತಹ ಅಡ್ಡಪರಿಣಾಮಗಳು ಉಂಟಾಗುತ್ತಿವೆ, ಎಂಬುದು ಇನ್ನೊಂದು. ಹೀಗೆ ಅನೇಕ ವರದಿಗಳು ಹೊರಬಂದಿದ್ದು ಸಾಮಾಜಿಕ ಮಾಧ್ಯಮಗಳ ಅಡ್ಡಪರಿಣಾಮಗಳ ಕುರಿತು ಅನೇಕ ಆತಂಕಗಳು ಕೂಡ ಎದುರಾಗಿವೆ.
ಇದೀಗ ಎಲ್ಲರ ಗಮನಕ್ಕೆ ಬಂದಿರುವ ಪ್ರಮುಖ ಅಂಶವೆಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ವಿಚಾರಗಳ ಸತ್ಯಾಸತ್ಯತೆಯನ್ನು ಅರಿತುಕೊಳ್ಳದೇ ಮತ್ತು ಅದರಿಂದ ಸಮಾಜ ಮತ್ತು ದೇಶದ ಮೇಲೆ ಆಗಬಹುದಾದ ಅಡ್ಡಪರಿಣಾಮಗಳನ್ನು ವಿಮರ್ಶೆ ಮಾಡದೆ ವಿಷಯಗಳನ್ನು ಶೇರ್ ಮಾಡುವವರ ಪ್ರಮಾಣ ಹೆಚ್ಚಾಗುತ್ತಿದೆ. ಇಂತಹ ವಿಷಯಗಳ ಆಕರ್ಷಕವಾಗಿರುವುದರಿಂದ ಜನರು ಬಹಳ ಬೇಗ ಇವುಗಳ ಆಕರ್ಷಣೆಗೆ ಮಾರುಹೋಗಿಬಿಡುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಯಾವ ದೇಶಕ್ಕಾದರೂ ದೊಡ್ಡ ದುರಂತವೇ ಸರಿ.
ಸಾಮಾಜಿಕ ಮಾಧ್ಯಮಗಳ ಮೂಲಕ ಹೇಗೆ ಒಳ್ಳೆಯ ವಿಷಯಗಳು ಹರಿದಾಡುತ್ತವೋ ಅದಕ್ಕಿಂತ ಎರಡು ಪಟ್ಟು ಕೋಮುದ್ವೇಷ ಹಾಗೂ ರಾಷ್ಟ್ರದ ಏಕತೆಗೆ ದಕ್ಕೆ ಬರುವಂತಹ ಘಟನೆಗಳು ಹರಿದಾಡಿಬಿಡುತ್ತುವೆ. ಒಂದು ವಿಷಯದ ಪೂರ್ವಾಪರಗಳ ಅರಿವಿಲ್ಲದೆ ಹರಿದಾಡುವ ಕೆಲವು ವಿಷಯಗಳಿಂದ ಜನ ಸಾಮಾನ್ಯರು ಗೊಂದಲಕ್ಕೊಳಗಾಗುವ ಜೊತೆಗೆ ತಪ್ಪು ಜನಾಬಿಪ್ರಾಯ ರೂಪುಗೊಳ್ಳವ ಸಾಧ್ಯತೆಗಳಿವೆ.
ಸಾಮಾಜಿಕ ಮಾಧ್ಯಮಗಳಿಂದ ಉಂಟಾಗುವ ಧನಾತ್ಮಕ ಪರಿಣಾಮಗಳಿಗಿಂತ ಋಣತ್ಮಾಕ ಪರಿಣಾಮಗಳೆ ಹೆಚ್ಚು ಅದಕ್ಕಾಗಿಯೇ ಅನೇಕ ದೇಶಗಳು ಈಗಾಗಲೇ ಕೆಲವು ಸಾಮಾಜಿಕ ಮಾಧ್ಯಮಗಳನ್ನು ನಿಷೇದಿಸಿಬಿಟಿವೆ. ನಮ್ಮ ದೇಶದಲ್ಲಿಯು ಕೂಡ ಈ ರೀತಿಯ ಮಾತುಗಳು ಆಗಾಗ ಕೇಳಿ ಬರುತ್ತಲೆ ಇವೆ. ಮತ್ತೊಂದೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಪ್ರವಾಹ ನಡೆದೆ ಇದೆ. ಇವುಗಳ ಮೇಲೆ ನಿಯಂತ್ರಣ ಹೇರಬೇಕು ಎಂಬ ಚರ್ಚೆಗಳು ನಡೆದಾಗಲೆಲ್ಲ ಕೆಲವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ ಎಂಬ ವಿಷಯವನ್ನು ಮುಂದಿಟ್ಟುಕೊಂಡು ವಾದ ಮಾಡಲು ಮುಂದಾಗುತ್ತಾರೆ. ಆದರೆ ಬೆಕ್ಕಿಗೆ ಯಾರಾದರೂ ಗಂಟೆ ಕಟ್ಟಲೇ ಬೇಕಲ್ಲವೆ? ಇಲ್ಲದಿದ್ದರೆ ಇವುಗಳ ಅಡ್ಡಪರಿಣಾಮಗಳಿಂದ ಹೊರಬರುವುದಾದರೂ ಹೇಗೆ?
ಸಾಮಾಜಿಕ ಮಾಧ್ಯಮಗಳ ಬಹುದೊಡ್ಡ ಪರಿಣಾಮವೆಂದರೆ ಜನರ ಓದುವ ಅಭ್ಯಾಸವನ್ನು ಕಡಿಮೆ ಮಾಡಿದ್ದಾಗಿದೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿ ಸಮೂಹವನ್ನು ಇವುಗಳ ಒತ್ತಡದಿಂದ ರಕ್ಷಿಸುವುದು ಪೋಷಕರ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಕ್ಕಳಂತೆ ಪೋಷಕರು ಕೂಡ ಮನೆಯಲ್ಲಿದ್ದಾಗ ಸಾಮಾಜಿಕ ಮಾಧ್ಯಮಗಳ ಮೇಲೆ ಹೆಚ್ಚು ವೇಳೆ ವ್ಯಯ ಮಾಡುತ್ತಾ ಅವುಗಳ ಚಟಕ್ಕೆ ಒಳಗಾಗುತ್ತಿರುವುದರ ಪರಿಣಾಮವಾಗಿ ಕುಟುಂಬದ ಬೇರುಗಳೆ ಸಡಿಲವಾಗಿಬಿಡುತ್ತಿವೆಯೇನೋ ಎಂಬ ದಿಗಿಲು ಎಲ್ಲರನ್ನೂ ಅವರಿಸಿರುವುದರಲ್ಲಿ ಸಂದೇಹವಿಲ್ಲ.
ಸಾಮಾಜಿಕ ಅಂತರ್‌ಜಾಲ ತಾಣಗಳು ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಾಗಿದ್ದು ವಿಶ್ವವನ್ನೆ ನಮ್ಮ ಮನೆಯ ಅಂಗಳಕ್ಕೆ ತಂದಿಟ್ಟಿದ್ದರೂ ಕೂಡ ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳುವುದರಲ್ಲಿ ನಾವು ಸೋತು ಬಿಟ್ಟಿದ್ದೀವಿ. ಈ ಸೋಲು ಇಡೀ ಸಮಾಜವನ್ನೆ ದಿಕ್ಕು ತಪ್ಪಿಸಿಬಿಡಬಹುದು ಎಂಬ ಆತಂಕವನ್ನು ಯಾರು ಅಲ್ಲಗೆಳೆಯುವಂತಿಲ್ಲ.
ಮಾಧ್ಯಮಗಳು ಎಂದಾಕ್ಷಣ ನಮ್ಮೆದುರು ಬಂದು ನಿಲ್ಲುವುದು ಶೇರ್, ಕಮೆಂಟ್, ಮತ್ತು ಲೈಕ್ ಇವುಗಳ ಹೊರತಾಗಿಯೂ ಸಾಮಾಜಿಕ ಮಾಧ್ಯಮಗಳನ್ನು ನಮ್ಮ ಕೌಶಲ್ಯ ವೃದ್ದಿಗೆ, ಹೊಸ ಹೊಸ ವಿಷಯಗಳ ಗ್ರಹಿಕೆಗೆ, ವಿಶ್ವದಾದ್ಯಂತ ನಡೆಯುವ ನೂತನ ಆವಿಷ್ಕಾರಗಳಿಗೆ ನಮ್ಮನ್ನು ತೆರೆದುಕೊಳ್ಳುವಿಕೆಗೆ, ಹೀಗೆ ಅನೇಕೆ ವಿಷಯಗಳಲ್ಲಿ ನಾವು ಬಹಳಷ್ಟು ಪ್ರೌಡಿಮೆಯನ್ನು ಬೆಳೆಸಿಕೊಳ್ಳಲು ಸಾಮಾಜಿಕ ಮಾಧ್ಯಮಗಳಲ್ಲಿ ವಿಪುಲ ಅವಕಾಶಗಳಿವೆ. ಸಾಮಾಜಿಕ ಜಾಲ ತಾಣಗಳ ಮೂಲಕ ಆನ್‌ಲೈನ್ ಶಿಕ್ಷಣ ನೀಡುವುದು ಸೇರಿದಂತೆ ವಿವಿದ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಉಪಯೋಗಿಸಿಕೊಳ್ಳಲು ವಿಫುಲ ಅವಕಾಶಗಳಿವೆ. ಇವುಗಳು ಬಳಕೆದಾರರ ಆಸಕ್ತಿಯನ್ನು ಅವಲಂಬಿಸಿರುತ್ತವೆ. ಆದರೆ ಒಳ್ಳೆಯ ವಿಷಯಗಳು ಎಷ್ಟು ಜನರನ್ನು ಆಕರ್ಷಿಸಬಲ್ಲವು?
ದಿನದಿಂದ ದಿನಕ್ಕೆ ಅಂತರ್‌ಜಾಲ ಬಳಸುವವರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿದ್ದು ಈ ಪ್ರಮಾಣ ಏರಿಕೆಯಾದಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರ ಪ್ರಮಾಣ ಕೂಡ ಹೆಚ್ಚುತ್ತಾ ಹೋಗುತ್ತಿದೆ. ಸಾಮಾಜಿಕ ಮಾಧ್ಯಮದ ಗೀಳಿಗೆ ಒಳಗಾಗುವವರ ಸಂಖ್ಯೆ ಕೂಡ ಹೆಚ್ಚಾಗುತ್ತದೆ. ಇದರಿಂದ ಆರೋಗ್ಯ, ಕೆಲಸದ ಸ್ಥಳ, ಶಿಕ್ಷಣ ಮತ್ತು ಸಾಮಾಜಿಕ ಜೀವನದ ಮೇಲಿನ ಅಡ್ಡಪರಿಣಾಮಗಳು ಕೂಡ ಹೆಚ್ಚಾಗಲಿವೆ. ಉಳಿದೆಲ್ಲಾ ಕ್ಷೇತ್ರಗಳಿಗಿಂತ ಶಿಕ್ಷಣ ಅದರಲ್ಲೂ ವಿದ್ಯಾರ್ಥಿಗಳ ಮೇಲೆ ಇವುಗಳು ಬೀರುವ ದುಷ್ಪರಿಣಾಮಗಳು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
ಮಾಧ್ಯಮಗಳಿಗೆ ಒಂದು ಸಾಮಾಜಿಕ ಕಟ್ಟುಪಾಡು ಅಥವಾ ನೀತಿ ಸಂಹಿತೆಯಿದೆ. ಇದಕ್ಕೆ ಕಾನೂನು ಚೌಕಟ್ಟು ಇಲ್ಲದಿದ್ದರೂ ಮುದ್ರಣ ಮಾಧ್ಯಮ ಸೇರಿದಂತೆ ಎಲ್ಲಾ ಮಾಧ್ಯಮಗಳು ಈ ನೀತಿ ಸಂಹಿತೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಮಾಧ್ಯಮಗಳು ಒಂದು ಪರಿದಿಯಲ್ಲಿ ಕೆಲಸ ಮಾಡುತ್ತಿವೆ ಅದರೆ ಸಾಮಾಜಿಕ ಮಾಧ್ಯಮಗಳಿಗೆ ಯಾವ ಇತಿ-ಮಿತಿಗಳಾಗಲಿ, ತತ್ವ ಸಿದ್ದಾಂತಗಳಾಗಲಿ, ನೀತಿ ಸಂಹಿತೆಯಾಗಲಿ ಇಲ್ಲದಿರುವುದು ಮತ್ತು ಅವುಗಳಿಗಿರುವ ವೇಗ ಎಲ್ಲರ ನಿದ್ರೆಯನ್ನು ಕೆಡಿಸಿರುವುದಂತೂ ಸತ್ಯ.
###
-ಡಾ. ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346