ಅನುದಿನ ಕವನ-೪೮ (ಕವಿ:ದೇವರಾಜ್ ಹುಣಸಿಕಟ್ಟಿ)

ಅಧ್ಯಾಪಕ, ಕವಿ ದೇವರಾಜ್ ಹುಣಸಿಕಟ್ಟಿ ಅವರ
ಮೊದಲ ಕವನ ಸಂಕಲನ 2011-12ರಲ್ಲಿ ” ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ” ಕರ್ನಾಟಕ ಸರ್ಕಾರದ ಯುವ ಬರಹಗಾರರ ಪ್ರೋತ್ಸಾಹಧನ ಪಡೆದು ಪ್ರಕಟಣೆಯಾಗಿದೆ.
ರಾಜ್ಯ ಕಾವ್ಯ ಕಮ್ಮಟಗಳಲ್ಲಿ ಭಾಗಿಯಾಗಿ ಕಾವ್ಯದ ಮಜಲುಗಳ ಅರಿತಿರುವ ಇವರು .ಕವಿತೆ, ವಚನ, ಗಜಲ್ ನೆಚ್ಚಿನ ಪ್ರಕಾರದ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ರಾಜ್ಯ, ಜಿಲ್ಲಾ ಮಟ್ಟದ ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವನ ವಾಚಿಸಿದ್ದಾರೆ.
ಪುಸ್ತಕ, ಕವನ ಸಂಕಲನ, ಗಜಲ್ ಸಂಕಲನಗಳನ್ನು ವಿಮರ್ಶಿಸುತ್ತಾ ತಮ್ಮ ಓದಿನ ಪರಿಧಿ ವಿಸ್ತಾರಗೊಳಿಸಿ ಕೊಂಡಿದ್ದಾರೆ.
ಶಮಾ ಜಮಾದಾರ ಅವರ ” ಶಮಾ ಗಜಲ್ ” ದೀಪಾ ಗೋನಾಳರ ” ತಂತಿ ತಂತಿಗೆ ತಾಗಿ ” ಕವನ ಸಂಕಲನ, ನಾಮದೇವ ಕಾಗದಗಾರರ ” “ದೇವರಿಗೂ ಬೀಗ” ಕೃತಿ ಹೆಬಸೂರ್ ರಂಜಾನರ ಹಾಯ್ಕು ಸಂಕಲನ ಇತ್ಯಾದಿ ಪುಸ್ತಕಗಳ ವಿಮರ್ಶಿಸಿರುವುದು ವಿಶೇಷ.

ಇಂದಿನ “ಅನುದಿನ ಕವನ”ದ ಗೌರವಕ್ಕೆ
ಕವಿ ದೇವರಾಜ ಹುಣಸಿಕಟ್ಟಿ ಅವರ ‘ಚಂದ್ರಾಮ ಬರಲೇ ಇಲ್ಲ’ ಪಾತ್ರವಾಗಿವೆ.👇

ಚಂದ್ರಾಮ ಬರಲೇ ಇಲ್ಲ…
*******************
ಹುಟ್ಟುತ್ತ ಹೆಣ್ಣಾಗಿ
ಬೆಳೆಯುತ್ತ ಗಂಡಾಗಿ
ಅದಲು ಬದಲಾದ
ಲಿಂಗದೊಳಗಣ ಒಳಗುಟ್ಟು
ರಟ್ಟಾದವರ ಬಾಳ ಬಾಂದಳಕೆ
ಚಂದ್ರಾಮ ಬರಲೇ ಇಲ್ಲ….

ಮೈ ತೊಗಲನೆ
ಮಾರಾಟಕಿಟ್ಟು
ಹರೆಯದ ಕನಸುಗಳನೆ
ಸಪ್ಪಳವಿಲ್ಲದೆ ಸುಟ್ಟು..
ಉಳ್ಳವರ ಹಸಿದ ತೊಗಲಿನ
ಬೇನೆಗಳಿಗೆ ಸುಖವ ಕೊಟ್ಟು…
ಹಾಸಿಗೆಯ ಹದಕೆ
ರಕ್ತವನೇ ಬಸಿದು
ಒಂಟಿಯಾಗಿಯೇ ಉಳಿದವರ
ಬಾಳ ಬಾಂದಳಕೆ ಚಂದ್ರಾಮ
ಬರಲೇ ಇಲ್ಲ….

ದೇವರ ಹೆಸರಲಿ
ಕಾಲಿಗೆ ಗೆಜ್ಜೆಯ ಕಟ್ಟಿಸಿ
ಕೊರಳಿಗೆ ಮುತ್ತಿನ ಸರವನೇ
ಸದ್ದಿಲ್ಲದೇ ಬಿಗಿಸಿ
ಜಡೆಗೆ ಜಂಜಡವ ಮುಡಿಸಿ
ಸಂಪ್ರದಾಯದ ನೆಪದಲಿ
ತಿಂದುಂಡು ಬೀಗಲು
ಬಳಕೆಯಾದ ದೇವದಾಸಿಯರ
ಬದುಕ ಬಾಂದಳಕೆ
ಚಂದ್ರಾಮ ಬರಲೇ ಇಲ್ಲ…

ಮಬ್ಬು ಬೆಳಕಿನ ಕತ್ತಲಲ್ಲಿ
ರಾತ್ರಿ ಕ್ಲಬ್ಬು -ಪಬ್ಬುಗಳಲಿ
ಮೈ ಮನ ಹರಡಿ
ಕುಣಿದು ದಣಿದು ಸೋತವರ
ಮನದ ಬಾಳ ಬಾಂದಳದಲ್ಲಿ
ಚಂದ್ರಾಮ ಬರಲೇ ಇಲ್ಲ…

ನಾಕಾಣೆ ಬಿಂದಿ ಹಚ್ಚಿ
ಎಂಟಾಣೆ ನಗು ಖರ್ಚು ಮಾಡಿ
ಎಳವೆಯಲ್ಲಿಯೇ ಮದುವೆ ಮಾಡಿ
ಹದಿಹರೆಯಕೆ ವಿದುವೆಯಾದವರ
ಬಾಳ ಬಾಂದಳಕೆ
ಚಂದ್ರಾಮ ಬರಲೇ ಇಲ್ಲ….

-ದೇವರಾಜ್ ಹುಣಸಿಕಟ್ಟಿ,
ರಾಣೇಬೆನ್ನೂರ್.