ಬಳ್ಳಾರಿ: ತಾವು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ನೇಮಕವಾಗಲು ಹಾಗೂ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಲು ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ ಎಂದು ಅಕಾಡೆಮಿ ಅಧ್ಯಕ್ಷೆ, ಹಿರಿಯ ಜಾನಪದ ಕಲಾವಿದೆ ಮಾತಾ ಮಂಜಮ್ಮ ಜೋಗತಿ ಅವರು ಹೇಳಿದರು.
ನಗರದ ರಾಘವ ಕಲಾಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ ಬಳ್ಳಾರಿ ಜಿಲ್ಲಾ ಸಮಿತಿ ಶನಿವಾರ ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಬೃಹತ್ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ದಲಿತಳಾಗಿ ಹುಟ್ಟದಿದ್ದರೂ ದಲಿತರ ನೋವು, ಅಪಮಾನ ನನ್ನ ಅನುಭವಕ್ಕೆ ಬಂದಿದೆ. ದಲಿತ ಕಲೆಯಾದ ಜೋಗತಿ ನೃತ್ಯ ನನ್ನ ಕೈ ಹಿಡಿದಿದೆ, ನನ್ನನ್ನು ಸಮಾಜ ಗುರುತಿಸುವಂತೆ ಮಾಡಿದೆ ಎಂದು ಗದ್ಗದಿರಾದರು.
ವಿಶ್ವಜ್ಞಾನಿ ಡಾ, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಹಾಗೂ ಪ್ರತಿಯೊಬ್ಬರ ಮನೆಯಲ್ಲೂ ಡಾ. ಅಂಬೇಡ್ಕರ್ ಹುಟ್ಟಬೇಕು ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ಅವರನ್ನು ಮತ್ತಷ್ಟು ಅರಿಯಲು ಅವರು ಬರೆದ ಎಲ್ಲಾ ಸಂಪುಟಗಳನ್ನು ಖರೀದಿಸಿ ಓದುತ್ತೇನೆ ಎಂದರು.
ಬಾಬಾಸಾಹೇಬರ ಜೀವನಾಧಾರಿತ ಮಹಾನಾಯಕ ಧಾರವಾಹಿಯನ್ನು ಪ್ರತಿ ಶನಿವಾರ ಮತ್ತು ಭಾನುವಾರ ತಪ್ಪದೇ ವೀಕ್ಷಿಸುವೆ. ಬಾಲಕ ಅಂಬೇಡ್ಕರ್ ಅವರು ಚಿಕ್ಕವಯಸ್ಸಿನಲ್ಲೇ ಪಟ್ಟ ಕಷ್ಟಕಾರ್ಪಣ್ಯಗಳು, ಕುಟುಂಬ ಅನುಭವಿಸಿದ ಅವಮಾನ, ಸಂಕಟಗಳು ನನ್ನನ್ನು ಸದಾ ಭಾದಿಸುತ್ತವೆ ಎಂದು ಕಣ್ಣೀರಾದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ.ಆರ್.ಮೋಹನರಾಜ್ ಅವರು ಮಾತನಾಡಿ ಬಲಿಷ್ಟ ಭಾರತ ನಿರ್ಮಾಣ ತಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ ಹಾಗೂ ಆರ್ಪಿಐನ ಗುರಿ ಎಂದು ಹೇಳಿದರು.
ದೇಶದ ಜನಸಂಖ್ಯೆಯಲ್ಲಿ ಶೇ.85 ರಷ್ಟಿರುವ ಶೂದ್ರ, ಶೂದ್ರಾತಿ ಶೂದ್ರ, ಅಲ್ಪಸಂಖ್ಯಾತರು, ತಿರಸ್ಕೃತ ಸಮುದಾಯ ದೇಶವನ್ನು ಆಳಬೇಕು ಎನ್ನುವ ಬಾಬಾಸಾಹೇಬರ ಕನಸು ನನಸಾಗಬೇಕು. ಈ ನಿಟ್ಟಿನಲ್ಲಿ ಅಹಿಂದ ಸಮುದಾಯಗಳು ಬಾಬಾ ಸಾಹೇಬರ ಅಪಾರ ಶ್ರಮ, ತ್ಯಾಗವನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸ್ವಾಭಿಮಾನ, ನೈತಿಕತೆ ತಳಹದಿಯ ಚಳವಳಿಯನ್ನು ಕಟ್ಟುವ ಮೂಲಕ ಜನ ವಿರೋಧಿ ಸರಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದರು. ದೇಶದ ರಾಜಧಾನಿ ನವದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಕದಸಂಸ(ಭೀಮವಾದ) ಹಾಗೂ ಆರ್ಪಿಐ ರಾಜ್ಯ ಘಟಕ ಬೆಂಬಲಿಸುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವಾಗ ಭಾರತೀಯ ಸಂವಿಧಾನಕ್ಕೆ ನಮಸ್ಕರಿಸಿದರು, ನಂತರ ಸಂವಿಧಾನ ಆಶಯಗಳ ವಿರುದ್ಧ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಉದ್ಯೋಗ ಸೃಷ್ಠಿಸುವುದಿರಲಿ ಲಾಭದಲ್ಲಿರುವ ಸರಕಾರಿ ಸಂಸ್ಥೆಗಳನ್ನು ಮುಚ್ಚಲು ಕೇಂದ್ರ ಸರಕಾರ ಹೊರಟಿದೆ. ರಾಜ್ಯ ಸರಕಾರವೂ ಭೂಸುಧಾರಣೆ ಕಾಯ್ದೆಯನ್ನು ವಿರೂಪಗೊಳಿಸಿದೆ ಎಂದು ಆಪಾದಿಸಿದರು.
ಕೇಂದ್ರ ಸರಕಾರದ ವೈಫಲ್ಯವನ್ನು ಪ್ರಶ್ನಿಸುವವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುವುದು ಸಂವಿಧಾನ ವಿರೋಧಿ ಕ್ರಮ ಎಂದು ಡಾ. ಮೋಹನರಾಜ್ ಅವರು ಹೇಳಿದರು.
ರಾಜ್ಯದ 15 ಜಿಲ್ಲೆಗಳಲ್ಲಿ ಸಮಾವೇಶ ಹಮ್ಮಿಕೊಳ್ಳುವ ಮೂಲಕ ರಾಜ್ಯ, ಕೇಂದ್ರ ಸರಕಾರಗಳ ಜನ ವಿರೋಧಿ ನೀತಿಗಳ ಬಗ್ಗೆ ನಾಡಿನ ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷೆ ಎನ್ ಡಿ ವೆಂಕಮ್ಮ, ಮಹಿಳಾವಾಣಿ ಪತ್ರಿಕೆಯ ಸಂಪಾದಕಿ ಸಾವಿತ್ರಿ ಮಜುಂದಾರ್, ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಾಜು ಎಂ ತಳವಾರ್ ಮಾತನಾಡಿದರು.
ವೇದಿಕೆಯಲ್ಲಿ ಸಮಿತಿಯ ರಾಜ್ಯ ಮುಖಂಡರಾದ ಶೇಖರ್ ಹಾವಂಜೆ, ಜೆ. ಸಿದ್ಧರಾಜು, ಹುಸೇನಪ್ಪ ಹಂಚಿನಾಳ್, ಎಂ.ಚಂದ್ರಶೇಖರ್, ಸಮ ಸಮಾಜ ನಿರ್ಮಾಣ ಸಂಸ್ಥೆಯ ರಾಜ್ಯಾಧ್ಯಕ್ಷೆ ಸಿ. ಪದ್ಮಾವತಿ, ಆರ್.ಪಿ,ಐನ ಜಿಲ್ಲಾ ಸಂಚಾಲಕ ಎಸ್.ಎಂ.ಶ್ರೀನಿವಾಸ್, ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ನ್ಯಾಯವಾದಿ, ಶ್ರೀಮತಿ ಸುನಿತಾ, ಭಾರತೀಯ ಮಾನವ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷೆ ಡಾ. ಈರಮ್ಮ, ಹೊಸಪೇಟೆಯ ಸೋಮಶೇಖರ್ ಬಣ್ಣದಮನೆ ಸೇರಿದಂತೆ ಜಿಲ್ಲಾ, ತಾಲೂಕು ಘಟಕಗಳ ಮುಖಂಡರು ಉಪಸ್ಥಿತರಿದ್ದರು.
ರಾಜ್ಯ ಸಂಘಟನಾ ಸಂಚಾಲಕ ಶಿವಕುಮಾರ್ ಗಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಸೋಮಪ್ಪ ಛಲವಾದಿ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಬೈಲೂರು ಮಲ್ಲಿಕಾರ್ಜುನ್ ವಂದಿಸಿದರು.
ಕನ್ನಡ ವಿವಿಯ ಸಂಶೋಧನಾ ವಿದ್ಯಾರ್ಥಿ ಮಣಿಕಂಠ ಹಾಗೂ ಸಕಲೇಶಪುರದ ಮಹಿಳಾ ಚಿಂತಕಿ ಉಮಾದೇವಿ ನಿರೂಪಿಸಿದರು.
ಮೆರವಣಿಗೆ: ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಿತಿಯ ಕಾರ್ಯಕರ್ತರು, ಮುಖಂಡರು ನಗರದ ರೈಲ್ವೆ ನಿಲ್ದಾಣದ ಮುಂಭಾಗದಿಂದ ರಾಘವ ಕಲಾಮಂದಿರದವರೆಗೆ ಮೆರವಣಿಗೆ ನಡೆಸಿದರು..
*******
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಲು ಭಾರತೀಯ ಸಂವಿಧಾನವೇ ಕಾರಣ -ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ ಮಂಜಮ್ಮ ಜೋಗತಿ
One thought on “ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಲು ಭಾರತೀಯ ಸಂವಿಧಾನವೇ ಕಾರಣ -ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ ಮಂಜಮ್ಮ ಜೋಗತಿ”
Comments are closed.
ಧನ್ಯವಾದಗಳು, ಜೈ ಭೀಮ್ ಬ್ರದರ್.