ಅನುದಿನ ಕವನ-೫೧ (ಕವಯತ್ರಿ: ಧರಣೀ ಪ್ರಿಯೆ, ದಾವಣಗೆರೆ)

ಕವಯತ್ರಿ ‘ಧರಣೀ ಪ್ರಿಯೆ’ ಅವರ ಕಿರು ಪರಿಚಯ👇
*****
ಹೆಸರು: ಎಂ.ಗೀತಾ ತಿಪ್ಪೇಸ್ವಾಮಿ.ಐಗೂರು.
ಕಾವ್ಯ ನಾಮ: ಧರಣೀ ಪ್ರಿಯೆ
ಊರು: ದಾವಣಗೆರೆ
ಹವ್ಯಾಸಗಳು: ಕಥೆ.ಕವಿತೆ ಓದುವುದು
ಕವನ ಬರೆಯುವುದು,ರುಬಾಯಿ,ಮುಕ್ತಕ, ಕಥೆ, ಕಾದಂಬರಿ ಬರೆಯುವುದು, ಟೈಲರಿಂಗ್,ಡ್ರಾಯಿಂಗ್,ಪೇಂಟಿಂಗ್ ಮಾಡುವುದು, ಸೀರೆಗೆಕುಚ್ಚುಹಾಕುವುದು, ಜಾನಪದ ಹಾಡುಗಳನ್ನು ಹಾಡುವುದು & ನಟನೆ (ಮುಕ್ತಿ ಕಿರುಚಿತ್ರದಲ್ಲಿ ನಟಿಸಿದ್ದಾರೆ)
ವಿಶ್ವವಿಖ್ಯಾತ ಹಂಪಿ ಉತ್ಸವ, ಜಾನಪದ ಸಂಗೀತೋತ್ಸವದಲ್ಲಿ ಭಾಗಿಯಾಗಿ ಪ್ರಶಸ್ತಿ ಪಡೆದಿದ್ದಾರೆ. 2019ರ ಹಂಪಿ ಉತ್ಸವ ಸೇರಿದಂತೆ ಹಲವು ಕವಿಗೋಷ್ಠಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ಸಾಧಕರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
*****
ಇಂದಿನ ಅನುದಿನ ಕವನದ ಗೌರವಕ್ಕೆ ಧರಣೀ ಪ್ರಿಯೆ ಅವರ ಐಶ್ವರ್ಯ ಕವಿತೆ ಪಾತ್ರವಾಗಿದೆ. ವಿಶೇಷವೆಂದರೆ ಕರ್ನಾಟಕ ಸಮರ ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಕೋಳೂರು ಸಿ. ಶ್ರೀನಿವಾಸ ಅವರ ಪುತ್ರಿ ಐಶ್ವರ್ಯಳ ಭಾವಚಿತ್ರವನ್ನು ಫೇಸ್ ಬುಕ್ ನಲ್ಲಿ ಗಮನಿಸಿ ಅರ್ಥಪೂರ್ಣ ಕವನ ರಚಿಸಿದ್ದಾರೆ.👇

ಐಶ್ವರ್ಯ
*******
ಪೋರಿ ನಿಂದಳು ಸೀರೆಯಂದದಿ
ಭಾರಿಚೆಂದದಿ ಕಾಣ ಬರುತಲಿ
ಕೋರಿ ದೇವರ ಕೃಪೆಯ ಬೇಡುತ ಗೌರಿ ಹುಣ್ಣಿಮೆಯು!
ತೋರಿಬರುವುದು ಮನೆಗೆ ಲಕ್ಷ್ಮಿಯು
ನಾರಿ ಲಕ್ಷಣ ಮೆರೆದು ನಿಂದಳು
ಸಾರಿ ಜನರಿಗೆ ನಮ್ಮ ದೇಶದ
ಚೆಂದ ಸಂಸ್ಕೃತಿಯು!!

ಹಳದಿ ಸೀರೆಯು ಚಂದ ಕುಪ್ಪಸ
ಹೊಳೆವ ತಳವದು ಹೂವ ಚಿತ್ರದಿ
ಸೆಳೆವ ಕಂಗಳ ನೋಟದಂದವು ಕಮಲ ವದನದಲಿ!
ಹೊಳೆವ ಬಳೆಗಳ ತೊಟ್ಟು ನಿಂದಳು
ಕೊರಳಹಾರವು ಹಣೆಗೆ ಕುಂಕುಮ
ಬಿರಿದ ಮಲ್ಲಿಗೆ ಮುಡಿದು ತಲೆಯಲಿ ಕಿವಿಗೆ ಲೋಲಾಕು!!

ಕರದಿ ಪಿಡಿದಳು ಸಕ್ರೆಯಾರತಿ
ತರದಿ ಜೋಡಿಸಿ ಗೊಂಬೆ ಚೆಂದದಿ
ಜರುಗಿ ಸಂಜೆಯು ಮಿಂದು ತಮದಲಿ ಜ್ಯೋತಿ ಬೆಳಗುತಲಿ!
ಚಿರದ ಖುಷಿಯನು ಕೇಳಿ ಕೊಂಡಳು
ಹರನ ಪತಿಯನು ಗೌರಿ ದೇವಿಯ
ಕರವ ಜೋಡಿಸಿ ತಂದೆ ತಾಯಿಗೆ ಶುಭವ ಕೋರುತಲಿ!!

ಧರಣೀ ಪ್ರಿಯೆ
ದಾವಣಗೆರೆ