ಮಾಧ್ಯಮ ಲೋಕ-೦೪ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು)

ನಕಲಿ ಟಿ ಆರ್ ಪಿ ಎಂಬ ದಂಧೆ
-ಡಾ.ಅಮ್ಮಸಂದ್ರ ಸುರೇಶ್, ಮೈಸೂರು

ಟೆಲಿವಿಷನ್ ರೇಟಿಂಗ್ ಪಾಯಿಂಟ್ ವಿಷಯದಲ್ಲಿಅವ್ಯವಹಾರ ನಡೆಸಲಾಗಿದೆ ಹಾಗೂ ಟಿ ಆರ್ ಪಿ ದಂಧೆ ನಡೆಸಿ ಆದಾಯ ಹೆಚ್ಚಿಸಲು ಸುಳ್ಳು ಟಿ ಆರ್ ಪಿ ತೋರಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ, ಫಕ್ ಮರಾಠ ಮತ್ತು ಬಾಕ್ಸ್ ಸಿನೆಮಾ ರೇಟಿಂಗ್ ಟಿವಿ ವಾಹಿನಿಗಳ ವಿರುದ್ದ ತನಿಖೆ ನಡೆಸುತ್ತಿದ್ದಾರೆ. ಭಾರತದಲ್ಲಿ ಟಿ ಆರ್ ಪಿ ಈಗ ಒಂದು ಪ್ರಮುಖ ದಂಧೆಯಾಗಿ ಪರಿಣಮಿಸಿದ್ದು ಅನೇಕ ಟಿವಿ ವಾಹಿನಿಗಳು ನಕಲಿ ಟಿವಿ ರೇಟಿಂಗ್ ಪಾಯಿಂಟ್ ಗಳನ್ನು ರೂಪಿಸಲು ಪ್ರಯತ್ನಪಟ್ಟಿದ್ದು ಈ ಸಂಬಂಧ ತನಿಖೆಗಳು ನಡೆಯುತ್ತಿವೆ. ಈ ಸಂಬಂಧ ರಿಪಬ್ಲಿಕ್ ಟಿವಿಯ ವಿರುದ್ದ ಹೆಚ್ಚು ಆರೋಪಗಳು ಕೇಳಿಬಂದಿದ್ದು ವಾಹಿನಿಯ ಐದು ಮಂದಿ ಹೂಡಿಕೆದಾರರನ್ನೂ ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ರಿಪಬ್ಲಿಕ್ ವಾಹಿನಿ ಸೇರಿದಂತೆ ಅನೇಕ ಟಿವಿ ವಾಹಿನಿಗಳು ತಮ್ಮ ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ವಾಮಮಾರ್ಗ ಹಿಡಿದಿವೆ, ಎಂದು ಹಂಸಾ ರಿಸರ್ಚ್ ಸಮೂಹದ ಮೂಲಕ ಬಾರ್ಕ್ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಪೊಲೀಸರಿಗೆ ದೂರು ದಾಖಲಿಸಿತ್ತು. ಟಿ ಆರ್ ಪಿಗಳನ್ನು ಅಳೆಯುವ ಉದ್ದೇಶದಿಂದ ಬಾರೋಮೀಟರ್ ಗಳನ್ನು ಇರಿಸಿದ ಮನೆಗಳ ಕುಟುಂಬಗಳಿಗೆ ಹಣ ಪಾವತಿಸುವ ಮೂಲಕ ಕೆಲವು ಟಿವಿ ವಾಹಿನಿಗಳು ವಂಚನೆ ಮಾಡಿವೆ ಎಂಬುದೇ ಈ ಹಗರಣಗಳ ಸಾರಾಂಶ.
ಭಾರತದಲ್ಲಿ ಟಿ ಆರ್ ಪಿಯನ್ನು ಬಾರ್ಕ್ (ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಚಿಲ್) ನಿರ್ಧರಿಸುತ್ತದೆ. ಆದರೆ ಬಾರ್ಕ್ ನೇರವಾಗಿ ತಾನೇ ಮನೆಗಳ ಟಿವಿ ಸೆಟ್ ಗಳಿಗೆ ಪೀಪಲ್ ಮೀಟರ್ ಗಳನ್ನು ಅಳವಡಿಸುವುದಿಲ್ಲ. ಬದಲಾಗಿ ಹಂಸಾ ಎನ್ನುವ ಮತ್ತೊಂದು ಸಂಸ್ಥೆಗೆ ಈ ಜವಾಬ್ದಾರಿಯನ್ನು ವಹಿಸಿದೆ. ಹಂಸಾ ಭಾರತದಲ್ಲಿ ಒಟ್ಟು ಬಾರ್ಕ್ ಗಾಗಿ ಒಟ್ಟು 44,000 ಇಂತಹ ಗ್ಯಾಜೆಟ್ ಗಳನ್ನು ನಿರ್ವಹಿಸುತ್ತಿದೆ. ಹಂಸಾದ ಹಲವು ನೌಕರರು ಕೆಲವು ಟಿವಿ ವಾಹಿನಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ತಮಗೆ ಬೇಕಾದ ಮನೆಯ ಟಿವಿ ಸೆಟ್ ಗಳಿಗೆ ಪೀಪಲ್ ಮೀಟರ್ ಅಳವಡಿಸಿ ಸಂಬಧಿಸಿದ ಮನೆಯವರಿಗೆ ಹಣ ನೀಡುವ ಮೂಲಕ ನಿರ್ಧಿಷ್ಟ ವಾಹಿನಿಗಳ ಕಾರ್ಯಕ್ರಮಗಳನ್ನು ಮಾತ್ರ ದಿನನಿತ್ಯ ನೋಡುವಂತೆ ಒತ್ತಡ ಹೇರುತ್ತಾರೆ. ಹಣದ ಆಸೆಗಾಗಿ ಮನೆಯವರು ಅವರು ಹೇಳಿದ ವಾಹಿನಿಗಳನ್ನು ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಇದರಿಂದ ಒಮ್ಮಿಂದೊಮ್ಮೆಗೆ ಅಂತಹ ವಾಹಿನಿಗಳ ಟಿ ಆರ್ ಪಿ ಹೆಚ್ಚುತ್ತದೆ. ಇದರಿಂದ ಸಂಶಯಗೊಂಡ ಬಾರ್ಕ್ ಮತ್ತು ಹಂಸಾ ಸಂಸ್ಥೆಗಳು ಆಂತರಿಕ ತನಿಖೆಯನ್ನು ಆರಂಭಿಸಿದಾಗ ಇದ್ದಕ್ಕಿದ್ದಂತೆ ಒಬ್ಬ ನೌಕರ ಕೆಲಸವನ್ನು ಬಿಡುತ್ತಾನೆ. ಇದರಿಂದ ಸಂಶಯಗೊಂಡ ಬಾರ್ಕ್ ಪೊಲೀಸರಿಗೆ ದೂರು ನೀಡಿದಾಗ ಪೊಲೀಸ್ ತನಿಖೆಯಲ್ಲಿ ಮಹಾರಾಷ್ಟ್ರದ ಎರಡು ಪ್ರಾದೇಶಿಕ ವಾಹಿನಿಗಳು ಹಾಗೂ ರಿಪಬ್ಲಿಕ್ ಟಿವಿಯ ಹೆಸರು ಕೇಳಿಬಂತು.
ಕೆಲವು ಕುಟುಂಬಗಳಿಗೆ ವಿತರಿಸುವುದಕ್ಕಾಗಿ ರಿಪಬ್ಲಿಕ್ ಟಿವಿ ಸೇರಿದಂತೆ ಎರಡು ವಾಹಿನಿಗಳಿಂದ ನೇರವಾಗಿ ಹಣ ಪಡೆದಿರುವುದನ್ನು ಮ್ಯಾಕ್ಸ್ ಮೀಡಿಯಾ ಮಾರ್ಕೆಟಿಂಗ್ ಸಂಸ್ಥೆಯ ಅಭಿಷೇಕ್ ಕೊಲ್ವಾಡೆ ಎಂಬಾತ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪತ್ರಿಕಾ ವರದಿಗಳು ಹೇಳಿವೆ. ಹಗರಣಕ್ಕೆಸಂಬಂಧಿಸಿದಂತೆ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಚಿಲ್ (ಬಾರ್ಕ್)ನ ಮಾಜಿ ಸಿಇಓ ರೊಮಿಲ್ ರಾಮ್ ಗರ್ಹಿಯಾ, ರಿಪಬ್ಲಿಕ್ ನೆಟ್ ವರ್ಕ್ ನ ಸಿಇಒ ವಿಕಾಸ್ ಖನ್ ಚಂದಾನಿ ಸೇರಿದಂತೆ 14ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು. ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಬಾರ್ಕ್ (ಪ್ರಸಾರ ವೀಕ್ಷಕರ ಸಂಶೋಧನಾ ಸಂಸ್ಥೆ) ಮಾಜಿ ಮುಖ್ಯಸ್ಥ ಪಾರ್ಥೋ ದಾಸ್ ಗುಪ್ತಾರ ನಡುವೆ ನಡೆದಿದ್ದ ವಾಟ್ಸಾಪ್ ಸಂದೇಶಗಳ ಸ್ಕ್ರೀನ್ ಶಾಟ್ ಗಳು ವೈರಲ್ ಆದ ಬಳಿಕ ಟಿ ಆರ್ ಪಿ ಹಗರಣದಲ್ಲಿ ಇವರಿಬ್ಬರ ಹೆಸರುಗಳು ಬಲವಾಗಿ ಕೇಳಿಬಂದಿದ್ದವು. ದಾಸ್ ಗುಪ್ತಾ 2013ರಿಂದ 2019ರವರೆಗೆ ಬಾರ್ಕ್ ಸಿಇಒ ಆಗಿದ್ದರು. ರಪಬ್ಲಿಕ್ ಟಿವಿಯ ಪರವಾಗಿ ಟಿ ಆರ್ ಪಿಯನ್ನು ನಿರ್ವಹಿಸುವುದಕ್ಕಾಗಿ ತಾನು ಅರ್ನಾಬ್ ರಿಂದ 40ಲಕ್ಷ ರೂಪಾಯಿಗಳನ್ನು ಪಡೆದಿರುವುದಾಗಿ ದಾಸ್ ಗುಪ್ತಾ ಮುಂಬೈ ಪೊಲೀಸರಿಗೆ ನೀಡಿದ ಕೈಬರಹದ ಹೇಳಿಕೆಯಲ್ಲಿ ತಿಳಿಸಿದ್ದಾರೆ, ಎಂದು ಇಂಡಿಯನ್ ಎಕ್ಸ್ಪ್ ಪ್ರೆಸ್ ಮತ್ತು ನ್ಯಾಷಿನಲ್ ಹೆರಾಲ್ಡ್ ಪತ್ರಿಕೆಗಳು ವರದಿ ಮಾಡಿವೆ. ಇದರ ಜೊತೆಗೆ ಈ ವಾಟ್ಸಾಪ್ ಸ್ಕ್ರೀನ್ ಶಾಟ್ ಗಳಲ್ಲಿ ಬಾಲಕೋಟ್ ದಾಳಿಯ ಮಾಹಿತಿ ಅರ್ನಬ್ ಗೆ ಮೊದಲೇ ತಿಳಿದಿತ್ತು, ಇವರಿಬ್ಬರ ನಡುವೆ ನಡೆದ ಸಂದೇಶಗಳಲ್ಲಿ ‘ಏನೋ ಒಂದು ನಡೆಯಲಿದೆ, ಸಾಮಾನ್ಯ ದಾಳಿಗಿಂತ ದೊಡ್ಡದಾಗಿರುತ್ತದೆ ಎಂದು ಅರ್ನಬ್ ಗೋಸ್ವಾಮಿ ಹೇಳಿರುವ ಸಂದೇಶದ ಸ್ಕ್ರೀನ್ ಶಾಟ್ ಕೂಡ ಹರಿದಾಡಿತ್ತು.
ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೊಸಿಯೇಷನ್ (ಎನ್ ಬಿ ಎ) ಹಿಂದಿ ಸುದ್ದಿ ವಾಹಿನಿ ಟಿವಿ9 ಭಾರತ್ ವರ್ಷ್ ವೀಕ್ಷಕರ ಸಂಖ್ಯೆಯನ್ನು ಕಳೆದ ಎಂಟು ವಾರಗಳಿಂದ ತನ್ನ ವೀಕ್ಷಕರ ಸಂಖ್ಯೆಯಲ್ಲಿ ದಿಡೀರ್ ಹೆಚ್ಚಿಸಿಕೊಂಡಿದೆ, ಇದು ನಕಲಿ ದತ್ತಾಂಶವನ್ನು ಆಧರಿಸಿದೆ ಎಂದು ಕಳೆದ ಅಕ್ಟೋಬರ್ ನಲ್ಲಿ ದೂರು ದಾಖಲಿಸಲಾಗಿತ್ತು. ಟಿ ಆರ್ ಪಿ ಎಂದರೆ ಟೆಲಿವಿಷನ್ ರೇಟಿಂಗ್ ಪಾಯಿಂಟ್. ಇದು ಟಿವಿ ವಾಹಿನಿಗಳ ರೇಟಿಂಗ್ ಮತ್ತು ಯಾವ ಯಾವ ಕಾರ್ಯಕ್ರಮಗಳನ್ನು ಎಷ್ಟು ಜನ ವೀಕ್ಷಿಸುತ್ತಿದ್ದಾರೆ, ಯಾವ ವಾಹಿನಿ ಮತ್ತು ಕಾರ್ಯಕ್ರಮವನ್ನು ಹೆಚ್ಚು ಜನ ವೀಕ್ಷಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.
ಟಿ ಆರ್ ಪಿ ಏಕೆ ಮುಖ್ಯ? ನಕಲಿ ಟಿ ಆರ್ ಪಿಗಳನ್ನು ಏಕೆ ಸೃಷ್ಟಿಸುತ್ತಾರೆ? ಮತ್ತು ಟಿ ಆರ್ ಪಿಗಾಗಿ ಏಕೆ ಹೀಗೆಲ್ಲಾ ಅವ್ಯವಹಾರಗಳು ನಡೆಯುತ್ತಿವೆ? ಎಂಬುದನ್ನು ಪರಿಶೀಲಿಸಿದರೆ ಜಾಹೀರಾತುದಾರರು ಮತ್ತು ಹೂಡಿಕೆದಾರರು ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಟಿ ಆರ್ ಪಿ ಸಹಕರಿಸುತ್ತದೆ. ಇದರ ಆದಾರದ ಮೇಲೆಯೇ ಜಾಹೀರಾತುದಾರರು ತಮ್ಮ ಜಾಹೀರಾತುಗಳನ್ನು ಎಲ್ಲಿ ಪ್ರದರ್ಶಿಸಬೇಕು? ಯಾವ ವಾಹಿನಿಯಲ್ಲಿ ಪ್ರಸಾರ ಮಾಡಬೇಕು? ಯಾವ ಕಾರ್ಯಕ್ರಮವನ್ನು ತಮ್ಮ ಜಾಹೀರಾತಿಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ. ಅದೇ ರೀತಿ ಹೂಡಿಕೆದಾರರಿಗೆ ತಾವು ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕೆಂಬುದನ್ನು ಅರಿತುಕೊಳ್ಳಲು ಟಿ ಆರ್ ಪಿ ಅನುವು ಮಾಡಿಕೊಡುತ್ತದೆ. ಯಾವುದೇ ಕಾರ್ಯಕ್ರಮದ ಟಿ ಆರ್ ಪಿಯಲ್ಲಿನ ಹೆಚ್ಚಳ ಅಥವಾ ಇಳಿಕೆ ಕಾರ್ಯಕ್ರಮ ಮತ್ತು ಟಿವಿ ವಾಹಿನಿಗಳ ಆದಾಯದ ಮೇಲೆ ನೇರವಾದ ಪರಿಣಮವನ್ನು ಬೀರುತ್ತದೆ. ಟಿವಿ ಚಾನಲ್ ಗಳ ಪ್ರಮುಖ ಆದಾಯದ ಮೂಲ ಜಾಹೀರಾತು. ಜಾಹೀರಾತುಗಳ ಅರಿವಿನ ಪ್ರಮಾಣ ಕಡಿಮೆಯಾದರೆ ಟಿವಿ ವಾಹಿನಿ ನಷ್ಟಕ್ಕೆ ನೂಕಲ್ಪಡುತ್ತದೆ. ಟಿ ಆರ್ ಪಿ ಕಡಿಮೆ ಎಂದರೆ ಜನರು ಅಂತಹ ಕಾರ್ಯಕ್ರಮ ಅಥವಾ ಟಿವಿ ವಾಹಿನಿಯನ್ನು ಕಡಿಮೆ ನೋಡುತ್ತಿದ್ದಾರೆ ಎಂದರ್ಥ. ಆಗ ಜಾಹೀರಾತುದಾರರು ಅಂತಹ ಟಿವಿ ವಾಹಿನಿಗಳಿಗೆ ಕಡಿಮೆ ಜಾಹೀರಾತುಗಳನ್ನು ನೀಡುತ್ತಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಟಿ ಆರ್ ಪಿಯು ಟಿವಿ ವಾಹಿನಿಯನ್ನು ಮಾತ್ರ ಅವಲಂಬಿಸದೆ ಕಾರ್ಯಕ್ರಮಗಳನ್ನೂ ಕೂಡ ಅವಲಂಬಿಸಿರುತ್ತದೆ. ಮುಖ್ಯವಾಗಿ ಟಿ ಆರ್ ಪಿ ಜಾಹೀರಾತುಗಳನ್ನು ಪಡೆದುಕೊಳ್ಳಲು ಮತ್ತು ಜಾಹೀರಾತಿಗೆ ಬೆಲೆ ನಿಗದಿ ಮಾಡಲು ಪ್ರಮುಖ ಮಾನದಂಡವಾಗಿದೆ. ಸುದ್ದಿ ಬಿತ್ತರಿಸಿದೊಡನೆ ಅಥವಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಮಾತ್ರಕ್ಕೆ ಮಾಧ್ಯಮ ಸಂಸ್ಥೆಗಳಿಗೆ ಹಣ ಹರಿದುಬರುವುದಿಲ್ಲ. ಇವುಗಳ ಆದಾಯದ ಮೂಲ ಜಾಹೀರಾತುಗಳು.
ಟಿ ಆರ್ ಪಿಯನ್ನು ಲೆಕ್ಕಾಚಾರ ಮಾಡಲು ಪೀಪಲ್ ಮೀಟರ್ ಮತ್ತು ಪಿಕ್ಚರ್ ಮ್ಯಾಪಿಂಗ್ ಎಂಬ ಎರಡು ಎಲೆಕ್ಟ್ರಾನಿಕ್ ವಿಧಾನಗಳನ್ನು ಬಳಸಲಾಗುತ್ತದೆ. ಪೀಪಲ್ ಮೀಟರ್ ಸಾಧನವನ್ನು ಕೆಲವು ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತದೆ ಅಥವಾ ಆಯ್ದ ಮನೆಗಳಲ್ಲಿ ಇಡಲಾಗಿರುತ್ತದೆ. ಇದಕ್ಕಾಗಿ ಎಲ್ಲರ ಮನೆಯಲ್ಲಿಯೂ ಈ ಸಾಧನವನ್ನು ಅಳವಡಿಸಲಾಗುವುದಿಲ್ಲ ಬದಲಾಗಿ ಕೆಲವು ಮೆನೆಗಳನ್ನು ಮಾದರಿಯಾಗಿ ತೆಗೆದುಕೊಂಡು ಅಳವಡಿಸುತ್ತಾರೆ. ಈ ವಿಧಾನದಲ್ಲಿ ಕೆಲವು ಸಾವಿರ ಜನರನ್ನು ಮಾದರಿ ರೂಪದಲ್ಲಿ ಸಮೀಕ್ಷೆ ಮಾಡಲಾಗುತ್ತದೆ. ಈ ಗ್ಯಾಜೆಟ್ ಕುಟುಂಬದ ಸದಸ್ಯರು ಅಥವಾ ಆಯ್ದ ಜನರು ವೀಕ್ಷಿಸಿದ ಟಿವಿ ವಾಹಿನಿ ಮತ್ತು ಕಾರ್ಯಕ್ರಮಗಳ ಕುರಿತು ಅಂಕಿ-ಅಂಶಗಳನ್ನು ಒದಗುಸುತ್ತವೆ. ಈ ಮೀಟರ್ ಮೂಲಕ ಟಿವಿ ವಾಹಿನಿ ಅಥವಾ ಕಾರ್ಯಕ್ರಮದ ಮಾಹಿತಿಯನ್ನು ಒಂದು ನಿಮಿಷದವರೆಗೆ ಇಂಟಾಮ್ ಮಾನಿಟರಿಂಗ್ ತಂಡ ಅಂದರೆ ಭಾರತೀಯ ಟೆಲಿವಿಷನ್ ಪ್ರೇಕ್ಷಕರ ಮಾಪನದಿಂದ ನಡೆಸಲಾಗುತ್ತದೆ. ಮಾಹಿತಿಯನ್ನು ವಿಶ್ಲೇಷಿಸಿದ ನಂತರ ವಾಹಿನಿ ಅಥವಾ ಕಾರ್ಯಕ್ರಮದ ಟಿ ಆರ್ ಪಿ ಏನು? ಎಂದು ತಂಡವು ನಿರ್ಧರಿಸುತ್ತದೆ. ಇನ್ನು ಪಿಕ್ಚರ್ ಮ್ಯಾಪಿಂಗ್ ನಲ್ಲಿ ಜನರು ವೀಕ್ಷಿಸುವ ಚಿತ್ರದ ಒಂದು ಸಣ್ಣ ಭಾಗವನ್ನು ಅಥವಾ ಅಂಕಿ-ಅಂಶಗಳನ್ನು ಚಿತ್ರಗಳ ರೂಪದಲ್ಲಿ ಮನೆಗಳ ಗುಂಪಿನಿಂದ ಸಂಗ್ರಹಿಸಲಾಗುತ್ತದೆ ನಂತರ ಟಿ ಆರ್ ಪಿಗಳನ್ನು ಲೆಕ್ಕ ಹಾಕಲು ವಿಶ್ಲೇಷಿಸಲಾಗುತ್ತದೆ. ಟಿ ಆರ್ ಪಿಯನ್ನು ಭಾರತೀಯ ಏಜೆನ್ಸಿಗಳಾದ ಇಂಟಾಮ್ ಮತ್ತು ಡಾರ್ಟ್ ಲೆಕ್ಕ ಹಾಕುತ್ತವೆ. ಇಂಟಾಮ್ ಭಾರತೀಯ ದೂರದರ್ಶನ ಪ್ರೇಕ್ಷಕರ ಮಾಪನವಾಗಿದೆ. ಡಾರ್ಟ್ ಗ್ರಾಮೀಣ ಜನರ ಟಿವಿ ನೋಡುವ ಮಾದರಿಯನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಬೌಗೋಳಿಕ, ಜನಸಂಖ್ಯೆ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಟವಿ ಪ್ರೇಕ್ಷಕರ ಗುಣ ಲಕ್ಷಣಗಳಿಗೆ ಅನುಗುಣವಾಗಿ ಸ್ಥಾಪನೆ ಸಮೀಕ್ಷೆಯ ವಿಧಾನದಲ್ಲಿ ಮನೆಗಳು ಮತ್ತು ವ್ಯಕ್ತಿಗಳ ನಿರ್ಧಿಷ್ಟ ವಿವರಗಳನ್ನು ಸಂಗ್ರಹಿಸಿ ಯಾದೃಚ್ಚಿಕವಾಗಿ ಮನೆಗಳನ್ನು ಆಯ್ಕೆಮಾಡಿಕೊಂಡು ಪೀಪಲ್ ಮೀಟರ್ ಗಳನ್ನು ಅಳವಡಿಸಲಾಗುತ್ತದೆ. ವ್ಯಯಕ್ತಿಕ ಗ್ರಾಹಕರಿಗೆ ಅಗತ್ಯವಿರುವ ಸ್ವರೂಪದಲ್ಲಿ ದತ್ತಾಂಶವನ್ನು ವರದಿ ಮಾಡಿ ವಿಶ್ಲೇಷಣೆ ಮಾಡಲು ಬಾರ್ಕ್ ಡೆಸ್ಕ್ ಟಾಪ್ ತಂತ್ರಾಂಶಗಳ್ನನು ಬಳಸುತ್ತದೆ.
ಹಾಗೆ ನೋಡಿದರೆ ಟಿ ಆರ್ ಪಿ ಹಗರಣ ಭಾರತದಲ್ಲಿ ಹೊಸತೇನೂ ಅಲ್ಲ. 2018ರಲ್ಲಿ ನಿರ್ಧಿಷ್ಟ ಹಿಂದಿ ಟಿವಿ ವಾಹಿನಿಯ ಪರವಾಗಿ ಅಕ್ರಮವಾಗಿ ಟಿ ಆರ್ ಪಿ ರೂಪಿಸಲು ಸಹಕರಿಸಿದರು ಎಂಬ ಆರೋಪದ ಮೇಲೆ ಗ್ವಾಲಿಯರ್ ನಲ್ಲಿ ಮೂವರನ್ನು ಬಂಧಿಸಲಾಗಿತ್ತು. ಮತ್ತೊಂದು ಹಗರಣದಲ್ಲಿ ತಮ್ಮ ವಾಹಿನಿಯ ನಿಜವಾದ ವೀಕ್ಷಕರನ್ನು ಮುಚ್ಚಿಟ್ಟು ತಪ್ಪು ಟಿ ಆರ್ ಪಿ ರೂಪಿಸಿದೆ ಎಂದು ಆರೋಪಿಸಿ ನವದೆಹಲಿಯ ಎನ್ ಡಿ ಟಿವಿ ದಿ ನಿಕ್ಸನ್ ಎಂಬ ರೇಟಿಂಗ್ ಕಂಪನಿ ವಿರುದ್ದ ಮೊಕದ್ದೊಮ್ಮೆಯನ್ನು ಹೂಡಿ ಶತಕೋಟಿ ಡಾಲರ್ ನಷ್ಟವನ್ನು ಭರಿಸುವಂತೆ ಕೋರಿತ್ತು. 2019ರಲ್ಲಿ ಎರಡು ತೆಲುಗು ಸುದ್ದಿ ವಾಹಿನಿಗಳಿಗೆ ಅನೂಕೂಲವಾಗುವಂತ ವೀಕ್ಷಕರ ಡೇಟಾವನ್ನು ಬಹಳ ನೈಪುಣ್ಯತೆಯಿಂದ ನಿರ್ವಹಿಸಿದೆ ಎಂದು ಆರೋಪಿಸಿ ಬಾರ್ಕ್ ಪೊಲೀಸ್ ಠಾಣೆಯಲ್ಲಿ ಏಳು ಆರೋಪಿಗಳ ವಿರುದ್ದ ದೂರು ದಾಖಲಿಸಿತ್ತು.
ಇತ್ತೀಚಿಗೆ ಕನ್ನಡ ವಾಹಿನಿಗಳಲ್ಲೂ ಟಿ ಆರ್ ಪಿ ಹಗರಣದ ವಾಸನೆ ಬರುತ್ತಿದೆ. ಕನ್ನಡ ಟಿವಿ ವಾಹಿನಿಯೊಂದು ಟಿ ಆರ್ ಪಿ ಯನ್ನು ಹೆಚ್ಚಿಸಿಕೊಳ್ಳಲು ನಕಲಿ ವಿಧಾನಗಳನ್ನು ಬಳಸಿರುವುದು ಕಳೆದ ತಿಂಗಳು ಕಂಡು ಬಂದಿದೆ. ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುವ ದಾರಾವಾಹಿಗಳ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಟಿ ಆರ್ ಪಿಗಳನ್ನು ನಕಲಿ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ನಾಲ್ಕು ಜನರನ್ನು ಕಳೆದ ತಿಂಗಳು ಬಂದಿಸಿದ್ದರು ಈ ಸಂಬಂಧ ತನಿಖೆ ಮುಂದುವರಿದಿದೆ.
ಸುದ್ದಿ ಇಂದು ಸುದ್ದಿಯಾಗಿ ಉಳಿದಿಲ್ಲ ಬದಲಾಗಿ ಮನರಂಜನೆಯಾಗಿ ಬದಲಾಗಿದೆ. ಟಿ ಆರ್ ಪಿಯ ದಾವಂತದಲ್ಲಿ ಸುದ್ದಿ ವಾಹಿನಿಗಳ ನಿಖರತೆ, ವಸ್ತುನಿಷ್ಟತೆ ಹಾಗೂ ಸಾಮಾಜಿಕ ಕಳಕಳಿಗಳು ಕೊಚ್ಚಿಕೊಂಡು ಹೋಗಿವೆ. ಇದು ಪ್ರೇಕ್ಷಕರು ದುರಂತವೇ ಸರಿ. ಬ್ರಷ್ಟರಿಗೆ ಸಿಂಹಸ್ವಪ್ನವಾಗಬೇಕಾಗಿದ್ದ, ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಭಾಗವಾದ ಟಿವಿ ವಾಹಿನಿಗಳು ತಾವೇ ಬ್ರಷ್ಟಾಚಾರದಲ್ಲಿ ತೊಡಗಿರುವುದು ಎಷ್ಟರಮಟ್ಟಿಗೆ ಸಮರ್ಥನೀಯ? ವೀಕ್ಷಕರಿಗೆ ಮತ್ತು ಜಾಹೀರಾತು ನೀಡುವ ಸಂಸ್ಥೆಗಳಿಗೆ ಮಾಡುವ ದ್ರೋಹ ಇದಲ್ಲವೆ?
###
-ಡಾ.ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346