ಅನುದಿನ ಕವನ-೫೪ (ಕವಿ: ನಾಗೇಶ ನಾಯಕ್, ಉಡಿಕೇರಿ, ಬೈಲಹೊಂಗಲ)

ಅಧ್ಯಾಪಕ ನಾಗೇಶ ನಾಯಕ್ ಅವರು ಬಹುಮುಖ ಪ್ರತಿಭೆ. ಅಧ್ಯಾಪನದ ಜತೆ ಸಾಹಿತ್ಯ ಕೃಷಿಯಲ್ಲೂ ಗಮನ ಸೆಳೆದವರು. ಅಂಕಣ, ವ್ಯಕ್ತಿ ಪರಿಚಯ, ಕವಿತೆ, ಗಜಲ್, ಉಪನ್ಯಾಸ ಹೀಗೆ ಸಾಹಿತ್ಯ ಚಟುವಟಿಕೆಯಲ್ಲಿ ಪ್ರೀತಿಯಿಂದ ತೊಡಗಿಸಿಕೊಂಡವರು.
ನಮ್ಮ ಕರ್ನಾಟಕ ಕಹಳೆ ಡಾಟ್ ಕಾಮ್ ಸಾಹಿತ್ಯ-ಸಂಸ್ಕೃತಿ ಬಳಗದ ಹೆಮ್ಮೆಯ ಸದಸ್ಯರು. ಇಂದು ತಮ್ಮ 46ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಾಗೇಶ ನಾಯಕ್ ಅವರ ಗಜಲ್ ಇಂದಿನ ಅನುದಿನ ಕವನದ ಗೌರವಕ್ಕೆ ಪಾತ್ರವಾಗಿದೆ.
ಈ ಗಜಲ್ ನ್ನು ಪ್ರಕಟಿಸುವುದರ ಮೂಲಕ karnatakakahale.com
ನಾಗೇಶ ನಾಯಕ್ ಅವರ ಜನುಮದಿನಕ್ಕೆ ಹಾರ್ಧಿಕ ಶುಭಾಶಯ ಕೋರುತ್ತಿದೆ.
(ಸಂಪಾದಕೀಯ ಬಳಗ)👇

ಗಜ಼ಲ್
••••••••
ಕರುಣೆಯಿಲ್ಲದವರ ಮುಂದೆ ಕೈಚಾಚಬೇಡ ಕೊನೆಗೂ ದಕ್ಕುವುದು ನಿರಾಸೆಯೇ
ಹೃದಯದ ಮಾತಿಗೆ ಕಿವಿಗೊಡದವರ ಬಳಿ ಬೇಡಬೇಡ ಕೊನೆಗೂ ದಕ್ಕುವುದು ನಿರಾಸೆಯೇ

ಅವರವರ ಖುಷಿಯಲ್ಲಿಯೇ ಎಲ್ಲರೂ ಮೈಮರೆತಿದ್ದಾರೆ ನಿನ್ನ ದೀನತೆ ಯಾವ ಲೆಕ್ಕ
ಮನಸ ಮಾತ ಕೇಳದವರ ಇದಿರು ನಿರೀಕ್ಷೆ ಇಟ್ಟುಕೊಳ್ಳಬೇಡ ಕೊನೆಗೂ ದಕ್ಕುವುದು ನಿರಾಸೆಯೇ

ಪ್ರೀತಿಗಾಗಿಯೇ ಗೋಗರೆವ ಗರೀಬ ನೀನು ಸಿಗದ ಉಡುಗೊರೆಗೆ ಹಳಹಳಿಸದಿರು
ಬರೀ ಮಾತಿನಲ್ಲಿಯೇ ತಾರೆಗಳ ತೋರಿಸುವವರ ಹತ್ತಿರ ಕೈಜೋಡಿಸಬೇಡ ಕೊನೆಗೂ ದಕ್ಕುವುದು ನಿರಾಸೆಯೇ

ನನಗಾಗಿ ಜೀವ ಕೊಡುತ್ತಾರೆ ಎಂದು ತಿಳಿದದ್ದು ನಿನ್ನದೇ ಭ್ರಮೆ ಕಳಚಿಬಿಡು
ಸುಳ್ಳನ್ನೇ ಧರಿಸಿ ನಟಿಸುವವರ ಮೇಲೆ ನಂಬಿಕೆಯಿಡಬೇಡ ಕೊನೆಗೂ ದಕ್ಕುವುದು ನಿರಾಸೆಯೇ

ಇಲ್ಲಿ ಯಾರಿಗೂ ಮಾಡಿದ ಆಣೆ ಪ್ರಮಾಣಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲ ‘ನಾಗೇಶಿ’
ಸುಮ್ಮನೆ ಪ್ರೀತಿ ನಿಯತ್ತನ್ನು ಎಲ್ಲರಿಂದ ಅಪೇಕ್ಷೆ ಪಡಬೇಡ ಕೊನೆಗೂ ದಕ್ಕುವುದು ನಿರಾಸೆಯೇ

-ನಾಗೇಶ್ ಜೆ. ನಾಯಕ, ಸಾಹಿತಿ,
ಅಧ್ಯಾಪಕರು
ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ,
ಉಡಿಕೇರಿ-೫೯೧೧೦೪
ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ.
ಮೊಬೈಲ್-೯೯೦೦೮೧೭೭೧೬