ಅನುದಿನ ಕವನ-೫೫ (ಕವಿ: ಮಹ್ಮದಗೋರಿ.ಡಿ.ಬಾವಾಖಾನ)

ಕವಿ ಪರಿಚಯ:
ವೀರ ವನಿತೆ ಮಲ್ಲಮ್ಮನ ಬೆಳವಡಿ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹ್ಮದಗೋರಿ.ಡಿ.ಬಾವಾಖಾನ ಅವರು ಸವದತ್ತಿ ತಾಲೂಕಿನ ಸುತಗಟ್ಟಿ ಗ್ರಾಮದವರು. ತಮ್ಮ ಉತ್ತಮ ಅದ್ಯಾಪನದಿಂದ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರು. ಶಿಕ್ಷಕ ವೃತ್ತಿ ಜತೆ ಬಾವಾಖಾನ ಅವರು ಕವಿಗಳಾಗಿಯೂ ಗಮನ ಸೆಳೆದಿದ್ದಾರೆ. ಉತ್ತಮ‌ವಾಗ್ಮಿಗಳು, ಸಭೆ ಸಮಾರಂಭಗಳಲ್ಲಿ ಉತ್ತಮ ನಿರೂಪಕರಾಗಿ ಸಂಘಟಕರು, ಸಭಿಕರಿಂದ ಸೈ ಎನಿಸಿಕೊಂಡವರು.
ಬಾವಾಖಾನ ಅವರು ಬಡತನವೆಂಬ ಬೆಂಕಿಯಲ್ಲಿ ಅರಳಿದ ಹೂ…ಕಡು ಬಡತನದಲ್ಲಿ ಶಿಕ್ಷಣ ಪಡೆದು ಅಧ್ಯಾಪಕ ವೃತ್ತಿಯನ್ನು ಪ್ರೀತಿಯಿಂದ ಆಯ್ಕೆ ಮಾಡಿಕೊಂಡವರು.
ಇವರ ಬರಹ, ಕಾರ್ಯ ಚಟುವಟಿಕೆಗಳು ಸಾಮರಸ್ಯ, ಭಾವೈಕ್ಯತೆಯ ಪೂರಕವಾಗಿದ್ದು ಇತರರಿಗೆ ಮಾದರಿಯಾಗಿವೆ.
ಇಂದಿನ ‘ಅನುದಿನ ಗೌರವ’ ಕ್ಕೆ ಮಹ್ಮದಗೋರಿ.ಡಿ.ಬಾವಾಖಾನ ಅವರ ಗಜಲ್ ಪಾತ್ರವಾಗಿದೆ…👇

ಗಜಲ್…..
ಧಗಧಗನೆ ಸೂರ್ಯ ಉರಿದರೂ ಸ್ವಚ್ಛಂದ ಬೆಳಕು ಮೂಡಿ ಜೀವಜಗಕೆ ಚೈತನ್ಯ ನೀಡುತಿರುವುದು||
ಕೊತಕೊತನೆ ಭೂಮಿ ಕುದಿದರೂ ಭರವಸೆಯ ತಂಗಾಳಿ ತೀಡಿ ಜೀವಜಗಕೆ ಚೈತನ್ಯ ನೀಡುತಿರುವುದು||

ಜ್ವಾಲಾಮುಖಿಗಳಾಗುತ್ತಿವೆ ಅಸಹಾಯಕರ ಕಣ್ಣೀರ ಹನಿಗಳು|
ಪ್ರಳಯದ ಜಲರಾಶಿ ಹರಿದರೂ ಭೂರಮೆಯು ಅನ್ನ ನೀಡಿ ಜೀವಜಗಕೆ ಚೈತನ್ಯ ನೀಡುತಿರುವುದು||

ಕಂದಕಗಳಾಗುತ್ತಿವೆ ಕಾಣದ ಕೈಗಳಿಂದ ಬೆಸೆದ ಮನಸ್ಸುಗಳು|
ಒಡಲು ಕಂಪಿಸಿ ಪದರಗಳು ಸರಿದರೂ ಧರೆ ಮತ್ತೆ ಒಂದುಗೂಡಿ ಜೀವಜಗಕೆ ಚೈತನ್ಯ ನೀಡುತಿರುವುದು||

ಸುಟ್ಟು ಬೂದಿಯಾಗುತ್ತಿವೆ ದ್ವೇಷದ ಬೆಂಕಿಯಲ್ಲಿ ಬೆಂದ ಸಂಬಂಧಗಳು|
ಕಾಡ್ಗಿಚ್ಚಿನಿಂದ ಕರಕಲಾದರೂ ಕಾಡುಗಳು ಚೈತ್ರಕ್ಕೆ ಚಿಗುರಿ ಜೀವಜಗಕೆ ಚೈತನ್ಯ ನೀಡುತಿರುವುದು||

ಸಮಜಾಯಿಸಿ ನೀಡುತ್ತಿವೆ ‘ಮುಹಮ್ಮದ’ನ ಅಂತರಂಗದ ಭಾವಗಳು|
ಆಪತ್ತುಗಳ ಆಗರವೇ ಬಂದೊದಗಿದರೂ ಮೆಟ್ಟಿ ನಿಲ್ಲುವ ಗುಣ ಕಲಿ ನಿಸರ್ಗ ನೋಡಿ ಜೀವಜಗಕೆ ಚೈತನ್ಯ ನೀಡುತಿರುವುದು||

-ಮಹ್ಮದಗೋರಿ.ಡಿ.ಬಾವಾಖಾನ, ಅಧ್ಯಾಪಕರು

ಸುತಗಟ್ಟಿ.