ಮಾಧ್ಯಮ ಲೋಕ-೦೫ (ಅಂಕಣಕಾರರು: ಡಾ. ಅಮ್ಮಸಂದ್ರ ಸುರೇಶ್, ಮೈಸೂರು)

  • ಎಂದಿಂದಿಗೂ ಸಂವಹನ ಸಂಗಾತಿ ಭಾರತೀಯ ಅಂಚೆ”
    -ಡಾ. ಅಮ್ಮಸಂದ್ರ ಸುರೇಶ್‌
  • ಅಂಚೆ ಇಲಾಖೆ ಸಂವಹನದ ಜೊತೆಗೆ 150ಕ್ಕೂ ಹೆಚ್ಚು ವರ್ಷಗಳಿಂದ ಜನಸಾಮಾನ್ಯರು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರ ಸಾಮಾಜಿಕ ಮತ್ತು ಆರ್ಥಿಕ ಒಳಗೊಳ್ಳುವಿಕೆಯಲ್ಲಿ ಪ್ರಮುಖ ಸ್ಥಾನ ವಹಿಸಿದೆ.1854ರಿಂದಲೂ ಭಾರತೀಯರ ಅಚ್ಚು ಮೆಚ್ಚಿನ ಮತ್ತು ನಂಬಿಕಸ್ತ ಸಂವಹನ ಮಾಧ್ಯಮವಾಗಿ ಉಳಿದುಕೊಂಡು ಬಂದಿದೆ. ಅಂಚೆಯನ್ನು ಆರಂಭಿಸಿದ್ದು ಸೇವಾ ಕ್ಷೇತ್ರದ ರೂಪದಲ್ಲಿ ಹಾಗೂ ಪ್ರಾಥಮಿಕವಾಗಿ ದೂರ ದೂರದ ಜನರ ನಡುವೆ ಸಂವಹನವನ್ನು ಸುಲಭವಾಗಿಸುವ ಉದ್ದೇಶದಿಂದ ಇಂದಿಗೂ ಕನ್ಯಾಕುಮಾರಿಯಂದ ಕಾಶ್ಮೀರದವರೆಗೂ ಅಂಚೆಇಲಾಖೆ ಕಾಲಿಡದ ಪ್ರದೇಶವಿಲ್ಲ.

ದೇಶದಾದ್ಯಂತ ಒಟ್ಟು1,55,531 ಅಂಚೆ ಕಛೇರಿಗಳನ್ನು ಒಳಗೊಂಡಿರುವ ಭಾರತೀಯ ಅಂಚೆ ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು 1,39,067 ಶಾಖೆಗಳನ್ನು ಹೊಂದುವ ಮೂಲಕ ವಿಶ್ವದಲ್ಲೆ ಅತಿ ದೊಡ್ಡದಾದ ಸಂಪರ್ಕಜಾಲವನ್ನು ಹೊಂದಿರುವ ಅಂಚೆ ಜಾಲ ಎಂಬ ಕೀರ್ತಿಗೆ ಒಳಗಾಗಿದೆ.

ಪೋಸ್ಟ್‌ ಕಾರ್ಡ್‌ ಮತ್ತು ಇನ್‌ಲ್ಯಾಂಡ್ ಲೆಟರ್‌ಗಳು ಬಡವರ ಏಕಮೇವ ಸಂವಹನ ಮಾಧ್ಯಮವಾಗಿ 80ರ ದಶಕದವರೆಗೂ ಉಳಿದುಕೊಂಡು ಬಂದಿದ್ದವು. ದೂರವಾಣಿ ಕ್ಷೇತ್ರಕ್ಕೆ ಆಗಮಿಸಿದ ಉನ್ನತ ತಂತ್ರಜ್ಞಾನ ಮುಖ್ಯವಾಗಿ ಮೊಬ್ಯೆಲ್‌ ಪೋನ್‌ಗಳ ಆಗಮನ ಪೋಸ್ಟ್‌ ಕಾರ್ಡ್‌ ಮತ್ತುಇನ್‌ಲ್ಯಾಂಡ್ ಲೆಟರ್‌ಗಳಿಂದ ಬಹಳ ಮಟ್ಟಿಗೆ ಜನ ಸಾಮಾನ್ಯರನ್ನು ವಿಮುಖರನ್ನಾಗಿಸುವಂತೆ ಮಾಡಿತು. ಇಂದಿಗೂ ಭಾರತೀಯ ಅಂಚೆ ಸಂವಹನವನ್ನೆ ತನ್ನ ಪ್ರಾಥಮಿಕ ಆಧ್ಯತೆಯ ಕ್ಷೇತ್ರವನ್ನಾಗಿ ಉಳಿಸಿಕೊಂಡು ಬಂದಿದೆ.
ಹೇಗೆ ಟಿ.ವಿ. ಮಾಧ್ಯಮಬಂದಾಗದೃಶ್ಯಮಾಧ್ಯಮದಮುಂದೆಪತ್ರಿಕೆಗಳು ಮುಚ್ಚಿ ಹೋಗುತ್ತವೆ ಎಂಬ ಆತಂಕ ಇತ್ತೋ ಅದೇ ಅತಂಕ ಕೊರಿಯರ್‌ ಹಾಗೂ ಮೊಬ್ಯೆಲ್‌ ಪೋನ್‌ಗಳ ಆಗಮನವಾದಾಗ ಭಾರತೀಯ ಅಂಚೆ ವಿಷಯದಲ್ಲೂ ಸಹಜವಾಗಿಯೇ ಉಂಟಾಗಿತ್ತು.
ಆದರೆ ನೂತನ ತಂತ್ರಜ್ಞಾನ ಹಾಗೂ ಹೊಸ ಮತ್ತು ವ್ಯೆವಿದ್ಯಮಯ ವ್ಯವಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಂಚೆ ಇಲಾಖೆ ತನ್ನ ಅಸ್ತಿತ್ವವನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದೆ. ಇಂದು ಅಂಚೆ ಕಾರ್ಡಿನಿಂದಿಡಿದು ಇ-ಕಾಮರ್ಸ್ ತನಕ, ಸಣ್ಣ ಉಳಿತಾಯದಿಂದ ಇಂಟರ್‌ನೆಟ್ ಬ್ಯಾಂಕಿಂಗ್ (ಏಟಿಎಂ ಒಳಗೊಂಡಂತೆ)ವರೆಗೆ ಹೆಮ್ಮರವಾಗಿ ಬೆಳೆದುನಿಂತಿದೆ. ಭಾರತೀಯರು ಇಟ್ಟಿರುವ ʼನಂಬಿಕೆʼಯೆ ಇಲಾಖೆ ಇಂದು ಈ ಮಟ್ಟಕ್ಕೆ ಬೆಳೆದು ನಿಲ್ಲಲು ಕಾರಣವಾಗಿದೆ.
ಅತ್ಯಮೂಲ್ಯ, ಪ್ರಾಮಾಣಿಕ ಹಾಗೂ ಅತ್ಯುತ್ತಮ ಬುದ್ಧಿಮತ್ತೆಯ ಮಾನವ ಸಂಪನ್ಮೂಲವನ್ನು ಹೊಂದಿರುವ ಇಲಾಖೆ ತನ್ನಲ್ಲಿರುವ ಮಾನವಸಂಪನ್ಮೂಲವನ್ನು ಅಭಿವೃದ್ದಿಪಡಿಸಲು ಮತ್ತು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಿದ್ದರನ್ನಾಗಿ ಮಾಡಲು ಗಾಜಿಯಾಬಾದ್‌ನ “ರಫೀಕ್‌ ಕಿದ್ವಾಯಿ ನ್ಯಾಷಿನಲ್‌ ಅಕಾಡೆಮಿ”, ಮೈಸೂರು, ದರ್ಭಾಂಗ್‌, ವಡೋದರ, ಮದುರೈ ಸೇರಿದಂತೆ ದೇಶದ ವಿವಿದೆಡೆ ತನ್ನದೇ ಪ್ರಾಧೇಶಿಕ ತರಬೇತಿ ಕೇಂದ್ರಗಳನ್ನು ಹೊಂದಿದ್ದು ಈ ಕೇಂದ್ರಗಳು ಅತ್ಯುತ್ಕೃಷ್ಟ ತರಬೇತಿ ಕೇಂದ್ರಗಳಾಗಿ ಇಂದು ಹೊರ ಹೊಮ್ಮಿವೆ.
ಉನ್ನತ ತಂತ್ರಜ್ಞಾನ ಮತ್ತು ಅಂಚೆ ಕಛೇರಿಗಳನ್ನು ಗ್ರಾಹಕ ಸ್ನೇಹಿ ಹಾಗೂ ಕಾರ್ಪೋರೇಟ್‌ ಮಾದರಿಯ ಕೇಂದ್ರಗಳನ್ನಾಗಿ ಮಾಡಲು 2008ರಲ್ಲಿ ʼಪ್ರಾಜೆಕ್ಟ್‌ ಹ್ಯಾರೋ ʼಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ಅಂದಿನಿಂದ ಶುರುವಾದ ತಂತ್ರಜ್ಞಾನ ಮತ್ತು ಆಧುನೀಕತೆಯನ್ನು ಅಳವಡಿಸಿಕೊಳ್ಳುವ ಕಾರ್ಯಕ್ರಮಗಳು ಇಂದಿಗೂ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿವೆ. ನೂತನ ತಂತ್ರಜ್ಞಾನವನ್ನು ಅಬಿವೃದ್ದಿಪಡಿಸುವ ಉದ್ದೇಶದಿಂದ ಮೈಸೂರಿನಲ್ಲಿ ಉತ್ಕೃಷ್ಟ ಅಂಚೆ ತಂತ್ರಜ್ಞಾನ ಸಂಸ್ಥೆಯನ್ನು ಆರಂಭಿಸಲಾಗಿದೆ.
ಅತ್ಯುತ್ತಮ ಸಾರ್ವಜನಿಕ ಆಡಳಿತಕ್ಕಾಗಿ ಅಂಚೆಇಲಾಖೆ 2008-2009ರ ಸಾಲಿನ ಪ್ರಧಾನಮಂತ್ರಿಗಳ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಕೊರೊನಾ ಸಮಯದಲ್ಲಿ ಲಾಜಿಸ್ಟಿಕ್ ಸೇವೆ ಸಲ್ಲಿಸಿದ ಸಂಸ್ಥೆಗಳ ಪೈಕಿ ಅಂಚೆ ಇಲಾಖೆ ಅತ್ಯುತ್ತಮ ಸೇವೆ ನೀಡಿದ್ದಕ್ಕಾಗಿ ಪ್ರಥಮ ಸ್ಥಾನವನ್ನು ಗಳಿಸಿದೆ.

ಇಂದು ಸಂವಹನ, ಉಳಿತಾಯ ಹಾಗೂ ವ್ಯವಹಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅವರಿಸಿಕೊಂಡಿರುವ ಅಂಚೆ ಇಲಾಖೆ ಪತ್ರ ವ್ಯವಹಾರ, ಸ್ಪೀಡ್‌ ಪೋಸ್ಟ್‌, ಬ್ಯುಸಿನೆಸ್‌ ಪಾರ್ಸಲ್‌, ಇ-ಅಂಚೆ, ಡ್ಯೆರೆಕ್ಟ್‌ ಪೋಸ್ಟ್‌, ಮೀಡಿಯಾ ಪೋಸ್ಟ್‌, ಇ-ಮನಿ ಆರ್ಡರ್‌, ಹಣ ವರ್ಗಾವಣೆ, ವಿಶೇಷ ಉಳಿತಾಯ ಸೇವೆಗಳಾದ ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್‌ ವಿಕಾಸ್‌ ಪತ್ರ ಆವರ್ತಿತ ಠೇವಣಿ ಮತ್ತು ನಿಶ್ವಿತ ಠೇವಣಿಗಳು, ಗೋಲ್ಡ್‌ ಬಾಂಡ್‌, ʼಬೇಟಿ ಬಚಾವೋ ಬೇಟಿ ಪಡಾವೋʼ ಯೋಜನೆಯ ಫಲವಾಗಿ ಹೊರ ಹೊಮ್ಮಿದ ʼಸುಕನ್ಯಾಸಮೃದ್ದಿ, ಜನಸಾಮಾನ್ಯರಿಗೆ ಅತ್ಯಗತ್ಯವಾಗಿಬೇಕಾಗಿರುವ ಆಧಾರ್‌ ಸೇವೆ, ಪಾಸ್‌ಪೋರ್ಟ್‌ ಸೇವೆ, ಇಂಡಿಯಾಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಮೂಲಕ ಮೊಬ್ಯೆಲ್‌ ಬ್ಯಾಂಕಿಂಗ್‌,ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಹೀಗೆ ತರಹೇವಾರಿ ಯೋಜನೆಗಳನ್ನು ಒಳಗೊಂಡಿದೆ.
ಜನ ಸಾಮಾನ್ಯರು ಕೇವಲಬೆರಳಚ್ಚು ನೀಡುವ ಮೂಲಕ ತಾವಿದ್ದಲ್ಲೆ ಹಣ ಪಡೆಯುವ ವಿಶಿಷ್ಠ ಯೋಜನೆಯನ್ನು ʼಇಂಡಿಯಾಪೋಸ್ಟ್‌ ಪೇಮೆಂಟ್‌ ಬ್ಯಾಂಕ್ʼಮೂಲಕ‌ ಪರಿಚಯಿಸಿದ್ದು ಇದು ಗ್ರಾಮೀಣ ಪ್ರದೇಶದ ಜನರಿಗೆ ಉಪಯುಕ್ತ ಮತ್ತು ಅತ್ಯಂತ ಜನಪ್ರೀಯ ಯೋಜನೆಯಾಗಿದೆ. ದೇಶದಾದ್ಯಂತ ಎಲ್ಲಾ ಅಂಚೆ ಕಛೇರಿಗಳಲ್ಲೂ ಈ ಸೇವೆ ಲಭ್ಯವಿದೆ.

ಗ್ರಾಹಕರು ನಡೆಸುವ ಪತ್ರ ವ್ಯವಹಾರಗಳಿಗಾಗಿ ಒಂದೇ ಕಡೆ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡಲು ದೇಶದಾದ್ಯಂತ “ಬ್ಯುಸಿನೆಸ್‌ ಪೋಸ್ಟ್‌ ಸೆಂಟರ್‌”ಗಳನ್ನುಆರಂಭಿಸಲಾಗಿದೆ. ಈ ಕೇಂದ್ರಗಳು ಪತ್ರಗಳನ್ನು ಗ್ರಾಹಕರ ಸ್ಥಳದಂದಲೇ ಸಂಗ್ರಹಿಸುವ ಕಾರ್ಯವನ್ನು ಮಾಡುತ್ತವೆ ಮತ್ತು ಗ್ರಾಹಕರು ಮುದ್ರಣಾಲಯದಿಂದ ನೇರವಾಗಿ ಇಂತಹ ಕೇಂದ್ರಗಳಿಗೆ ತಾವು ಅಂಚೆ ಮೂಲಕ ಕಳುಹಿಸಬೇಕಾದ ಸಾಮುಗ್ರಿಗಳನ್ನು ತಂದರೆ ಇಲ್ಲಿಯೇ ಅವುಗಳನ್ನು ಮಡಚುವ, ವಿಳಾಸವನ್ನು ಅಂಟಿಸುವುದರಿಂದಿಡುದು ಸಂಪೂರ್ಣವಾಗಿ ಎಲ್ಲವನ್ನೂ ಸಿದ್ದಪಡಿಸಿ ಅವುಗಳನ್ನು ಕಳುಹಿಸಿಕೊಡುವ ಕೆಲಸವನ್ನು ಮಾಡುತ್ತವೆ. ಕರ್ನಾಟಕದಲ್ಲಿ ಮಣಿಪಾಲ, ಮಂಗಳೂರು, ಉಡುಪಿ, ಮೈಸೂರು ಹಾಗೂ ಬೆಂಗಳೂರುಗಳಲ್ಲಿ ಇಂತಹ ಕೇಂದ್ರಗಳಿವೆ.
ಅಂತರ್‌ಜಾಲ ಆಧಾರಿತ ಟ್ರ್ಯಾಕ್‌ ಅಂಡ್‌ ಟ್ರೇಸ್‌ ಸಿಸ್ಟಮ್‌, ವಿವಿದ ಸೇವೆಗಳನ್ನುಒಳಗೊಂಡ ಅಂತರ್‌ಜಾಲ ತಾಣ ಹಾಗೂ ಮೊಬೈಲ್‌ ಆಪ್‌ಗಳನ್ನು ಒಳಗೊಂಡಿರುವ ಇಲಾಖೆ ತನ್ನದೇ ಆದ ಬ್ಯುಸಿನೆಸ್‌ ಡೆವಲೊಪ್ಮೆಂಟ್ ಮತ್ತು ಮಾರ್ಕೆಟಿಂಗ್‌ ವಿಭಾಗವನ್ನು ಹೊಂದಿದೆ. ಸಿ ಎಸ್‌ ಐ, ಧರ್ಪಣ್‌ ಹಾಗೂ ಫಿನಾಕಲ್‌ ಯೋಜನೆಗಳ ಮೂಲಕ ತನ್ನ ಗ್ರಾಹಕರಿಗೆ ಕೋರ್‌ ಬ್ಯಾಂಕಿಂಗ್‌ ಮತ್ತು ಆನ್‌ ಲೈನ್‌ ವ್ಯವಹಾರವನ್ನು ಒದಗಿಸಿದೆ.

420 ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳು, 13,352 ಆಧಾರ್‌ ನೊಂದಣಿ ಮತ್ತು ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಿರುವ ಭಾರತೀಯ ಅಂಚೆ ಗ್ರಾಮೀಣ ಅಂಚೆ ಕಛೇರಿಗಳನ್ನು ಕೂಡ ಅಂತರ್‌ಜಾಲಸಂಪರ್ಕಕ್ಕೆ ಒಳಪಡಿಸಿದೆ. ನಾಗರೀಕರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಂಬಳ ವಿಲೆವಾರಿ, ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ಪಿಂಚಣಿ ವಿತರಣೆ ಮಾಡುವ ಇಲಾಖೆ ಫಲಾನುಭವಿಗಳ ಮನೆ ಬಾಗಿಲಿಗೆ ಯೋಜನೆಯ ಹಣ ವಿತರಿಸುವ ಮೂಲಕ, ಇಲಾಖೆಗಳಿರುವಡೆಗೆ ಜನರು ತೆರಳುತ್ತಿರವ ಈ ಸಮಯದಲ್ಲಿ ಇಲಾಖೆಯೇ ಜನಸಾಮಾನ್ಯರೆಡೆಗೆ ತೆರಳುವ ವಿಶಿಷ್ಠ ಯೋಜನೆಗಳನ್ನು ಹಾಕಿಕೊಂಡಿದೆ. ಇದೀಗ ಯುಪಿಐ ಪೇಮೇಂಟ್ ಕ್ಷೇತ್ರಕ್ಕೂ ಅಂಚೆ ಇಲಾಖೆ ‘ಡಾಕ್ ಪೇ’ ಯುಪಿಐ ಆ್ಯಪ್ ಮೂಲಕ ಇದುವರೆಗೂ ಗೂಗಲ್ ಪೇ, ಪೋನ್ ಪೇ, ಮುಂತಾದ ಖಾಸಗಿ ಸಂಸ್ಥೆಗಳು ಮಾತ್ರ ಹೊಂದಿದ್ದ ಯುಪಿಐ ವ್ಯವಹಾರವನ್ನೂ ಅಳವಡಿಸಿಕೊಳ್ಳುವ ಮೂಲಕ ಜನ ಸಾಮಾನ್ಯರಿಗೆ ಕರಾರುವಕ್ಕಾದ ಸೇವೆ ನೀಡುವ ಮೂಲಕ ಮತ್ತಷ್ಟು ಹತ್ತಿರ ಆಗಿದೆ.

ಅಂಚೆ ಕಛೇರಿಗಳಲ್ಲಿ ಇದೀಗ ನಿಮ್ಮ ಪತ್ರವ್ಯವಹಾರದಿಂದಿಡಿದು, ಜಾಹೀರಾತು, ಮಾರ್ಕೆಟಿಂಗ್‌, ಎಲ್ಲಾ ರೀತಿಯ ಬ್ಯಾಂಕಿಂಗ್‌ ಸೌಲಭ್ಯಗಳು, ಹಣ ವರ್ಗಾವಣೆ, ಆದಾರ್‌ ನೊಂದಣಿ ಹೀಗೆ ಅನೇಕ ಸೌಲಭ್ಯಗಳು ಒಂದೆಡೆ ದೊರೆಯುತ್ತವೆ. ನೀವು ಒಮ್ಮೆ ನಿಮ್ಮ ಸಮೀಪದ ಅಂಚೆ ಕಛೇರಿಗೆ ಭೇಟಿ ನೀಡುವ ಮೂಲಕ ಅಂಚೆ ಕುಟುಂಬದ ಸದಸ್ಯರಾಗುವ ಮೂಲಕ ಅಂಚೆ ಇಲಾಖೆಯೊಂದಿಗೆ ಕೈ ಜೋಡಿಸಿ.
###
-ಡಾ. ಅಮ್ಮಸಂದ್ರ ಸುರೇಶ್‌
ಇನ್ ಚಾರ್ಜ್, ಬ್ಯುಸಿನೆಸ್ ಪೋಸ್ಟ್ ಸೆಂಟರ್, ಮೈಸೂರು ಹಾಗೂ
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್:9448402346