ಉದಯೋನ್ಮುಖ ಕವಿ ವಿಜಯಭಾಸ್ಕರರೆಡ್ಡಿ….
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ವಿಜಯಭಾಸ್ಕರ ಭರವಸೆಯ ಕವಿ.
ಸಾಹಿತ್ಯಿಕ, ಪತ್ರಿಕೋದ್ಯಮದ ಮನೆಯಂಗಳದಲ್ಲಿ ಬೆಳದ ಇವರು ಈಗಾಗಲೇ ತಮ್ಮ ಕಾವ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪದವಿ,
ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ.ಪತ್ರಿಕೋದ್ಯಮ ವ್ಯಾಸಂಗ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಎರಡು ವರ್ಷ ಡಿಜಿಟಲ್ ಮೀಡಿಯಾದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ.
ಇವರ ‘ನೆನಪಿನ ಪಡಸಾಲೆ ‘ ಕವನಸಂಕಲನಕ್ಕೆ ಕಲಬುರಗಿ ವಿಶ್ವವಿದ್ಯಾಲಯದ 2020 ರ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ವಿಶೇಷ.
ಓದು,ಬರವಣಿಗೆ, ಫೋಟೋಗ್ರಫಿ, ಸುತ್ತಾಟ ಆಸಕ್ತಿ ಕ್ಷೇತ್ರ.
ಇಂದಿನ ‘ಅನುದಿನ ಕವನ’ದ ಗೌರವಕ್ಕೆ ವಿಜಯಭಾಸ್ಕರ ರೆಡ್ಡಿ ಅವರ ‘ನಿನ್ನ ಧ್ಯಾನದಲ್ಲಿ ನನಗೆ ಪರಿವೇ ಇಲ್ಲ’ ಕವಿತೆ ಪಾತ್ರವಾಗಿದೆ.👇
ನಿನ್ನ ಧ್ಯಾನದಲ್ಲಿ ನನಗೆ ಪರಿವೇ ಇಲ್ಲ
ಬಿಟ್ಟು ಬಿಡದೆ
ಚಳಿಯ ಗುಳ್ಳಿಗಳು
ಮೈ ಎಲ್ಲಾ ತುಂಬಿಕೊಳ್ಳುತ್ತಿವೆ
ಕಾಠಿಣ್ಯದ ಒಲವಿಗೆ
ನಿನ್ನ ಧ್ಯಾನದಲ್ಲಿ
ನನಗೆ ಪರಿವೆ ಇಲ್ಲದಂತಾಗಿದೆ
ಹೋಶ್ ಅಂತಾರಲ್ಲ
ಹಾ. ಅದೇ ಇಲ್ಲ.
ಹಗಲಲ್ಲಿ ಕಳೆದ ಎಲ್ಲಾ ಏಕಾಂತವು
ರಾತ್ರಿಯ ಚುಕ್ಕಿಗಳ ಹಾಗೇ
ಕಳೆದು ದೀರ್ಷವಾದ ನೆನಪಿಗೇನು
ಉಳಿಯುವುದಿಲ್ಲ.
ಒಂದೊಂದು ಮಬ್ಬು ಕನಸಿನಲ್ಲಿಯೇ
ಉಳಿದುಬಿಡುತ್ತವೆ.
ಸ್ಪಷ್ಟ ಧ್ವನಿ
ನಿನ್ನ ಮುಂಗುರುಳು
ಮತ್ತು ನನ್ನ ಮುಖ ಚಹರೆ
ನೋಡ ನೋಡುತಾ
ಘಾಡವಾದ ನಿದ್ದೆಯ
ಅಮಲಿಗೆ ಜಾರುವೆ
ಅದು ಈಗೀಗ.
ಸ್ವಲ್ಪ ವಾಸಿಯಾದೇತು ಗಾಯ
ತನ್ನಿಂತಾನೆ ಬುಗಿಲೆದ್ದ ಅನುಮಾನಕ್ಕೊ ಏನೊ
ನಟ್ಟ ನಡುವೆ ಇರುವ ಒಲವೀಗ
ಕೆಳ ಸ್ಥರಕ್ಕೆ ಬಂದು ತಲುಪಿದೆ
ನಾನೀಗ ಬೆಂಡು ಬತಾಸು
ಮಾರುತ್ತಾ ತಿರು ತಿರುಗಿ ನಿನ್ನ
ಪ್ರೇಮದ ಮಹಲಿನ
ಮುಂದೆ ಅಲೆಯುವೆ
ಸಾದಾ ಮನುಷ್ಯ
.
-ವಿಜಯಭಾಸ್ಕರ
ಸೇಡಂ