ವಿಜಯನಗರ ಜಿಲ್ಲೆ ನೀಲನಕ್ಷೆ ತಯಾರಿಕೆಗೆ ಅಗತ್ಯ ಮಾಹಿತಿ ನೀಡಲು ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ

ಬಳ್ಳಾರಿ: ವಿಜಯನಗರ ಜಿಲ್ಲೆ ಹೊಸದಾಗಿ ಆಸ್ತಿತ್ವಕ್ಕೆ ಬಂದಿದ್ದು, ಈ ಜಿಲ್ಲೆಗೆ ಮೂಲಸೌಕರ್ಯಗಳ ಕಲ್ಪಿಸುವಿಕೆ,ಇಲಾಖೆಗಳ ಆಸ್ತಿ ಹಂಚುವಿಕೆ ಮತ್ತು ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ ಸೇರಿದಂತೆ ಸಮಗ್ರವಾಗಿ ವಿಜಯನಗರ ಜಿಲ್ಲೆ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನೀಲನಕ್ಷೆ ತಯಾರಿಕೆಗೆ ಅಗತ್ಯ ಮಾಹಿತಿ ನೀಡಿ ಎಂದು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ನೇಮಕಗೊಂಡಿರುವ ಅನಿರುದ್ಧ ಶ್ರವಣ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಜಯನಗರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಕಚೇರಿಗಳ ಕಾರ್ಯನಿರ್ವಹಣೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಹೊಸಪೇಟೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿ ಟಿಎಸ್ಪಿ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ.
ಹೊಸ ಕಚೇರಿಗಳು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ನಮೂನೆಗಳನ್ನು ಸಿದ್ದಪಡಿಸಲಾಗಿದೆ. ಅವುಗಳಲ್ಲಿ ಸಂಪೂರ್ಣ ಮಾಹಿತಿ ನೀಡಿ ಭರ್ತಿ ಮಾಡಿ ನೀಡುವಂತೆ ಅವರು ಸೂಚಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ತಮ್ಮ ತಮ್ಮ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ ಮತ್ತು ನೂತನ ಜಿಲ್ಲೆಗೆ ಎಷ್ಟು ಜನ ಸಿಬ್ಬಂದಿಗಳನ್ನು ನಿಯೋಜಿಸುತ್ತಿದ್ದೀರಿ, ನೂತನ ಜಿಲ್ಲೆಯಲ್ಲಿ ಇಲಾಖೆಗಳ ಜಿಲ್ಲಾ ಕಚೇರಿ ತಾತ್ಕಾಲಿಕವಾಗಿ ಆರಂಭಿಸುವುದಕ್ಕೆ ನಿಗದಿಮಾಡಿರುವ ಸ್ಥಳ, ನೂತನ ಜಿಲ್ಲೆಯಲ್ಲಿರುವ ತಮ್ಮ ತಮ್ಮ ಇಲಾಖೆಗಳಲ್ಲಿರುವ ಆಸ್ತಿಗಳ ಪ್ರಮಾಣ(ಚರ ಮತ್ತು ಸ್ಥಿರಾಸ್ತಿ ಸೇರಿದಂತೆ), ಮಾಹಿತಿ ನೀಡಲು ಹೇಳಿದರು.
ಇಲಾಖೆಗಳ ವ್ಯಾಪ್ತಿಯ ಮರುಹಂಚಿಕೆಗಳ ವಿವರ ಹಾಗೂ ಇತರೇ ವಿವರಗಳನ್ನು ಕೂಡಲೇ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಎಲ್ಲ ವಿವರಗಳನ್ನು ಪಡೆದುಕೊಂಡು ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಿ ನೋಟಿಫಿಕೇಶನ್ ಹೊರಡಿಸಲಾಗುವುದು ಎಂದರು.
ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಮಾತನಾಡಿ, ಅಗತ್ಯ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಡಿಸಿ ಕಚೇರಿಯಲ್ಲಿ ಪ್ರತ್ಯೇಕ ನಿಯಂತ್ರಣ ಕೋಶ ಸ್ಥಾಪಿಸಲಾಗುವುದು ಎಂದು ಹೇಳಿದರು.
ಜಿಲ್ಲಾಮಟ್ಟದ ಕಚೇರಿಗಳು ತತ್‍ಕ್ಷಣ ಕಾರ್ಯನಿರ್ವಹಿಸುವುದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಉಳಿದಿರುವ ಅನುದಾನ ಬಳಸಿಕೊಂಡು ಇದೇ ಅರ್ಥಿಕ ವರ್ಷದೊಳಗೆ ಹೊಸಪೇಟೆಯ ತಾಲೂಕು ಕಚೇರಿಗಳನ್ನು ಮೇಲ್ದರ್ಜಗೆ ಏರಿಸಲು ಕ್ರಮ ಕೈಗೊಳ್ಳಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಡಿಎಫ್‍ಒ ಸಿದ್ದರಾಮೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.