ಅನುದಿನ ಕವನ-೬೪ (ಕವಿ: ಎನ್. ಶರಣಪ್ಪ ಮೆಟ್ರಿ, ಕವನದ ಶೀರ್ಷಿಕೆ: ಕೆಂಡಸಂಪಿಗೆ)

ಹಿರಿಯ ಕವಿ ಎನ್. ಶರಣಪ್ಪ ಮೆಟ್ರಿ ಅವರು ಓದಿದ್ದು ಬಿ.ಕಾಂ ಪದವಿ. ಆದರೆ ಸಾಹಿತ್ಯದ ಒಲವು ಇವರನ್ನು ಕವಿಗಳನ್ನಾಗಿ ರೂಪಿಸಿತು. ಲೆಕ್ಕವಿಟ್ಟು ಕೊಳ್ಳದೇ ಬರೆದ ಕವನ, ಹನಿಗವನ, ಚುಟುಕಗಳು ಕಾವ್ಯ ಪ್ರಿಯರ ಮನ ಸೆಳೆದಿವೆ. ಬಿ ಎಸ್ ಎನ್ ಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಶರಣಪ್ಪ ಮೆಟ್ರಿ ಅವರು ಆರಂಭದಲ್ಲಿ ಚೆನ್ನ ಶರಣ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಿದ್ದರು.
ಪ್ರಸ್ತುತ ಗಂಗಾವತಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಇವರಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಸಾಹಿತ್ಯ ಚಟುವಟಿಕೆಯಲ್ಲಿ ಸಂತಸ ಕಾಣುತ್ತಿರುವ ಶರಣಪ್ಪ ಮೆಟ್ರಿ ಅವರ ಕೆಂಡ ಸಂಪಿಗೆ ಕವಿತೆ ಇಂದಿನ ಅನುದಿನ ಕವನದ ಗೌರವಕ್ಕೆ ಪಾತ್ರವಾಗಿದೆ.👇
*****

ಕೆಂಡ ಸಂಪಿಗೆ

ಮನಸೆಳೆಯಿತು ಮುಗುದೆ ಮುಡಿದ
ಒಂದೆ ಒಂದು ಸಂಪಿಗೆ
ಅದುವೆ ಕೆಂಡ ಸಂಪಿಗೆ
ಮಂದಾನಿಲ‌ ತೀಡುತಿರಲು
ಪುಳಕಗೊಂಡೆ ತಂಪಿಗೆ
ಜೊತೆಗೆ ಬಂದ ಕಂಪಿಗೆ

ಕಾಳಿಂಗನ ಹೆಡೆಯಲಿರುವ
ರತ್ನದಂತೆ ಕೆಂಪಗೆ
ಮಾರುದ್ದದ ಜಡೆಯಲಿದ್ದು
ಬೀರುತಿತ್ತು ಕಿರುನಗೆ

ಕಾರಿರುಳಿನ ಕತ್ತಲಲ್ಲಿ
ಬೆಳಗಿದಂತೆ ದೀವಿಗೆ
ಕರ್ಗೂದಲ ಕಡಲಿನಲ್ಲಿ
ತೇಲುತಿತ್ತು ಮೆಲ್ಲಗೆ

ಮುಂದೆ ಸಾಗಿ ಹೋದಳಾಕೆ
ಜಾರಿಬಿತ್ತು ಸಂಪಿಗೆ
ಬಿದ್ದುದ ನಾನೆತ್ತಿಕೊಂಡು
ಮಾರುಹೋದೆ ಸೊಬಗಿಗೆ

ಮಾನಿನಿ‌ ಮೊಗ ಹೇಗೆಯಿತ್ತೊ
ಹಿಂತಿರುಗಿಸಿ ನೋಡದೆ
ಮುನ್ನಡೆದಳು ತೋರದೆ
ಸಂಪಿಗೆ ಸೌಂದರ್ಯ ಕಂಡು
ಹಗಲರಾತ್ರಿಯೆನ್ನದೆ
ಅವಳ ನೆನೆವುದೆನ್ನೆದೆ

ಅದೇ ಉಡುಪು ಅದೇ ಒನಪು
ಕಣ್ಣಮುಂದೆ ಬಂದಳು‌
ಬೆಳದಿಂಗಳ ತಂದಳು
ನೋಡುನೋಡುವಷ್ಟರಲ್ಲಿ
ಮತ್ತೆ ಮಾಯವಾದಳು
ತೆರೆದುಬಿಟ್ಟೆ ಕಂಗಳು

-ಎನ್‌. ಶರಣಪ್ಪ ಮೆಟ್ರಿ, ಗಂಗಾವತಿ