ವಾರ್ತಾ ಇಲಾಖೆ ಪ್ರಶಿಕ್ಷಣಾರ್ಥಿ, ಗ್ರಾಮೀಣ ಪ್ರತಿಭೆ ಮೈಲಾರಿಗೆ ರಾಜ್ಯಪಾಲರಿಂದ ಚಿನ್ನದ ಪದಕ ಪ್ರದಾನ

ಬಳ್ಳಾರಿ: ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಎಂ.ಎಸ್.ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿ ಮೈಲಾರಿ ಲಿಂಗಪ್ಪ ವೈ ಪ್ರಥಮ ಶ್ರೇಣಿ (Rank) ಪಡೆದ ಹಿನ್ನಲೆಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು ಚಿನ್ನದ ಪದಕ ನೀಡಿ ಗೌರವಿಸಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 14 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರು ಪ್ರಥಮ‌ ಶ್ರೇಣಿಯ ಪ್ರಮಾಣಪತ್ರ ಹಾಗೂ ಚಿನ್ನದ ಪದಕ ಪ್ರದಾನ ಮಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಳ್ಳಾರಿ ಕಚೇರಿಯಲ್ಲಿ ಪ್ರಶಿಕ್ಷಣಾರ್ಥಿಯಾಗಿ ಸೇವೆ ಸಲ್ಲಿಸುತ್ತಿರುವ ಮೈಲಾರಿ ತಾಲೂಕಿನ ಸಿಂಧುವಾಳ ಗ್ರಾಮದ ಯುವಪ್ರತಿಭೆ.
ಪತ್ರಿಕೋದ್ಯಮ‌ ಪದವಿಯನ್ನು ನಗರದ ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಡೆದ ಮೈಲಾರಿ ಬಳಿಕ ಸ್ನಾತಕೋತ್ತರ ಪದವಿಯನ್ನು ತುಮಕೂರಿನ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಯಶಸ್ವಿಯಾಗಿ ಪೂರೈಸಿ, ಮೊದಲ‌ ಶ್ರೇಣಿಯಲ್ಲಿ ಉತ್ತೀರ್ಣವಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅಭಿನಂದನೆ: ಮೈಲಾರಿಯ ಸಾಧನೆಯನ್ನು ವಾರ್ತಾ ಇಲಾಖೆಯ ಹಿರಿಯ ಸಹಾಯಕ‌ ನಿರ್ದೇಶಕ ಕೆ. ರಾಮಲಿಂಗಪ್ಪ, ಸಿದ್ಧಾರ್ಥ ಅಧ್ಯಯನ‌ ಕೇಂದ್ರದ ನಿರ್ದೇಶಕ ಡಾ.‌ಬಿ ಟಿ ಮುದ್ದೇಶ್, ಕರ್ನಾಟಕ ಮಾಧ್ಯಮ‌ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿ.‌ಮಂಜುನಾಥ್, ಎಸ್ ಎಸ್ ಎ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಎ. ಹೇಮರೆಡ್ಡಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಇಸ್ಮಾಯಿಲ್ ಮಕಾಂದರ್, ಉಪನ್ಯಾಸಕ ಟಿ. ಜಯರಾಂ, ಕನ್ನಡ ವಿವಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಲೋಕೇಶ್ ಮತ್ತಿತರರು ಮುಕ್ತಕಂಠದಿಂದ ಪ್ರಶಂಸಿಸಿ ಅಭಿನಂದಿಸಿದ್ದಾರೆ.