ಬಳ್ಳಾರಿ:ಕರ್ನಾಟಕದ ಮುಕುಟ, ಐತಿಹಾಸಿಕ ನಗರ ಬೀದರ್ ನಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ರಾಜ್ಯ ಮಟ್ಟದ ನಾಲ್ಕು ದಿನಗಳ ನಾಟಕೋತ್ಸವದಲ್ಲಿ ಬಳ್ಳಾರಿಯ ಕಲಾವಿದರು ಅಭಿನಯಿಸಿದ ದನ ಕಾಯುವವರ ದೊಡ್ಡಾಟಕ್ಕೆ ಕಲಾಸಕ್ತರು ಫಿದಾ ಆದರು.
ಬೀದರಿನ ಜನಪದ ಕಲಾವಿದರ ಬಳಗ, ಅಖಿಲ ಭಾರತ ಕಲಾವಿದರ ಒಕ್ಕೂಟ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ 4ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಜರುಗಿತು.
ಶ್ರೀ ಪೂಜ್ಯ ಚನ್ನಬಸವ ಪಟ್ಟದೇವರ ಜಿಲ್ಲಾರಂಗಮಂದಿರಲ್ಲಿ ದಿ:ಶಿವಶಂಕರ ನಾಯ್ಡು ರಚನೆಯ, ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದಲ್ಲಿ ಇವರ ತಂಡದ ಸದಸ್ಯರೇ ‘ದನ ಕಾಯುವವರ ದೊಡ್ಡಾಟ’ ಎಂಬ ಹಾಸ್ಯ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಮೆಚ್ಚುಗೆಗೆ ಪಾತ್ರವಾಯಿತು.
ಸಾರಥಿಯಾಗಿ ಪುರುಷೋತ್ತಮ ಹಂದ್ಯಾಳು, ದುರ್ಯೋಧನ ಅಮರೇಶ ಹಚ್ಚೊಳ್ಳಿ, ದುಶ್ಯಾಸನ ನಾಗಿ ಪಾರ್ವತೀಶ್ ಗೆಣಿಕಿಹಾಳ್, ಗೌಡನಾಗಿ ಬೀದರಿನ ವಿಜಯಕುಮಾರ್ ಸೋನಾಲೆ, ದ್ರೌಪದಿಯಾಗಿ ಮೌನೇಶ್ ಕಲ್ಲಹಳ್ಳಿ, ಗಣೇಶನಾಗಿ ಚಂದ್ರಶೇಖರ್ ಆಚಾರ್, ಕೃಷ್ಣನಾಗಿ ಎ.ಎರಿಸ್ವಾಮಿ, ಭೀಮನಾಗಿ ಜಡೇಶ್ ಎಮ್ಮಿಗನೂರು, ನಕುಲನಾಗಿ ಸುಂಕಪ್ಪ, ಸಹದೇವನಾಗಿ ಸೂರಜ್ ಅವರ ಮನೋಜ್ಞ ಅಭಿನಯ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸಿತು.
ತಬಲ ವಾದಕರಾಗಿ ಎರಿಸ್ವಾಮಿ ಶಿಡಿಗಿನಮೊಳ ಅವರು ಗಮನ ಸೆಳೆದರು. ನಾಟಕದ ಪೂರ್ವದಲ್ಲಿ ಜಾನಪದ ಕಲಾವಿದ ಜಡೇಶ್ ಎಮ್ಮಿಗನೂರು ಅವರು ಜನಪದ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಿದರು. ಅಧ್ಯಾಪಕ ಎ.ಎರಿಸ್ವಾಮಿ ಅವರ ಹಾಸ್ಯ ಭಾಷಣವೂ ನೆರೆದಿದ್ದ ರಂಗಪ್ರಿಯರಿಗೆ ಕಚಗುಳಿ ಇಡುವಲ್ಲಿ ಯಶಸ್ವಿಯಾಯ್ತು.
*****