ಬಳ್ಳಾರಿ: ಭಾರತೀಯ ಜನತಾ ಪಕ್ಷದ ಬಳ್ಳಾರಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಮಟ್ಟದ ಕಾರ್ಯಕಾರಿಣಿಯನ್ನು ಮಾ. 10 ಆಯೋಜಿಸಲಾಗಿದೆ ಎಂದು ಮೋರ್ಚಾದ ಜಿಲ್ಲಾಧ್ಯಕ್ಷ ಸಿರಿವೇಲು ಇಬ್ರಾಹಿಂ (ಬಾಬು) ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಜಿಲ್ಲಾಮಟ್ಟದ ಕಾರ್ಯಕಾರಿಣಿಯು ಬುಧವಾರ ನಗರದ ಹೊಸಪೇಟೆ ರಸ್ತೆಯಲ್ಲಿರುವ ಗುರು ಫಂಕ್ಷನ್ ಹಾಲ್‌ನಲ್ಲಿ ನಡೆಯಲಿದ್ದು, ಈ ಕಾರ್ಯಕಾರಿಣಿಯಲ್ಲಿ ಪಕ್ಷದ ಹಲವು ಮುಖಂಡರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷ ಮುಜಮ್ಮಿಲ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಸಯ್ಯದ್ ಸಲಾಂ, ಉಪಾಧ್ಯಕ್ಷ ನೂರ್ ಭಾಷಾ, ಕಚೇರಿ ವ್ಯವಸ್ಥಾಪಕ ಸಯ್ಯದ್ ಹಫೀಝರ‍್ರೆಹಮಾನ್, ಹಜ್ ಸಮಿತಿ ಸದಸ್ಯ ಮೈನುದ್ದೀನ್ ಮತ್ತು ರಾಜ್ಯ ಕಾರ್ಯದರ್ಶಿ ಶಾಹಿನಾ ಅಬ್ಬಾಸ್ ಅವರು ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪಕ್ಷದ ಜಿಲ್ಲೆಯ ಶಾಸಕರು, ಸಂಸದರು, ಇತರ ಚುನಾಯಿತ ಜನಪ್ರತಿನಿಧಿಗಳು, ಮುಖಂಡರು ಕಾರ್ಯಕಾರಿಣಿಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ತಾವು ಜಿಲ್ಲಾಧ್ಯಕ್ಷ ಆದ ನಂತರ ಮೊದಲ ಬಾರಿಗೆ ಜಿಲ್ಲಾಮಟ್ಟದ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ.. ಕೊರೋನಾ ಕಾರಣಕ್ಕೆ ಒಂದು ವರ್ಷದ ಬಳಿಕ ಕಾರ್ಯಕಾರಿಣಿ ಆಯೋಜಿಸಿದ್ದೇವೆ ಎಂದು ವಿವರಿಸಿದರು.
ನಗರ ಶಾಸಕ ಜಿ ಸೋಮಶೇಖರ ರೆಡ್ಡಿ ಅವರು ಕಾರ್ಯಕಾರಿಣಿ ಉದ್ಘಾಟಿಸಲಿದ್ದಾರೆ. ಪಕ್ಚದ ಮುಖಂಡರಾದ ಅನಿಲ್ ನಾಯ್ಡು, ಶ್ರೀನಿವಾಸ ಮೋತ್ಕರ್ ಮೊದಲಾದವರು ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯ 11 ಮಂಡಲಗಳ ಪದಾಧಿಕಾರಿಗಳು, ಜಿಲ್ಲಾ ಸಮಿತಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬಾಬು ಹೇಳಿದರು.
ಕಾಂಗ್ರೆಸ್ ನವರು ನಮ್ಮನ್ನು ದುಡಿಸಿಕೊಂಡು ಮೂಲೆಗುಂಪು ಮಾಡಿದ್ದಾರೆ, ಆದರೆ ಈಗ ಬಿಜೆಪಿಯಲ್ಲಿ ಅಧಿಕಾರದ ಅವಕಾಶಗಳು ಸಿಗುತ್ತಿವೆ. ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ಪಾಲಿಕೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅರ್ಹರಿಗೂ ಟಿಕೆಟ್ ಕೊಡುವಂತೆ ವರಿಷ್ಟರನ್ನು ಕೇಳುತ್ತೇವೆ. ಜಾತಿ ಆಧಾರದಲ್ಲಿ ಟಿಕೆಟ್ ಕೊಡುವುದರ ಜತೆ ಗೆಲ್ಲುವ ಶಕ್ತಿ ಇರುವ ಅಭ್ಯರ್ಥಿಗೆ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಉಪಾಧ್ಯಕ್ಷ ನೀಲೇಶ್ ಜೈನ್, ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಬಾಷಾ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.