//ಸಾಮಾಜಿಕ ಮಾಧ್ಯಮಗಳಿಗೆ ಬಿತ್ತು ಕಡಿವಾಣ//
ಮಾಧ್ಯಮಗಳಿಂದ ಹರಡುತ್ತಿರುವ ಸುಳ್ಳು ಸುದ್ದಿಗಳು ಸಮಾಜದಲ್ಲಿ ಜನರ ಮಧ್ಯೆ ದೊಡ್ಡ ಕಂದಕವನ್ನು ನಿರ್ಮಾಣ ಮಾಡುತ್ತಿವೆ. ಪ್ರಸ್ಥುತ ಪತ್ರಿಕೋದ್ಯಮದಲ್ಲಿ ನೈತಿಕ ಮೌಲ್ಯಗಳು ಮರೆಯಾಗುತ್ತಿದ್ದು ಸುದ್ದಿ ಹಾಗೂ ಸುಳ್ಳು ಸುದ್ದಿಯ ನಡುವಿದ್ದ ತೆಳುವಾದ ಪರದೆ ಮರೆಯಾಗುತ್ತಿದೆ. ಸುದ್ದಿಯಲ್ಲಿ ನಿಖರತೆ ಮತ್ತು ವಸ್ತುನಿಷ್ಟತೆಗಿಂತ ಹೆಚ್ಚಾಗಿ ಅತಿ ರಂಜನೀಯ ಅಂಶಗಳು ಆದ್ಯತೆ ಪಡೆಯುತ್ತಿವೆ. ಮಾಧ್ಯಮಗಳಲ್ಲಿ ಪೇಡ್ ನ್ಯೂಸ್ (ಕಾಸಿಗಾಗಿ ಸುದ್ದಿ) ಗಳ ಅಬ್ಬರದ ನಡುವೆ ಪತ್ರಿಕೋದ್ಯಮದ ನಿಜ ಮೌಲ್ಯಗಳು ಕುಸಿಯುತ್ತಿವೆ. ಜಾಹೀರಾತು ಮತ್ತು ಸುದ್ದಿಯ ನಡುವೆ ವ್ಯತ್ಯಾಸವಿಲ್ಲದ ರೀತಿಯಲ್ಲಿ ಜಾಹೀರಾತುಗಳನ್ನು ಪ್ರಕಟಿಸುವುದು ಮುದ್ರಣ ಮಾಧ್ಯಮದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.
ಮಾಧ್ಯಮ ಸ್ವಾತಂತ್ರ್ಯದ ರಕ್ಷಣೆ ಆಗಲೇಬೇಕು. ಆದರೆ ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಮಾಧ್ಯಮ ಕ್ಷೇತ್ರ ಬಂಡವಾಳ ಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕುತ್ತಿದ್ದು ನಿಷ್ಪಕ್ಷಪಾತವಾದ ವರದಿ ಮತ್ತು ಸುದ್ದಿ ಪ್ರಸಾರ ಸಾಧ್ಯವಿಲ್ಲದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಮಾಧ್ಯಮಗಳು ಮನರಂಜನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿವೆ. ಈ ಎಲ್ಲಾ ಗೊಂದಲಗಳು ಮತ್ತು ಚರ್ಚೆಗಳ ಮಧ್ಯೆ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವುದು ಮಾಧ್ಯಮಗಳಿಗೆ ಸವಾಲಾಗಿ ಪರಿಣಮಿಸಿದೆ.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಾಮಾಜಿಕ ಜವಾಬ್ದಾರಿ ಕ್ಷೀಣಿಸುತ್ತಿದ್ದು, ಜಾಹೀರಾತು ಮತ್ತು ಜಾಹೀರಾತು ನೀಡುವ ಸಂಸ್ಥೆಗಳ ಪ್ರಭಾವ ಹೆಚ್ಚಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಅಥವಾ ಜಾಲತಾಣಗಳಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ನೈಜ ಜಗತ್ತಿನ ಮೇಲೆ ಬೀರುವ ಪ್ರಭಾವವನ್ನು ಕಂಡು ಹಿಂಜರಿದಿರುವ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಕಾನೂನು ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಪ್ರಕಾಶನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಇತ್ತೀಚೆಗೆ ತಾನೇ ಪೇಸ್ ಬುಕ್ ತನ್ನ ಬಳಕೆದಾರರಿಗೆ ಒದಗಿಸುವ ಸುದ್ದಿ ಮಾಹಿತಿಯಲ್ಲಿ ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟ ಜಾಹೀರಾತುಗಳ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಿದೆ. ಹಾಗೆಯೇ ಟ್ವೀಟರ್ ಕೂಡ ತನ್ನ ತಾಣದಲ್ಲಿ ದ್ವೇಷಾಭಿವ್ಯಕ್ತಿಗಳ ಮೇಲೆ ನಿಕಟವಾದ ನಿಗಾ ಇಡುವ ಪ್ರಯತ್ನಗಳಿಗೆ ಮುಂದಾಗಿದೆ.
ಸುದ್ದಿ ಮಾಧ್ಯಮ ಸಂಸ್ಥೆಗಳು ಇಂದು ಪತ್ರಿನಿತ್ಯ ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ. ಎಲ್ಲೋ ಒಂದು ಕಡೆ ಸುದ್ದಿ ಮಾಧ್ಯಮ ಸಂಸ್ಥೆಗಳು ಪತ್ರಿಕೋದ್ಯಮದ ಮೌಲ್ಯಗಳು ಮತ್ತು ಸಿದ್ದಾಂತಗಳನ್ನು ಗಾಳಿಗೆ ತೂರುತ್ತಿರುವಂತೆ ಭಾಸವಾಗುತ್ತಿದೆ. ವಿದ್ಯುನ್ಮಾನ ಮಾದ್ಯಮದಿಂದ ಜನರಲ್ಲಿ ಆಸಕ್ತಿ ಹಾಗೂ ಕುತೂಹಲ ಹೆಚ್ಚುತ್ತಿದ್ದು ಕ್ರೀಡೆ, ಲೈಫ್ ಸ್ಟೈಲ್, ಕಾರ್ಟೂನ್, ಸಿನಿಮಾ ಹೀಗೆ ಎಲ್ಲಾ ಕ್ಷೇತ್ತಗಳಲ್ಲಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಾನಲ್ ಗಳು ಆರಂಭವಾಗುತ್ತಿವೆ.
ಆರಂಭದಲ್ಲಿ ಅಂತರ್ಜಾಲ ಬಳಕೆ ಬುದ್ದಿವಂತಿಕೆಯ ಸಂಕೇತ ಹಾಗೂ ಅಚ್ವರಿಯ ವಿಷಯವಾಗಿತ್ತು. ಆದರೆ ಈಗ ಎಲ್ಲರ ಕಿಸೆಯಲ್ಲೂ ಅಂತರ್ಜಾಲವಿದೆ. ಇಂದು ಮಾಧ್ಯಮ ಕ್ಷೇತ್ರದ ಆಳ ಮತ್ತು ಅಗಲ ಆಕಾಶದಷ್ಟು ವಿಶಾಲವಾಗಿ ಬೆಳೆದಿದೆ. ವಿದ್ಯುನ್ಮಾನ ಹಾಗೂ ಪತ್ರಿಕೆಗಳಲ್ಲದೆ ಅಂತರ್ ಜಾಲ ಮಾಧ್ಯಮ ತನ್ನ ವ್ಯಾಪ್ತಿಯನ್ನು ಬಹಳಷ್ಟು ವಿಸ್ತರಿಸಿಕೊಂಡಿದೆ. ಅಂತರ್ ಜಾಲದದಲ್ಲಾದ ಕ್ರಾಂತಿ ಮತ್ತು ಡಾಟಾ ಲಭ್ಯತೆಯಲ್ಲಿ ಪೈಪೋಟಿ ನಡೆದುದರ ಫಲವಾಗಿ ಇಂದು ಸಾಮಾಜಿಕ ಮಾಧ್ಯಮಗಳ ಬಾಹುಗಳು ಬಹಳಷ್ಟು ವಿಸ್ತರಿಸಿಕೊಂಡಿವೆ. ಮಾಧ್ಯಮಗಳಲ್ಲಿ ಸಾಕಷ್ಟು ಅವಕಾಶಗಳ ಲಭತ್ಯೆ ಉಂಟಾಗುತ್ತಿದೆ. ನಮ್ಮ ಜೀವನದ ಅವಿಭಾಜ್ಯ ಭಾಗವಾಗಿರುವ ಮೊಬೈಲ್ ಪೋನ್ ಮಾಹಿತಿಯ ಆಗರವಾಗಿದೆ.
ಡಿಜಿಟಲ್ ಮಾಧ್ಯಮ ಕ್ಷೇತ್ರವು ಭಾರತದಲ್ಲಿ ಸಾರ್ವಜನಿಕ ರಂಗವನ್ನು ಮೂಲಭೂತವಾಗಿಯೇ ಬದಲಾಯಿಸಿಬಿಟ್ಟಿದೆ. ಪ್ರಸ್ಥುತ ಮುದ್ರಣ ಮತ್ತು ಟೆಲಿವಿಷನ್ ನಂತಹ ಹಳೆಯ ಮಾಧ್ಯಮಗಳು ಅಥವಾ ಸಾಂಪ್ರದಾಯಿಕ ಮಾಧ್ಯಮಗಳು ಮತ್ತು ಹೊಸ ಸಾಮಾಜಿಕ ಮಾಧ್ಯಮಗಳು ಪರಸ್ಪರ ಅವಲಂಬಿತವಾಗಿವೆ. ಸುದ್ದಿ ಸಂಗ್ರಹಣೆಯ ಪ್ರಕ್ರಿಯೆಯೇ ಇಂದು ರಚನಾತ್ಮಕ ಬದಲಾವಣೆಗೆ ಒಳಗಾಗಿದೆ. ಆದರೆ ಇಂತಹ ಬದಲಾವಣೆಗಳು ಎಷ್ಟರ ಮಟ್ಟಿಗೆ ಸಾರ್ವಜನಿಕ ಜನ ಜೀವನದ ಮೇಲೆ ಪ್ರಭಾವ ಬೀರಬಲ್ಲವು? ಭಾರತದಲ್ಲಿ ಅಸ್ಥಿತ್ವದಲ್ಲಿರುವ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಅಸಮಾನತೆಗಳು ಡಿಜಿಟಲ್ ಕ್ಷೇತ್ರವನ್ನು ಎಟುಕಿಸಿಕೊಳ್ಳುವ ಮತ್ತು ಅದರಲ್ಲಿ ತೊಡಗಿಕೊಳ್ಳವಿಕೆಯಲ್ಲಿ ತೀವೃತರವಾದ ಮಿತಿಯನ್ನು ಹೇರುವುದನ್ನು ಗಮನಿಸಿದಾಗ ಡಿಜಿಟಲ್ ಕ್ಷೇತ್ರದೊಳಗೆ ನಡೆಯುವ ವಾಗ್ವಾದಗಳು ಎಷ್ಟರ ಮಟ್ಟಿಗೆ ವಾಸ್ತವಿಕ ರಾಜಕೀಯ ಸತ್ಯಗಳನ್ನು ಪ್ರತಿನಿಧಿಸಬಲ್ಲವು? ಮುಖ್ಯವಾಗಿ ಈ ಡಿಜಿಟಲ್ ಸಾಮಾಜಿಕತೆಯೆಂಬುದು ನಮ್ಮ ನೈಜ ವಾಸ್ತವಿಕತೆಯ ಒಂದು ವಿಸ್ತರಣೆಯೇ ಆಗಿದ್ದು ಅದನ್ನು ದುರ್ಬಲಗೊಳಿಸುವುದು ಎಂದರೇನು? ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ.
ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಪಟ್ಟಂತೆ ಒಂದು ಸಮಾನ ಅವಕಾಶವನ್ನು ಒದಗಿಸುವ ವೇದಿಕೆಯ ಸೃಷ್ಟಿ ಎಂಬುದಕ್ಕೆ ಅರ್ಥವೇನು? ಸಾಮಾನ್ಯವಾಗಿ ಅಂತರ್ ಜಾಲವು ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸುತ್ತದೆ, ಎಂದು ನಾವು ಇಷ್ಟು ದಿನ ನಂಬಿಕೊಂಡು ಬಂದಿದ್ದೇವಿ. ಆದರೆ ಅಂತರ್ ಜಾಲದಲ್ಲೂ ಕೂಡ ಕೆಲವು ಧ್ವನಿಗಳು ಮಾತ್ರ ಗಟ್ಟಿಯಾಗಿ ಕೇಳಿಬರುತ್ತಿವೆ, ಏಕೆ? ಮತ್ತು ಕೆಲವು ಧ್ವನಿಗಳು ಇದ್ದರೂ ಕೇಳದಂತಾಗಿವೆ, ಇದಕ್ಕೆ ಕಾರಣ ಏನು? ಇಂತಹ ಹತ್ತಾರು ಪ್ರಶ್ನೆಗಳಿಗೆ ನಮಗೆ ಎದುರಾಗುತ್ತವೆ. ಈ ಹಂತದಲ್ಲಿ ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ‘ಈ ಡಿಜಿಟಲ್ ಪ್ರಜಾತಂತ್ರ ಎಂಬುದು ಒಂದು ಮಿಥ್ಯೆ ಎಂಬುದನ್ನು ಹಾಗೂ ಅದು ತನ್ನ ತಾಂತ್ರಿಕ ವಾಸ್ತುಶಿಲ್ಪದ ಕಾರಣಗಳಿಂದಾಗಿ ಸಾಂಪ್ರದಾಯಿಕ ಸ್ಥಿತಿವಂತಿಕೆಯು ಕೊಡಮಾಡಿರುವ ಸೌಲಭ್ಯಗಳ ಅಸಮಾನತೆಯನ್ನು ಮೀರುವ ಅವಕಾಶಗಳನ್ನೇನೂ ಒದಗಿಸಿಲ್ಲ, ಎಂಬುದನ್ನು ಹಾಗೂ ಅವು ಸಹ ಈಗ ಅಸ್ಥಿತ್ವದಲ್ಲಿರುವ ದಮನಕಾರಿ ರಚನೆಗಳನ್ನು ಹಾಗೆಯೇ ಉಳಿಸಿಕೊಂಡು ಪುನರುತ್ಪಾದನೆ ಮಾಡುತ್ತವೆ, ಎಂಬುದನ್ನು ಮಾಧ್ಯಮಗಳ ಕುರಿತು ನಡೆದಿರುವ ಅನೇಕ ಅಧ್ಯಯನಗಳು ಸಾಬೀತು ಮಾಡಿವೆ.
ಅಪಾರ ಬಂಡಾವಳವನ್ನು ಹೊಂದಿರುವ ಖಾಸಗಿ ಸಂಸ್ಥೆಯೊಂದು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹೆಚ್ಚಿನ ಅವಕಾಶವನ್ನು ಪಡೆದುಕೊಳ್ಳಲು ಬೇಕಾದ ಹಣವನ್ನು ಪಾವತಿ ಮಾಡುತ್ತಿದೆಯೆಂದರೆ ಅದು ತನ್ನ ಧ್ವನಿ ಇತರರಿಗಿಂತ ಹೆಚ್ಚು ಗಟ್ಟಿಯಾಗಿ ಕೇಳಿಸುವ ಅವಕಾಶಗಳನ್ನು ಕೊಂಡುಕೊಳ್ಳುತ್ತಿದೇ ಎಂದೇ ಅರ್ಥ. ದೊಡ್ಡ ಉಧ್ಯಮಗಳೂ ಕೂಡ ಇಂದು ಸಾಮಾಜಿಕ ಜಾಲತಾಣಗಳಲ್ಲಿವೆ. ಅದೇ ರೀತಿ ಜನ ಸಾಮಾನ್ಯರೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಇಂದು ಸಕ್ರೀಯರಾಗಿದ್ದಾರೆ. ಇವು ನೇರವಾಗಿ ಜನ ಸಾಮಾನ್ಯರಿಗೆ ಹೆಚ್ಚಾಗಿ ತಲುಪುತ್ತಿರುವುದೂ ಕೂಡ ಒಂದು ವಿಶೇಷವಾಗಿದೆ. ಏನೇ ಗೊಂದಲಗಳು, ಚರ್ಚೆಗಳು, ಋಣಾತ್ಮಕ ವಿಷಯಗಳು ಇದ್ದಾಗ್ಯೂ ಕೂಡ ಸಾಮಾಜಿಕ ಮಾಧ್ಯಮಗಳು ಮೇಲೂ ಅಥವಾ ಕೀಳು ಎಂಬ ಮನೋಭಾವನೆಯನ್ನು ಹುಟ್ಟುಹಾಕದೆ ಎಲ್ಲರನ್ನೂ ಸಮಾನವಾಗಿ ಸ್ವೀಕರಿಸುತ್ತವೆ ಎಂಬ ಅಭಿಪ್ರಾಯ ಕೂಡ ಮಾಧ್ಯಮ ಕ್ಷೇತ್ರದಲ್ಲಿದೆ. ಮುಖ್ಯವಾದ ಅಂಶವೆಂದರೆ ಮಾಧ್ಯಮಗಳಲ್ಲಿ ತಕ್ಷಣಕ್ಕೆ ಪ್ರತಿಕ್ರಿಯೆ ಅಸಾಧ್ಯ ಆದರೆ ಸಾಮಾಜಿಕ ಮಾಧ್ಯಮಗಳು ಸುಲಭವಾದ ಪ್ರತಿಕ್ರಿಯಾ ಮಾರ್ಗವನ್ನು ಕಲ್ಪಿಸಿಕೊಡುವ ಮೂಲಕ ಜನರಿಗೆ ಹತ್ತಿರವಾಗಿವೆ. ಸಾಮಾಜಿಕ ಜಾಲತಾಣಗಳು ದೇಶ-ವಿದೇಶಗಳಲ್ಲಿರುವ ಎಲ್ಲರೊಂದಿಗೂ ಸಂವಹನವನ್ನು ಸುಲಭ ಮತ್ತು ಸಾಧ್ಯವಾಗಿಸಿವೆ.
ಜನ ಸಾಮಾನ್ಯರಲ್ಲಿ ಸ್ಮಾರ್ಟ್ ಫೋನ್ ಬಳಕೆಯ ಶಕ್ತಿ ಮತ್ತು ಲಭ್ಯತೆ ಹಚ್ಚಾದಂತೆ ಸುದ್ದಿ ತಿಳಿಯಲು, ಮಾಹಿತಿ ಪಡೆಯಲು, ತಮ್ಮ ಮೊಬೈಲ್ ನ್ನು ಸಂವಹನ ಮಾಧ್ಯಮವನ್ನಾಗಿ ಬಳಕೆ ಮಾಡುತ್ತಿದ್ದಾರೆ. ಹರಟೆ, ಭರಪೂರ ಮನರಂಜನೆಯೂ ಇಲ್ಲಿ ಸಾಕಷ್ಟು ವೈವಿಧ್ಯಮಯ ರೂಪದಲ್ಲಿ ಇಲ್ಲಿ ಸಿಗುತ್ತದೆ. ಸಂಗೀತ, ಚಲನಚಿತ್ರ, ವೈರಲ್ ವಿಡಿಯೋಗಳು, ಸಾಹಸ, ವಿಜ್ಞಾನ-ತಂತ್ರಜ್ಞಾನದ ವಿಡಿಯೋಗಳು ದೊರೆಯುತ್ತಿರುವುದರಿಂದ ಯುವಜನರನ್ನು ಸಾಮಾಜಿಕ ಮಾಧ್ಯಮಗಳು ಸೂಜಿಗಲ್ಲಿನಂತೆ ತಮ್ಮೆಡೆಗೆ ಸೆಳೆಯುತ್ತವೆ.
ಬಹುತೇಕ ಯುವಕರ, ಯುವತಿಯರ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಸಾಮಾಜಿಕ ಜಾಲತಾಣಗಳು ಮಾಹಿತಿ, ಅಭಿಪ್ರಾಯಗಳನ್ನು ಹಂಚಿಕೊಳ್ಳುವ ವೇದಿಕೆಗಳಾಗಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದರೂ ಕೂಡ ಸುಳ್ಳು ಸುದ್ದಿಗಳು, ವಿಶ್ವಾಸಾರ್ಹತೆಯ ಕೊರತೆ, ನಿಖರತೆಯಿಂದ ವಂಚನೆ, ಬೆದರಿಕೆಗಳು, ನಿಂದನೆ, ಸಮಾಜಕ್ಕೆ ಮಾರಕವಾಗುವ ವಿಷಯಗಳ ಕುರಿತು ನಡೆಯುವ ಚರ್ಚೆಗಳು, ಬರುವ ಸಂದೇಶಗಳ ವಾಸ್ತವಿಕತೆಯನ್ನು ತಿಳಿಯದೆ ಫಾರ್ವರ್ಡ್ ಮಾಡುವುದು, ವೈಯಕ್ತಿಕ ಮಾನಹಾನಿಗಳಿಗೂ ಇವು ದಾರಿಯಾಗಿವೆ. ಮಾನಸಿಕವಾಗಿಯೂ ಹಲವಾರು ತೊಂದರೆಗಳಿಗೆ ನಮ್ಮ ಯುವಜನಾಂಗವನ್ನು ದೂಡಿವೆ. ಯುವಕರು ಊಟ, ನಿದ್ದೆಗಳನ್ನು ಬಿಟ್ಟರೂ ಸಾಮಾಜಿಕ ಜಾಲತಾಣಗಳಿಂದ ದೂರು ಉಳಿಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.
ಡಿಜಿಟಲ್ ಕ್ಷೇತ್ರದ ಮಾಧ್ಯಮಗಳು ಸಾಮಾನ್ಯ ಬಳಕೆದಾರರಿಗೆ ಅವರ ಕುಂದುಕೊರತೆಗಳಿಗೆ ಪರಿಹಾರ ಪಡೆಯಲು ಮತ್ತು ಖಾಸಗಿ ಹಕ್ಕುಗಳ ಉಲ್ಲಂಘನೆಯ ಸಂದರ್ಭದಲ್ಲಿ ಹೊಣೆಗಾರಿಕೆಯನ್ನು ಗೊತ್ತು ಮಾಡಲು ಅಧಿಕಾರ ನೀಡುವ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಇದೀಗ ರೂಪಿಸಿದೆ. ಸಾಮಾಜಿಕ ಮಾಧ್ಯಮ ಕ್ಷೇತ್ರ ಸೇರಿದಂತೆ ಮಧ್ಯವರ್ತಿ ಸೇವೆ ಒದಗಿಸುವವರು ಬಳಕೆದಾರರಿಂದ ದೂರುಗಳನ್ನು ಸ್ವೀಕರಿಸಲು ಮತ್ತು ಪರಿಹರಿಸಲು ಯಾಂತ್ರಿಕ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಈ ಆದೇಶದ ಪ್ರಕಾರ ಜನ ಸಾಮಾನ್ಯರಿಂದ ಇಂತಹ ದೂರುಗಳು ಬಂದಾಗ ದೂರುಗಳನ್ನು ಪ್ರತಿನಿಧಿಸಲು ಕುಂದುಕೊರತೆ ಅಧಿಕಾರಿಯನ್ನು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ನೇಮಿಸುವ ಅಗತ್ಯವಿದೆ ಮತ್ತು 24 ಗಂಟೆಗಳ ಒಳಗಾಗಿ ದೂರನ್ನು ಅಂಗೀಕರಿಸಬೇಕು ಮತ್ತು 15 ದಿನಗಳ ಒಳಗಾಗಿ ಇಂತಹ ದೂರುಗಳನ್ನು ಪರಿಹರಿಸಬೇಕು. ಮೂಲಭೂತವಾಗಿ ಹತ್ತು ವರ್ಗಗಳಿಗೆ ಸೇರಿದ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬಾರದು ಎಂಬ ನಿಯಮವನ್ನೂ ಕೂಡ ಜಾರಿಗೆ ತರಲಾಗಿದೆ. ಇವುಗಳಲ್ಲಿ ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಬೌಮತ್ವ, ವಿದೇಶಗಳೊಂದಿಗೆ ಸ್ನೇಹ ಸಂಬಂಧದ ವಿಷಯಗಳು, ಸಾರ್ವಜನಿಕ ಸುವ್ಯವಸ್ಥೆ, ಅರಿವಿನ ಅಪರಾಧದ ಪ್ರಚೋದನೆ, ಯಾವುದೇ ಅಪರಾಧದ ತನಿಖೆಯನ್ನು ತಡೆಯುವ, ಅಥವಾ ಯಾವುದೇ ವಿದೇಶಿ ರಾಷ್ಟ್ರಗಳನ್ನು ಅವಮಾನಿಸುವಂತಹ ವಿಷಯಗಳು ಸೇರಿವೆ. ಮಾನಹಾನಿಕರ, ಅಶ್ಲೀಲ, ಪೋರ್ನೋಗ್ರಾಫಿಕ್, ದೈಹಿಕ ಗೌಪ್ಯತೆ ಸೇರಿದಂತೆ ಇನ್ನೊಬ್ಬರ ಗೌಪ್ಯತೆಗೆ ಭಂಗ ತರುವ ಲಿಂಗದ ಆಧಾರದ ಮೇಲೆ ಅವಮಾನಿಸುವ ಅಥವಾ ಕಿರುಕುಳ ನೀಡುವುದು, ಮಾನಹಾನಿಕರ, ಜನಾಂಗೀಯ, ಮನಿಲಾಂಡರಿಂಗ್ ಅಥವಾ ಜೂಜಾಟಕ್ಕೆ ಸಂಬಂಧಿಸಿದ ಅಥವಾ ಪ್ರೋತ್ಸಾಹಿಸುವ, ಭಾರತದ ಕಾನೂನುಗಳಿಗೆ ಅಸಂಗತವಾದ ಅಥವಾ ವಿರುದ್ದವಾದ ವಿಷಯಗಳನ್ನು ಪೋಸ್ಟ್ ಮಾಡಬಾರದು ಎಂದು ಆದೇಶಿಸಿದೆ. ಹಾಗೂ ಪೋಸ್ಟ್ ಮಾಡಿದರೆ ನಿಷೇಧಿತ ವಿಷಯವನ್ನು ನ್ಯಾಯಾಲಯ ಅಥವಾ ಸೂಕ್ತ ಸರ್ಕಾರಿ ಸಂಸ್ಥೆಯಿಂದ ಆದೇಶ ಪಡೆದ 36 ಗಂಟೆಗಳ ಒಳಗೆ ಪೋಸ್ಟ್ ಮಾಡಿದ ವಿಷಯವನ್ನು ತೆಗೆದುಹಾಕಬೇಕಾಗುತ್ತದೆ.
ಈಗ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಭಾರತದಲ್ಲೇ ಕಾರ್ಯನಿರ್ವಹಿಸುವ ಅನುಸರಣಾ ಅಧಿಕಾರಿಯೊಬ್ಬರನ್ನು ನೇಮಿಸಬೇಕಾಗಿದೆ. ಅವರು ಮೇಲ್ಕಂಡ ನಿಯಮಗಳು ಅನುಸರಣೆಯಾಗುತ್ತಿವೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಜೊತೆಗೆ ಸಾಮಾಜಿಕ ಮಾಧ್ಯಮಗಳು ಸ್ವೀಕರಿಸಿದ ದೂರುಗಳ ವಿವರಗಳು, ಕೈಗೊಂಡ ಕ್ರಮಗಳ ಮಾಸಿಕ ವರದಿಯೊಂದನ್ನು ಪ್ರಕಟಿಸಬೇಕಾಗಿದೆ. ಹಾಗೂ ಮಹತ್ವದ ಮತ್ತು ನಿಷೇಧಿತ ವಿಷಯಗಳನ್ನು ತೆಗೆದುಹಾಕಲಾದ ವಿವರಗಳನ್ನೂ ಸಹ ಪ್ರಕಟಿಸಬೇಕಾಗಿದೆ. ಒಂದು ವೇಳೆ ಈ ನಿಯಮಗಳನ್ನು ಪಾಲಿಸಲು ವಿಫಲವಾದರೆ ಐಟಿ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳು ಒಳಗೊಂಡಂತೆ ಯಾವುದೇ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿ ಮಾಡಬಹುದಾಗಿದೆ. ನಿಯಮಗಳು ಈಗಾಗಲೇ ಜಾರಿಗೆ ಬಂದಿದ್ದರೂ ಇವುಗಳು ಪರಿಣಾಮಕಾರಿಯಾಗಿ ಮೂರು ತಿಂಗಳ ನಂತರ ಜಾರಿಗೆ ಬರಲಿವೆ. ಭಾರತದಂತಹ ವೈವಿದ್ಯತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಇಂತಹ ನಿಯಮಗಳು ಅಗತ್ಯವಾಗಿವೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಮನಸ್ಸಿಗೆ ಬಂದಂತೆ ವರ್ತಿಸುವುದಕ್ಕೋ ಮಾತಾಡುವುದಕ್ಕೋ ಸಾಧ್ಯವಿಲ್ಲ. ಹಾಗೆ ಮಾಡುವುದು ತಪ್ಪು. ನಾಗರಿಕ ಸಮಾಜದ ನಿಯಮಾವಳಿಗಳನ್ನೊಪ್ಪಿ ಬದುಕಬೇಕಾದುದು ನಾಗರಿಕರೆನಿಸಿಕೊಂಡಿರುವ ನಮ್ಮೆಲ್ಲರ ಕರ್ತವ್ಯವೂ ಕೂಡ ಆಗಿದೆ. ಹಕ್ಕುಗಳ ಕುರಿತು ಮಾತನಾಡುವವರಿಗೆ ಕರ್ತವ್ಯಗಳ ಅರಿವು ಕೂಡ ಇರಬೇಕಾಗುತ್ತದೆ. ನಮ್ಮ ಅಭಿಪ್ರಾಯವನ್ನು, ಅನಿಸಿಕೆಗಳನ್ನು ವ್ಯಕ್ತಪಡಿಸಲೋಸ್ಕರ ಉಪಯೋಗವಾಗಬೇಕಾಗಿದ್ದ ಸಾಮಾಜಿಕ ಮಾಧ್ಯಮಗಳು ಇಂದು ತನ್ನನ್ನು ತಾನು ಬಿಂಬಿಸಿಕೊಳ್ಳಲು, ಪ್ರಸಿದ್ದಿಗೊಳಿಸಲು, ತಾನೇ ತಾನಾಗಿ ಮೆರೆಯಲು ಬಳಕೆಯಾಗುತ್ತಿವೆ.
ಸೂಕ್ತ ಮತ್ತು ಸಮಯೋಚಿತವಾಗಿ ಬಳಸಿಕೊಂಡರೆ ಸಾಮಾಜಿಕ ಮಾಧ್ಯಮಗಳು ಜ್ಞಾನಸಾಗರ. ಬೆಂಕಿ ಮತ್ತು ಪರಮಾಣುವಿನ ಉಪಯೋಗವನ್ನು ತಿಳಿದ ಮನುಷ್ಯ ಅದನ್ನು ವಿನಾಶದ ಕಾರ್ಯಗಳಿಗೂ ಬಳಸುತ್ತಿದ್ದಾನೆ. ಈಗ ಅಂತರ್ ಜಾಲದ ಪರಿಸ್ಥಿತಿಯೂ ಅದೇ ಆಗಿದೆ. ಜ್ಞಾನವಿಕಾಸ ಹಾಗೂ ಸುಲಭ ಸಂವಹನದ ಮಾರ್ಗವನ್ನು ಅಸಂಬದ್ದತೆ, ಅನೈತಿಕತೆ ಹಾಗೂ ಅಸಹ್ಯ ಕಾರ್ಯಗಳಿಗೆ ಹೆಚ್ಚಾಗಿ ಬಳಸುತ್ತಿರುವುದು ದೊಡ್ಡ ದುರಂತವೇ ಸರಿ.
-ಡಾ.ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346