ಬಳ್ಳಾರಿ: ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒತ್ತಡಗಳಲ್ಲಿ ಪ್ರತಿನಿತ್ಯ ಕೆಲಸ ನಿರ್ವಹಿಸುತ್ತಿದ್ದು, ಈ ಒತ್ತಡದ ನಿವಾರಣೆಗೆ ಹಾಗೂ ಸದಾ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ. ಕ್ರೀಡೆಗಳಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯ ರೂಪಿಸಿಕೊಳ್ಳಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಹೆಚ್.ಪುಷ್ಪಾಂಜಲಿದೇವಿ ಅವರು ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಕ್ರೀಡೆಗೆ ತುಂಬಾ ಬೆಲೆ ಇದೆ. ನಮ್ಮಿಂದ ಏನೂ ಸಾಧ್ಯವಿಲ್ಲ ಎನ್ನುವ ಭಾವನೆಯನ್ನು ಬಿಟ್ಟು ಉತ್ತಮ ಸಾಧನೆಯತ್ತ ಹೆಜ್ಜೆ ಹಾಕಿ; ಹಿಮಾದಾಸ್ ಅವರ ಸಾಧನೆ ನಿಮಗೆ ಮಾದರಿಯಾಗಲಿದೆ ಎಂದು ಅವರು ತಿಳಿಸಿದರು.
ಕ್ರೀಡೆಯಲ್ಲಿ ಭಾಗವಹಿಸುವುದು ಒಂದು ಉತ್ತಮ ಅಭ್ಯಾಸ. ಒಳ್ಳೆಯ ಆರೋಗ್ಯವನ್ನು ಪಡೆಯಲು ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ. ನಿರುತ್ಸಾಹವನ್ನು ಬಿಟ್ಟು ಉತ್ಸಾಹದಿಂದ ಜೀವನ ಸಾಗಿಸಲು ಕ್ರೀಡೆ ತುಂಬಾ ಸಹಕಾರಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಅವರು ವಂದಿಸಿದರು. ಪೊಲೀಸ್ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರು ಮತ್ತಿತರರು ಇದ್ದರು.
ಎಂಟು ತಂಡಗಳು ಭಾಗಿ: ಶೌರ್ಯ,ಕೋಟೆ,ವೇದಾವತಿ,ವಿಜಯನಗರ, ದುರ್ಗಾ,ಲೋಹಾದ್ರಿ,ತುಂಗಭದ್ರ,ಮತ್ತು ಹಂಪಿ ಸೇರಿ ಒಟ್ಟು ಎಂಟು ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿವೆ.
ಸಮಾರೋಪದಲ್ಲಿ ಐಜಿಪಿ ಮನಂ: ಮಾ.10ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಐಜಿಪಿ ಎಂ.ನಂಜುಂಡಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜೇತ ತಂಡಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ.
*****