ಬಳ್ಳಾರಿ: ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ಇವುಗಳ ಬಗ್ಗೆ ಮಹಿಳೆಯರಲ್ಲಿ ಅರಿವಿನ ಕೊರತೆಯಿದ್ದು, ಜಾಗೃತಿ ಮೂಡಿಸುವುದರ ಮುಖಾಂತರ ಸದರಿ ಯೋಜನೆಗಳು ಅವರಿಗೆ ತಲುಪುವಂತೆ ನೋಡಿಕೊಳ್ಳುವ ಕೆಲಸವಾಗಬೇಕಿದೆ ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಗರಿ ಸಂಯುಕ್ತಾಶ್ರಯದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಜಿಲ್ಲಾ ಮಟ್ಟದ ಸ್ತ್ರೀಶಕ್ತಿ ಸಮಾವೇಶ ಮತ್ತು ವಸ್ತುಪ್ರದರ್ಶನ ಮಾರಾಟ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆಗಳು ಸೇರಿದಂತೆ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸವನ್ನು ಆಯಾ ಇಲಾಖೆಯ ಅಧಿಕಾರಿಗಳು ಮಾಡಬೇಕು. ಹೈದ್ರಾಬಾದ್ ಕರ್ನಾಟಕದ ಭಾಗದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಸ್ವಲ್ಪ ಹಿಂದುಳಿದಿದೆ. ಈ ಭಾಗದಲ್ಲಿ ಶಿಕ್ಷಣ ಪಡೆಯುದೇ ಇರುವುದು, ಹೆಣ್ಣು ಮಕ್ಕಳಿಗೆ ಬಾಲ್ಯ ವ್ಯವಸ್ಥೆಯಲ್ಲಿ ಮದುವೆ ಮಾಡುವುದು ಇದಕ್ಕೆ ಪ್ರಮುಖ ಕಾರಣ. ಸಮಾಜದಲ್ಲಿ ಸಮಾನತೆ ಬರಬೇಕು ಎಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆಯರ ಸಂಪೂರ್ಣ ಬೆಳವಣಿಗೆಗೆ ಕಾರ್ಯನಿರ್ವಹಿಸಬೇಕಿದೆ. ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ನೀವು ಎಷ್ಟೇ ಕಷ್ಟ ಅನುಭವಿಸಿದ್ರು ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿ ಎಂದು ತಿಳಿಸಿದರು.
ಜಿಪಂ ಸಿಇಒ ನಂದಿನಿ ಕೆ.ಆರ್ ಅವರು ಮಾತನಾಡಿ ಯಾವುದೇ ಒಂದು ಮಗುವಿನ ಮುಂದಿನ ನೂರು ವರ್ಷದ ಭವಿಷ್ಯ ಅಂಗನವಾಡಿ ಕೇಂದ್ರದಿಂದ ಶುರುವಾಗುತ್ತದೆ. ಸಮಾಜ ಮತ್ತು ರಾಷ್ಟ್ರವನ್ನು ಕಟ್ಟಲು ಮಹಿಳೆಯರ ಪಾತ್ರ ತುಂಬಾ ಮುಖ್ಯ. ಇಪ್ಪತ್ತು ಅಂಶಗಳ ಕಾರ್ಯಕ್ರಮ ಸಂಪೂರ್ಣವಾಗಿ ಯಶಸ್ವಿಯಾಗಲು ಅಂಗನವಾಡಿ ಕಾರ್ಯಕರ್ತೆಯರ ಉತ್ತಮ ಕೆಲಸ ಮಾಡಿದ್ದಾರೆ. ಸುಸಜ್ಜಿತ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ ಮಾಡಬೇಕು. ಅಂಗನವಾಡಿಗಳನ್ನು ಮನೆಯ ರೀತಿಯಲ್ಲಿ ನಿಭಾಯಿಸಿ. ಮನೆಯಲ್ಲಿ ನಿಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತೀರೋ ಹಾಗೆ ಅಂಗನವಾಡಿ ಮಕ್ಕಳನ್ನು ನೋಡಿಕೊಳ್ಳಿ ಎಂದರು.
*ಜಿಲ್ಲೆಯ ಪೂರ್ತಿ ಮಾದರಿ ಅಂಗನವಾಡಿ ಕೇಂದ್ರ ನಿರ್ಮಾಣ; ಮುಂದಿನ ಒಂದು ವರ್ಷದ ಅವಧಿಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗನವಾಡಿ ಕೇಂದ್ರಗಳು ಮಾದರಿ ಅಂಗನವಾಡಿ ಕೇಂದ್ರಗಳಾಗಿ ಪರಿವರ್ತನೆ ಆಗಬೇಕು ಎನ್ನುವ ಉದ್ದೇಶವನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಇಲಾಖೆಯೊಂದಿಗೆ ಕೈಜೋಡಿಸಿ ಎಂದರು.
ಈಗಾಗಲೇ ಶುರು ಮಾಡಿರುವ ಮಕ್ಕಳ ಸ್ನೇಹಿ ಗ್ರಾಪಂ ಅಡಿಯಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಗಿದ ನಂತರ ಮುಂದಿನ ಎರಡು ತಿಂಗಳಲ್ಲಿ ಮಹಿಳಾ ಸ್ನೇಹಿ ಗ್ರಾಪಂ ನಿರ್ಮಾಣ ಮಾಡಲು ಎಲ್ಲರು ಸಹಕರಿಸಿ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ನಾಗರಾಜ ಅವರು ಮಾತನಾಡಿ, ಮಹಿಳೆಯರ ಸಮಾನತೆ, ದೌರ್ಜನ್ಯ ಹಕ್ಕುಗಳಿಗೆ ಸಂಬಂಧಿಸಿದಂತೆ ನಾಯಕತ್ವದಲ್ಲಿ ಮಹಿಳೆಯರು, ಕೊವಿಡ್-19 ಇರುವ ಜಗತ್ತಿನಲ್ಲಿ ಸಮಾನ ಭವಿಷ್ಯವನ್ನು ಸಾಧಿಸುವುದು ವಿಶ್ವಸಂಸ್ಥೆಯ 2021 ರ ಅಂತರರಾಷ್ಟ್ರೀಯ ಮಹಿಳಾ ದಿನದ ಧ್ಯೇಯವಾಗಿದೆ ಎಂದರು.
ಕೋವಿಡ್ ಸಮಯದಲ್ಲಿ ಹೆಣ್ಣು ಮಕ್ಕಳ ಸಂಕಷ್ಟದಲ್ಲಿ: ಕೋವಿಡ್ ಸಮಯದಲ್ಲಿ 10 ಜನರಲ್ಲಿ 9 ಜನ ಹೆಣ್ಣು ಮಕ್ಕಳು ಸಮಸ್ಯೆಗಳನ್ನು ಎದುರಿಸಿದ್ದಾರೆ. 10 ಜನರಲ್ಲಿ 7 ಜನ ಮಹಿಳೆಯರು ಉದ್ಯೋಗ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಮಕ್ಕಳು ಮತ್ತು ಮಹಿಳಾ ಕಲ್ಯಾಣ ಇಲಾಖೆಯಲ್ಲಿ 2.86 ಲಕ್ಷ ಜನ ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ. ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೆ, ಮಹಿಳೆಯರ ಸಮಾನತೆಗೆ, ಅವರ ಪ್ರಗತಿಗೆ ಎಲ್ಲರೂ ಸಹಕರಿಸಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿದೇಶಕ ನಾಗರಾಜ ಹೇಳಿದರು.
ಮಹಿಳೆಯರ ಅಭಿವೃದ್ದಿಗಾಗಿ ಈ ಹಿಂದಿನ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು 36 ಕೋಟಿ ಅನುದಾನ ನೀಡಿದ್ದರು. ಆ ಅನುದಾನವನ್ನು ಅಂಗನವಾಡಿ ಅಭಿವೃದ್ದಿಗೆ ಬಳಸಲಾಗಿದೆ ಅವರ ಕಾರ್ಯ ಎಲ್ಲರು ಮೆಚ್ಚುವಂತದ್ದು ಎಂದು ಜಿಲ್ಲಾಧಿಕಾರಿಗಳ ಕಾರ್ಯ ವೈಖರಿಯನ್ನು ನೆನಪು ಮಾಡಿಕೊಂಡರು.
ಪರಿವರ್ತನಾ ಯೋಜನೆ: ದೇವದಾಸಿಯರು, ಮಾಜಿ ದೇವದಾಸಿಯರು, ಲೈಂಗಿಕ ಕಾರ್ಯಕರ್ತೆಯರ ಅಭಿವೃದ್ದಿಗಾಗಿ ಪರಿವರ್ತನಾ ಯೋಜನೆಯನ್ನು ಜಾರಿಗೆ ತರಲಾಗಿದೆ ಇದರ ಮೂಲಕ ನೊಂದ ಮಹಿಳೆಯರ ದ್ವನಿಯಾಗುವ ಕೆಲಸವಾಗಲಿದೆ. ಕೋವಿಡ್ ಸಮಯದಲ್ಲಿ ರಾಜ್ಯ ಮಹಿಳಾ ನಿಗಮದಿಂದ 45 ಜನರನ್ನು ತಮ್ಮ ಮನೆಗಳಿಗೆ ತಲುಪಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಜಿಪಂ ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷೆ ಜಯಕುಮಾರಿ. ಜಿಪಂ ಸದಸ್ಯರಾದ ಅಲ್ಲಂ ಪ್ರಶಾಂತ್, ಕೋಟೇಶ್ವರ್ ರೆಡ್ಡಿ ಅವರು ಮಾತನಾಡಿದರು.
ಜಿಪಂ ಸದಸ್ಯರಾದ ಬನಶಂಕರಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಮಹಿಳೆಯರು ಮತ್ತು ಇತರರು ಇದ್ದರು.
ರಂಗೋಲಿ ಸ್ಪರ್ಧೆಯ ವಿಜೇತರು: 18ರಿಂದ 30 ವರ್ಷದೊಳಗಿನ ರಂಗೋಲಿ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಹರ್ಷಿಣಿ, ಎರಡನೇ ಬಹುಮಾನವನ್ನು ರೂಪಾ ಮತ್ತು ಸಿಎಂಸಿ ರಮ್ಯಶ್ರೀ, ತೃತೀಯ ಬಹುಮಾನವನ್ನು ಪ್ರಿಯಾಂಕ ಪಡೆದರು. 30ರಿಂದ 40 ವರ್ಷದೊಳಗಿನವರ ರಂಗೋಲಿ ಸ್ಪರ್ಧೆ ಮೊದಲ ಬಹುಮಾನವನ್ನು ಎಂ.ನೀಲಾವತಿ, ಎರಡನೇ ಬಹುಮಾನವನ್ನು ಶಶಿಕಲಾ, ತೃತೀಯ ಬಹುಮಾನವನ್ನು ಪುಷ್ಪಾವತಿ ಅವರು ಪಡೆದರೆ, 40 ವರ್ಷ ಮೇಲ್ಪಟ್ಟವರ ಸ್ಪರ್ಧೆಯ ಮೊದಲ ಬಹುಮಾನವನ್ನು ಎಂ.ಆರ್ ವನಜಾ, ಎರಡನೇ ಬಹುಮಾನವನ್ನು ಹೆಚ್.ಎಂ.ಲಿಂಗಮ್ಮ ಅವರು ಪಡೆದರು.
ಜಿಲ್ಲಾ ಮಟ್ಟದ ಪ್ರಶಸ್ತಿ: 2020-21ನೇ ಸಾಲಿನ ಹೊಯ್ಸಳ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಹರ್ಷ ಉಪಾಧ್ಯಾಯ, ಶ್ರೀದೇವಿ ಮತ್ತು ಕ್ರೀಡಾ ಕ್ಷೆತ್ರದಲ್ಲಿ ಸಾಧನೆ ಮಾಡಿದ ರಿತೀಶ್ ಕೆ., ರಿಷಿಕುಮಾರ್,ಬಿ.ಪಿ, ಹಾಗೂ ಕಲೆ, ಸಾಂಸ್ಕøತಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವಂತಿಕಾ ಎ., ಆರ್.ಸಹನಾ ಉಪಾಧ್ಯಾಯ ಎನ್ನುವ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸಾಧಕ ಮಹಿಳೆಯರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಆರೋಗ್ಯ ಇಲಾಖೆಯ ಡಾ.ನಾಗರತ್ನ ಜೋಷಿ, ಪೊಲೀಸ್ ಇಲಾಖೆಯ ಶಾರದಾ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ, ದಾದಿ(ಕೇರ್ ಟೇಕರ್) ಅಶ್ವಥಮ್ಮ, ರೈತ ಮಹಿಳೆಯರಾದ ಸುಧಾ ಮತ್ತು ಸುಮಂಗಳಮ್ಮ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತೃವಂದನಾ ಯೋಜನೆಯಡಿ ಅತ್ಯುತ್ತಮ ಸಾಧನೆ ಮಾಡಿದ ಅಂಗನವಾಡಿ ಮೇಲ್ವಿಚಾರಕಿಯರನ್ನು ಸನ್ಮಾನಿಸಲಾಯಿತು.
*****