–
ಬದಲಾದ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ -ಡಾ.ಅಮ್ಮಸಂದ್ರ ಸುರೇಶ್
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಮೇ.9ಕ್ಕೆ ಚುನಾವಣೆ ನಡೆಯಲಿದ್ದು 12ರಂದು ಪಲಿತಾಂಶ ಪ್ರಕಟವಾಗಲಿದೆ.
ಈ ಬಾರಿಯ ಚುನಾವಣೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಮತ ಚಲಾವಣೆ ಮಾಡಲಿದ್ದಾರೆ. ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಹಾಗೂ ಗಡಿನಾಡು ಘಟಕದ ಅಧ್ಯಕ್ಷರ ಸ್ಥಾನಗಳಿಗೆ ಮಾ. 29ರಿಂದ ಏಪ್ರಿಲ್.7ರವರೆಗೆ ನಾಮಪತ್ರ ಸಲ್ಲಿಸಬಹುದು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಆಕಾಂಕ್ಷಿಗಳು ಈಗಾಗಲೇ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮತಗಳಿವೆ ಹಾಗೂ ಮತ ಗಿಟ್ಟಿಸಿಕೊಳ್ಳುವ ಮಾರ್ಗಗಳ ಕುರಿತು ಚಿಂತನೆ ನಡೆಸುತ್ತಿದ್ದರೆ ಇನ್ನೂ ಕೆಲವರು ಈಗಾಗಲೇ ಪ್ರಚಾರ ಆರಂಭಿಸಿಬಿಟ್ಟಿದ್ದಾರೆ. ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಲಿರುವ ಆಕಾಂಕ್ಷಿಗಳೂ ಕೂಡ ಸಮಾಲೋಚನಾ ಸಭೆಗಳನ್ನು ಆರಂಭಿಸಿರುವ ಜೊತೆಗೆ ಕೆಲವರಂತೂ ಈಗಾಗಲೆ ಭರ್ಜರಿ ಪ್ರಚಾರ ಕೂಡ ಶುರು ಮಾಡಿದ್ದಾರೆ. ಕೆಲವರಂತೂ ಚುನಾವಣೆ ಘೋಷಣೆಯಾಗುವ ಸುಮಾರು ಆರೇಳು ತಿಂಗಳುಗಳಿಂದಲೇ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಇದೀಗ ಚುನಾವಣೆ ಪ್ರಚಾರ ಬಿರುಸುಗೊಂಡಿದ್ದು ಕನ್ನಡಾಂಬೆಯ ತೇರಿಗೆ ಸಾರಥಿಯಾಗಲು ಘಟಾನುಘಟಿಗಳು ಪ್ರಚಾರ ಶುರು ಮಾಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಆರಂಭದಿಂದ 1940ರವರೆಗೂ ಅಧ್ಯಕ್ಷರನ್ನಾಗಿ ಸಾಹಿತ್ಯ, ಕನ್ನಡ ನಾಡು-ನುಡಿಯ ಕುರಿತಾದ ಸೇವೆ, ಬದ್ದತೆಗಳನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಆ ನಂತರ ಕಸಾಪಗೆ ಚುನಾವಣಾ ಪದ್ದತಿಯನ್ನು ಅಳವಡಿಸಿಕೊಳ್ಳಲಾಯಿತು. ಬೆಂಗಳೂರು ನಗರ ಜಿಲ್ಲೆಯಲ್ಲಿ 36,262 ಮತದಾರರಿದ್ದು, ಅತಿ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆಯಾಗಿದೆ. ಎರಡನೇ ಸ್ಥಾನದಲ್ಲಿ 24207 ಮತದಾರರನ್ನು ಹೊಂದಿರುವ ಮಂಡ್ಯ ಜಿಲ್ಲೆಯಿದೆ. ಬೀದರ್ ಜಿಲ್ಲೆಯಲ್ಲಿ 15,000ಕ್ಕೂ ಹೆಚ್ಚು ಮತದಾರರಿದ್ದಾರೆ. ಇದೇ ಮೊದಲ ಬಾರಿಗೆ 1,21,165 ಮತದಾರರು ತಮ್ಮ ಮತಾಧಿಕಾರವನ್ನು ಚಲಾಯಿಸಲಿದ್ದಾರೆ. ಚುನಾವಣೆ ದಿನಾಂಕ ಮೇ.9ಕ್ಕೆ ಮೂರು ವರ್ಷಗಳ ಹಿಂದಿನಿಂದ ಸತತವಾಗಿ ಸದಸ್ಯರಾಗಿರುವವರಗೆ ಮಾತ್ರ ಮತದಾನ ಮಾಡಲು ಅವಕಾಶವಿದೆ.
ವಾಡಿಕೆಯ ಪ್ರಕಾರ ಕಸಾಪ ಅಧ್ಯಕ್ಷರ ಆಡಳಿತಾವಧಿ 3 ವರ್ಷಗಳಾಗಿತ್ತು. ಪುಸ್ತುತ ಅಧ್ಯಕ್ಷರಾದ ಮನುಬಳಿಗಾರ್ ಅವರು ಇದನ್ನು 5 ವರ್ಷಗಳಿಗೆ ಏರಿಸಿದ್ದರ ಪರಿಣಾಮವಾಗಿ ಅವರಿಗೆ ಎರಡು ವರ್ಷಗಳ ಹೆಚ್ಚುವರಿ ಅವಧಿ ಲಭಿಸಿತು. ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಚುನಾವಣಾ ದಿನಾಂಕಕ್ಕೆ 10 ವರ್ಷಗಳ ಹಿಂದಿನಿಂದ ಸತತವಾಗಿ ಸದಸ್ಯರಾಗಿರಬೇಕಾಗಿರುತ್ತದೆ. ಅದೇ ರೀತಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು 5 ವರ್ಷಗಳ ಹಿಂದಿನಿಂದ ಸದಸ್ಯರಾಗಿರಬೇಕು.
ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದೂರದರ್ಶನ ನಿವೃತ್ತ ಹಿರಿಯ ಅಧಿಕಾರ ಡಾ.ಮಹೇಶ್ ಜೋಷಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಹಾಗೂ ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಮಾಲಿ ಪಾಟೀಲ,ಬಳ್ಳಾರಿಯ ರಾಜಶೇಖರ ಮುಲಾಲಿ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವರು ರಾಜ್ಯಾದ್ಯಂತ ಸಂಚರಿಸಿ, ಸಾಹಿತಿಗಳು, ಲೇಖಕರು, ಕನ್ನಡದ ಮನಸ್ಸುಗಳು ಮತ್ತು ಮತದಾರರನ್ನು ಸೆಳೆಯುವ ವಿವಿದ ತಂತ್ರಗಳನ್ನು ನಡೆಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ಈ ಬಾರಿ ಯುವ ಆಕಾಂಕ್ಷಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ.
ತಿರುಮಲೆ ತಾತಚಾರ್ಯ ಶರ್ಮ, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎಂ.ಎನ್.ಮೂರ್ತಿರಾವ್, ಜಿ.ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ, ಗೂ.ರು.ಚನ್ನಬಸಪ್ಪ, ಸಾ.ಶೀ.ಮರುಳಯ್ಯ, ಡಾ.ಹಂಪ ನಾಗರಾಜಯ್ಯ, ಜಿ.ನಾರಾಯಣ, ಚಂಪಾರಂತಹ ಕನ್ನಡ ಸಾರಸ್ವತ ಲೋಕದ ದಿಗ್ಗಜರು ಕಸಾಪ ಆಡಳಿತದ ಚುಕ್ಕಾಣಿ ಹಿಡಿದು ಕನ್ನಡದ ಕಾರ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಹೆಚ್ಚಿನವರು ಸಾಹಿತಿಗಳು ಮತ್ತು ಹೋರಾಟಗಾರರು ರಾಜ್ಯಾಧ್ಯಕ್ಷಗಿರಿ ಅಲಂಕರಿಸುತ್ತಾ ಬಂದರು. ಹರಿಕೃಷ್ಣ ಪುನರೂರು, ಡಾ.ನಲ್ಲೂರು ಪ್ರಸಾದ್, ಪುಂಡಲೀಕ ಹಾಲಂಬಿಯಂತಹ ಸಾಹಿತ್ಯಾಸಕ್ತರೂ ಕೂಡ ಆಯ್ಕೆಯಾಗುವ ಮೂಲಕ ಹೊಸ ಅಲೆ ಆರಂಭವಾಯಿತು. ಮನುಬಳಿಗಾರ್ ಅಧ್ಯಕರಾಗುವ ಮೂಲಕ ನಿವೃತ್ತ ಅಧಿಕಾರಿಗಳ ಆಗಮನ ಕೂಡ ಕಸಾಪಗೆ ಆಗಿದೆ. ಇದೀಗ ನಿವೃತ್ತ ಅಧಿಕಾರಿ ವರ್ಗ ಕೂಡ ಕಸಾಪ ಚುನಾವಣೆಗಳತ್ತ ಕಣ್ಣಿಟ್ಟಿದೆ.
ಗಮನಾರ್ಹವಾದ ವಿಷಯವೆಂದರೆ, ಇಷ್ಟೊಂದು ಸುದೀರ್ಘ ಇತಿಹಾಸವನ್ನು ಹೊಂದಿರುವ ಕಸಾಪಗೆ ಇದುವರೆಗೂ ಮಹಿಳೆಯರು ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ. ಕಸಾಪ ಪುರುಷ ಪ್ರಧಾನ ವ್ಯವಸ್ಥೆಯಿಂದ ಹೊರಬಂದಿಲ್ಲ ಎಂಬ ದೂರುಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಕಾವ್ಯ, ಗದ್ಯ, ಕಥೆ, ಕಾದಂಬರಿ, ಪ್ರಬಂಧ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತುಂಬಾ ಒಳ್ಳೆಯ ಮತ್ತು ಗಟ್ಟಿ ಸಾಹಿತ್ಯವನ್ನು ಮಹಿಳಾ ಲೇಖಕರು ಕನ್ನಡ ಸಾಹಿತ್ಯ ಜಗತ್ತಿಗೆ ನೀಡಿದ್ದಾರೆ. ವಚನ ಸಾಹಿತ್ಯದಿಂದಿಡಿದು ನವ್ಯ ಸಾಹಿತ್ಯದವರೆಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರು ಸಾಕಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಆಧ್ಯಕ್ಷರಾದ ಬಾ.ಹ.ರಮಾಕುಮಾರಿ ಅವರಂತಹ ಮಹಿಳಾ ಸಾಹಿತಿಗಳೂ ಮತ್ತು ಉತ್ತಮ ಸಂಘಟಕರು ಈ ಅರ್ಹತೆಯನ್ನು ಹೊಂದಿದ್ದಾರೆ. ಹೀಗಾಗಿ ಈ ಬಾರಿ ಕಸಾಪ ಅಧ್ಯಕ್ಷರಾಗಿ ಮಹಿಳೆಯೊಬ್ಬರು ಆಯ್ಕೆಯಾಗಬೇಕಾಗಿರುವುದು ಅವಶ್ಯಕವಾಗಿದೆ. ಈ ಕುರಿತಂತೆ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯ ಮಹಿಳೆಯೊಬ್ಬರಿಗೆ ಸಿಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿದೆ. ಸ್ವಾರ್ಥ ಮತ್ತು ಅಧಿಕಾರ ದಾಹದಿಂದ ಹೊರಬಂದರೆ ಈ ಆಶಯ ಈಡೇರಬಹುದು.
ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ, ಪುಸ್ತಕ ಪ್ರಕಟಣೆ, ಸಾಹಿತ್ಯದ ಉಳಿವು ಹಾಗೂ ಕನ್ನಡತನವನ್ನು ಸಾಕಾರಗೊಳಿಸುವ ಮೂಲ ಉದ್ದೇಶಗಳೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಇಚ್ಚಾಶಕ್ತಿಯೊಂದಿಗೆ ಕಸಾಪ ಆರಂಭವಾಯಿತು. ರಾಜ್ಯಾಧ್ಯಕ್ಷರಾಗುವವರ ಮುಂದೆ ಸಾಕಷ್ಟು ಸವಾಲುಗಳಿವೆ ಮತ್ತು ಈ ಸವಾಲುಗಳನ್ನು ಎದುರಿಸಿ, ಪರಿಹಾರಗಳನ್ನು ಕಂಡುಕೊಂಡು, ಸರ್ಕಾರ ಮತ್ತು ಸಾಹಿತ್ಯ ಪರಿಷತ್ತಿನ ಮಧ್ಯೆ ಉತ್ತಮ ಬಾಂದವ್ಯವನ್ನು ಇಟ್ಟುಕೊಂಡು ಕನ್ನಡದ ಕೆಲಸವನ್ನು ನಿಸ್ವಾರ್ಥ ಮನೋಭಾವದಿಂದ ಮಾಡುವ, ಕರ್ನಾಟಕದ ಸರ್ವಾಂಗೀಣ ಅಭಿವೃದ್ದಿ ಸಾಧಿಸುವ ಹಂಬಲವಿರುವ, ನಿಸ್ವಾರ್ಥ ನಾಯಕನೊಬ್ಬನ ಅಗತ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಇಂದು ಅತ್ಯಗತ್ಯವಾಗಿ ಬೇಕಾಗಿದೆ. ಕಸಾಪಗೆ ಇಂದು ಬೇಕಾಗಿರುವುದು ಗಟ್ಟಿ ಮನಸ್ಸಿನ, ವಿಶಾಲ ಮನೋಭಾವದ ನಾಯಕತ್ವ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಆಕಾಂಕ್ಷಿಗಳು ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ.
ಕೇವಲ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು, ದತ್ತಿ ಉಪನ್ಯಾಸಗಳನ್ನು ಏರ್ಪಡಿಸುವುದು, ದತ್ತಿ ಪ್ರಶಸ್ತಿಗಳನ್ನು ಘೋಷಿಸುವುದಕ್ಕಷ್ಟೆ ಕಸಾಪ ಸೀಮಿತವಾಗಬಾರದು. ಕನ್ನಡ ಸಾಹಿತ್ಯ ಪರಿಷತ್ತು ಬದಲಾಗಿರುವ ಸನ್ನಿವೇಶಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆಗಳಿಗೆ ಮೈಒಡ್ಡಿಕೊಳ್ಳಬೇಕಾಗಿದೆ. ಬದಲಾವಣೆ ಜಗದ ನಿಯಮ ಇದಕ್ಕೆ ವಿರುದ್ದವಾಗಿ ಜಡ್ಡುಗಟ್ಟಿದ ಯಾವ ಸಂಸ್ಥೆಯು ಹೆಚ್ಚು ದಿನ ಯಶಸ್ವಿಯಾಗಲು ಸಾಧ್ಯವಿಲ್ಲ. ಪ್ರಾದೇಶಿಕ ಅಸಮಾನತೆಯತ್ತ ಕೂಡ ಕಸಾಪ ಗಮನಹರಿಸಬೇಕಾಗಿದೆ.
ಕರ್ನಾಟಕದ ಏಕೀಕರಣವಾಗಿ ದಶಕಗಳೇ ಕಳೆದರೂ ಏಕೀಕರಣ ಉದ್ದೇಶ ಮತ್ತು ಆಶಯ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಗಡಿ ವಿವಾದ ಇನ್ನೂ ಬಗೆಹರಿದಿಲ್ಲ. ಕರ್ನಾಟಕದ ಗಡಿ ವಿವಾದ ಕುರಿತು ರಚಿಸಲಾದ ಮಹಾಜನ್ ವರದಿ ಇದುವರೆಗೂ ಜಾರಿಗೆ ಬಂದಿಲ್ಲ. ಈ ವರದಿಯ ಪ್ರಕಾರ ಮಹಾರಾಷ್ಟ್ರದ ಸಂಪೂರ್ಣ ಅಕ್ಕಲಕೋಟೆ ತಾಲ್ಲೂಕು ಮತ್ತು ಇತರೆ 247 ಹಳ್ಳಿಗಳು, ಕಾಸರಗೂಡು ಸೇರಿದಂತೆ ಕೇರಳದ ಚಂದ್ರಗಿರಿ ನದಿಯ ಉತ್ತರ ಭಾಗ, ಕರ್ನಾಟಕಕ್ಕೆ ಸೇರಬೇಕಾಗಿದೆ. ಬಹುದಿನಗಳ ಬೇಡಿಕೆಯಾದ ತುಮಕೂರು ಗಡಿ ಭಾಗವಾದ ಮಡಕಶಿರಾ ಹಾಗೂ ಚಾಮರಾಜನಗರ ಜಿಲ್ಲೆಯ ಗಡಿ ಭಾಗವಾದ ತಾಳವಾಡಿ ಪಿರ್ಕಾ ಇದುವರೆಗೂ ಕರ್ನಾಟಕಕ್ಕೆ ಸೇರಲಿಲ್ಲ. ಬೆಳಗಾವಿ ಸಮಸ್ಯೆ ದಿನ ಕಳೆದಂತೆ ಹೆಚ್ಚು ಜಟಿಲವಾಗುತ್ತಿದೆ. ಬೆಂಗಳೂರು ನಗರ ಕೆಜಿಎಫ್, ಚಾಮರಾಜನಗರ ಜೆಲ್ಲೆ ಮತ್ತು ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ ತಮಿಳರ ಸಂಖ್ಯೆ ಪ್ರಭಲವಾಗುತ್ತಿದ್ದರೆ, ಕೋಲಾರ, ತುಮಕೂರಿನ ಗಡಿ ಪ್ರದೇಶಗಳೂ, ಬಳ್ಳಾರಿ, ರಾಯಚೂರು, ಜೆಲ್ಲೆಗಳಲ್ಲಿ ತೆಲುಗರ ಪ್ರಾಭಲ್ಯ ಹೆಚ್ಚುತ್ತಿದೆ. ಬೆಳಗಾವಿಯಲ್ಲಿ ಮರಾಠಿಗರು ನೆಲೆ ಕಂಡುಕೊಂಡಿದ್ದಾರೆ. ಮೈಸೂರು ಮತ್ತು ಕೊಡಗು ಜಿಲ್ಲೆಯ ಗಡಿ ಭಾಗಗಳಲ್ಲಿ ಕೇರಳಿಗರು ಹೆಚ್ಚು ಸಂಖ್ಯೆಯಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ.
ನಮ್ಮ ಯುವಜನರಿಗೆ ಉದ್ಯೋಗದ ಬರವಸೆಯನ್ನು ಒದಗಿಸುವ ಉದ್ಯೋಕ್ಕಾಗಿನ ಪರೀಕ್ಷೆಗಳು ಇನ್ನೂ ಕೂಡ ಸಂಪೂರ್ಣವಾಗಿ ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿಲ್ಲ. ರಾಜ್ಯದ ಒಟ್ಟಾರೆ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆಯ ಕೂಗು ಇನ್ನೂ ಮುಂದುವರಿದಿದೆ. ಅಭಿವೃದ್ಧಿಯ ಅಸಮತೋಲನದ ವಿರುದ್ದ ಕಸಾಪ ಹೋರಾಟ ನಡೆಸಬೇಕಾಗಿದೆ. ಪ್ರತ್ಯೇಕ ರಾಜ್ಯದ ಕೂಗು ಹಾಗಾಗ ಕೇಳಿ ಬರುತ್ತಿದೆ, ಇದು ಬೃಹತ್ತಾಗಿ ಬೆಳೆಯುವ ಮುನ್ನ ಅಂತಹ ಅಸಮಾಧಾನಗಳನ್ನು ಸರಿಪಡಿಸಲು ಮುಂದಾಗಬೇಕಾಗಿದೆ. ಶಿಕ್ಷಣದಲ್ಲಿ ಕನ್ನಡದ ಸ್ಥಾನ-ಮಾನ ಇನ್ನೂ ಚರ್ಚಿತ ವಸ್ತುವಾಗಿಯೇ ಉಳಿದಿದ್ದು ಮಾತೃಭಾಷಾ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರಲು ಶ್ರಮಿಸಬೇಕಾಗಿದೆ. ಕನ್ನಡ ವಿಶ್ವವಿದ್ಯಾನಿಲಯದ ನೋವು-ನಲಿವುಗಳಿಗೂ ಸ್ಪಂಧಿಸಬೇಕಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ರಾಜ್ಯ ಮತ್ತು ದೇಶದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದರೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದಂತೆ ತೃಪ್ತಿಕರವಾದ ಕೆಲಸ ಇನ್ನೂ ನಡೆದಿಲ್ಲ. ಕನ್ನಡವನ್ನು ತಂತ್ರಜ್ಞಾನ ಭಾಷೆಯನ್ನಾಗಿಸುವ ನಿಟ್ಟಿನಲ್ಲೂ ಕೂಡ ಸಾಕಷ್ಟು ಕೆಲಸ ಆಗಬೇಕಾಗಿದೆ. ರಾಜದಾನಿ ಬೆಂಗಳೂರನ್ನು ಸಿಲಿಕಾನ್ ಸಿಟಿ ಎಂದು ಕರೆದರೂ ಈ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಂದ ಕನ್ನಡ ಹಾಗೂ ಕನ್ನಡಿಗರಿಗೆ ಆಗಿರುವ ಅನುಕೂಲ ಅಷ್ಟರಲ್ಲೇ ಇದೆ. ಈ ದಿಕ್ಕಿನಲ್ಲಿ ನೋಡುವುದಾದರೆ ಕನ್ನಡ ತಂತ್ರಾಂಶದಲ್ಲಿಯೂ ಸಾಕಷ್ಟು ಪ್ರಗತಿಯಾಗಬೇಕಾಗಿದೆ. ಭಾಷಾಭಿಮಾನದ ವಿಷಯದಲ್ಲಿ ಬದ್ದತೆ ಇನ್ನೂ ಕನಸಿನ ಮಾತೇ ಆಗಿದೆ. ಕನ್ನಡ ಚಲನಚಿತ್ರ ರಂಗ ಕೂಡ ಸಮಸ್ಯೆಗಳ ಸುಳಿಯಿಂದ ಹೊರಬಂದಿಲ್ಲ. ನೀರಾವರಿ ಸಮಸ್ಯೆಗಳು ದೂರವಾಗಿಲ್ಲ.
ಶಾಸ್ತ್ರೀಯ ಸ್ಥಾನಮಾನದ ಬಹುಮುಖ್ಯ ಉದ್ದೇಶ ಆ ಭಾಷೆಯ ಪಾರಂಪರಿಕ ಅಂತಃಸತ್ವವನ್ನು ಎತ್ತಿ ನಿಲ್ಲಿಸುವುದು ಮತ್ತು ಹೊಸ ತಲೆಮಾರಿಗೆ ಅದನ್ನು ಮುಟ್ಟಿಸುವುದು. ಆದರೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ-ಮಾನ ದೊರೆತು ವರ್ಷಗಳೇ ಕಳೆದರೂ ಕೂಡ ಇದುವರೆಗೂ ಈ ನಿಟ್ಟಿನಲ್ಲಿ ಅಂತಹ ಉತ್ತಮ ಪ್ರಗತಿಯೇನೂ ಆಗಿಲ್ಲ. ಕನ್ನಡದ ಕುರಿತಾದ ನಿರ್ಲಕ್ಷ್ಯ ಹಾಗೂ ಪೂರ್ವಾಗ್ರಹಗಳು ಶಾಸ್ತ್ರೀಯ ಕನ್ನಡವನ್ನು ಬಡವಾಗಿಸಿವೆ. ಅನೇಕ ಕನ್ನಡ ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ರಾಜ್ಯದಲ್ಲಿ ವಿವಿಧ ಕಾರಣಗಳಿಂದಾಗಿ ಮುಚ್ಚಲಾಗುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಕಸಾಪ ಧ್ವನಿಯಾಗಬೇಕಾಗಿದೆ. ತಮ್ಮ ನಾಡಿನಲ್ಲಿಯೇ ಕನ್ನಡಿಗರು ಎರಡನೇ ದರ್ಜೆಯ ಪ್ರಜೆಗಳಂತೆ ಜೀವನ ಸಾಗಿಸುವುದು ಎಷ್ಟು ಸರಿ? ಕರ್ನಾಟಕದಲ್ಲಿ ಮೊದಲು ಕನ್ನಡ, ಕನ್ನಡಿಗರು ಗಟ್ಟಿಯಾಗಿ ನೆಲೆ ನಿಲ್ಲಿಬೇಕಾಗಿದೆ.
ಕಸಾಪ ರಾಜ್ಯಾಧ್ಯಕ್ಷಗಿರಿಗಾಗಿನ ಚುನಾವಣಾ ಸ್ಪರ್ಧೆ ಸುಲಭದ ಮಾತೇನೂ ಅಲ್ಲ. ಮೂರು ಲಕ್ಷಕ್ಕೂ ಹೆಚ್ಚು ಮತದಾರರು ರಾಜ್ಯಾದ್ಯಂತ ಹರಡಿಕೊಂಡಿದ್ದಾರೆ. ಇವರೆನ್ನಲ್ಲಾ ಸಂಪರ್ಕಿಸಲು ಮತ್ತು ತಮ್ಮ ಇದುವರೆಗಿನ ಸಾಧನೆಗಳನ್ನು ಹಾಗೂ ಮುಂದೆ ತಾವು ಮಾಡಲಿರುವ ಕಾರ್ಯಗಳನ್ನು ಮತದಾರರಿಗೆ ತಿಳಿಸಬೇಕಾದರೆ ಆಕಾಂಕ್ಷಿಗಳು ಆರ್ಥಿಕವಾಗಿ ಸಾಕಷ್ಟು ಸದೃಡರಾಗಿರಲೇಬೇಕು. ಜಾತಿ ಮತ್ತು ಹಣ ಎರಡೂ ಕೂಡ ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂಬುದನ್ನು ಯಾರೂ ಅಲ್ಲಗೆಳೆಯಲಾರರು. ಈ ರೀತಿಯ ಪರಿಸ್ಥಿತಿಯ ನಿರ್ಮಾಣವಾಗುವುದರೊಂದಿಗೆ ಬಡ ಮತ್ತು ಮಧ್ಯಮ ವರ್ಗದ ಸಾಹಿತಿಗಳು ಕನ್ನಡಮ್ಮನ ಸೇವೆ ಮಾಡಬೇಕೆಂಬ ಕನಸು ಕಾಣುವುದೂ ಕೂಡ ಸಾಧ್ಯವಿಲ್ಲದ ವಾತಾವರಣ ಸೃಷ್ಟಿಯಾಗಿದೆ.
ಕಸಾಪ ಚುನಾವಣೆಗಳು ಹಣ ಮತ್ತು ಜಾತಿಯಿಂದ ಮುಕ್ತವಾದರೆ ಒಳ್ಳೆಯ ಸಾರಥಿ ಆಯ್ಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತಹ ಪರಿಸ್ಥಿತಿಯ ನಿರ್ಮಾಣದ ಜವಾಬ್ದಾರಿ ಕಸಾಪದ ಪ್ರತಿಯೊಬ್ಬ ಸದಸ್ಯನ ಮೇಲೂ ಇದೆ.
###
-ಡಾ.ಅಮ್ಮಸಂದ್ರ ಸುರೇಶ್
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು
ಮೊಬೈಲ್ : 9448402346