ಅನುದಿನ ಕವನ-೭೭ ಕವಯತ್ರಿ:ನೂರ್ ಜಹಾನ್, ಕವನದ ಶೀರ್ಷಿಕೆ: ನೇಸರ

ಕವಯತ್ರಿ ಶ್ರೀಮತಿ ನೂರ್ ಜಹಾನ್ ಅವರ ಕಿರು ಪರಿಚಯ

ಹೆಸರು:ನೂರ್ ಜಹಾನ್
ವಿದ್ಯಾಭ್ಯಾಸ:ಕನ್ನಡ ಎಂ,ಎ ಹಾಗೂ ಮಹಿಳಾ ಅಧ್ಯಯನ ಡಿಪ್ಲೊಮಾ

ಪ್ರಕಟಿತ ಕೃತಿಗಳು: ಪ್ರೀತಿಯ ಹಾದಿಯಲ್ಲಿ, ಕಥಾಸಂಕಲನ
ಉರ್ದುವಿನಿಂದ ಕನ್ನಡಕ್ಕೆ ಅನುವಾದ, ಮುಡಿಯಿಂದ ಬಿದ್ದ ಹೂವು, ಕವನ ಸಂಕಲನ, ಮುಂತಾಜ್ ಮತ್ತು ಇತರೆ ಕಥೆಗಳು, ಕಥಾಸಂಕಲನ

ಅಪ್ರಕಟಿತ ಕೃತಿಗಳು: ಅನಾಥೆ(ಕಥಾಸಂಕಲನ) ಪರಿವರ್ತನೆ (ಕಥಾಸಂಕಲನ), ಕಾವ್ಯಗೊಂಚಲು (ನೂರ್ ಜಹಾನ್ ರವರ ನೂರಾರು ಕವಿತೆಗಳು) ಕವನ ಸಂಕಲನ, ಜೀವನ ಕಾವ್ಯ, ( ನೂರ್ ಜಹಾನ್ ರವರ ನೂರೊಂದು ಕವಿತೆಗಳು)

ವಿಳಾಸ: ಶ್ರೀಮತಿ ನೂರ್ ಜಹಾನ್, ಸಾಹಿತಿ,
ಮಾಜಿ ನಗರಸಭೆ ಸದಸ್ಯರು
9 ನೇ ವಾರ್ಡ್, ಎಸ್, ಎಲ್, ಚೌಕಿ,
ಹೊಸಪೇಟೆ
*****
ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಶ್ರೀಮತಿ ನೂರ್ ಜಹಾನ್ ಅವರ ‘ನೇಸರ ‘ ಕವಿತೆ ಪ್ರಕಟವಾಗಿದೆ.👇

ನೇಸರ

ಓ ಇಳೆಯೇ ನಿನ್ನ ನೋಡಿ ನಾನು ನಾಚಿ ನಿಂತಿಹೆ
ನಿನ್ನ ಮುಗ್ಧ ಸೌಂದರ್ಯ ನೋಡಿ ನನ್ನ ಮುಖ ಲಜ್ಜೆಯಿಂದ ಕೆಂಪಾಗಿದೆ
ಬೆಳಗಿನಿಂದ ನನ್ನ ರೌದ್ರವಾತಾರದಿಂದ ಹೆದರಿಸಿದೆ ನಾನು
ಆದರೂ ಹೀಗೇ ಮೌನವಾಗಿ ನಿಂತಿರುವೆ ನೀನು

ನಿನ್ನ ಆ ಒಡಲ ಹಸಿರು ಚೆಲುವು
ನಿನ್ನ ಮಡಿಲಲಿ ಹರಿದಾಡುವ ಆ ಸುಂದರ ಜಲಧಾರೆಯು
ನನ್ನನು ಮೆತ್ತಗಾಗಿಸಿದೆ
ನಿನ್ಮ ಆ ಮುಗ್ಧ ಸೌಂದರ್ಯ ನನ್ನನು ನಿನ್ಮಡೆಗೆ ಸೆಳೆದಿದೆ

ಸೂರ್ಯ ಎನ್ನುವರೆನಗೆ ಜನರು
ಒಮ್ಮೆ ರವಿ ಎಂದರೆ ಒಮ್ಮೆ ನೇಸರ ಅನ್ನುವರು
ಹೀಗೆಯೇ ಹಲವಾರು ಹೆಸರು ನನಗೆ
ಒಮ್ಮೆ ಸುಡುವೆ ನಿನಗೆ
ಒಮ್ಮೆ ತಂಪನೆರಸುವೆ

ನಿನಗೂ ಧರೆ ಎನ್ನುವರು
ಇಳೆ ಎನ್ನುವರು ವಸುಂಧರೆ ಎನ್ನುವರು
ಸಹನೆಗೆ ಮರು ಹೆಸರು ನೀನು ಭೂರಮೆಯೇ
ಕ್ಷಮಿಸಿ ನನ್ನನು ಪ್ರೀತಿಸು ಧರಿತ್ರಿಯೇ

ಒಮ್ಮೆ ಮೋಡಗಳ ಮರೆಗೆ ಮರೆಯಾಗುವೆ
ಒಮ್ಮೆ ಮೋಡವಾಗಿ ಜೋರಾಗಿ ಗರ್ಜಿಸುವೆ
ಒಮ್ಮೆ ಮಿಂಚುವೆ ನಿನಗಾಗಿ
ಒಮ್ಮೆ ಮಳೆ ಸುರಿವೆ ಜೋರಾಗಿ

ಎಲ್ಲಾ ನಿನಗಾಗಿ ನಿನ್ನ ಒಲವಿಗಾಗಿ
ನಿನ್ನ ಆ ಸೌಂದರ್ಯ ಸೆಳದಿದೆ ನನಗೆ
ತೋರುವೆಯಾ ಪ್ರೀತಿ ನನಗಾಗಿ

ಓ ನನ್ನ ಪ್ರೀತಿಯ ಇಳೆಯೇ
ಇದೋ ನಿನ್ನ ಪ್ರೀತಿಗಾಗಿ ನಾನು
ಮಳೆಯನು ಸುರಿವೆ

-ನೂರ್ ಜಹಾನ್, ಹೊಸಪೇಟೆ