ಇದು ಪ್ರಸಕ್ತ ದಿನಮಾನದ ಕವಿತೆ. ಪ್ರಸ್ತುತ ವಿದ್ಯಮಾನಗಳ ಕಥೆ. ಸಂಪರ್ಕ ಮತ್ತು ಸಮೂಹ ಮಾಧ್ಯಮಗಳು ಬೆಳೆದಂತೆಲ್ಲಾ, ವಾಹಿನಿಗಳು ವಿಶ್ವವನ್ನು ಅತಿಯಾಗಿ ಆಕ್ರಮಿಸಿಕೊಂಡು, ಸಾಮಾಜಿಕ ಜಾಲತಾಣಗಳು ಬದುಕನ್ನು ಮಿತಿ ಮೀರಿ ಆವರಿಸಿಕೊಂಡಿವೆ. ಇದೆಲ್ಲದರ ಪರಿಣಾಮ ವದಂತಿವೀರರ ಆರ್ಭಟ, ಸುದ್ದಿಜೀವಿಗಳ ಹಾವಳಿ ಎಲ್ಲೆ ದಾಟಿದೆ. ಇಂದು ಸೂರ್ಯನಿಗಿಂತಲೂ ಮಿಣುಕುಹುಳಗಳೇ ಪ್ರಕಾಶಮಾನವೆಂಬಂತೆ ಬಿಂಬಿಸಿಕೊಳ್ಳುತ್ತಿವೆ. ಖಾಲಿಬಿಂದಿಗೆಗಳು ತುಂಬಿದಕೊಡಗಳ ಬಾಯಿ ಮುಚ್ಚಿಸಿವೆ. ಏನಂತೀರಾ.?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. 👇
ದುರಂತ..!
ಶ್ರಮದಿ ಸಾಧನೆ ಮಾಡಿ
ಸುದ್ದಿಯಾಗುವುದಕಿಂತ..
ಸುಮ್ಮನೆ ಸುದ್ದಿಯಾಗುವುದೇ
ಸಾಧನೆ ಎನ್ನುವ ಹುಚ್ಚು.!
ದುಡಿದು ಹೆಸರು ಮಾಡಿ
ಹಾರ ಹಾಕಿಸಿಕೊಳ್ಳುವರಿಗಿಂತ
ಹಾರ ಹಾಕಿಸಿಕೊಳ್ಳುವುದರಲ್ಲೇ
ಹೆಸರಾಗುವವರು ಹೆಚ್ಚು.!
ಸದಾ ಸಣ್ಣ ಸಣ್ಣದ್ದನ್ನೂ
ದೊಡ್ಡದಾಗಿ ಗುಡ್ಡೆ ಹಾಕಿ
ಸುದ್ದಿಯಾಗುವಂತೆ ಮಾಡಿ
ಸದ್ದು ಮಾಡುವ ಕಿಚ್ಚು.!
ಚೈತನ್ಯಶಾಲಿ ತಾರೆಗಳಿಗಿಂತ
ಕ್ಷಣಿಕ ಮೆರೆವ ಉಲ್ಕೆಗಳೇ
ಹರಡಿವೆ ಭ್ರಮೆಯ ಮಿಂಚು
ಲೋಕವ ಬೀಳಿಸಿದೆ ಬೆಚ್ಚು.!
ತತ್ವ ಸಿದ್ದಾಂತಗಳಿಲ್ಲದ
ಆತ್ಮರತಿ ತುತ್ತೂರಿಗಳಿಗೆ
ಬೊಬ್ಬಿರಿವ ಸ್ವಯಂಘೋಷಿತ
ವದಂತಿವೀರರ ಆರ್ಭಟಕೆ
ನಿತ್ಯ ಜಗವಾಗಿದೆ ಪೆಚ್ಚು.!
-ಎ.ಎನ್.ರಮೇಶ್. ಗುಬ್ಬಿ.
*****