ಉತ್ತನೂರಿನಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ’ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದೇ ಗ್ರಾಮವಾಸ್ತವ್ಯದ ಮುಖ್ಯ ಉದ್ದೇಶ -ಡಿಸಿ ಮಾಲಪಾಟಿ

ಬಳ್ಳಾರಿ: ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದೇ ಗ್ರಾಮವಾಸ್ತವ್ಯದ ಮುಖ್ಯ ಉದ್ದೇಶ ಎಂದು ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಟಿ ಅವರು ಹೇಳಿದರು.
ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿಂಚಣಿ, ರೇಷನ್ ಕಾರ್ಡ್ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ. ಉತ್ತನೂರ ಗ್ರಾಮದ ಪ್ರಮುಖವಾದ ಸಮಸ್ಯೆ ಬೆಳೆಗೆ ಸರಿಯಾದ ನೀರಿನ ವ್ಯವಸ್ಥೆಯಿಲ್ಲ. ಕೊನೆಗೆ ಇರುವುದರಿಂದ ಕಾಲುವೆ ನೀರು ಸರಿಯಾಗಿ ಬರುತ್ತಿಲ್ಲ. ಗದ್ದೆಗಳು ನೀರಿಲ್ಲದೆ ಬರಡಾಗುತ್ತಿವೆ. ಒಂದು ಬೆಳೆಗೂ ನೀರು ಸಿಗುತ್ತಿಲ್ಲ ಎನ್ನುವುದರ ಕುರಿತು ಪರಿಹಾರ ನೀಡುವಂತೆ ಅರ್ಜಿಗಳನ್ನು ಪಡೆಯಲಾಗಿದೆ ಎಂದು ತಿಳಿಸಿದರು.
ಈ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿ, ಅತೀ ಶೀಘ್ರದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗುವುದು. ರೈತರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ವಾರದಲ್ಲಿ ಚರ್ಚೆ ಮಾಡಲಾಗುತ್ತದೆ‌ ಎಂದು ಹೇಳಿದರು.
ಬಂದ ಅರ್ಜಿಗಳಲ್ಲಿ ಬಹುತೇಕ ಆಶ್ರಯ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ನೀಡುವುದೇ ಆಗಿವೆ. ಒಂದೇ ಮನೆಯಲ್ಲಿ ನಾಲ್ಕು ಐದು ಕುಟುಂಬಗಳು ವಾಸಿಸುತ್ತಿವೆ. ಊರಲ್ಲಿ ಸರ್ಕಾರಿ ಜಮೀನು ಇಲ್ಲ. ಖಾಸಗಿ ಜಮೀನು ಖರೀದಿಸಿ, ಜನರಿಗೆ ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದರು.
ಸುಸಜ್ಜಿತವಾದ ಪ್ಲಾಟ್ ಗಳನ್ನು ಮಾಡಿ, ಅಂಗನವಾಡಿ, ಶಾಲೆಗಳನ್ನು ತೆರೆಯಲಾಗುವುದು. ಆಶ್ರಯ ಯೋಜನೆಯಡಿ ಜಾಗ ಮತ್ತು ಜಾಗದ ಜತೆ ಮನೆ ಕಟ್ಟಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು. ಎಂದರು.
ಕಾರ್ಯಕ್ರಮದಲ್ಲಿ ಸಿರುಗುಪ್ಪ ಶಾಸಕ ಎಂ.ಎಸ್‌.ಸೋಮಲಿಂಗಪ್ಪ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಜಿಪಂ ಸದಸ್ಯ ಕೋಟೇಶ್ವರ ರೆಡ್ಡಿ ಅವರು ಮಾತನಾಡಿದರು, ಗ್ರಾಪಂ‌ ಅಧ್ಯಕ್ಷ ಮಣಿಕಂಠ ಸೇರಿದಂತೆ ಇತರರು ಇದ್ದರು.