ಮಹಾತ್ಮ ಗಾಂಧೀಜಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ’
ಇಪ್ಪತ್ತನೇ ಶತಮಾನದ ಅಹಿಂಸೆಯ ಸಂಕೇತವಾಗಿದ್ದ ಮಹಾತ್ಮ ಗಾಂಧಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಏಕೆ ಬರಲಿಲ್ಲ? ಎಂಬುದು ಇಂದಿಗೂ ಭಾರತೀಯರು ಸೇರಿದಂತೆ ಜಗತ್ತಿನಾದ್ಯಂತದ ಶಾಂತಿ ಪ್ರಿಯರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಗಾಂಧಿಯವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗಾಗಿ 1937, 1938, 1947 ಮತ್ತು 1948ರಲ್ಲಿ ನಾಮ ನಿರ್ದೇಶನ ಮಾಡಲಾಯಿತು. ಆದರೆ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಿಲ್ಲ. ಐದು ಬಾರಿ ನಾಮ ನಿರ್ದೇಶನ ಮಾಡಿದರೂ ಕೂಡ ಅವರ ಹೆಸರು ಬಲವಾಗಿ ಕೇಳಿಬಂದಿದ್ದು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ. 1948ರಲ್ಲಿ ನಾಮ ನಿರ್ದೇಶನಗೊಂಡಾಗ ಅವರಿಗೆ ಬಹುಮಾನ ದೊರೆಯುವುದು ಬಹುತೇಕ ಖಚಿತವಾಗಿತ್ತು. ಆದರೆ ಅವರ ಹೆಸರು ಅಂತಿಮಗೊಳ್ಳುವ ಕೇವಲ ಎರಡು ದಿನಗಳ ಮೊದಲು ಅವರನ್ನು ಹತ್ಯೆ ಮಾಡಲಾಯಿತು. ನಿಯಮಗಳ ಪ್ರಕಾರ ಮರಣೋತ್ತರವಾಗಿ ನೊಬೆಲ್ ಪ್ರಶಸ್ತಿಯನ್ನು ನೀಡುವ ಅವಕಾಶ ಇಲ್ಲದೇ ಇರುವುದರಿಂದ ಅದು ಕೊನೆಯ ಬಾರಿಯೂ ಸಾಧ್ಯವಾಗಲಿಲ್ಲ.
ಆದರೆ 1948ರಲ್ಲಿ ಮರಣೋತ್ತರವಾಗಿ ಮಹಾತ್ಮ ಗಾಂಧೀಜಿಯವರಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ನೀಡಲು ಸಮಿತಿಯ ಕೆಲವು ಸದಸ್ಯರು ಒಲವು ತೋರಿದ್ದರು. ಕೆಲವು ಸಂದರ್ಭಗಳಲ್ಲಿ ನೊಬೆಲ್ ಪ್ರಶಸ್ತಿಯನ್ನು ಮರೋಣತ್ತರವಾಗಿ ನೀಡಬಹುದು ಎಂಬ ವಾದವನ್ನು ಅವರು ಮಂಡಿಸಿದರು. ಆದರೆ ಆಗಿನ ನೊಬೆಲ್ ಸಂಸ್ಥೆಯ ನಿರ್ದೇಶಕ ಆಗಸ್ಟ್ ಷೌ ಈ ವಿಷಯವಾಗಿ ಸಮಿತಿಯ ಮತ್ತೊಬ್ಬ ಸಲಹೆಗಾರರಾಗಿದ್ದ ವಕೀಲ ಓಲೆ ಟೊರ್ಲೀಫ್ ರೀಡ್ ಅವರ ಅಭಿಪ್ರಾಯವನ್ನು ಕೇಳಿದ್ದರು, ಆದರೆ ಅವರಿಂದ ಬಂದ ಉತ್ತರಗಳು ನಕಾರಾತ್ಮಕವಾಗಿದ್ದವು. ನವೆಂಬರ್ 18, 1948ರಂದು ಸಭೆ ಸೇರಿದ್ದ ನೊಬೆಲ್ ಪ್ರಶಸ್ತಿ ಸಮಿತಿಯು “ಸೂಕ್ತವಾದ ಜೀವಂತಅಭ್ಯರ್ಥಿಯು ಇಲ್ಲದೇ ಇರುವುದರಿಂದ” ಪ್ರಶಸ್ತಿಯನ್ನು ಆ ವರ್ಷ ಯಾರಿಗೂ ನೀಡದಿರಲು ನಿರ್ಧರಿಸಿತು.
1901ರಲ್ಲಿ ಆರಂಭಿಸಲಾದ ನೊಬೆಲ್ ಪ್ರಶಸ್ತಿಯನ್ನು ವಿಶ್ವದ ಅತ್ಯಂತ ಪ್ರತಿಷ್ಠಿತ ಮತ್ತು ಅಮೂಲ್ಯ ಬಹುಮಾನವೆಂದು ಪರಿಗಣಿಸಲಾಗಿದೆ. ಈ ಬಹುಮಾನವನ್ನು ಶಾಂತಿ ಸೇರಿದಂತೆ ಆರು ವಿಷಯಗಳಲ್ಲಿ ಪ್ರತಿ ವರ್ಷ ನೀಡಲಾಗುತ್ತದೆ. ವಿವಿದ ವಿಷಯಗಳಲ್ಲಿ ಬಹುಮಾನಗಳಿಗಾಗಿ ಗುರುತಿಸುವ ಜವಾಬ್ದಾರಿಯನ್ನು ವಿವಿದ ಸಂಸ್ಥೆಗಳು ನಿರ್ವಹಿಸುತ್ತವೆ. ನಾರ್ವೇಜಿಯನ್ ಸಂಸತ್ತು ಶಾಂತಿ ನೊಬೆಲ್ ಪ್ರಶಸ್ತಿಗಾಗಿ ಆಯ್ಕೆ ಮಾಡುತ್ತದೆ. ಇದುವರೆಗೂ ಒಂಬತ್ತು ಭಾರತೀಯರಿಗೆ ವಿವಿದ ವಿಷಯಗಳಲ್ಲಿ ನೊಬೆಲ್ ಪುರಸ್ಕಾರ ಲಭಿಸಿದೆ.
ಮಹಾತ್ಮ ಗಾಂಧಿಯವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಎಲ್ಲಾ ರೀತಿಯಿಂದಲೂ ಅರ್ಹರಾಗಿದ್ದರು. ಆದರೆ ನೊಬೆಲ್ ಸಮಿತಿಯು ಈ ವಿಷಯದಲ್ಲಿ ಹಲವು ಜಿಜ್ಞಾಸೆಗಳಿಗೆ ಒಳಗಾದಂತೆ ತೋರುತ್ತದೆ. ಸಮಿತಿಯ ಕೆಲವು ಸದಸ್ಯರುಗಳ ಪ್ರಕಾರ ಗಾಂಧೀಜಿ, ನಿಜವಾದ ರಾಜಕಾರಣಿ ಅಥವಾ ಅಂತರ ರಾಷ್ಟ್ರೀಯ ಕಾನೂನಿನ ಪ್ರತಿಪಾದಕರಾಗಿರಲಿಲ್ಲ. ಮುಖ್ಯವಾಗಿ ಅವರು ಮಾನವೀಯ ಪರಿಹಾರ ಕಾರ್ಯಕರ್ತರಾಗಿರಲಿಲ್ಲ. ಮತ್ತು ಅಂತರರಾಷ್ಟ್ರೀಯ ಶಾಂತಿ ಕಾಂಗ್ರೆಸ್ಸಿನ ಸಂಘಟಕರಾಗಿರಲಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ 1947ರಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವಿನ ಸಂಘರ್ಷ ಮತ್ತು ಅದಕ್ಕೆ ಸಂಬಂಧಿಸಿದಂತೆ ಗಾಂಧೀಜಿಯವರ ಹೇಳಿಕೆಯು ಅವರು ತಮ್ಮ ಸ್ಥಿರ ಶಾಂತಿವಾದವನ್ನು ತ್ಯಜಿಸಲಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಕಾರಣವಾಯಿತು.
ಆದರೆ ಗಾಂಧೀಜಿಯವರು ತಮ್ಮ ಜೀವನ ಪಥದಲ್ಲಿ ಶಾಂತಿ, ನೈತಿಕತೆ ಮತ್ತು ರಾಜಕೀಯ ಮನೋಭಾವದ ಮೇಲೆ ಆಳವಾದ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಭಾರತದ ವಿಭಜನೆಯ ಸಂದರ್ಭದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ನಡೆದ ಘರ್ಷಣೆಗಳನ್ನು ಕೊನೆಗೊಳಿಸಲು ತಮ್ಮ ಕೊನೆಯ ದಿನಗಳಲ್ಲಿ ಗಾಂಧಿಯವರು ಅವಿರತವಾಗಿ ಶ್ರಮಿಸಿದರು. ಈ ಕಾರಣಕ್ಕಾಗಿ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲು ನೊಬೆಲ್ ಸಮಿತಿಯು ಗಂಭೀರವಾಗಿ ಆಲೋಚಿಸಿತು. ಕೆಲವು ಔಪಚಾರಿಕ ಕಾರಣಗಳಿಗಾಗಿ ಪ್ರಶಸ್ತಿಯನ್ನು ನೀಡಲು ಸಾಧ್ಯವಾಗದಿದ್ದಾಗ ಬಹುಮಾನವನ್ನು ಕಾಯ್ದಿರಿಸಲು ತೀರ್ಮಾನಿಸಿದ್ದರ ಜೊತೆಗೆ ಒಂದು ವರ್ಷದ ನಂತರ ಬಹುಮಾನದ ಹಣವನ್ನು 1948ಕ್ಕೆ ಖರ್ಚು ಮಾಡಬಾರದು ಎಂದು ತೀರ್ಮಾನಿಸಲಾಯಿತು. ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ಸಾಧ್ಯವಾಗದಿದ್ದರೂ ಸಮಿತಿ ಇದಕ್ಕಾಗಿ ವಿಷಾದ ವ್ಯಕ್ತ ಪಡಿಸಿತು ಹಾಗೂ ಈ ವಿಷಯದಲ್ಲಿ ಮಹಾತ್ಮ ಗಾಂಧೀಜಿಯವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಯಿತು. 1989ರಲ್ಲಿ ದಲೈ ಲಾಮರಿಗೆ ಶಾಂತಿ ಪ್ರಶಸ್ತಿ ನೀಡಿದಾಗ ನೊಬೆಲ್ ಸಮಿತಿಯ ಅಧ್ಯಕ್ಷರು “ದಲೈ ಲಾಮರಿಗೆ ನೀಡಿದ ಈ ಪ್ರಶಸ್ತಿ ಮಹಾತ್ಮಗಾಂಧಿಯವರ ಸ್ಮರಣಾರ್ಥ ಗೌರವ” ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಗಾಂಧೀಜಿಯವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವಲ್ಲಿ ಬ್ರಿಟಿಷ್ ಸರ್ಕಾರ ಪ್ರತಿಕೂಲ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು ಎಂದು ಕೆಲವರು ಹೇಳುತ್ತಾರೆ. ಆದ್ದರಿಂದಲೇ 1937ರಲ್ಲೆ ಕಿರು ಗುಂಪಿಗೆ ಆಯ್ಕೆಯಾಗಿದ್ದ ಗಾಂಧಿಯವರಿಗೆ ಪ್ರಶಸ್ತಿ ಸಿಗಲಿಲ್ಲ ಎಂದು ಹಲವರು ವಾದಿಸುತ್ತಾರೆ. ಆದರೆ ಇವುಗಳಿಗೆ ಯಾವುದೇ ಆದಾರಗಳಿಲ್ಲ. ಆದರೆ ಗಾಂಧೀಜಿಯವರು ಶಾಂತಿಗೆ ಮತ್ತೊಂದು ಹೆಸರಾಗಿದ್ದರಿಂದ ಅಹಿಂಸೆಯ ಸಂಕೇತವೆಂದು ಅವರನ್ನು ಪರಿಗಣಿಸಬೇಕಾಗಿತ್ತು. ಅದೇ ಸಮಯದಲ್ಲಿ ಭಾರತದ ಪ್ರಮುಖ ನಾಯಕರೊಬ್ಬರಿಗೆ ಶಾಂತಿ ಪ್ರಶಸ್ತಿಯನ್ನು ನೀಡಿದರೆ ಉಂಟಾಗುವ ರಾಜಕೀಯ ಪರಿಣಾಮಗಳನ್ನು ಸಮಿತಿಯು ಸರಿಯಾಗಿ ಅರ್ಥ ಮಾಡಿಕೊಂಡಂತೆ ಕಂಡು ಬರುವುದಿಲ್ಲ.
ಇಲ್ಲಿ ಪ್ರಶ್ನೆಯಾಗಿ ಉಳಿಯುವ ಅಂಶವೆಂದರೆ, ಗಾಂಧೀಜಿಯವರ ಹೆಸರು 1937ರಿಂದಲೂ ಮೊದಲುಗೊಂಡು ನಾಮ ನಿರ್ದೇಶನವಾದರೂ 1947ರವರೆಗೂ ಅವರ ಹೆಸರನ್ನು ನೊಬೆಲ್ ಸಮಿತಿ ಏಕೆ ಗಂಭೀರವಾಗಿ ಪರಿಗಣಿಸಲಿಲ್ಲ? ಈ ಅವಧಿಯಲ್ಲಿ ಅಂದರೆ 1937 ರಿಂದ 1947ರವರೆಗೂ ಹತ್ತು ವರ್ಷಗಳ್ಲಲಿ ಭಾರತದ ರಾಜಕೀಯ ಇತಿಹಾಸದಲ್ಲಿ ಗಾಂಧಿಯವರ ಪಾತ್ರ ಅವಿಸ್ಮರಣೀಯವಾದುದು. ಅವರು ಸಂಘಟಿಸಿದ ಅನೇಕ ಅಹಿಂಸಾತ್ಮಕ ಚಳುವಳಿಗಳಿಗೆ ಅತಿ ದೊಡ್ಡ ವಿಜಯ ಮತ್ತು ಸೋಲುಗಳು ಉಂಟಾಗಿದ್ದವು. ಭಾರತದ ಸ್ವಾತಂತ್ರ್ಯ ಮತ್ತು ಭಾರತದ ವಿಭಜನೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ನಿಭಾಯಿಸುವಿಕೆ ವಿಷಯಗಳಲ್ಲಿ ಗಾಂಧೀಜಿ ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದರು. ಭಾರತೀಯರು ಮತ್ತು ಬ್ರಿಟಿಷರ ನಡುವಿನ ಹೋರಾಟ, ಎರಡನೇ ಮಹಾಯುದ್ದದಲ್ಲಿ ಭಾರತದ ಭಾಗವಹಿಸುವಿಕೆಯ ಪ್ರಶ್ನೆ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಂಘರ್ಷ, ಈ ಎಲ್ಲಾ ವಿಷಯಗಳಲ್ಲೂ ಗಾಂಧೀಜಿ ಅಹಿಂಸಾ ತತ್ವಗಳನ್ನು ಅನುಸರಿಸಿದ್ದರು, ಗಾಂಧೀಜಿಯವರ ಅಹಿಂಸಾತ್ಮಕ ಚಳುವಳಿಗಳು ಜಗತ್ತಿನಾಧ್ಯಂತ ಪ್ರಮುಖವಾಗಿ ಚರ್ಚಿತವಾಗಿತ್ತಿದ್ದ ಕಾಲವದು.
ಜಗತ್ತಿನಾಧ್ಯಂತದ ಪತ್ರಿಕೆಗಳು ಕೂಡ ಗಾಂಧೀಜಿಯವರ ಶಾಂತಿ ಕ್ರಮಗಳನ್ನು ಶ್ಲಾಘಿಸಿದ್ದವು. ಆಗಸ್ಟ್ 15, 1947ರ ಸಂಚಿಕೆಯಲ್ಲಿ ಟೈಮ್ಸ್ ಆಫ್ ಇಂಡಿಯಾ ಈ ರೀತಿ ಬರೆಯಿತು. “ ಭಾರತದ ವಿಭಜನೆಯಿಂದ ರೂಪುಗೊಂಡ ಸಮಸ್ಯೆಗಳು ಗಾಂಧೀಜಿಯವರು ತೆಗೆದುಕೊಂಡ ಕಾರಣದಿಂದಾಗಿ ರಕ್ತಪಾತಕ್ಕೆ ಕಾರಣವಾಗಲಿಲ್ಲ. ಗಾಂಧಿಯವರ ಬೋಧನೆಗಳು, ಅವರ ಅನುಯಾಯಿಗಳ ಪ್ರಯತ್ನಗಳು ಮತ್ತು ಅವರ ಸ್ವಂತ ಉಪಸ್ಥಿತಿಯು ಇದರ ಸಿಂಹಪಾಲನ್ನು ಪಡೆಯಬೇಕು” ಆದರೆ ಈ ಅವಧಿಯಲ್ಲಿ ನೊಬೆಲ್ ಸಮಿತಿಯು ಗಾಂಧಿಯವರ ಹೆಸರನ್ನು ಸ್ಪಷ್ಟವಾಗಿ ಬೆಂಬಲಿಸಲಿಲ್ಲ. ಯುರೋಪಿಯನ್ ಅಲ್ಲದವರನ್ನು ಬೆಂಬಲಿಸಲು ನಾರ್ವೆಯ ನೊಬೆಲ್ ಸಮಿತಿಯವರು ಹಿಂದೇಟು ಹಾಕಿದರೆ? ಅಥವಾ ಸಮಿತಿಯ ಸದಸ್ಯರು ತಮ್ಮ ದೇಶ ಮತ್ತು ಬ್ರಿಟನ್ ನಡುವಿನ ಸಂಬಂಧಕ್ಕೆ ಇದರಿಂದ ಹಾನಿಯಾಗುತ್ತದೆ. ಎಂದು ಭಾವಿಸಿದ್ದರೆ? ಒಂದು ರೀತಿಯಲ್ಲಿ ಇವೆಲ್ಲ ಗೊಂದಲದ ಗೂಡುಗಳಾಗಿವೆ.
ಆದರೆ 1937ರಲ್ಲಿ ಪ್ರಥಮ ಬಾರಿಗೆ ಗಾಂಧೀಜಿಯವರ ಹೆಸರನ್ನು ಶಾಂತಿಗಾಗಿ ನೊಬೆಲ್ ಪ್ರಶಸ್ತಿಗೆ ನಾಮ ನಿರ್ದೇಶನವು ಯೂರೋಪಿನವರಿಂದಲೇ ಹುಟ್ಟಿಕೊಂಡಿತು. ಎಲ್ಲಕ್ಕಿಂತ ಹೆಚ್ಚಾಗಿ 1930ರಲ್ಲಿಯೇ ವಿಶ್ವದ ಪ್ರಸಿದ್ದ ನಿಯತಕಾಲಿಕ ಟೈಮ್ಸ್ ಮಹಾತ್ಮ ಗಾಂಧಿಯವರನ್ನು ವರ್ಷದ ವ್ಯಕ್ತಿ ಎಂದು ಗೌರವಿಸಿತ್ತು. ಇಲ್ಲಿ ಗಮನಿಸಬೇಕಾಗ ಮಹತ್ವದ ಅಂಶವೆಂದರೆ ಇದುವರೆಗೂ ಶಾಂತಿಗಾಗಿ ನೊಬೆಲ್ ಪ್ರಶಸ್ತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಶ್ಚಿಮ ಯುರೋಪ್ ಮತ್ತು ಅಮೇರಿಕಾ ದೇಶದವರೇ ಪಡೆದುಕೊಂಡಿದ್ದಾರೆ.
ಅಂತರರಾಷ್ಟ್ರೀಯ ಶಾಂತಿ ಚಳುವಳಿಯಲ್ಲಿ ಗಾಂಧಿಯವರ ವಿಷಯದಲ್ಲಿ ಸಾಕಷ್ಟು ವಿಮರ್ಶೆಗಳು ಬಂದವು. ಅವರು ನಿರಂತರವಾಗಿ ಶಾತಿ ಪ್ರಿಯರಾಗಿರಲಿಲ್ಲ. ಅವರ ನೀತಿಗಳಲ್ಲಿ ಸಾಕಷ್ಟು ತಿರುವುಗಳಿವೆ. ಅವುಗಳನ್ನು ಅವರು ಮತ್ತು ಅವರ ಅನುಯಾಯಿಗಳು ಸರಿಯಾಗಿ ವಿವರಿಸುವಲ್ಲಿ ವಿಫಲರಾಗಿದ್ದಾರೆ. ಬ್ರಿಟಿಷರ ವಿರುದ್ದ ಅವರು ನಡೆಸಿದ ಕೆಲವು ಅಹಿಂಸಾತ್ಮಕ ಚಳುವಳಿಗಳು ಹಿಂಸೆಯ ರೂಪು ತಾಳಿದವು. 1920-21ರಲ್ಲಿ ನಡೆದ ಮೊದಲ ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಚೌರಿ ಚೌರಾದ್ಲಲಿ ಚಳುವಳಿ ನಿರತರು ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ, ಅನೇಕ ಪೊಲೀಸರನ್ನು ಹತ್ಯೆ ಮಾಡಿದ ನಂತರ ಠಾಣೆಗೆ ಬೆಂಕಿ ಇಟ್ಟ ಘಟನೆಯು ಸೇರಿದಂತೆ ಹಲವು ಉದಾಹರಣೆಗಳನ್ನು ಈ ವಿಮರ್ಶಕರು ದಾಖಲಿಸಿದ್ದಾರೆ. ಅದೇ ಸಮಯದಲ್ಲಿ ಕೆಲವು ವಿಮರ್ಶಕರು, ಅವರೊಬ್ಬ ಒಳ್ಳೆಯ , ಉದಾತ್ಮ ಮತ್ತು ತಪಸ್ವಿ ವ್ಯಕ್ತಿ ಎಂದು ಮೆಚ್ಚುಗೆ ಸೂಚಿಸಿದರು. ಭಾರತದ ಜನ ಮಾನಸದಲ್ಲಿ ಅರ್ಹವಾಗಿ ಗೌರವಿಸಲ್ಪಟ್ಟ ಮತ್ತು ಪ್ರೀತಿಸಲ್ಪಟ್ಟ ಮಹಾನ್ ವ್ಯಕ್ತಿ, ಆದರ್ಶವಾದಿ ಮತ್ತು ರಾಷ್ಟ್ರೀಯವಾದಿ ಎಂದು ಅಭಿಪ್ರಾಯಪಟ್ಟರು. ಆದರೆ ಕೆಲವು ವಿಮರ್ಶಕರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಗಾಂಧೀಜಿಯವರ ಹೋರಾಟವು ಭಾರತೀಯರ ಪರವಾಗಿ ಮಾತ್ರ ನಡೆದಿತ್ತು. ಆದರೆ ಭಾರತೀಯರಿಗಿಂತ ಕೆಟ್ಟ ಜೀವನ ಪರಿಸ್ಥಿತಿಯನ್ನು ಕಪ್ಪು ಜನರು ಅನುಭವಿಸುತ್ತಿದ್ದರು. ಮತ್ತು ಗಾಂಧಿಯವರು ಎಲ್ಲಾ ರೀತಿಯ ಯುದ್ದಗಳನ್ನು ವಿರೋದಿಸಿದ್ದರೂ ಪಾಕಿಸ್ಥಾನದೊಂದಿಗೆ ವ್ಯವಹರಿಸುವಾಗ ವಿಷಯ ಬೇದ ಕಂಡು ಬಂದಂತೆ ಬಾಸವಾಗುತ್ತದೆ. ಎಂಬುದು ಗಮನಾರ್ಹ ವಿಷಯವಾಗಿದೆ, ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯವಾಗಿತ್ತು.
ಗಾಂಧೀಜಿಯವರಿಗೆ ಸಲ್ಲದ ನೊಬೆಲ್ ಶಾಂತಿ ಪ್ರಶಸ್ತಿ ಅವರ ಇಬ್ಬರು ಅನುಯಾಯಿಗಳಿಗೆ ಸಂದಿದ್ದು ಬಹಳ ಆಶ್ಚರ್ಯವನ್ನು ಉಂಟು ಮಾಡುತ್ತದೆ. ಮೊದಲನೆಯವರು ದಕ್ಷಣ ಆಫ್ರಿಕಾದಲ್ಲಿ ಗಾಂಧಿಯವರ ತತ್ವಗಳನ್ನು ಅನ್ವಯಿಸುವಲ್ಲಿ ಮುಂಚೂಣಿಯಲ್ಲಿದ್ದ ಆಲ್ಭರ್ಟ್ ಲುಥುಲಿ ಅವರನ್ನು 1960ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರೆ, ಎರಡನೆಯದಾಗಿ ಗಾಂಧಿಯನ್ನು ತನ್ನ ಮಾರ್ಗದರ್ಶಕ ಎಂದು ಒಪ್ಪಿಕೊಂಡಿದ್ದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಗೆ 1964ರಲ್ಲಿ ಪ್ರಶಸ್ತಿ ನೀಡಿದ್ದು. ಗಾಂಧಿಯವರ ಕಟ್ಟಾ ಅನುಯಾಯಿಗಳಿಗೆ ನೊಬೆಲ್ ಶಾಂತಿ ಪುರಸ್ಕಾರವನ್ನು ನೀಡಿರುವುದು, ಗಾಂಧೀಜಿಯವರ ತತ್ವ ಮತ್ತು ಸಿದ್ದಾಂತಗಳಿಗೆ ನೀಡಿದಂತೆಯೇ ಆಗುತ್ತದೆ. ಆದರೆ ಗಾಂಧಿಯವರನ್ನು ಏಕೆ ಪರಿಗಣಿಸಲಿಲ್ಲ?
ಒಟ್ಟಿನಲ್ಲಿ ಜಗತ್ತಿನಲ್ಲಿ ಅಹಿಂಸೆ ಇರುವವರೆಗೂ ಮಹಾತ್ಮ ಗಾಂಧೀಜಿಯವರಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ದೊರಕದೇ ಇರುವ ವಿಷಯ ಚರ್ಚೆಯಾಗುತ್ತಲೇ ಇರುತ್ತದೆ. ಏಕೆಂದರೆ ಅರ್ಹ ಶಾಂತಿ ದೂತನ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ನೊಬೆಲ್ ಸಮಿತಿ ಸ್ಪಷ್ಟವಾಗಿ ವಿಫಲವಾಗಿದೆ.
###
-ಡಾ.ಅಮ್ಮಸಂದ್ರ ಸುರೇಶ್, ಮೈಸೂರು
ಲೇಖಕರು ಮತ್ತು ಮಾಧ್ಯಮ ವಿಶ್ಲೇಷಕರು.
ಮೊಬೈಲ್ : 9448402346
*****