ತನುಮನವ ಸೆಳೆವವಳೆ
ನನ್ನ ಕೈಹಿಡಿದು ಬಂದವಳೆ , ತಂಬೆಲರಂತೆ
ಮೈಮನಕೆ ತಂಪು ತಂದವಳೆ ,
ಕಡೆದಿಟ್ಟ ಬೆಣ್ಣೆ ಮೈಯ್ಯವಳೆ, ಚಂದಿರನಂತೆ
ತಂಬೆಳಕ ಚೆಲ್ಲಿ ನಿಂದವಳೆ.
ನನ್ನ ಮನೆಯಲ್ಲಿ ನಿಂತವಳೆ , ಮಲ್ಲಿಗೆಯಂತೆ
ಸೌಗಂಧ ಸೂಸಿ ಕುಂತವಳೆ,
ಚಂದನದ ಗೊಂಬೆಯಂಥವಳೆ, ಕತ್ತುರಿಯಂತೆ
ಸುತ್ತ ಪರಿಮಳಿಸುವಂಥವಳೆ.
ಗಿಳಿಯಂತೆ ನುಡಿಯುವಂಥವಳೆ , ಕೋಗಿಲೆಯಂತೆ
ಇಂಪಾಗಿ ಹಾಡುವಂಥವಳೆ,
ಜೇನ್ದುಂಬಿಯಂತೆ ಮೊರೆವವಳೆ, ವೀಣಾತಂತಿ
ಮಿಡಿದಂತೆ ನನ್ನ ಕರೆವವಳೆ.
ರಸಬಾಳೆ ಹಣ್ಣಿನಂಥವಳೆ , ರಸಗಬ್ಬಿನಾ
ಸವಿಬೆಲ್ಲದಚ್ಚಿನಂಥವಳೆ,
ಸಕ್ಕರೆಯ ಬೊಂಬೆಯಂಥವಳೆ , ಹಾಲ್ಜೇನಿನಾ
ಮಡುವಲ್ಲಿ ಮಿಂದು ನಿಂತವಳೆ.
ಗಂಧರ್ವ ಕನ್ಯೆಯಂಥವಳೆ , ಸುರಲೋಕದಿರು-
ವಪ್ಸತೆಯರಂತೆ ಮೆರೆವವಳೆ,
ದೇವಿ ಬನಶಂಕರಿಯ ಮಗಳೆ , ಸೌಂದರ್ಯದಿಂ-
ದೆನ್ನ ತನುಮನವ ಸೆಳೆವವಳೆ.
————೦———-
ಶಬ್ಧಾರ್ಥ,
ತಂಬೆಲರು – ತಂಗಾಳಿ ! ತಂಬೆಳಕು- ಬೆಳದಿಂಗಳು
ಸೌಗಂಧ – ಸುವಾಸನೆ ! ಕತ್ತುರಿ – ಕಸ್ತೂರಿ
ಮಿಂದು – ಸ್ನಾನಮಾಡಿ ! ಸುರಲೋಕ – ದೇವಲೋಕ
-ಎನ್.ಶರಣಪ್ಪ ಮೆಟ್ರಿ, ಗಂಗಾವತಿ