ಸಾಲು ಮರದ ತಿಮ್ಮಕ್ಕ. ******
ಸಾಲು ಮರದ ಮೇರುಗಿರಿ ತಿಮ್ಮಕ್ಕ
ಮಕ್ಕಳಂತೆ ಮರಗಳ ಬೆಳೆಸಿದಳು ಪಕ್ಕ
ಕೈಚಾಚಿ ಕೇಳಲಿಲ್ಲ ಮರಬೆಳೆಸಲು ರೊಕ್ಕ.
ಬಿಸಿಲಲ್ಲಿ ಹೊತ್ತುತಂದು ಸುರಿದಳು ನೀರು
ಮರಗಳಿಗೆ ಮಾಡಿದಳು ಸಾವಿನಿಂದ ಪಾರು
ಬಡತನದ ಚಿಂತೆಯಾಯಿತು ಮನದಿಂದ ದೂರು.
ಮಕ್ಕಳಂತೆ ಬೆಳೆದುನಿಂತ ಮರಗಳ ಸಾಲು
ಕಡಿಯಬೇಡಿರೆಂದು ಹಿಡಿದು ಕೇಳಿದಳು ಕಾಲು
ಪ್ರಶಸ್ತಿಗಳೊಂದಿಗೆ ಹೊದಿಸಿದರು ಗೌರವದ ಶಾಲು.
ಬದುಕು ಸವೆಸಿದಳು ಸಸಿಗಳಿಗೆ ಜೀವಪೋಷಿಸಿ
ಚಿಕ್ಕ ಗುಡಿಸಲಿನಲ್ಲಿ ಬಡಬದುಕು ಸಾಗಿಸಿ
ಪರಿಸರ ಸಂರಕ್ಷಣೆಗೆ ಮಾರ್ಗ ತೋರಿಸಿ.
ಬಡತನವ ಬದಿಗಿಟ್ಟು ಬದುಕಿದ ಚೇತನ
ಸಾಲುಮರದ ತಿಮ್ಮಕ್ಕನ ಹೆಸರು ನಿತ್ಯನೂತನ
ಸಾಲುಮರಗಳೇ ತಿಮ್ಮಕ್ಕನ ಶಾಂತಿನಿಕೇತನ.
ಮನಸಿನಲ್ಲಿ ಮರಬೆಳೆಸುವ ಯೋಚನೆ
ಮರಬೆಳೆಸಿ ನಾಡು ರಕ್ಷಿಸುವ ಮುಂದಾಲೋಚನೆ
ಗಿಡಮರಗಳ ಸೇವೆಮಾಡುವ ಅವಿರತ ಚಿಂತನೆ.
ಉಡುಗೊರೆ ಕೊಡಲು ಬಂದಾಗ ಜನಮೆಚ್ಚಿ
ಮನದಾಳದ ಮಾತುಹೇಳಿದಳು ಮನಸುಬಿಚ್ಚಿ
ಸಸಿಗಳ ದಾನ ಮಾಡಿರೆಂದಳು ಅಂಗಲಾಚಿ.
ಸಾಲುಮರಗಳಿಗೆ ತಿಮ್ಮಕ್ಕನ ಕರುಣಾಭಿಷೇಕ
ಮನೆಯ ತುಂಬಿವೆ ಪಡೆದ ಪಾರಿತೋಷಕ
ಮರಬೆಳೆಸಿದ ತಿಮ್ಮಕ್ಕನ ಬದುಕು ಸಾರ್ಥಕ.
-ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ, ಪ್ರಾಧ್ಯಾಪಕರು, ಸರಕಾರಿ ಪದವಿ ಕಾಲೇಜು ಯಾದಗಿರಿ. &
ಜಿಲ್ಲಾಧ್ಯಕ್ಷರು, ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ ಯಾದಗಿರಿ
******