ಕಾಡು ಪ್ರಾಣಿಗಳು ಮತು ಮನುಷ್ಯರ ನಡುವಿನ ಸಂಘರ್ಷಕ್ಕೆ ಕೊನೆಯಿಲ್ಲವೆ?//
ಕಾಡು ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಘರ್ಷಣೆ ಕಾಡಂಚಿನ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ. ಈ ಘರ್ಷಣೆಯನ್ನು ತಪ್ಪಿಸಬೇಕಾಗಿರುವುದು ಅನಿವಾರ್ಯವಾಗಿದೆ. ಆಹಾರ ಮತ್ತು ನೀರನ್ನು ಹುಡುಕಿಕೊಂಡು ಕಾಡು ಪ್ರಾಣಿಗಳು ಅದರಲ್ಲೂ ಮುಖ್ಯವಾಗಿ ಆನೆಗಳು ಕಾಡಿನ ಹೊರಗೆ ಬರುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಅರಣ್ಯದೊಳಗೆ ಕೈಗೆತ್ತಿಕೊಂಡ ಅಭಿವೃದ್ಧಿ ಯೋಜನೆಗಳ ಫಲವಾಗಿ ಮನುಷ್ಯನ ವಾಸ ಸ್ಥಾನ ಕಾಡಂಚಿನವರೆಗೂ ಹಬ್ಬಿದೆ. ಕಾಡಂಚಿನಲ್ಲಿ ಮತ್ತು ಕಾಡಂಚಿಗೆ ಹೊಂದಿಕೊಂಡಿರುವ ನದಿಗಳ ಹಿನ್ನೀರಿನ ಪ್ರದೇಶಗಳಲ್ಲಿ ವ್ಯಾಪಕವಾಗಿ ಹಚ್ಚುತ್ತಿರುವ ರೆಸಾರ್ಟ್ ಗಳ ಪರಿಣಾಮವಾಗಿ ಕೆಲವು ಕಾಡು ಪ್ರಾಣಿಗಳ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ರೆಸಾರ್ಟ್ ಗಳು ನಾಯಿ ಕೊಡೆಗಳಂತೆ ನಿರ್ಮಾಣವಾಗುತ್ರಿವೆ. ಯಾವಾಗ ಕೊಡಿನೊಳಗೆ ಮನುಷ್ಯರ ಪ್ರವೇಶದಿಂದಾಗಿ ಚಟುವಟಿಕೆಗಳು ಹೆಚ್ಚಾದವೋ ಆಗ ಕಾಡು ಪ್ರಾಣಿಗಳಿಗೆ ತೊಂದರೆಯಾಯಿತು ಆಗ ವಿಧಿಯಿಲ್ಲದೆ ಕಾಡು ಪ್ರಾಣಿಗಳು ಅನಿವಾರ್ಯವಾಗಿ ಕಾಡಂಚಿನ ಗ್ರಾಮಗಳು ಮತ್ತು ಇತರೆ ವಸತಿ ಪ್ರದೇಶಗಳಿಗೆ ಪ್ರವೇಶಿಸಲಾರಂಭಿಸಿದವು. ಇದರಿಂದ ಕಳೆದ ದಶಕದಿಂದೀಚೆಗೆ ಪ್ರಾಣಿ ಮತ್ತು ಮನುಷ್ಯ ಸಂಘರ್ಷಗಳು ಎಲ್ಲೆಮೀರಿವೆ.
ಮೂಲಗಳ ಪ್ರಕಾರ ಕಾಡು ಪ್ರಾಣಿಗಳ ಜತೆಗಿನ ಸಂಘರ್ಷದಿಂದಾಗಿ ಪ್ರತಿ ವರ್ಷ ಕರ್ನಾಟಕವೊಂದರಲ್ಲೆ 40ರಿಂದ 50ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳ್ಲಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಾಗಿದೆ. ಎಷ್ಟೋ ಚಿರತೆಗಳು ಕಾಡಿನಿಂದ ನಾಡಿಗೆ ಬಂದು ಕಬ್ಬಿನ ಗದ್ದೆಗಳಲ್ಲಿ ಮರಿಗಳನ್ನು ಹಾಕುತ್ತಿರುವುದು ಕೂಡ ಇತ್ತೀಚೆಗೆ ಸಾಮಾನ್ಯವಾಗಿದೆ. ಹೀಗೆ ಮರಿ ಹಾಕಿದ ನಂತರ ಮರಿಗಳನ್ನು ಅಲ್ಲೆ ಬಿಟ್ಟು ಹೋದ ಉದಾಹರಣೆಗಳಿಗೇನು ಕಡಿಮೆಯಿಲ್ಲ. ಚಿರತೆಗಳು ಗ್ರಾಮಗಳಿಗೆ ನುಗ್ಗಿ ಸಾಕು ಪ್ರಾಣಿಗಳಾದ ಮೇಕೆ ಮುಂತಾದುವುಗಳನ್ನು ತಿಂದು ಹಾಕುವುದು ಮತ್ತು ಮನುಷ್ಯರ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ. ಅರಣ್ಯ ಇಲಾಖೆಯವರು ಬೋನುಗಳನ್ನಿಟ್ಟು ಕೆಲವು ಕಡೆ ಚಿರತೆಗಳನ್ನು ಸೆರೆ ಹಿಡಿಯುತ್ತಿದ್ದಾರೆ. ಚಿರತೆಗಳು ಜನರ ಮೇಲೆ ದಾಳಿ ಮಾಡುವ ಮೂಲಕ ಸಾಕಷ್ಟು ಕಾಟ ಕೊಡುತ್ತಿವೆ. ಕೆಲವರನ್ನು ಕೊಂದಿವೆ. ಇವೆಲ್ಲವನ್ನು ಗಮನಿಸಿದಾಗ ಚಿರತೆಗಳು ಮನುಷ್ಯನ ರಕ್ತದ ರುಚಿಯನ್ನು ನೋಡಿ ನರಭಕ್ಷಕಗಳಾಗಿ ಬಿಡುತ್ತಿವೆಯೇನೋ ಎಂಬ ಗುಮಾನಿ ಹೆಚ್ಚುತ್ತಿದೆ.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಮತ್ತು ಅಕ ಪಕ್ಕದ ಪ್ರದೇಶಗಳಲ್ಲಿ ಪ್ರಮುಖವಾಗಿ ನಡೆಯುತ್ತಿದ್ದ ಇಂತಹ ಸಂಘರ್ಷಗಳು ಇದೀಗ ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಕೋಲಾರ ಜಿಲ್ಲೆಗಳಿಗೂ ಸಹ ಹಬ್ಬಿದೆ. ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರಾಣಿಗಳು ವಾಸಿಸುತ್ತಿದ್ದ ಸ್ಥಳಗಳಲ್ಲಿ ರೆಸಾರ್ಟ್‌ಗಳು, ಹೋಂ ಸ್ಟೇಗಳು, ತಲೆ ಎತ್ತುತ್ತಿರುವುದು ಈ ರೀತಿಯ ಸಂಘರ್ಷಗಳಿಗೆ ಪ್ರಮುಖ ಕಾರಣವಾಗಿದೆ. ಚಿರತೆ, ಕರಡಿ ಹಾಗೂ ಆನೆಗಳು ಅವ್ಯಾಹತವಾಗಿ ನಾಡಿಗೆ ನುಗ್ಗುತ್ತಿವೆ. ಆನೆಗಳ ಕಾರಿಡಾರ್ ನಾಶ ಮಾಡಿರುವುದರಿಂದ ಜನವಸತಿ ಪ್ರದೇಶಗಳಿಗೆ ಮತ್ತು ವ್ಯವಸಾಯದ ಪ್ರದೇಶಗಳಿಗೆ ಆನೆಗಳು ಪ್ರವೇಶಿಸುತ್ತಿರುವುದು ಹಳೆಯ ಕಥೆ.
1978ರ ಅರಣ್ಯ ಕಾಯ್ದೆ ಅನ್ವಯ ಎಲ್ಲಾ ರಾಜ್ಯಗಳಲ್ಲೂ ಬಯಲು ಪ್ರದೇಶಗಳಲ್ಲಿ ಶೇ.33 ಹಾಗೂ ಮೆಲೆನಾಡು ಪ್ರದೇಶಗಳಲ್ಲಿ ಶೇ.60 ರಷ್ಟು ಅರಣ್ಯವಿರಬೇಕು. ಆದರೆ ಅರಣ್ಯದ ಪ್ರಮಾಣ ಎಷ್ಟಿದೆ? ಎಷ್ಟುಒತ್ತುವರಿಯಾಗಿದೆ? ಎಂಬ ಪ್ರಶ್ನೆಗೆ ಇನ್ನೂ ಕೂಡ ನಿರ್ಧಿಷ್ಟ ಉತ್ತರ ಸಿಕ್ಕುತ್ತಿಲ್ಲ. ಕಾಡು ಪ್ರಾಣಿಗಳು ಜನ ವಸತಿ ಪ್ರದೇಶಗಳಿಗೆ ಬರುತ್ತಿರುವುದಕ್ಕೂ ಕಾಡಿನ ಪ್ರಮಾಣ ಕಡಿಮೆ ಆಗತ್ತಿರುವುದಕ್ಕೂ ಸಂಬಂಧವಿದೆ. ಅರಣ್ಯದಲ್ಲಿ ಮಾನವನ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಬೇಕಾಗಿರುವುದು ಅನಿವಾರ್ಯವಾಗಿದೆ. ಕಾಡುಗಳಲ್ಲಿ ಸಮೃದ್ದವಾಗಿ ಆಹಾರ, ನೀರು ಸಿಕ್ಕಿದರೆ ಕಾಡು ಪ್ರಾಣಿಗಳೇಕೆ ನಾಡಿಗೆ ಬರುತ್ತವೆ?
ರಾಜ್ಯದ 13 ಜೆಲ್ಲೆಗಳಲ್ಲಿ ಆನೆಗಳು ವಸತಿ ಪ್ರದೇಶಗಳಿಗೆ ಬರುತ್ತಿವೆ. ಆನೆಗಳು ಪ್ರತಿ ನಿತ್ಯ 20ರಿಂದ 30 ಕಿ.ಮೀ ಗಳಷ್ಟು ದೂರ ಕಾಡಿನಲ್ಲಿ ಸಾಗುತ್ತವೆ. ಇವುಗಳು ಸಂಚರಿಸುವ ಮಾರ್ಗವನ್ನು ಆನೆ ಕಾರಿಡಾರ್ ಎನ್ನಲಾಗುತ್ತದೆ. ಈ ಆನೆ ಕಾರಿಡಾರ್ ತಮಿಳುನಾಡಿನ ಕೃಷ್ಣಗಿರಿ ಕಾಡಿನಿಂದ ಆರಂಭವಾಗಿ ಪಶ್ಚಿಮ ಘಟ್ಟದ ಕುದರೆಮುಖದವರೆಗೂ ನೂರಾರು ಕಿ.ಮೀಗಳವರೆಗೂ ಹರಡಿಕೊಂಡಿದೆ. ಕೃಷ್ಣಗಿರಿ, ಹೊಸೂರು, ಬನ್ನೇರುಘಟ್ಟ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಸತ್ಯಮಂಗಲ, ಬಂಡೀಪುರ, ನಾಗರಹೊಳೆ, ಬ್ರಹ್ಮಗಿರಿ, ತಲಕಾವೇರಿ, ಊಟಿ, ಪುಷ್ಪಗಿರಿ, ಬಿಸಿಲೆ, ಚಾರ್ಮಾಡಿ ಮೂಲಕ ಆನೆಗಳು ಸಂಚರಿಸುತ್ತವೆ. ಈ ಮಾರ್ಗದಲ್ಲಿ ಸುಮಾರು ಏಳು ಸಾವಿರ ಆನೆಗಳಿವೆ. ಈ ಆನೆ ಕಾರಿಡಾರ್, ಹೆದ್ದಾರಿಗಳ ನಿರ್ಮಾಣ, ಜಲ ವಿದ್ಯುತ್ ಯೋಜನೆಗಳು, ಜಲಾಶಯಗಳ ನಿರ್ಮಾಣ ಹೀಗೆ ಅನೇಕ ಅಭಿವೃದ್ದಿ ಕಾಮಗಾರಿಗಳ ಫಲವಾಗಿ ತುಂಡರಿಸಿ ಹೋಗಿದೆ. ಹೀಗಾಗಿಯೇ ಆನೆಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಕಳೆದೆರಡು ದಶಕಗಳಿಂದೀಚೆಗೆ ಸುಮಾರು 70000 ಹೆಕ್ಟೇರ್‌ಗೂ ಹೆಚ್ಚು ಕಾಡು ಒತ್ತುವರಿಯಾಗಿದೆ. ರಾಜ್ಯದ 13 ಜಿಲ್ಲೆಗಳ 1100 ಹಳ್ಳಿಗಳಲ್ಲಿ ಮಾನವ-ಆನೆ ಸಂಘರ್ಷಗಳು ಪದೇ ಪದೇ ನಡೆಯುತ್ತಿವೆ. ಆನೆ ಕಾರಿಡರ್ ಗಳಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ರೆಸಾರ್ಟ್‌ಗಳ ಸುತ್ತ ಹಾಕಲಾಗಿರುವ ವಿದ್ಯುತ್ ಬೇಲಿ ಮತ್ತು ಮುಳ್ಳುತಂತಿಯ ಬೇಲಿಗಳನ್ನು ತೆಗೆಸಬೇಕೆಂದು 2018ರ ನವೆಂಬರ್‌ನಲ್ಲಿ ಸುಪ್ರಿಂಕೋರ್ಟ್ ತಮಿಳುನಾಡು ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹದು. ಆನೆ ನೋಡಲ ದೊಡ್ಡ ಆಕಾರದ ಪ್ರಾಣಿ, ಆದರೆ ತುಂಬಾ ಮೃದು. ಅದಕ್ಕೆ ಸ್ವಲ್ಪ ಗಾಯ ಅಥವಾ ತೊಂದರೆಯಾದರೂ ತಡೆದುಕೊಳ್ಳುವ ಶಕ್ತಿಯಿರುವುದಿಲ್ಲ. ಕಾಡಂಚಿನಲ್ಲಿ ರೈತರು ಅಳವಡಿಸಿರುವ ವಿದ್ಯತ್ ಬೇಲಿಗಳಿಗೆ ಸೋಕಿ ಅದೆಷ್ಟೋ ಆನೆಗಳು ಸಾವನ್ನಪ್ಪಿವೆ. ಅವುಗಳು ಅನಿವಾರ್ಯವಾಗಿ ನಾಡಿಗೆ ಬರುತ್ತಿವೆಯೇ ಹೊರತು ಉದ್ದೇಶಪೂರ್ವಕವಾಗಿ ಅಲ್ಲ.
ತಾವು ಬೆಳೆದ ಬೆಳೆಗಳು ಕಾಡು ಪ್ರಾಣಿಗಳಿಂದ ನಾಶವಾದಾಗ ರೈತರಿಗೆ ಕೋಪ ಬರುವುದು ಸಹಜ. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವಷ್ಟರಲ್ಲಿ ನಾಶವಾಗುವುದನ್ನು ಯಾವ ರೈತನೂ ಸಹಿಸಲಾರ. ಆದುದರಿಂದ ಪ್ರಾಣಿ ಮತ್ತು ಮಾನವ ಸಂಘರ್ಷಕ್ಕೊಂದು ಅಂತ್ಯವನ್ನು ಹಾಡಲೇಬೇಕಾಗಿದೆ. ಈ ದಿಕ್ಕಿನಲ್ಲಿ ಸರ್ಕಾರ ಕೂಡ ಅರಣ್ಯದ ಸುತ್ತ ಆಳವಾದ ಗುಂಡಿಗಳನ್ನು ನಿರ್ಮಾಣ ಮಾಡುವುದು, ವಿದ್ಯುತ್ ತಂತಿ ಬೇಲಿಯ ನಿರ್ಮಾಣ ಸೇರಿದಂತೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೂ ಕೂಡ ಇದರಿಂದ ಕಾಡು ಪ್ರಾಣಿಗಳ ಪ್ರವೇಶವನ್ನು ನಿರ್ಭಂದಿಸುವುದು ಕಷ್ಟ ಸಾಧ್ಯವಾದ ಕೆಲಸವಾಗಿದೆ.
ಮಾಧವ ಗಾಡ್ಗಿಳ್ ವರದಿ, ಕಸ್ತೂರಿ ರಂಗನ್ ವರದಿ, ಹೀಗೆ ಅರಣ್ಯ ಸಂರಕ್ಷಣೆಯ ಕುರಿತು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾದರೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆಂದರೆ ಅರಣ್ಯ ನಾಶ ಹೆಚ್ಚಾದಂತೆಲ್ಲ ಪ್ರಾಣಿ, ಪಕ್ಷಿಗಳ ಸಂತತಿ ಕೂಡ ಇಳಿಮುಖವಾಗತೊಡಗಿದೆ. ಒಂದು ಕಾಲದಲ್ಲಿ ಹೇರಳವಾಗಿದ್ದ ಪ್ರಾಣಿಗಳು ಇಂದು ವಿನಾಶದಂಚಿಗೆ ಸಾಗಿವೆ. ಖಡ್ಗಮೃಗ, ಕೃಷ್ಣಮೃಗ ಸೇರಿದಂತೆ ಅನೇಕ ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಪಕ್ಷಿಗಳ ಪ್ರಭೇದಗಳಲ್ಲಿ ಶೇ.40ರಷ್ಟು ಕಡಿಮೆಯಾಗಿದೆ. ನಮ್ಮಂತೆ ಕಾಡು ಪ್ರಾಣಿಗಳಿಗೂ ಕೂಡ ಸ್ವಚ್ಚಂದವಾಗಿ ಬದುಕುವ ಹಕ್ಕಿದೆ ಎಂಬುದನ್ನು ನಾವು ಮರೆಯಬಾರದು. ಕಾಡು ಇಲ್ಲದಿದ್ದರೆ ನಾಡು ಇರುವುದಿಲ್ಲ. ಹೀಗಾಗಿ ಜನಸಾಮಾನ್ಯರು ಕಾಡು ಮತ್ತು ಕಾಡು ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕಾಗಿದೆ.
ಪರಿಸರ ಮತ್ತು ಅರಣ್ಯಗಳ ಮಧ್ಯೆ ಗಾಡವಾದ ಸಂಬಂಧವಿದೆ. ಅರಣ್ಯವನ್ನು ರಕ್ಷಣೆ ಮಾಡದಿದ್ದರೆ ಹಾಗೂ ಕಾಡಿನ ಪ್ರಮಾಣವನ್ನು ಹೆಚ್ಚಳ ಮಾಡದಿದ್ದರೆ ನಾವು ಉತ್ತಮ ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕಾಡು ಪ್ರಾಣಿಗಳು, ಪಕ್ಷಿಗಳು, ಸರಿಸೃಪಗಳು ಹೀಗೆ ಸಕಲ ಜೀವ ರಾಶಿಯ ರಕ್ಷಣೆಯಾಗಬೇಕಾಗಿದೆ. ಇಲ್ಲದಿದ್ದರೆ ಪ್ರಕೃತಿಯ ಆಹಾರ ಸರಪಳಿಯೇ ತುಂಡರಿಸಿ ಹೋಗಲಿದ್ದು ಇದರ ಪರಿಣಾಮ ಮಾನವ ಸಂಕುಲದ ಮೇಲೂ ಉಂಟಾಗಲಿದೆ.
###
-ಡಾ.ಅಮ್ಮಸಂದ್ರ ಸುರೇಶ್, ಮೈಸೂರು
ಮೊಬೈಲ್ : 9448402346
*****